ಕಳೆದ ಒಂದು ತಿಂಗಳಿನಿಂದ ದೇಶದಲ್ಲಿ ಸುದ್ದಿಯಲ್ಲಿರುವ ಪ್ರಮುಖ ಹೆಸರುಗಳಲ್ಲಿ ಒಂದು ಅಮೃತ್ ಪಾಲ್ ಸಿಂಗ್ ಮತ್ತು ಖಲಿಸ್ಥಾನಿ ಚಳುವಳಿ. ಇಂದು ಬೆಳಗ್ಗೆ ಪಂಜಾಬ್ ಪೊಲೀಸರು ಅಮೃತ್ ಪಾಲ್ ಸಿಂಗ್ ನನ್ನು ಪೊಲೀಸರು ಬಂಧಿಸಿದ್ದಾರೆ. ಪಂಜಾಬ್ ಮತ್ತು ಕೇಂದ್ರ ಸರ್ಕಾರಕ್ಕೆ ತಲೆ ನೊವಾಗಿರುವ ಖಲಿಸ್ಥಾನಿ ಚಳುವಳಿ ಹಿಂದೆ ಹಲವು ದಶಕಗಳ ಹೋರಾಟದ ಕಥೆಯಿದೆ. ಹಾಗಾದರೆ ಏನಿದು ಖಲಿಸ್ಥಾನಿ ಚಳುವಳಿ? ಜರ್ನೇಲ್ ಸಿಂಗ್ ಭಿಂದ್ರನ್ ವಾಲೆ ಎಂದರೆ ಯಾರು? ಸದ್ಯ ಸಂಚಲನ ಉಂಟು ಮಾಡಿರುವ ಅಮೃತ್ ಪಾಲ್ ಸಿಂಗ್ ಯಾರು ಎಂದು ತಿಳಿದಿಕೊಳ್ಳೋಣ.
ಖಲಿಸ್ತಾನ್ ಚಳುವಳಿಯು ಒಂದು ಸಿಖ್ ಪ್ರತ್ಯೇಕತಾವಾದಿ ಚಳುವಳಿ. ಪಂಜಾಬ್ ಪ್ರದೇಶದಲ್ಲಿ ಖಲಿಸ್ಥಾನ್ (‘ಖಾಲ್ಸಾ ಭೂಮಿ’) ಎಂಬ ತಮ್ಮದೇ ಪ್ರದೇಶವನ್ನು ಸ್ಥಾಪಿಸುವ ಮೂಲಕ ಸಿಖ್ಖರಿಗೆ ತಾಯ್ನಾಡನ್ನು ರಚಿಸಲು ಇದು ಪ್ರಯತ್ನಿಸುತ್ತಿದೆ.
1947ರಲ್ಲಿ ಭಾರತ ಸ್ವಾತಂತ್ರ್ಯ ಪಡೆದಾಗ ದೇಶ ವಿಭಜನೆಯೂ ಆಯಿತು. ಇಲ್ಲಿ ಪ್ರಮುಖವಾಗಿ ಪಂಜಾಬ್ ಎರಡು ಭಾಗವಾಗಿತ್ತು. ಪಂಜಾಬ್ ಪ್ರಾಂತ್ಯದ ಹಲವು ಪ್ರದೇಶಗಳು ಪಾಕಿಸ್ಥಾನದ ಪಾಲಾಗಿತ್ತು. ಹೆಚ್ಚಿನ ಸಿಖ್ಖರು ಭಾರತಕ್ಕೆ ಬಂದರೆ, ಸಿಖ್ಖರ ಹಲವು ಪ್ರಮುಖ ಕ್ಷೇತ್ರಗಳು ಪಾಕಿಸ್ಥಾನದ ನಕ್ಷೆಯೊಳಗೆ ಸೇರಿದ್ದವು. ಗುರು ನಾನಕರ ಜನ್ಮಕ್ಷೇತ್ರ ಜನಮ್ ಅಸ್ತಾಮ್ ಸಾಹೆಬ್, ಕರ್ತಾಪುರ ಸೇರಿದಂತೆ ಪ್ರಮುಖ ಧಾರ್ಮಿಕ ಸ್ಥಳಗಳು ಇಂದಿನ ಪಾಕಿಸ್ತಾನದಲ್ಲಿದೆ.
