Advertisement
ಗೃಹಿಣಿಯರಿಗಂತೂ ಮನೆಯ ಸ್ವತ್ಛತೆಯಿಂದ ಹಿಡಿದು ಊಟ ಉಪಚಾರದವರೆಗೂ ಚಿಂತೆ. ಈ ಚಿತ್ರಣವನ್ನೆಲ್ಲಾ ನನ್ನಮ್ಮ ಅವಳು ಸಣ್ಣ ಹುಡುಗಿಯಾಗಿದ್ದಾಗ ನಡೆಯುತ್ತಿದ್ದ ವಿದ್ಯಮಾನ ಎಂದು ಬಣ್ಣಿಸುತ್ತಿದ್ದಳು. ಈಗಿನ ಮೈಕ್ರೋಫ್ಯಾಮಿಲಿ ಯುಗದಲ್ಲಿ, ಗಂಡು - ಹೆಣ್ಣು ಇಬ್ಬರೂ ದುಡಿಯುವ ಕಾಲದಲ್ಲಿ ಮೇಲೆ ಹೇಳಿದ ಸಡಗರ, ಸಂಭ್ರಮಪಡುವ ವ್ಯವಧಾನವೂ ಇರುವುದಿಲ್ಲ, ವೇಳೆಯೂ ಇಲ್ಲ. ಹೀಗೇ ಇದರ ಬಗ್ಗೆ ಚಿಂತಿಸುತ್ತ ಕುಳಿತೆ. ಎಲ್ಲರೂ ಹೇಳುತ್ತಾರೆ- ಕಾಲ ಬದಲಾಯಿತೆಂದು. ಆದರೆ, ಕಾಲ ಬದಲಾಗುವುದಿಲ್ಲ. ಅದೇ ಸೂರ್ಯ, ಅದೇ ಚಂದ್ರ, ಅದೇ ನಕ್ಷತ್ರ, ಭೂಮಿ. ಆದರೆ, ಬದಲಾಗಿರುವುದು ನಾವು ಬದುಕುವ ರೀತಿ.
Related Articles
Advertisement
ಹೀಗಾದರೆ, ಎಷ್ಟೇ ಮಡಿಹುಡಿಗಳೆಂದು ನೇಮನಿಷ್ಟೆಗಳನ್ನು ಆಚರಿಸಿದರೂ ಅದರ ಫಲವೇನು? ಅಷ್ಟೇ ಅಲ್ಲ ನಾಗರಪಂಚಮಿಯಂದು ಭಾರತದ ಅನೇಕ ಭಾಗಗಳಲ್ಲಿ ವಿವಾಹಿತ ಮಹಿಳೆಯರು ಅಣ್ಣತಮ್ಮಂದಿರನ್ನು ಮನೆಗೆ ಆಹ್ವಾನಿಸಿ ಅವರಿಗೆ ರಕ್ಷಾಬಂಧನವನ್ನು ಕಟ್ಟಿ ಅವರನ್ನು ಸತ್ಕರಿಸುವ ಪರಿಪಾಠವೂ ಇದೆ. ಇದು ಬರಿಯ ತೋರಿಕೆಗೆಂದು ನಡೆದುಬಂದ ಕ್ರಮವಲ್ಲ. ಹೆಣ್ಣಿಗೆ ತವರುಮನೆಯ ಬಗೆಗೆ ಇರುವ ಅಭಿಮಾನವನ್ನು ಎತ್ತಿ ಹಿಡಿಯುತ್ತದೆ. ಸಂಬಂಧಗಳು ಗಟ್ಟಿಯಾಗುವಂತೆ ಮಾಡುತ್ತದೆ.
