Advertisement

ದೆಹಲಿ ಮಾಲಿನ್ಯ ನಿವಾರಣೆಗೆ ಹೈಡ್ರೋಜನ್ ಇಂಧನ ಪರಿಹಾರ : ಅಭಿಪ್ರಾಯ ಕೇಳಿದ ಸುಪ್ರೀಂ ಕೋರ್ಟ್

11:15 AM Nov 14, 2019 | Hari Prasad |

ನವದೆಹಲಿ: ರಾಷ್ಟ್ರ ರಾಜಧಾನಿ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳನ್ನು ಕಾಡುತ್ತಿರುವ ಗಂಭೀರ ವಾಯುಮಾಲಿನ್ಯ ಸಮಸ್ಯೆಗೆ ಸುಪ್ರೀಂ ಕೋರ್ಟ್ ಹೈಡ್ರೋಜನ್ ಇಂಧನ ಪರಿಹಾರವನ್ನು ಸೂಚಿಸಿದೆ. ಜಪಾನ್ ದೇಶದಲ್ಲಿ ಈಗಾಗಲೇ ಈ ತಂತ್ರಜ್ಞಾನ ಯಶಕಂಡಿದ್ದು ಅದನ್ನು ದೆಹಲಿ ಸೇರಿದಂತೆ ದೇಶಾದ್ಯಂತ ಜಾರಿಗೊಳಿಸಲು ಸಾಧ್ಯವೇ ಎಂಬ ಕುರಿತಾಗಿ ವಿಸ್ತೃತ ವರದಿ ಒಂದನ್ನು ಡಿಸೆಂಬರ್ 03ರೊಳಗೆ ತನಗೆ ಸಲ್ಲಿಸುವಂತೆ ಕೋರ್ಟ್ ನಿರ್ದೇಶನ ನೀಡಿದೆ.

Advertisement

ವಾಯುಮಾಲಿನ್ಯಕ್ಕೆ ಪರಿಹಾರವಾಗಿ ಭವಿಷ್ಯದಲ್ಲಿ ಹೈಡ್ರೋಜನ್ ಇಂಧನಗಳ ಬಳಕೆಗೆ ಹಲವಾರು ದೇಶಗಳು ಒಲವು ತೋರುತ್ತಿವೆ. ಜಾಗತಿಕವಾಗಿ ಪ್ರತೀದಿನ 70 ಮಿಲಿಯನ್ ಟನ್ ಗಳಷ್ಟು ಹೈಡ್ರೋಜನ್ ಇಂಧನವನ್ನು ತಯಾರಿಸಲಾಗುತ್ತಿದ್ದು ಮತ್ತಿದನ್ನು ವಿವಿಧ ಉದ್ಯಮಗಳು ಬಳಸಿಕೊಳ್ಳುತ್ತಿವೆ. ಹೈಡ್ರೋಜನ್ ಇಂಧನದ ಸಹಾಯದಿಂದ ಚಲಿಸುವ ವಾಹನಗಳು ಈಗಾಗಲೇ ವಿಶ್ವದ ಹಲವಾರು ಕಡೆಗಳಲ್ಲಿ ಓಡಾಟ ನಡೆಸುತ್ತಿವೆ.

ಉತ್ತರ ಯುರೋಪಿನ ಹಲವಾರು ದೇಶಗಳಲ್ಲಿ ಮತ್ತು ಇಂಗ್ಲಂಡ್ ದೇಶದಲ್ಲಿ ಸಾರ್ವಜನಿಕ ಸಂಚಾರದ ಬಸ್ಸುಗಳಲ್ಲಿಯೂ ಸಹ ಇದೇ ಹೈಡ್ರೋಜನ್ ಇಂಧನವನ್ನೇ ಬಳಸಲಾಗುತ್ತಿದೆ. ಹೈಡ್ರೋಜನ್ ಇಂಧನದಲ್ಲಿ ಓಡುವ ಮೂರು ಕಾರುಗಳು ಈಗಾಗಲೇ ಮಾರುಕಟ್ಟೆಯಲ್ಲಿ ಲಭ್ಯವಿದೆ, ಅವುಗಳೆಂದರೆ ಟೊಯೊಟೋ ಕಂಪೆನಿಯ ಮಿರಾಯ್, ಹುಂಡೈ ನೆಕ್ಸೋ ಮತ್ತು ಹೋಂಡಾ ಕ್ಲ್ಯಾರಿಟಿ.

ಇನ್ನು ನಮ್ಮ ನೆರೆಯ ಚೀನಾದಲ್ಲೂ ಸಹ ಹೈಡ್ರೋಜನ್ ಇಂಧನ ಕೋಶ ಚಾಲಿತ ರೈಲುಗಳು ಓಡಾಟ ನಡೆಸುತ್ತಿದ್ದರೆ ಜರ್ಮನಿಯಲ್ಲಿ ಹೈಡ್ರೋಜನ್ ರೈಲುಗಳು ಸಾರ್ವಜನಿಕ ಸೇವೆಗೆ ಲಭ್ಯವಿದೆ. ಇಷ್ಟು ಮಾತ್ರವಲ್ಲದೇ ಹೈಡ್ರೋಜನ್ ಇಂಧನವನ್ನು ಬೈಕ್ ಗಳಲ್ಲಿ, ಕಾರುಗಳಲ್ಲಿ ಮಾತ್ರವಲ್ಲದೇ ವಿಮಾನಗಳಲ್ಲೂ ಸಹ ಬಳಸಲಾಗುತ್ತಿದೆ. ನಾಸಾ ಹೈಡ್ರೋಜನ್ ಇಂಧನ ಚಾಲಿತ ಬಾಹ್ಯಾಕಾಶ ನೌಕೆಯನ್ನೂ ಸಹ ಉಡಾಯಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next