ವಿಭಜನೆಯ ಸಮಯದಲ್ಲಿ ಹಿಂಸಾಚಾರದ ಕಾರಣದಿಂದ ಸಿಖ್ಖರ ಮನಸ್ಸಿನಲ್ಲಿ ದೊಡ್ಡ ಪರಿಣಾಮ ಬೀರಿತ್ತು. ಹೀಗಾಗಿ ಪ್ರತ್ಯೇಕ ರಾಷ್ಟ್ರ ಬೇಕು ಎಂಬ ಕೂಗು ಮೊಳಕೆಯೊಡೆಯಿತು. ಇದು ಮುಂದೆ ಬಲವಾಗಿದ್ದು ಜರ್ನೇಲ್ ಸಿಂಗ್ ಬಿಂಧ್ರನ್‌ವಾಲೆ ಎಂಬಾತನ ಆಗಮನದಿಂದ.
ಧಮಾದಮಿ ತಕ್ಸಲ್ ನಾಯಕನಾಗಿದ್ದ ಜರ್ನೇಲ್ ಸಿಂಗ್ ಭಿಂದ್ರನ್ ವಾಲೆ 1978ರ ಸಿಖ್- ನಿರಾಂಕರಿ ಗಲಾಟೆಯಲ್ಲಿ ಮುನ್ನೆಲೆಗೆ ಬಂದಿದ್ದ. 1982 ರ ಬೇಸಿಗೆಯಲ್ಲಿ ಭಿಂದ್ರನ್ ವಾಲೆ ಮತ್ತು ಅಕಾಲಿದಳವು ಧರಮ್ ಯುಧ್ ಮೋರ್ಚಾವನ್ನು ಪ್ರಾರಂಭಿಸಿತು. ನೀರಾವರಿ ನೀರಿನ ಹೆಚ್ಚಿನ ಪಾಲನ್ನು ಉಳಿಸಿಕೊಳ್ಳುವ ಮತ್ತು ಚಂಡೀಗಢವನ್ನು ಪಂಜಾಬ್‌ಗೆ ಹಿಂದಿರುಗಿಸುವ ಭರವಸೆಯಲ್ಲಿ ಸಾವಿರಾರು ಜನರು ಚಳವಳಿಯಲ್ಲಿ ಸೇರಿಕೊಂಡರು. ಸಿಖ್ ಸಮುದಾಯದ ಕೆಲವು ವಿಭಾಗಗಳಲ್ಲಿ ಚಾಲ್ತಿಯಲ್ಲಿದ್ದ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ಪರಿಸ್ಥಿತಿಗಳ ಬಗ್ಗೆ ಅಸಮಾಧಾನವಿತ್ತು. ಕಾಲಕ್ರಮೇಣ ಭಿಂದ್ರನ್ ವಾಲೆ ಸಿಖ್ ಉಗ್ರಗಾಮಿತ್ವದ ನಾಯಕನಾಗಿ ಬೆಳೆದ.
1982-84ರ ಎರಡು ವರ್ಷಗಳ ಅವಧಿಯಲ್ಲಿ ಪಂಜಾಬ್ ನಲ್ಲಿ ಒಟ್ಟು 1,200 ಹಿಂಸಾತ್ಮಕ ಘಟನೆಗಳು ವರದಿಯಾಗಿದ್ದು, ಹಿಂಸಾಚಾರದಲ್ಲಿ 410 ಜನ ಅಸುನೀಗಿ 1,180 ಜನ ಗಂಭೀರವಾಗಿ ಗಾಯಗೊಂಡರು. ಈ ಹೋರಾಟವನ್ನು ಬಳಸಿಕೊಂಡ ಪಾಕಿಸ್ತಾನ, ಖಲಿಸ್ಥಾನಿಗಳಿಗೆ ಆರ್ಥಿಕ ಹಾಗೂ ಮಿಲಿಟರಿ ಸಹಾಯ ಮಾಡಿತ್ತು.
