Advertisement

Lok Sabha Elections; ಜಾತಿ ಗಣತಿ ಬಗ್ಗೆ ಮೋದಿ ನಿಲುವೇನು?: ರಾಹುಲ್‌ ಗಾಂಧಿ

09:13 PM Apr 17, 2024 | Team Udayavani |

ಕೋಲಾರ/ಮಂಡ್ಯ: ದೇಶದ ಬಹುಸಂಖ್ಯಾತ ಜನತೆಗೆ ಬಿಜೆಪಿ ಮಾಡುತ್ತಿರುವ ತಾರತಮ್ಯ, ಅನ್ಯಾಯ ಸರಿಪಡಿಸುವ ಕ್ರಾಂತಿಕಾರಿ ಹೆಜ್ಜೆಯನ್ನು ಕಾಂಗ್ರೆಸ್‌ “ಗ್ಯಾರಂಟಿ ಯೋಜನೆ’ಗಳ ಮೂಲಕ ಇಟ್ಟಿದೆ ಎಂದು ಹೇಳಿರುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ಜಾತಿ ಗಣತಿ ವಿಚಾರ ಬಂದಾಗಲೆಲ್ಲಾ  ಮೋದಿ ಮೌನಕ್ಕೆ ಶರಣಾಗುತ್ತಿದ್ದಾರೆ. ಜಾತಿ ಗಣತಿ ಪರವೋ, ವಿರುದ್ಧವೋ ಎಂಬ ನಿಲುವನ್ನು ಬಹಿರಂಗಪಡಿಸುವಂತೆ ಒತ್ತಾಯಿಸಿದ್ದಾರೆ.

Advertisement

ಮಂಡ್ಯ ಹಾಗೂ ಕೋಲಾರ ಜಿಲ್ಲೆಯ ಮಾಲೂರು ಪಟ್ಟಣದಲ್ಲಿ ಏರ್ಪಡಿಸಿದ್ದ ಪ್ರಜಾಧ್ವನಿ-2 ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ದೇಶದ ಬಹುಸಂಖ್ಯಾತ ವರ್ಗಕ್ಕೆ ಆಗಿರುವ ತಾರತಮ್ಯ ನಿವಾರಿಸುವಲ್ಲಿ ಎಂತದ್ದೇ ಅಡೆ ತಡೆ ಎದುರಾದರೂ ಹಿಂಜರಿಯುವುದಿಲ್ಲ, ಎದೆಗುಂದುವುದಿಲ್ಲ  ಎಂದರು.

ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ಮೋದಿ ವಿರುದ್ಧ ತೀವ್ರ ವಾಗ್ಧಾಳಿ ನಡೆಸಿದ ರಾಹುಲ್‌, ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಕೇವಲ 22 ಮಂದಿ ಬಂಡವಾಳಶಾಹಿ ಉದ್ದಿಮೆದಾರರಿಗೆ 16 ಲಕ್ಷ ಕೋಟಿ ಸಾಲ ಮನ್ನಾ ಮಾಡಿದ್ದಾರೆ. ಇಷ್ಟು ದೊಡ್ಡ ಮೊತ್ತದ ಹಣದಿಂದ ದೇಶದಲ್ಲಿ 25 ವರ್ಷ ನರೇಗಾ ಯೋಜನೆ  ಮುಂದುವರಿಸಬಹುದಾಗಿತ್ತು. 22 ವರ್ಷ ರೈತರ ಸಾಲ ಮನ್ನಾ ಮಾಡಬಹುದಾಗಿತ್ತು. ಆದರೆ, ಇದರ ಲಾಭ ತಲುಪಿದ್ದು ಕೇವಲ 22 ಮಂದಿ ಬಂಡವಾಳ ಶಾಹಿಗಳಿಗೆ ಮಾತ್ರ ಎಂದು ಟೀಕಿಸಿದರು.

