Advertisement
ಚಿಕ್ಕಮಗುವಾಗಿರುವಾಗಲೇ ಮಾಲಿನಿ ಕೈಯನ್ನು ಕಳೆದುಕೊಳ್ಳಬೇಕಾಯಿತು. ಆಗ ಮನೆಯಲ್ಲಿ ಅಕ್ಕಿ ಮಾಡಲೆಂದು ಭತ್ತವನ್ನು ಬೇಯಿಸಲಾಗುತ್ತಿತ್ತು. ಮಕ್ಕಳು ಆಟವಾಡುತ್ತ ಹೋದರು, ಈಕೆಗೆ ಬೆಂಕಿ ಅನಾಹುತವಾಯಿತು. ತುರ್ತು ಚಿಕಿತ್ಸೆ ನೀಡಲಾಯಿತಾದರೂ ಮಾಲಿನಿಗೆ ಎರಡು ಕೈಗಳು ಮತ್ತೆ ಬರಲೇ ಇಲ್ಲ.
Related Articles
Advertisement
ಮನೆ ಅಂದ ಮೇಲೆ ಅಡುಗೆ ಮಾಡುವುದು, ಬಟ್ಟೆ ಒಗೆಯುವುದು, ಪಾತ್ರೆ ತೊಳೆಯುವುದು ಹೀಗೆ ಬೇರೆ ಬೇರೆ ವಿಧದ ಕೆಲಸಗಳು ಅನಿವಾರ್ಯ. ಇವೆಲ್ಲವನ್ನು ಮಾಲಿನಿ ಪತಿ ಪ್ರಸನ್ನರ ಸಹಕಾರದಲ್ಲಿ ನಿಭಾಯಿಸಿಕೊಂಡು ಉದ್ಯೋಗವನ್ನೂ ನಿರ್ವಹಿಸಿಕೊಂಡು ಯಶಸ್ವೀ ವ್ಯವಸ್ಥಾಪಕಿಯಾಗಿದ್ದಾರೆ.
ಎಸೆಸೆಲ್ಸಿ ಪರೀಕ್ಷೆ ಫಲಿತಾಂಶ ಇತ್ತೀಚೆಗಷ್ಟೆ ಬಂದಿದ್ದು ಮಕ್ಕಳ ಸಂಭ್ರಮಗಳನ್ನು ನೋಡಿದ್ದೇವೆ. ಮಾಲಿನಿಗೆ ಎಸೆಸೆಲ್ಸಿ ಪರೀಕ್ಷೆ ಬರೆಯುವಾಗ ಹೆಚ್ಚುವರಿ ಸಮಯವನ್ನು ನೀಡಿರಲಿಲ್ಲ. ಪಿಯುಸಿ, ಪದವಿ, ಕಂಪ್ಯೂಟರ್ ಶಿಕ್ಷಣದ ಪರೀಕ್ಷೆಯಲ್ಲಿ ಮಾಲಿನಿಗಾಗಿ ಪ್ರತ್ಯೇಕ ಸಮಯವನ್ನು ನೀಡಿದ್ದರು. ಮಾಲಿನಿ ಎರಡು ಅರ್ಧತೋಳಿನ ನಡುವೆ ಪೆನ್ನು ಹಿಡಿದು ಬರೆಯುತ್ತಾರೆ. ಇದೇ ಮಾರ್ಗದಲ್ಲಿ ಕಂಪ್ಯೂಟರ್, ಮೊಬೈಲ್ ನಿರ್ವಹಣೆ ಕೌಶಲವೂ ನಡೆದುಬಂದಿದೆ. ಸುಮಾರು ಆರು ವರ್ಷ ಕಾಲ ಉಡುಪಿಯಿಂದ ಕೌಡೂರಿಗೆ ನಿತ್ಯ ಬಸ್‌ನಲ್ಲಿ ಪ್ರಯಾಣ ಮಾಡುತ್ತಿದ್ದರು. ಎರಡೂ ಕೈಗಳಿಲ್ಲದೆ ನಿತ್ಯ ಬಸ್ ಹತ್ತುವುದು, ಇಳಿಯುವುದು, ಪ್ರಯಾಣಿಕರು ಹೆಚ್ಚಿದ್ದಾಗ ಪ್ರಯಾಣ ಹೇಗೆ ಸಾಧ್ಯ? ಎಂದು ಕ್ಷಣ ಕಾಲ ಯೋಚಿಸಬೇಕಾಗುತ್ತದೆ. ನಿತ್ಯ ನಿಗದಿತ ಸಹಪ್ರಯಾಣಿಕರೂ ಇರುತ್ತಿರಲಿಲ್ಲ. ಆದರೆ ಇದೆಲ್ಲ ಮಾಲಿನಿಯವರಿಗೆ ಕ್ರಮೇಣ ಅಭ್ಯಾಸವಾಗಿಬಿಟ್ಟಿತು. ಈಗಲೂ ಕೌಡೂರಿನಿಂದ ಕಾರ್ಕಳದವರೆಗೆ ನಿತ್ಯ ಬಸ್‌ನಲ್ಲೇ ಪ್ರಯಾಣಿಸುತ್ತಿದ್ದಾರೆ.