ಈ ಸಮಯದಲ್ಲಿ ಪಂಜಾಬ್ ನ ಪ್ರಮುಖ ನಾಯಕರ, ರಾಜಕಾರಣಿಗಳ ಕೊಲೆ ನಡೆದಿತ್ತು. ಸಿಖ್ಖರ ಪವಿತ್ರ ಸ್ಥಳ ಅಮೃತಸರದ ಸ್ವರ್ಣಮಂದಿರವನ್ನೇ ತನ್ನ ತಾಣವನ್ನಾಗಿಸಿದ್ದ ಭಿಂದ್ರನ್ ವಾಲೆ ಎಷ್ಟು ಕೊಬ್ಬಿದ್ದ ಎಂದರೆ ಪಂಜಾಬ್‌ನಲ್ಲಿ “ಸಮಾನಾಂತರ ಸರ್ಕಾರ” ವನ್ನೇ ಸ್ಥಾಪಿಸಿದ್ದ. ಸ್ವರ್ಣ ಮಂದಿರದಲ್ಲಿ ಕುಳಿತು ಪ್ರಕರಣಗಳನ್ನು, ವಿವಾದಗಳನ್ನು ಇತ್ಯರ್ಥಪಡಿಸುತ್ತಿದ್ದ.
ಆರಂಭಿಕ ದಿನಗಳಲ್ಲಿ ಶಿರೋಮಣಿ ಅಕಾಲಿ ದಳವನ್ನು ರಾಜಕೀಯವಾಗಿ ಮಣಿಸಲು ಭಿಂದ್ರನ್ ವಾಲೆಗೆ ಬೆಂಬಲವಾಗಿದ್ದ ಇಂದಿರಾ ಗಾಂಧಿ ಕೊನೆಗೆ ಅವರೇ ಆತನನ್ನು ಕೊನೆಗೊಳಿಸಬೇಕಾಯಿತು. 1984ರ ಜೂನ್ ನಲ್ಲಿ ಸ್ವರ್ಣ ಮಂದಿರಕ್ಕೆ ಸೇನೆಯನ್ನು ನುಗ್ಗಿಸಿದ ಇಂದಿರಾ, ‘ಆಪರೇಶನ್ ಬ್ಲೂಸ್ಟಾರ್’ ಗೆ ಅಸ್ತು ಎಂದಿದ್ದರು. ಒಂದು ವಾರಗಳ ಕಾಲ ಸ್ವರ್ಣ ಮಂದಿರದಲ್ಲಿ ರಕ್ತದೋಕುಳಿ ಹರಿದಿತ್ತು. ಈ ಕಾರ್ಯಾಚರಣೆಯಲ್ಲಿ ಭಿಂದ್ರನ್ ವಾಲೆ ಸೇರಿದಂತೆ ನೂರಾರು ಮಂದಿ ಪ್ರಾಣ ಕಳೆದುಕೊಂಡಿದ್ದರು.
ಬ್ಲೂ ಸ್ಟಾರ್ ಕಾರಣದಿಂದ ಇಂದಿರಾ ಗಾಂಧಿ ಸಿಖ್ಖರ ಕೋಪಕ್ಕೆ ತುತ್ತಾಗಿದ್ದರು. ಇದೇ ಕಾರಣದಿಂದ ಅವರು ತಮ್ಮ ಸಿಖ್ ಅಂಗರಕ್ಷಕರಿಂದಲೇ ಹತ್ಯೆಯಾದರು.
ಅಮೃತ್ ಪಾಲ್ ಸಿಂಗ್ ಯಾರು?
