ಜೀವನ, ಬದುಕು ಎಂದರೇನು ಎಂಬುದು ನಾವೆಲ್ಲ ಆಗಾಗ ಕೇಳಿಕೊಳ್ಳುವ ಪ್ರಶ್ನೆ. ನಿಜ ಏನೆಂದರೆ ನಾವೇ ಜೀವನ, ಬದುಕು. ಅದು ಎಲ್ಲೋ ಹೊರಗಿರುವಂಥದ್ದಲ್ಲ. ಅದರ ಅರ್ಥವನ್ನು ಎಲ್ಲೋ ಹುಡುಕಬೇಕಾಗಿಲ್ಲ. ಅದು ನಾವೇ. ನಾವು ಆಲೋಚನೆಗಳು, ತಣ್ತೀಸಿದ್ಧಾಂತಗಳು, ಧರ್ಮಗಳು, ಪೂರ್ವಾಗ್ರಹಗಳು, ನಂಬಿಕೆಗಳ ದಪ್ಪನೆಯ ತೊಗಟೆಯನ್ನು ನಮ್ಮ ಸುತ್ತ ಬಿಗಿದುಕೊಂಡಿದ್ದೇವೆ. ಹಾಗಾಗಿ ನಾವೇ ಜೀವನ ಎಂಬ ತಿರುಳು ಆಳದಲ್ಲಿ ಹುದುಗಿಹೋಗಿದೆ.
ಇಂದು ಬದುಕು ಎಂದರೆ ತತ್‌ಕ್ಷಣ ನಮ್ಮ ತಲೆಯಲ್ಲಿ ಹೊಳೆಯುವುದು ನಮ್ಮ ಉದ್ಯೋಗ, ವ್ಯವಹಾರ, ಕುಟುಂಬ, ಮನೆ, ಕಾರು, ಧರಿಸಿದ ಉಡುಗೆ ಇತ್ಯಾದಿ. ಆದರೆ ನಾವು ಜೀವಿಸಿದ್ದರೆ ಮಾತ್ರ ಇವುಗಳಿಗೆಲ್ಲ ಉಪಯೋಗ ಇರುತ್ತದೆ ಅಲ್ಲವೆ! ನಾವು ಮನೆಮಂದಿಯೊಂದಿಗೆ ಹೊಂದಿರುವ ಸಂಬಂಧ, ನಮ್ಮ ಹೆಸರು, ನಮ್ಮ ಮಾತು, ವಾಹನ, ವ್ಯವಹಾರ, ಉದ್ಯಮ – ಏನೇ ಇದ್ದರೂ ನಾವು ಬದುಕಿದ್ದರೆ ಮಾತ್ರ ಅವುಗಳಿಗೆ ಅರ್ಥ. ಆದ್ದರಿಂದ ಬದುಕು ಎಂದರೆ ಜೀವಂತವಾಗಿರು ವುದು, ಅದೇ ಅತ್ಯಂತ ಮೂಲಭೂತ ವಿಚಾರ.
ನಮ್ಮ ಮನಸ್ಸು, ಆಲೋಚನೆಗಳು ಒಂದು ಸಾಫ್ಟ್ವೇರ್‌ನ ಹಾಗೆ. ಜೀವನ ಪ್ರಕ್ರಿಯೆಯಲ್ಲಿ ಅದರೊಳಗೆ ನಾವು ಏನೆಲ್ಲ ದತ್ತಾಂಶಗಳನ್ನು ಊಡಿಸಿ ದ್ದೇವೆಯೋ ಅದಕ್ಕೆ ತಕ್ಕುದಾದ ಆಲೋಚನೆಗಳು ಹುಟ್ಟಿಕೊಳ್ಳುತ್ತವೆ. ಆ ಸಾಫ್ಟ್ವೇರನ್ನು ಹೊಂದಿರುವ ಬದುಕು ನಾವು. ನಾವು ಹೇಳಿದಂತೆ ಸಾಫ್ಟ್ವೇರ್ ಕೇಳಬೇಕೇ ವಿನಾ ಆಲೋಚನೆಗಳು ಹೇಳಿದಂತೆ ನಮ್ಮ ಬದುಕು ನಡೆಯುವುದಲ್ಲ. ಬಾಲವು ನಾಯಿಯನ್ನು ಅಲ್ಲಾಡಿಸಬಾರದು.
ಆದರೆ ನಾವೇ ಜೀವನ, ಜೀವಿಸುತ್ತಿರು ವುದೇ ಬದುಕಿನ ಮೂಲದ್ರವ್ಯ ಎಂಬ ತಿರುಳು ದಪ್ಪನೆಯ ತೊಗಟೆಯಡಿ ಹುದುಗಿ ರುವುದರಿಂದ ನಾವು “ಜೀವನ ಅಂದರೇನು’ ಎಂದು ಪ್ರಶ್ನಿಸುವಂತಾಗಿದೆ. ಆಲೋಚನೆಗಳೇ ನಮ್ಮನ್ನು ಆಳುವಂತಾಗಿದೆ.
