ನಾವು ಸೇವಿಸಿದ ಆಹಾರವನ್ನು ಜೀರ್ಣಗೊಳಿಸುವುದು, ಅದರಿಂದ ಲಭಿಸಿದ ಪೌಷ್ಟಿಕಾಂಶಗಳನ್ನು ಹೀರಿಕೊಳ್ಳುವುದು ಮತ್ತು ಉಳಿದ ತ್ಯಾಜ್ಯಗಳನ್ನು ದೇಹದಿಂದ ಹೊರಹಾಕುವುದು ನಮ್ಮ ಜೀರ್ಣಾಂಗ ವ್ಯೂಹದ ಕೆಲಸ. ಕಾಯಿಲೆ ಮತ್ತು ಉರಿಯೂತಗಳಿಂದ ಜೀರ್ಣಾಂಗವ್ಯೂಹದ ಭಾದಿತ ಅಂಗಾಂಗಗಳ ಕಾರ್ಯಸಾಮರ್ಥ್ಯ ನಷ್ಟವಾಗುತ್ತದೆ, ಇದು ಸತತ ಭೇದಿ, ಹೊಟ್ಟೆನೋವು, ಗುದದ್ವಾರದಿಂದ ರಕ್ತಸ್ರಾವ, ತೂಕ ನಷ್ಟ ಮತ್ತು ದಣಿವಿನಂತಹ ಲಕ್ಷಣಗಳನ್ನು ಉಂಟು ಮಾಡುತ್ತದೆ. ಜೀರ್ಣಾಂಗ ವ್ಯೂಹದ ಈ ಕಾಯಿಲೆಗಳಲ್ಲಿ ಮುಖ್ಯವಾಗಿ ಎರಡು ವಿಧ – ಅಲ್ಸರೇಟಿವ್ ಕೊಲೈಟಿಸ್ ಮತ್ತು ಕ್ರಾನ್ಸ್ ಡಿಸೀಸ್.
Advertisement
ಕ್ರಾನ್ಸ್ ಡಿಸೀಸ್ ಮತ್ತು ಅಲ್ಸರೇಟಿವ್ ಕೊಲೈಟಿಸ್ ಇವೆರಡೂ ಇನ್‌ಫ್ಲಮೇಟರಿ ಬವೆಲ್ ಕಾಯಿಲೆಗಳಾಗಿದ್ದು, ಮನುಷ್ಯರ ಜೀರ್ಣಾಂಗವ್ಯೂಹದಲ್ಲಿ ದೀರ್ಘಕಾಲಿಕ ಉರಿಯೂತ ಮತ್ತು ಹಾನಿಗೆ ಕಾರಣವಾಗುತ್ತವೆ. ಇದು ಕರುಳಿನ ಒಂದು ಸ್ಥಿತಿಯಾಗಿದ್ದು ಇಲ್ಲಿ ಕರುಳು ಊದಿಕೊಳ್ಳುತ್ತದೆ.
ಕ್ರಾನ್ಸ್ ಡಿಸೀಸ್ ಬಾಯಿಯಿಂದ ತೊಡಗಿ ಗುದದ್ವಾರದ ತನಕ ಜೀರ್ಣಾಂಗ ವ್ಯೂಹದ ಯಾವುದೇ ಭಾಗದ ಮೇಲೆ ದುಷ್ಪರಿಣಾಮ ಬೀರಬಹುದಾಗಿದೆ. ಕ್ರಾನ್ಸ್ ಡಿಸೀಸ್‌ನಲ್ಲಿ ಉರಿಯೂತವು ಜಠರದ ಭಿತ್ತಿಗಳ ಸಂಪೂರ್ಣ ಗಡುಸಾಗುವಿಕೆಯ ತನಕ ಭಾದಿಸಬಹುದು. ಅಲ್ಸರೇಟಿವ್ ಕೊಲೈಟಿಸ್
ಅಲ್ಸರೇಟಿವ್ ಕೊಲೈಟಿಸ್ ದೊಡ್ಡ ಕರುಳು ಮತ್ತು ಗುದನಾಳ ಪ್ರದೇಶಗಳಲ್ಲಿ ಮಾತ್ರ ಉಂಟಾಗುವ ಸಮಸ್ಯೆ. ಇಲ್ಲಿ ಉರಿಯೂತವು ಇಡಿಯ ದೊಡ್ಡ ಕರುಳಿನ ಸಹಿತ ಕರುಳಿನ ಭಿತ್ತಿಯ ಅತ್ಯಂತ ಒಳಗಿನ ಪದರದಲ್ಲಿ ಮಾತ್ರ ಉಂಟಾಗುತ್ತದೆ.