ಭಿಂದ್ರನ್ ವಾಲೆ 2.0 ಎಂದೇ ಕರೆಸಿಕೊಳ್ಳುವ ಅಮೃತ್ ಪಾಲ್ ಸಿಂಗ್ ಪಂಬಾಬ್ ನ ಮೋಸ್ಟ್ ವಾಂಟೆಡ್ ಕ್ರಿಮಿನಲ್. ಅಮೃತ್ ಪಾಲ್ ಸಿಂಗ್ ಕುಟುಂಬವು ಪಂಜಾಬ್‌ನ ಅಮೃತಸರ ಜಿಲ್ಲೆಯ ಜಲ್ಲುಪುರ್ ಖೇರಾದವರು, ಅವರ ಕುಟುಂಬವು ದುಬೈನಲ್ಲಿ ಸಾರಿಗೆ ವ್ಯವಹಾರ ನಡೆಸುತ್ತಿದ್ದು, ಅಮೃತಪಾಲ್ 2012 ರಿಂದ ಅಲ್ಲಿಯೇ ಉಳಿದುಕೊಂಡಿದ್ದ. ಕೇಂದ್ರದ ಕೃಷಿ ಕಾನೂನುಗಳ ವಿರುದ್ಧ ವರ್ಷವಿಡೀ ನಡೆದ ರೈತರ ಪ್ರತಿಭಟನೆಯ ಸಂದರ್ಭದಲ್ಲಿ ಅಮೃತಪಾಲ್ ಭಾರತಕ್ಕೆ ಬಂದು ಆಂದೋಲನದಲ್ಲಿ ಸೇರಿಕೊಂಡಿದ್ದ.
ನಟ ರಾಜಕಾರಣಿಯಾಗಿದ್ದ ದೀಪ್ ಸಿಧು ಹುಟ್ಟುಹಾಕಿದ್ದ ವಾರಿಸ್ ಪಂಜಾಬ್ ದೆ ಗುಂಪನ್ನು ಆತನ ಮರಣದ ನಂತರ ಮುಂದುವರಿಸಿದ್ದು ಅಮೃತಪಾಲ್ ಸಿಂಗ್. ಸಂಘಟನೆಯ ಮೂಲಕ ಯುವಕರಿಗೆ ಶಸ್ತ್ರ ಕೈಗೆತ್ತಿಕೊಳ್ಳಲು ಕರೆ ನೀಡದ ಅಮೃತಪಾಲ್, ನಂತರ ತನ್ನ ಅನುಯಾಯಿಗಳ ವಲಯದಲ್ಲಿ ಭಿಂದ್ರನ್ ವಾಲೆ 2.0 ಎಂದೇ ಕರೆಸಿಕೊಂಡ.
ಕಳೆದ ಫೆಬ್ರವರಿಯಲ್ಲಿ ಅಮೃತಸರದ ಹೊರವಲಯದ ಪೊಲೀಸ್ ಠಾಣೆಯ ಮೇಲೆ ನಡೆದ ದಾಳಿಯಲ್ಲಿ ಅಮೃತಪಾಲ್ ಹೆಸರು ಕೇಳಿಬಂದಿತ್ತು. ಕತ್ತಿಗಳನ್ನು ಝಳಪಿಸುತ್ತಾ ಮತ್ತು ಸಿಖ್ಖರ ಪವಿತ್ರ ಪುಸ್ತಕವನ್ನು ಗುರಾಣಿಗಳಾಗಿ ಬಳಸಿ, ಒಳಗೆ ನುಗ್ಗಿದ ದಾಳಿಕೋರರು ಜೈಲುಪಾಲಾಗಿದ್ದ ಅವರ ಪ್ರಮುಖ ಸಹಾಯಕ, ಅಪಹರಣ ಪ್ರಕರಣದ ಆರೋಪಿ ಲವ್ಪ್ರೀತ್ ಸಿಂಗ್ ಬಿಡುಗಡೆ ಮಾಡಿಕೊಂಡಿದ್ದರು. ಈ ವೇಳೆ ಹೇಳಿಕೆ ನೀಡಿದ್ದ ಅಮೃತಪಾಲ್ ಸಿಂಗ್ ‘ಖಲಿಸ್ಥಾನ’ದ ಗುರಿಗಾಗಿ ಸರ್ಕಾರ ವಿರುದ್ಧ ಸಶಸ್ತ್ರ ದಂಗೆಗೆ ಕರೆ ನೀಡಿದ್ದ.
ಕೀರ್ತನ್ ಶೆಟ್ಟಿ ಬೋಳ