ರಾಜ್ಯದ ಕಾಂಗ್ರೆಸ್‌ ಸರ್ಕಾರ ಜಾರಿಗೆ ತಂದಿರುವ “ಗ್ಯಾರಂಟಿ ಯೋಜನೆಗಳ ಕುರಿತು ಮುಕ್ತ ಕಂಠದ ಶ್ಲಾಘನೆ ವ್ಯಕ್ತಪಡಿಸಿದ ರಾಹುಲ್‌, ಇಡೀ ದೇಶದಲ್ಲಿ ಇದೇ ರೀತಿ ತಾರತಮ್ಯ ಅನ್ಯಾಯ ನಿವಾರಿಸಲು ಚುನಾವಣೆಯಲ್ಲಿ ಎಐಸಿಸಿಯಿಂದಲೂ ದೇಶಕ್ಕೆ 5 ಗ್ಯಾರಂಟಿ ನೀಡುತ್ತಿದ್ದೇವೆ. ಭಾರತೀಯ ರಾಜಕಾರಣದಲ್ಲಿ ಇದು ಕ್ರಾಂತಿಕಾರಿ ಹೆಜ್ಜೆ ಎಂದರು.

ಜಾತಿ ಗಣತಿ ವಿಚಾರ ಬಂದಾಗಲೆಲ್ಲಾ  ಮೋದಿ ಮೌನಕ್ಕೆ ಶರಣಾಗುತ್ತಿದ್ದಾರೆ. ಜಾತಿ ಗಣತಿ ಪರವೋ, ವಿರುದ್ಧವೋ ಎಂದು ಅವರು ನಿಲುವನ್ನು ಬಹಿರಂಗಪಡಿಸಬೇಕಾಗಿದೆ. ಜನಸಂಖ್ಯೆಗೆ ತಕ್ಕಂತೆ ಹಕ್ಕು ಕೊಡಲು ಜಾತಿ ಗಣತಿಯಿಂದ ಮಾತ್ರ ಸಾಧ್ಯ. ಕರ್ನಾಟಕ ಹಾಗೂ ದೇಶದಲ್ಲೂ ಇದನ್ನು ಮಾಡುತ್ತೇವೆ. ಮೋದಿಯಿಂದ ಹಾಳಾಗಿರುವ ದೇಶದ ಉದ್ಯೋಗ ವ್ಯವಸ್ಥೆ  ಸರಿಪಡಿಸಿ ಉದ್ಯೋಗ ಖಚಿತ ಯೋಜನೆ ರೂಪಿಸಿದ್ದೇವೆ ಎಂದು ಹೇಳಿದರು.

Advertisement

ಕೋಲಾರಕ್ಕೆ ಅಜ್ಜಿ ಜತೆಗಿನ ಭೇಟಿ ನೆನೆದ ರಾಹುಲ್‌
“ಎಲ್ಲರಿಗೂ ನಮಸ್ಕಾರ’ ಎಂದು ಕನ್ನಡದಲ್ಲಿಯೇ ಭಾಷಣ ಆರಂಭಿಸಿದ ರಾಹುಲ್‌ಗಾಂಧಿ, ಬಾಲ್ಯದಲ್ಲಿ ತಮ್ಮ ಅಜ್ಜಿ ಇಂದಿರಾಗಾಂಧಿ ಜೊತೆ ಕೋಲಾರದ ಚಿನ್ನದ ಗಣಿಗೆ ಭೇಟಿ ನೀಡಿದ್ದನ್ನು  ನೆನಪಿಕೊಂಡರು. ಅಜ್ಜಿಯಿಂದಲೇ ರಾಜಕೀಯ ಪಟ್ಟುಗಳನ್ನು ಕಲಿತೆ, ಇದರಲ್ಲಿ ತಾರತಮ್ಯ ಅನ್ಯಾಯ ವಿರೋಧಿಸಲು ಎದೆಗುಂದಬೇಕಿಲ್ಲ ಎನ್ನುವುದು ಪ್ರಮುಖವಾಗಿದೆ ಎಂದರು. ಹೊಸಕೋಟೆ ಕಾಂಗ್ರೆಸ್‌ ಶಾಸಕ ಶರತ್‌ ಬಚ್ಚೇಗೌಡ ರಾಹುಲ್‌ ಗಾಂಧಿ ಇಂಗ್ಲಿಷ್‌ನಲ್ಲಿ ಮಾಡಿದ ಭಾಷಣವನ್ನು ಕನ್ನಡಕ್ಕೆ ಭಾಷಾಂತರಿಸಿದರು.