Related Articles
ಯಾರು ಕೂಡ ಈ ಕಾಯಿಲೆಗೆ ತುತ್ತಾಗಬಹುದು, ಆದರೆ ಒಂದು ಕುಟುಂಬದ ಸದಸ್ಯರಲ್ಲಿ ಇದು ಉಂಟಾಗುವ ಸಂಭವ ಹೆಚ್ಚು. ಇನ್‌ಫ್ಲಮೇಟರಿ ಬವೆಲ್ ಡಿಸೀಸ್ ಅಥವಾ ಐಬಿಡಿಗೆ ನಿಖರವಾದ ಕಾರಣ ಇನ್ನೂ ಪತ್ತೆಯಾಗಿಲ್ಲ, ಆದರೆ ವಂಶವಾಹಿಗಳು, ರೋಗ ನಿರೋಧಕ ಶಕ್ತಿ ಮತ್ತು ಪಾರಿಸರಿಕ ಕಾರಣಗಳನ್ನು ಈ ಕಾಯಿಲೆ ಒಳಗೊಳ್ಳುತ್ತದೆ ಎಂಬುದನ್ನು ವೈದ್ಯಕೀಯ ವಿಜ್ಞಾನ ತಿಳಿದುಕೊಂಡಿದೆ. ನಮ್ಮ ದೇಹದ ರೋಗ ನಿರೋಧಕ ವ್ಯವಸ್ಥೆಯು ಬ್ಯಾಕ್ಟೀರಿಯಾ, ವೈರಸ್‌ಗಳು, ಶಿಲೀಂಧ್ರಗಳು ಮತ್ತು ಇತರ ಸೂಕ್ಷ್ಮಜೀವಿಗಳ ಮೇಲೆ ದಾಳಿ ನಡೆಸಿ ನಾಶ ಪಡಿಸುತ್ತದೆ. ಐಬಿಡಿಯಲ್ಲಿ ಈ ರೋಗ ನಿರೋಧಕ ವ್ಯವಸ್ಥೆಯು ಜೀರ್ಣಾಂಗವ್ಯೂಹದ ಮೇಲೆಯೇ ಅನುಚಿತ ಪ್ರತಿಕ್ರಿಯೆಯನ್ನು ಉಂಟು ಮಾಡಿ ಉರಿಯೂತಕ್ಕೆ ಕಾರಣವಾಗುತ್ತದೆ.
Advertisement
ಪಾರಿಸರಿಕ ಪ್ರಚೋದಕಗಳುಐಬಿಡಿಗೆ ಕಾರಣವಾಗುವ ಪಾರಿಸರಿಕ ಪ್ರಚೋದಕಗಳು ಯಾವುವು ಎಂಬುದು ಖಚಿತವಾಗಿ ತಿಳಿದುಬಂದಿಲ್ಲವಾದರೂ ಹಲವು ಸಂಭಾವ್ಯ ಅಪಾಯಾಂಶಗಳನ್ನು ಅಧ್ಯಯನಗಳ ಮೂಲಕ ಕಂಡುಕೊಳ್ಳಲಾಗಿದೆ.