ನಾವು ಬಹುತೇಕರು ಪೂರ್ಣಾಂಗರು. ಆದರೆ ನಾವೇ ಕಾರಣವಾದ ನಮ್ಮ ಸಮಸ್ಯೆಗಳಿಗೆ ದೇವರೇ ಬಂದು ಪರಿಹಾರ ಕಂಡುಹಿಡಿಯಬೇಕೆಂಬ ರೀತಿಯಲ್ಲಿ ವರ್ತಿಸುತ್ತೇವೆ. ಈ ನಡುವೆ ಸಣ್ಣ ಸಣ್ಣ ಸಮಸ್ಯೆಗಳಿಗೂ ಪರಿಹಾರಗಳನ್ನು ಕಂಡು ಹಿಡಿಯುವ ಬದಲು ಸಣ್ಣ ಸಮಸ್ಯೆಗಳನ್ನು ದೊಡ್ಡದು ಮಾಡುವುದರಲ್ಲಿಯೇ ತಲ್ಲೀನರಾಗಿರುತ್ತೇವೆ ಮತ್ತು ಪರಿಹಾರಾರ್ಥ ಸರಳ ಮಾರ್ಗಗಳನ್ನು ಅನುಸರಿಸಲು ತಯಾರಿರುವುದಿಲ್ಲ. ಇಂದು ಆತ್ಮಹತ್ಯೆ ಮಾಡಿಕೊಳ್ಳುವವರ ಸಂಖ್ಯೆ ಹೆಚ್ಚುತ್ತಿದೆ. ಇಂತಹವರಿಗೆ “ನಿಮಗಿಂತ ಎಷ್ಟೋ ಹೆಚ್ಚು ಕಷ್ಟದಲ್ಲಿರುವವರಿದ್ದಾರೆ. ನಿನ್ನದೆಂತಹ ಕಷ್ಟ?’ ಎಂದು ಕಿವಿಮಾತು ಹೇಳಬೇಕಾಗುತ್ತದೆ. ವನವಾಸದಲ್ಲಿರುವಾಗ ಋಷಿಮುನಿಗಳಲ್ಲಿ ಪಂಚಪಾಂಡವರು “ನಾವೇನು ತಪ್ಪು ಮಾಡಿದ್ದೇವೆ? ನಮಗೇಕೆ ಇಷ್ಟು ಕಷ್ಟ?’ ಎಂದು ದುಃಖ ವ್ಯಕ್ತಪಡಿಸುವ ಸನ್ನಿವೇಶ ಮಹಾಭಾರತದ ವನಪರ್ವದಲ್ಲಿದೆ. “ನಳ ಯಾರು ಗೊತ್ತೆ? ಹರಿಶ್ಚಂದ್ರ ಪಟ್ಟ ಕಷ್ಟ ತಿಳಿದಿದೆಯೆ? ಪ್ರಭು ರಾಮಚಂದ್ರ ಎಷ್ಟು ಕಷ್ಟ ಪಟ್ಟ?’ ಎಂದು ಕಥೆ ಅಸ್ಖಲಿತವಾಗಿ ಮುಂದೆ ಮುಂದೆ ಸಾಗುತ್ತದೆ. ಪ್ರತಿ ಉದಾಹರಣೆಯ ಕೊನೆಯಲ್ಲಿ “ನಿಮಗೆ ಅಷ್ಟು ಕಷ್ಟ ಬಂದಿದೆಯೆ?’ ಎಂದು ಪಾಂಡವರನ್ನು ಕೇಳುವುದರಲ್ಲಿ ಕೊನೆಯಾಗುತ್ತದೆ. ದುಡುಕುವ ಪೂರ್ಣಾಂಗಿಗಳು ವನಪರ್ವವನ್ನು ಓದಬೇಕು.