ಹಾಗಾದರೆ ನಾವೇ ಜೀವನ ಎಂಬ ಮೂಲತ್ವ ಅನಾವರಣವಾಗಬೇಕಾದರೆ ಏನು ಮಾಡಬೇಕು? ಅದಕ್ಕೆ ಆಲೋಚನೆಗಳ ಮೂಲಕ ತೀರ್ಮಾನಗಳನ್ನು ತೆಗೆದು ಕೊಳ್ಳುವುದನ್ನು ಬಿಡಬೇಕು. “ಅದು ಮಾವಿನ ಮರವಲ್ಲವೇ, ನನಗೆ ಗೊತ್ತಿದೆ’, “ಓ ಅದೋ, ಹಲ್ಲಿ, ನನಗೆ ತಿಳಿದಿದೆ’, “ಇದಾ, ಗುಲಾಬಿ ಗಿಡ- ಕೆಂಪು ಹೂ ಅರಳಿಸುತ್ತದೆ, ಹೂವಿನ ಕೆಳಗೆ ಮುಳ್ಳುಗಳಿರುತ್ತವೆ’ ಎಂಬ ತೀರ್ಪು ಗಳನ್ನು ಕೊಡುವುದನ್ನು, ತೀರ್ಮಾನಗಳನ್ನು ತೆಗೆದುಕೊಳ್ಳುವುದನ್ನು ತ್ಯಜಿಸಬೇಕು. ನನಗೇನೂ ಗೊತ್ತಿಲ್ಲ, ಕಲಿಯುವುದು ಬಹಳವಿದೆ ಎಂಬ ವಿನಯವನ್ನು ಹೊಂದಿರಬೇಕು. ನನಗೇನೂ ಗೊತ್ತಿಲ್ಲ ಎಂಬ ವಿನಮ್ರತೆಯನ್ನು ಹೊಂದಿದ್ದರೆ ಗೊತ್ತಿಲ್ಲದೆ ಇರುವವುಗಳನ್ನು ತಿಳಿದುಕೊಳ್ಳುವುದರತ್ತ ಪ್ರಯಾಣ ಆರಂಭವಾಗುತ್ತದೆ. “ಗೊತ್ತಿಲ್ಲ’ ಎಂಬಲ್ಲಿ ಸ್ಥಿರವಾಗಿರುವುದು ಮನುಷ್ಯನ ಮೂಲಗುಣಕ್ಕೆ ತದ್ವಿರುದ್ಧ. ಹಾಗಾಗಿ “ನನಗೇನೂ ಗೊತ್ತಿಲ್ಲ’ ಎಂಬ ವಿನಯಶೀಲತೆ ಹುಟ್ಟಿಕೊಳ್ಳುವುದೇ ಜ್ಞಾನ ಮಾರ್ಗದಲ್ಲಿ ಪ್ರಯಾಣದ ಆರಂಭ ಬಿಂದು. ಆಗ ಬದುಕಿನಲ್ಲಿ ಪ್ರತಿ ಯೊಂದನ್ನೂ ಕುತೂಹಲ ದಿಂದ ಗಮನಿಸುವುದಕ್ಕೆ, ಬೆರಗಿನಿಂದ ಕಾಣುವುದಕ್ಕೆ, ತಿಳಿಯುವುದಕ್ಕೆ, ಮೆಚ್ಚಿ ಕೊಳ್ಳುವುದಕ್ಕೆ ಸಾಧ್ಯವಾಗು ತ್ತದೆ. ಆಗಲೇ ನಾವು ಬದುಕುವ ಪ್ರಕ್ರಿಯೆ ಯಲ್ಲಿ ಪ್ರಜ್ಞಾಪೂರ್ವಕವಾಗಿ ಒಳಗೊಳ್ಳು ವುದು. ಉಣ್ಣುವ ಆಹಾರದ ರುಚಿ, ಕುಡಿ ಯುವ ಪಾನೀಯದ ಸ್ವಾದ, ಉಸಿರಾಡುವ ಗಾಳಿಯ ಪರಿಮಳ, ನೋಡುವ ಮರಗಿಡ ಗಳ ಸೌಂದರ್ಯ- ಎಲ್ಲವೂ ಅರಿವಿಗೆ ಬರುವುದು ಹೀಗೆ ಪ್ರಜ್ಞಾಪೂರ್ವಕವಾಗಿ ಬದುಕುವ ಪ್ರಕ್ರಿಯೆಯಲ್ಲಿ ಒಳಗೊಂಡಾಗ.
ಬದುಕಿನಲ್ಲಿ ಹೆಚ್ಚು ತೀರ್ಮಾನಗಳನ್ನು ತೆಗೆದುಕೊಂಡಷ್ಟು, “ನನಗೆ ತಿಳಿದಿದೆ’ ಎಂದು ಕೊಂಡಷ್ಟು ಬದುಕು ಅನುಭವಿಸಲು ಸಿಗುವುದು ಕಡಿಮೆ. ನಾವೇ ಜೀವನ ಎಂಬ ಮೂಲತ್ವದ ಅರಿವನ್ನು ಹೊಂದಿ ಅದನ್ನು ಪ್ರತೀ ಕ್ಷಣವನ್ನೂ ಅನುಭವಿಸುತ್ತ ಆನಂದವಾಗಿರೋಣ.