– ಧೂಮಪಾನ
– ಆ್ಯಂಟಿಬಯಾಟಿಕ್‌ಗಳ ಅತಿಯಾದ ಬಳಕೆ ಐಬಿಡಿ ಅಪಾಯವನ್ನು ಹೆಚ್ಚಿಸಬಹುದು.
– ಸ್ಟಿರಾಯೆxàತರ ಆ್ಯಂಟಿ ಇನ್‌ಫ್ಲಮೇಟರಿ ಔಷಧಗಳು (ಆ್ಯಸ್ಪಿರಿನ್, ಇಬುಪ್ರೊಫೇನ್, ನ್ಯಾಪ್ರೊಕ್ಸೆನ್): ಐಬಿಡಿ ಉಂಟಾಗುವ ಅಪಾಯವನ್ನು ಹೆಚ್ಚಿಸುತ್ತವೆ ಮತ್ತು ಉರಿಗೆ ಕಾರಣವಾಗಬಲ್ಲವು.
– ಕಳಪೆ ಜೀವನಶೈಲಿ – ಪಾಶ್ಚಾತ್ಯ ಜೀವನ ಶೈಲಿ ವಯಸ್ಸು
ಕ್ರಾನ್ಸ್ ಡಿಸೀಸ್ ಮತ್ತು ಅಲ್ಸರೇಟಿವ್ ಕೊಲೈಟಿಸ್ ಯಾವುದೇ ವಯಸ್ಸಿನಲ್ಲಿ ಕಾಣಿಸಿಕೊಳ್ಳಬಹುದಾದರೂ ಈ ಸಮಸ್ಯೆಗಳಿಗೆ ತುತ್ತಾಗುವ ಅತಿ ಹೆಚ್ಚು ಮಂದಿ 15ರಿಂದ 35 ವರ್ಷ ವಯಸ್ಸಿನೊಳಗಿನವರಾಗಿರುವುದು ತಪಾಸಣೆಗಳಿಂದ ತಿಳಿದುಬರುತ್ತದೆ. ಇತಿಹಾಸ
ವಿಲ್ಕ್ ಮತ್ತು ಮೊಕೊನ್ ಎಂಬಿಬ್ಬರು ಆಂಗ್ಲ ವೈದ್ಯರು 1875ರಲ್ಲಿ ಅಲ್ಸರೇಟಿವ್ ಕೊಲೈಟಿಸ್ ಅನ್ನು ಸೋಂಕುಕಾರಿಗಳಿಂದ ಉಂಟಾಗುವ ಭೇದಿಗಳಿಂದ ಪ್ರತ್ಯೇಕಿಸಿ ಹೊಸ ಕಾಯಿಲೆಯಾಗಿ ಗುರುತಿಸಿ ವ್ಯಾಖ್ಯಾನಿಸಿದರು. ಬರಿಲ್ ಕ್ರಾನ್, ಲಿಯೋನ್ ಗಿನ್ಸ್‌ಬರ್ಗ್ ಮತ್ತು ಗೋರ್ಡೊನ್ ಡಿ. ಒಪನ್‌ಹೀಮರ್ ಎಂಬ ಮೂವರು ವೈದ್ಯರು 1932ರಲ್ಲಿ ಕ್ರಾನ್ಸ್ ಡಿಸೀಸನ್ನು ವ್ಯಾಖ್ಯಾನಿಸಿದರು. ಆ ಕಾಲದಲ್ಲಿ ಸಣ್ಣ ಕರುಳಿನಲ್ಲಿ ಉಂಟಾಗುವ ಯಾವುದೇ ಕಾಯಿಲೆಯನ್ನು ಕರುಳಿನ ಕ್ಷಯ ಎಂದು ಪರಿಭಾವಿಸಲಾಗುತ್ತಿತ್ತು. ಈ ಮೂವರು ವೈದ್ಯರು ಈ ಹೊಸ ಕಾಯಿಲೆಯನ್ನು ವಿವರಿಸಿದರು; ಆರಂಭದಲ್ಲಿ ಇದನ್ನು