Advertisement

ಬಂಗಾರದ ಜಿಂಕೆಗೆ ಏನಾಯಿತು?

11:03 AM May 25, 2017 | |

ಕಾಡಿನಲ್ಲಿ ಜಿಂಕೆಯೊಂದಿತ್ತು. ಅದರ ಅಂದ- ಚೆಂದ ಸುತ್ತಮುತ್ತಲ ಎರಡು ಮೂರು ಕಾಡಿನಲ್ಲೆಲ್ಲಾ ಪ್ರಖ್ಯಾತಿ ಪಡೆದಿತ್ತು. ಪ್ರಾಣಿ ಪಕ್ಷಿಗಲೆಲ್ಲಾ ಅದನ್ನು ಬಾಯಿ ತುಂಬಾ ಹೊಗಳುತ್ತಿದ್ದವು. 

Advertisement

ಈ ವಿಷಯವಾಗಿ ಜಿಂಕೆಗೆ ಗರ್ವವೂ ಇತ್ತು. ಬರಬರುತ್ತಾ ಯಾಕೋ ಇತರೆ ಪ್ರಾಣಿಗಳು ತನ್ನನ್ನು ಹೊಗಳುವುದನ್ನು ಕಡಿಮೆ ಮಾಡಿವೆಯಲ್ಲ ಎಂದೆನಿಸತೊಡಗಿತು ಜಿಂಕೆಗೆ. ಅದಕ್ಕೆ ಇನ್ನೂ ಚೆಂದ ಕಾಣುವ ವರವನ್ನು ಪಡೆಯುವ ಉದ್ದೇಶದಿಂದ ವನದೇವತೆಯನ್ನು ಕುರಿತು ತಪಸ್ಸು ಮಾಡತೊಡಗಿತು. ತಿಂಗಳುಗಳು ಕಳೆದವು. ಜಿಂಕೆಯ ತಪಸ್ಸಿಗೆ ಮೆಚ್ಚಿದ ವನದೇವತೆ ಪ್ರತ್ಯಕ್ಷಳಾದಳು. ಏನು ಬೇಕೋ ಕೇಳಿಕೋ ಎಂದಾಗ ಜಿಂಕೆಗೆ ಅತೀವ ಸಂತೋಷ ಉಂಟಾಯಿತು. ಅದು ತನಗೆ ಬಂಗಾರದ ಮೈ ಬೇಕೆಂದು ಕೋರಿಕೊಂಡಿತು. ಆ ಕೂಡಲೆ ಜಿಂಕೆಯ ಮೈ ಪೂರ್ತಿ ಬಂಗಾರದಿಂದ ಕಂಗೊಳಿಸತೊಡಗಿತು. ಈಗಂತೂ ಕಾಡಿನ ಜನರು ಜಿಂಕೆಯ ಸೌಂದರ್ಯ ಕಂಡು ಹುಚ್ಚೆದ್ದು ಹೋದರು. ಎಲ್ಲಿ ಹೋದರೂ ಜಿಂಕೆಯದ್ದೇ ಮಾತು. ಇದರಿಂದ ಜಿಂಕೆ ಉಬ್ಬಿಹೋಯಿತು. ತಾನು ತಪಸ್ಸು ಮಾಡಿದಕ್ಕೂ ಸಾರ್ಥಕವಾಯಿತು ಎಂದುಕೊಂಡಿತು. 

ಮೊದಲೇ ಗರ್ವದಿಂದ ಬೀಗುತ್ತಿದ್ದ ಜಿಂಕೆ ಈಗಂತೂ ಇತರೆ ಪ್ರಾಣಿಗಳನ್ನು ತನ್ನ ಸೌಂದರ್ಯಕ್ಕೆ ಹೋಲಿಸಿಕೊಂಡು ಅವಮಾನಿಸತೊಡಗಿತು. ಒಂದು ದಿನ ರಾಜನೊಬ್ಬ ವಾಯುವಿಹಾರಕ್ಕೆಂದು ಕಾಡಿಗೆ ಬಂದಿದ್ದ. ಆಗ ಬಂಗಾರದ ಜಿಂಕೆ ಕಣ್ಣಿಗೆ ಬಿದ್ದಿತು. ಒಂದು ಕ್ಷಣದಲ್ಲಿ ಕಣ್ಣಿಗೆ ಬಿದ್ದು ಮಿಂಚೆ ಮರೆಯಾದ ಆ ಅಪರೂಪದ ಜಿಂಕೆ ತನಗೆ ಬೇಕೆಂದು ಅಪ್ಪಣೆ ಹೊರಡಿಸಿದ. ಬಂಗಾರದ ಜಿಂಕೆಯನ್ನು ಹಿಡಿದುಕೊಟ್ಟವರಿಗೆ ಲಕ್ಷ ಲಕ್ಷ ಇನಾಮನ್ನು ಘೋಷಿಸಿದ. ಕಡೆಗೂ ಬಂಗಾರದ ಜಿಂಕೆ ಬೇಟೆಗಾರನೊಬ್ಬನ ಕುಣಿಕೆಗೆ ಸಿಕ್ಕಿಬಿದ್ದಿತು. ರಾಜ ಬಂಗಾರದ ಜಿಂಕೆಯನ್ನು ಆಸ್ಥಾನದಲ್ಲಿ ಬಂಗಾರದ ಪಂಜರದಲ್ಲಿಟ್ಟ. ಹಾಯಾಗಿ ಸ್ವತಂತ್ರವಾಗಿ ಜೀವಿಸುತ್ತಿದ್ದ ಜಿಂಕೆ ಅತಿಯಾದ ಆತ್ಮವಿಶ್ವಾಸಕ್ಕೆ ಬಲಿಯಾಯಿತು.

– ಅಮರಯ್ನಾ ಪತ್ರಿಮಠ, ಯಾದಗಿರಿ

Advertisement

Udayavani is now on Telegram. Click here to join our channel and stay updated with the latest news.

Next