ಬೆಂಗಳೂರು: ಬೇಲೆಕೇರಿ ಅದಿರು ನಾಪತ್ತೆ ಪ್ರಕರಣ (Belekeri ore missing case) ಇದೀಗ ಮತ್ತೆ ರಾಜ್ಯದ ಗಮನ ಸೆಳೆಯುತ್ತಿದೆ. ಅಕ್ರಮದಲ್ಲಿ ಭಾಗಿಯಾಗಿದ್ದ ಈಗಿನ ಕಾರವಾರ ಶಾಸಕ ಸತೀಶ್ ಸೈಲ್ (MLA Sathish Sail) ಸೇರಿ ಹಲವರಿಗೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಶನಿವಾರ (ಅ.26) ಜೈಲು ಶಿಕ್ಷೆ ಮತ್ತು ಅಪಾರ ಪ್ರಮಾಣದ ದಂಡ ವಿಧಿಸಿದೆ.
ಹಾಗಾದರೆ ಏನಿದು ಬೇಲೆಕೇರಿ ಅದಿರು ನಾಪತ್ತೆ ಪ್ರಕರಣ? ಲೋಕಾಯುಕ್ತ ಮತ್ತು ಅರಣ್ಯಾಧಿಕಾರಿಗಳು 2010ರಲ್ಲಿ ನಡೆಸಿದ್ದ ಹೋರಾಟ ಹೇಗಿತ್ತು ಎನ್ನುವುದರ ಕುರಿತು ಒಂದು ವರದಿ ಇಲ್ಲಿದೆ.
ಬೇಲೆಕೇರಿ ಎನ್ನುವುದು ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನಲ್ಲಿರುವ ಒಂದು ಬಂದರು. ಸತೀಶ್ ಸೈಲ್ ಗುತ್ತಿಗೆ ಪಡೆಯದೆ ತೆಗೆದ ಕಾನೂನು ಬಾಹಿರ ಅದಿರು ಖರೀದಿಸುತ್ತಿದ್ದರು. ಬಳ್ಳಾರಿ ಮತ್ತು ಹೊಸಪೇಟೆ ಸೇರಿ ಇತರೆ ಅರಣ್ಯದಲ್ಲಿ ತೆಗೆದಿದ್ದ ಅದಿರು ಖರೀದಿ ಮಾಡುತ್ತಿದ್ದರು. ಈ ಅದಿರನ್ನು ಸರ್ಕಾರದ ಅನುಮತಿ ಪಡೆಯದೆ ಸ್ಥಳಾಂತರ ಮಾಡುತ್ತಿದ್ದರು. ಹೀಗೆ ತೆರಿಗೆ ವಂಚನೆ ಮಾಡಿ ಬೇಲೆಕೇರಿಗೆ ಅಕ್ರಮವಾಗಿ ಅದಿರು ಸಾಗಾಟ ಮಾಡಲಾಗುತ್ತಿತ್ತು.
2009ರ ಜನವರಿ 1ರಿಂದ 2010ರ ಮೇ 31ರವರೆಗೆ, ಅಂದರೆ 17 ತಿಂಗಳ ಅವಧಿಯಲ್ಲಿ ಬರೋಬ್ಬರಿ 88 ಲಕ್ಷದ 6 ಸಾವಿರ ಮೆಟ್ರಿಕ್ ಟನ್ ಅದಿರು ಅಕ್ರಮವಾಗಿ ರಫ್ತಾಗಿತ್ತು. 38 ಲಕ್ಷ ಮೆಟ್ರಿಕ್ ಟನ್ ಅದಿರು ರಫ್ತು ಮಾಡುವುದಕ್ಕಷ್ಟೇ ಅನುಮತಿ ನೀಡಲಾಗಿತ್ತು. ಗಣಿ ಇಲಾಖೆಯ ನಿಯಮಗಳನ್ನು ಗಾಳಿಗೆ ತೂರಿದ್ದ ಆರೋಪಿಗಳು ಅದಿರು ರಫ್ತು ಮಾಡಿದ್ದರು. ಬರೋಬ್ಬರಿ 50 ಲಕ್ಷ ಮೆಟ್ರಿಕ್ ಟನ್ ಅದಿರು ಹೆಚ್ಚುವರಿಯಾಗಿ ವಿದೇಶಕ್ಕೆ ರಫ್ತಾಗಿತ್ತು. 73 ರಫ್ತುದಾರರು ಈ ರಫ್ತು ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದರು. ಈ ಪೈಕಿ ನಾಲ್ಕು ಕಂಪನಿಗಳ ಮೂಲಕ 33 ಲಕ್ಷ ಮೆಟ್ರಿಕ್ ಟನ್ ಅದಿರು ಕಳುಹಿಸಲಾಗಿತ್ತು. ರಫ್ತು ಮಾಡಿದ್ದ ನಾಲ್ಕು ಕಂಪನಿಗಳಲ್ಲಿ ಶಾಸಕ ಸತೀಶ್ ಸೈಲ್ ಒಡೆತನದ ಶ್ರೀಮಲ್ಲಿಕಾರ್ಜುನ ಶಿಪ್ಪಿಂಗ್ ಕಂಪನಿ 7 ಲಕ್ಷದ 23 ಸಾವಿರ ಮೆಟ್ರಿಕ್ ಟನ್ ಅದಿರು ಸಾಗಿಸಿತ್ತು. ಇನ್ನುಳಿದ ಕಂಪನಿಗಳ ಅದಿರು ರಫ್ತುವಿನಲ್ಲಿ ಸೈಲ್ ಪರೋಕ್ಷ ಭಾಗಿಯಾಗಿದ್ದರು.