ರೀಜನಲ್ ಇಲೈಟಿಸ್ ಎಂದು ಕರೆಯಲಾಗುತ್ತಿತ್ತು, ಬಳಿಕ ಕ್ರಾನ್ಸ್ ಡಿಸೀಸ್ ಎಂಬ ಹೆಸರನ್ನು ಇರಿಸಲಾಯಿತು. ಇನ್‌ಫ್ಲಮೇಟರಿ ಬವೆಲ್ ಕಾಯಿಲೆಗಳನ್ನು ಗುರುತಿಸಿದಂದಿನಿಂದ ತೊಡಗಿ ಇಲ್ಲಿಯವರೆಗೆ ವಂಶವಾಹಿ ಶಾಸ್ತ್ರ, ರೋಗ ಪ್ರತಿರೋಧ ಶಾಸ್ತ್ರ ಮತ್ತು ಸೂಕ್ಷ್ಮಜೀವಾಣು ಶಾಸ್ತ್ರ ಕ್ಷೇತ್ರಗಳಲ್ಲಿ ಮಹತ್ತರ ವೈಜ್ಞಾನಿಕ ಅಧ್ಯಯನಗಳು ಮತ್ತು ಶೋಧಗಳು ನಡೆದಿದ್ದು, ಐಬಿಡಿ ಉದ್ಭವಿಸುವುದಕ್ಕೆ ಕಾರಣವಾಗುವ ಅಂತರ್‌ವ್ಯವಸ್ಥೆಗಳನ್ನು ಹೆಚ್ಚು ಚೆನ್ನಾಗಿ ಅರ್ಥ ಮಾಡಿಕೊಳ್ಳುವುದಕ್ಕೆ ಸಾಧ್ಯವಾಗಿದೆ. ಇದರಿಂದಾಗಿ ಹೆಚ್ಚು ಹೆಚ್ಚು ಪರಿಣಾಮಕಾರಿಯಾದ ಚಿಕಿತ್ಸೆಗಳನ್ನು ಅಭಿವೃದ್ಧಿಪಡಿಸುವುದಕ್ಕೆ ಸಾಧ್ಯವಾಗಿದೆ. ಲಕ್ಷಣಗಳೇನು?
ಕರುಳಿನ ಒಳಭಿತ್ತಿ ಉರಿಯೂತಕ್ಕೆ ಒಳಗಾಗುತ್ತದೆ ಮತ್ತು ಅಲ್ಲಿ ಹುಣ್ಣುಗಳಾಗುತ್ತವೆ ಹಾಗೂ ಆಹಾರ ಮತ್ತು ತಾಜ್ಯಗಳನ್ನು ಸಮರ್ಪಕವಾಗಿ ಸಂಸ್ಕರಿಸಲು ಅಥವಾ ನೀರನ್ನು ಹೀರಿಕೊಳ್ಳುವ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತದೆ. ಕ್ರಾನ್ಸ್ ಡಿಸೀಸ್ ಅಥವಾ ಅಲ್ಸರೇಟಿವ್ ಕೊಲೈಟಿಸ್‌ಗೆ ತುತ್ತಾಗಿರುವ ಬಹುತೇಕರು ಮಲವಿಸರ್ಜನೆಯ ತುರ್ತನ್ನು ಅನುಭವಿಸುತ್ತಾರೆ ಹಾಗೂ ಹೊಟ್ಟೆ ಹಿಡಿದುಕೊಂಡಂತಹ ಹೊಟ್ಟೆನೋವನ್ನು ಹೊಂದಿರುತ್ತಾರೆ. ಉರಿಯೂತವು ದೊಡ್ಡ ಕರುಳು ಮತ್ತು ಗುದನಾಳದಲ್ಲಿ ಸಣ್ಣ ಹುಣ್ಣುಗಳು ಮೂಡಲು