ದೇಹದ ಯಾವುದಾದರೂ ಒಂದು ಅಂಗ ತಾತ್ಕಾಲಿಕವಾಗಿ ಕೈಕೊಟ್ಟರೂ ಅದನ್ನು ಸಹಿಸುವುದು ಎಷ್ಟು ಕಷ್ಟ ಎನ್ನುವುದು ಎಲ್ಲರ ಅನುಭವಕ್ಕೂ ಆಗಾಗ್ಗೆ ಬರುತ್ತದೆ. ಮಾಲಿನಿಯವರಿಗೆ ಹಾಗಲ್ಲ, ಖಾಯಂ ಆಗಿ ಎರಡು ಪ್ರಧಾನ ಅಂಗಗಳು ಕೈಕೊಟ್ಟವು. ಶಿಕ್ಷಣದಲ್ಲಿ ಬರೆಹವಂತೂ ಅನಿವಾರ್ಯ. ಅರ್ಧತೋಳಿಲ್ಲದ ಎರಡೂ ಕೈಗಳನ್ನು ಮಾಲಿನಿ ಸಮರ್ಥವಾಗಿ ಬಳಸಿಕೊಂಡರು. ಮನುಷ್ಯ ಪ್ರಯತ್ನವಿದ್ದರೆ ಪರಿಸರವೂ (ದೇವರೆಂದಿಟ್ಟುಕೊಳ್ಳಬಹುದು) ಸ್ಪಂದಿಸುತ್ತದೆ ಎನ್ನುವುದಕ್ಕೆ ಇದೊಂದು ಉತ್ತಮ ಉದಾಹರಣೆ. ಸರ್ವಾಂಗಿಗಳಿಗೂ ಇದೇ ಸೂತ್ರ ಅನ್ವಯ. ಆದರೆ ನಾವು ಇದನ್ನು ಅರಿತುಕೊಳ್ಳುವುದಿಲ್ಲವೋ? ಅಥವಾ ಇನ್ನೊಬ್ಬರ ಮೇಲೆ ಗೂಬೆ ಕೂರಿಸಿ ಬದುಕುವುದು ಸುಲಭ ಎಂಬ ತಪ್ಪು ಕಲ್ಪನೆಯೋ ಏನೋ, ಇಂತಹವರು ಸತತ ಪ್ರಾಮಾಣಿಕ ಪ್ರಯತ್ನಗಳಿಗೆ ಮಾಲಿನಿಯವರು ಕೊಟ್ಟಷ್ಟು ಪ್ರಾಶಸ್ತ್ಯ ಕೊಡುತ್ತಿಲ್ಲ ಎನ್ನಬಹುದು.
ಮಾಲಿನಿಯವರಷ್ಟೇ ಅವರ ಕೈ ಹಿಡಿದ ಪ್ರಸನ್ನರ ಮನೋಧೋರಣೆಯೂ ಬಲು ದೊಡ್ಡದು. ಎಷ್ಟೇ ಆದರ್ಶ ಮಾತನಾಡಿದರೂ ಅನುಷ್ಠಾನಕ್ಕೆ ತರುವಾಗ ಎಡವುತ್ತೇವೆ. ಪ್ರಸನ್ನರಂತಹ ಅಪರೂಪದ ವ್ಯಕ್ತಿಗಳು ಮಾತ್ರ “ಆಡದೆ ಮಾಡಿದವನು ರೂಢಿಯೊಳಗುತ್ತಮನು’ ಎಂಬ ಸರ್ವಜ್ಞನ ತ್ರಿಪದಿಯಂತೆ ಆದರ್ಶ ಮಾತನಾಡದೆ ಅನುಷ್ಠಾನಕ್ಕೆ ತರುತ್ತಾರೆ. ನಾವು ಸಣ್ಣ ತ್ಯಾಗ ಮಾಡಿದರೂ ದೊಡ್ಡ ಮಾತುಗಳ ಪ್ರಶಂಸೆಗಳನ್ನು ಸಮಾಜದಿಂದ ನಿರೀಕ್ಷಿಸುತ್ತೇವೆ. ಕೆಲವು ಬಾರಿ ಸಣ್ಣ ತ್ಯಾಗ ಮಾಡಿ ಅದರ ಸಾವಿರ ಪಟ್ಟು ಲಾಭವನ್ನು ಸಮಾಜದಿಂದ ಗಿಟ್ಟಿಸಿಕೊಳ್ಳುವ “ಸಣ್ಣವರು’ಇರುತ್ತಾರೆ. ಇಂತಹವರು ಪ್ರಸನ್ನರ ವ್ಯಕ್ತಿತ್ವವನ್ನು ಕಂಡು ತಿದ್ದಿಕೊಳ್ಳಬೇಕಾದದ್ದು ಬಹಳಷ್ಟಿವೆ. -ಮಟಪಾಡಿ ಕುಮಾರಸ್ವಾಮಿ