ಇದನ್ನೂ ಓದಿ:Belekeri scam: ಶಾಸಕ ಸತೀಶ್ ಸೈಲ್ ಗೆ ಭಾರಿ ಜೈಲು ಶಿಕ್ಷೆ ಪ್ರಕಟ; ಶಾಸಕ ಸ್ಥಾನ ರದ್ದು?
ಬೇಲೆಕೇರಿ ವ್ಯಾಪ್ತಿಯಲ್ಲಿ 2009- 2010ರ ಅವಧಿಯಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದ ಮಾಹಿತಿ ಮೇರೆಗೆ ಅರಣ್ಯಾಧಿಕಾರಿಗಳು ದಾಳಿ ನಡೆಸಿ 200 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಸುಮಾರು 11,312 ಮೆಟ್ರಿಕ್ ಟನ್ ಕಬ್ಬಿಣದ ಅದಿರನ್ನು ಜಪ್ತಿ ಮಾಡಿದ್ದರು. ಈ ಅದಿರನ್ನು ಬೇಲೆಕೇರಿ ಬಂದರಿನ ಅಧಿಕಾರಿ ಮಹೇಶ್ ಬಿಳಿಯ ಅವರ ಸುಪರ್ದಿಗೆ ನೀಡಿದ್ದರು.
ಆದರೆ ತಮ್ಮ ಅಕ್ರಮವನ್ನು ಇಲ್ಲಿಗೆ ನಿಲ್ಲಿಸದ ಸೈಲ್ ಮತ್ತು ತಂಡವು ಸೀಜ್ ಮಾಡಲಾಗಿದ್ದ ಅದಿರನ್ನೇ ಅಲ್ಲಿಂದ ಗೊತ್ತಾಗದಂತೆ ರಫ್ತು ಮಾಡಿದ್ದರು. ಕೇವಲ 80 ದಿನಗಳಲ್ಲಿ ಸೀಜ್ ಮಾಡಲಾಗಿದ್ದ 6 ಲಕ್ಷ ಮೆಟ್ರಿಕ್ ಟನ್ ಕಬ್ಬಿಣದ ಅದಿರು ನಾಪತ್ತೆಯಾಗಿತ್ತು. ಅಧಿಕಾರಿಗಳು ಕೂಡಾ ಇದರಲ್ಲಿ ಶಾಮೀಲಾಗಿದ್ದರು.
ಮುಟ್ಟುಗೋಲು ಹಾಕಿದ್ದ ಅದಿರು ಕೂಡಾ ನಾಪತ್ತೆಯಾಗಿದ್ದ ಪ್ರಕರಣ ಬಯಲಾಗುತ್ತಿದ್ದಂತೆ ಸತೀಶ್ ಸೈಲ್ ವಿರುದ್ದ ದೂರು ದಾಖಲಾಗಿತ್ತು. 2012ರ ಸೆ.16ರಂದು ಸಿಬಿಐ ತಂಡವು ಸತೀಶ್ ಸೈಲ್ ಮನೆಗೆ ದಾಳಿ ನಡೆಸಿ ಹಲವು ದಾಖಲೆಗಳನ್ನು ವಶಕ್ಕೆ ಪಡೆದಿತ್ತು. ಇದಾದ ಬಳಿಕ ಸೈಲ್ ಬಂಧನವಾಗಿತ್ತು. ವರ್ಷಕ್ಕೂ ಹೆಚ್ಚು ಕಾಲ ಬಂಧನದಲ್ಲಿದ್ದ ಸೈಲ್ ಬಳಿಕ ಜಾಮೀನಿನಲ್ಲಿ ಹೊರಬಂದಿದ್ದರು.
ಇದೀಗ ಪ್ರಕರಣದಲ್ಲಿದ್ದ ಶಾಸಕ ಸತೀಶ್ ಸೈಲ್, ಬೇಲೆಕೇರಿ ಬಂದರಿನ ಉಪ ಸಂರಕ್ಷಣಾಧಿಕಾರಿ (ಡೆಪ್ಯುಟಿ ಪೋರ್ಟ್ ಕನ್ಸರ್ವೇಟರ್) ಮಹೇಶ್ ಬಿಳಿಯ, ಲಾಲ್ ಮಹಲ್ ಕಂಪೆನಿಯ ಮಾಲಕ ಪ್ರೇಮ್ ಚಂದ್ ಗರ್ಗ್, ಶ್ರೀಲಕ್ಷ್ಮೀ ವೆಂಕಟೇಶ್ವರ ಟ್ರೇಡರ್ಸ್ ಮಾಲಕ ಖಾರದಪುಡಿ ಮಹೇಶ್, ಸ್ವಸ್ತಿಕ್ ಕಂಪೆನಿಯ ಮಾಲಕ ಕೆ.ವಿ. ನಾಗರಾಜ್, ಗೋವಿಂದರಾಜು, ಆಶಾಪುರ ಕಂಪೆನಿಯ ಮಾಲಕ ಚೇತನ್ ಅವರನ್ನು ದೋಷಿಗಳೆಂದು ಆದೇಶಿಸಿ ಶಿಕ್ಷೆ ಪ್ರಕಟ ಮಾಡಿದೆ.