ಕಾರಣವಾಗಬಹುದು. ಈ ಹುಣ್ಣುಗಳು ಜತೆಗೂಡಿ ದೊಡ್ಡ ಹುಣ್ಣಾಗಿ ರಕ್ತಸ್ರಾವ ನಡೆದು ರಕ್ತಸಹಿತ ಮಲವಿಸರ್ಜನೆ ಆಗಬಹುದು. ಇದನ್ನು ತಡೆಯದಿದ್ದರೆ ರಕ್ತನಷ್ಟದಿಂದಾಗಿ ರಕ್ತಹೀನತೆ ತಲೆದೋರಬಹುದು. ಐಬಿಡಿಯ ಲಕ್ಷಣಗಳು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತವೆ, ಕಾಲಕ್ರಮದಲ್ಲಿ ಬದಲಾಗುತ್ತವೆ ಹಾಗೂ ಲಘು ಲಕ್ಷಣಗಳಿಂದ ತೊಡಗಿ ತೀವ್ರತೆಯವರೆಗೆ ಇರುತ್ತವೆ. ಈ ಲಕ್ಷಣಗಳು ಬಹಳ ದೀರ್ಘಕಾಲದಿಂದ ಕಂಡುಬರುತ್ತವೆ ಎಂಬುದನ್ನು ನೆನಪಿನಲ್ಲಿ ಇರಿಸಿಕೊಳ್ಳಬೇಕು.
– ಭೇದಿ
– ಹೊಟ್ಟೆನೋವು
– ಗುದನಾಳದಲ್ಲಿ ರಕ್ತಸ್ರಾವ
– ತುರ್ತಾಗಿ ಮಲವಿಸರ್ಜನೆ ನಡೆಸಬೇಕೆನ್ನುವ ಅನುಭವ
– ಮಲವಿಸರ್ಜನೆ ಸಂಪೂರ್ಣವಾಗಿಲ್ಲ ಎಂಬ ಅನುಭವ ಗುಣಲಕ್ಷಣಗಳು
– ಹೊಟ್ಟೆಹಿಡಿದುಕೊಂಡಂತಹ ನೋವು
– ಆಗಾಗ ಮಲವಿಸರ್ಜನೆ, ರಕ್ತಸಹಿತ ಮಲ ಸಾಮಾನ್ಯ
– ತೂಕ ನಷ್ಟ
– ಕಾಯಿಲೆಯ ತೀವ್ರ ಹಂತದಲ್ಲಿ ಜ್ವರ ಮತ್ತು ತೀವ್ರ ಎದೆಬಡಿತ
– ದೃಷ್ಟಿ ಮಂಜಾಗುವಿಕೆ, ಕಣ್ಣು ನೋವು ಮತ್ತು ಕಣ್ಣುಗಳನ್ನು ಒಳಗೊಂಡ ಫೊಟೊಫೋಬಿಯಾ
– ಆಥೆùìಟಿಸ್
– 1 ಸೆಂ.ಮೀ.ನಿಂದ ತೊಡಗಿ ಹಲವು ಸೆಂಟಿಮೀಟರ್ ಗಾತ್ರದ ಎತ್ತರಿಸಿದ, ಕೆಂಬಣ್ಣದ ಮೃದು ಗಂಟುಗಳು – ಡಾ| ಶಿರನ್ ಶೆಟ್ಟಿ,
ಅಸೊಸಿಯೇಟ್ ಪ್ರೊಫೆಸರ್
ಗ್ಯಾಸ್ಟ್ರೊಎಂಟ್ರಾಲಜಿ ಮತ್ತು ಹೆಪಟಾಲಜಿ ವಿಭಾಗ, ಕಸ್ತೂರ್ಬಾ ಆಸ್ಪತ್ರೆ, ಮಣಿಪಾಲ.