ವಿಶ್ವದಲ್ಲಿಯೇ ಮೊದಲ ಯೋಜನೆ
ಮಂಡ್ಯ: ಮಹಿಳೆಯರಿಗೆ ವರ್ಷಕ್ಕೆ 1 ಲಕ್ಷ ರೂ. ಖಾತೆಗೆ ಜಮೆ ಮಾಡಲಾಗುವುದು. ಕರ್ನಾಟಕದಲ್ಲಿ 24 ಸಾವಿರ ಸೇರಿ ಒಟ್ಟು 1.24 ಲಕ್ಷ ರೂ. ಖಾತೆಗೆ ಜಮೆಯಾಗಲಿದೆ. ಪದವಿ ಮುಗಿಸಿದ ಶ್ರೀಮಂತರ ಮಕ್ಕಳಿಗೆ ಅಪ್ರಂಟಿಸ್‌ ತರಬೇತಿ ಮೂಲಕ ಸರ್ಕಾರಿ/ ಖಾಸಗಿ ವಲಯದಲ್ಲಿ ಕೆಲಸ ಸಿಗುತ್ತಿತ್ತು. ಅದನ್ನು ಬಡವರ ಮಕ್ಕಳಿಗೂ ವಿಸ್ತರಿಸಲಾಗುವುದು. ಇದೊಂದು ವಿಶ್ವದಲ್ಲಿಯೇ ಮೊದಲ ಯೋಜನೆಯಾಗಲಿದೆ. ಅಪ್ರಂಟಿಸ್‌ ತರಬೇತಿ ಅವಧಿಯಲ್ಲಿ ಒಟ್ಟು 10,500 ರೂ. ಹಣ ನೀಡಲಾಗುವುದು. ಜೊತೆಗೆ ಕೆಲಸವನ್ನು ಕಾಯಂ ಮಾಡುವ ಯೋಜನೆಯನ್ನು ಜಾರಿಗೆ ತರಲಾಗುವುದು ಎಂದು ರಾಹುಲ್‌ ಹೇಳಿದರು. ಪ್ರಸ್ತುತ ಗ್ರಾಮೀಣ ಭಾಗದಲ್ಲಿ ನರೇಗಾ ಯೋಜನೆ ಇದ್ದು, ಕೂಲಿಯನ್ನು 400 ರೂ.ಗೆ ಹೆಚ್ಚಿಸಲಾಗುವುದು. ನಂತರ ನಗರ ಪ್ರದೇಶದ ಜನರಿಗೂ ವಿಸ್ತರಣೆ ಮಾಡಲಾಗುವುದು. ಗುತ್ತಿಗೆ, ಅರೆಗುತ್ತಿಗೆ ಪದ್ಧತಿಯನ್ನು ಸರ್ಕಾರಿ, ಖಾಸಗಿ ವಲಯದಲ್ಲೂ ರದ್ದು ಮಾಡಲಾಗುವುದು ಎಂದು ಭರವಸೆ ನೀಡಿದರು. ಪ್ರಸ್ತುತ ರೈತರು ಬೆಳೆದ ಬೆಳೆಗಳಿಗೆ ನ್ಯಾಯಯುತ ಬೆಲೆ ಸಿಗುತ್ತಿಲ್ಲ. ರೈತರಿಗಾಗಿ 3 ಯೋಜನೆ ತರಲಾಗುವುದು. ನ್ಯಾಯಯುತ ಕನಿಷ್ಠ ಬೆಂಬಲ ಬೆಲೆ, ಸಾಲಮನ್ನಾ ಮಾಡಲು ಕ್ರಮ, ನೀವು ಕಟ್ಟಿದ ವಿಮೆಯ ಹಣ 30 ದಿನದೊಳಗೆ ಬರುವಂತೆ ಕ್ರಮ ವಹಿಸಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next