ಅಕ್ಕತಂಗಿಯರಿಂದ ಸತ್ಕಾರ ಪಡೆದ ಅಣ್ಣತಮ್ಮಂದಿರು ಅದಕ್ಕೆ ಪ್ರತಿರೂಪವಾಗಿ ಮುಂದಿನ ತಿಂಗಳಲ್ಲಿ ಬರುವ ಗೌರಿಗಣೇಶ ಹಬ್ಬಗಳಲ್ಲಿ ಅಕ್ಕತಂಗಿಯರಿಗೆ ಅರಸಿನ-ಕುಂಕುಮದೊಡನೆ ತಮ್ಮ ಕೈಲಾದ ರೀತಿಯಲ್ಲಿ ಅವರ ಬಗೆಗೆ ತಮ್ಮ ಪ್ರೀತಿಯನ್ನು ತೋರುತ್ತಾರೆ. ಗೌರಿ ಗಣೇಶರ ಪೂಜೆಯೆಂದು ಆರಂಭವಾದ ಈ ಸಂಸ್ಕೃತಿ ಮುಂದೆ ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯ ಹೋರಾಟದಲ್ಲಿ ಜನರ ಸಂಘಟನೆಗೆ ಅತ್ಯಂತ ಬಲವಾದ ನೆಪವಾಯಿತು. ಗಣೇಶ ಚತುರ್ಥಿಯನ್ನು ಆಚರಿಸುವ ನೆಪದಲ್ಲಿ ಜನರನ್ನು ಸಂಘಟಿಸಲು ಭಾರತೀಯರಿಗೆ ಸಹಕಾರಿಯಾಯಿತು. ಆದರೆ, ಇಂದು ಪೂಜೆಯ ಹೆಸರಿನಲ್ಲಿ ಬೀದಿಬೀದಿಗಳಲ್ಲಿ ದೇವರನ್ನು ಕೂಡಿಸಿ 8-10 ದಿನಗಳ ಕಾಲ ಮೈಕಾಸುರನ ಹಾವಳಿ ನಡೆಸಿ ಸಂಭ್ರಮಿಸುವುದೇ ಪರಿಪಾಠವಾಗಿದೆ.ಮುಂದೆ ಆಶ್ವಯುಜದಲ್ಲಿ ಮಳೆ ಬಿಡುವು ಕೊಟ್ಟು ಜಡವಾಗಿದ್ದ ಮೈಮನಗಳಿಗೆ ಕೆಲಸ ಕೊಡಲು ನವರಾತ್ರಿಯ ಆಚರಣೆ ಸಹಾಯಕವಾಯಿತು. ಭಾರತದ ಅನೇಕ ಭಾಗಗಳಲ್ಲಿ ನವರಾತ್ರಿಯ ಹೆಸರಿನಲ್ಲಿ ದುರ್ಗಾ ಮಾತೆಯ ಪೂಜೆ ನಡೆಯುತ್ತದೆ. ಒಂಭತ್ತು ಅವತಾರಗಳಲ್ಲಿ ಸ್ತ್ರೀಯನ್ನು ಬಣ್ಣಿಸಿ ಜಗತ್ತಿನಲ್ಲಿ ಅವಳ ಪ್ರಾಶಸ್ತ್ಯವನ್ನು, ಶಕ್ತಿಯನ್ನು ಪರಿಚಯ ಮಾಡಿಕೊಡುವ ಪ್ರಯಾಸ ಕಾಣುತ್ತದೆ.
ಮುಂದೆ ಬರುವ ದೀವಳಿಗೆಯಲ್ಲಿ ನರಕಾಸುರನೆಂಬ ಅಸುರನ ಸಂಹಾರ, ಬಲಿ ಚಕ್ರವರ್ತಿಯ ಅಹಂಕಾರದ ದಹನದ ಮೂಲಕ ಮನಸ್ಸಿನಲ್ಲಿ ನಾನು ನನ್ನದೆಂಬ ಅಹಂಕಾರವನ್ನು ತೊಡೆಯಲು ಪ್ರಯತ್ನಿಸಿದ ಹಿರಿಯರು ಕಾರ್ತಿಕ ಮಾಸದಲ್ಲಿ ದೀಪಹಚ್ಚುವುದರಿಂದ ಮೈಮನಗಳ ಕತ್ತಲೆಯನ್ನು ತೊಳೆಯಲು ಪ್ರಯತ್ನಿಸಿದರು. ಆದರೆ, ಇಂದು ಅದೇ ದೀಪಾವಳಿ ತನ್ನೆಲ್ಲ ಅರ್ಥಗಳನ್ನು ಕಳೆದುಕೊಂಡು ಅವರವರ ಸಾಮರ್ಥ್ಯಕ್ಕನುಗುಣವಾಗಿ ಪಟಾಕಿ ಸುಟ್ಟು ಪರಿಸರವನ್ನೂ ಹಾಳು ಮಾಡುವುದಕ್ಕೆ ದ್ಯೋತಕವಾಗಿದೆ.
ಇಷ್ಟೆಲ್ಲಾ ಹೇಳಿ ಸಂಕ್ರಾಂತಿಯನ್ನು ಬಿಟ್ಟರೆ ಸರಿಯಾಗಲಾರದು. ಹೊಸಪೈರು ಬಂದ ಸಂಭ್ರಮದಲ್ಲಿ ಕಣಕ್ಕೆ ಪೂಜೆಯ ನೆಪದಲ್ಲಿ ಭೂದೇವಿಗೆ ಕೃತಜ್ಞತೆ ಸಲ್ಲಿಸಿ ಎಳ್ಳು, ಕಬ್ಬು, ಶೇಂಗಾಗಳ ಮಿಶ್ರಣವನ್ನು ಹಂಚಿ ಎಳ್ಳು ತಿಂದು ಒಳ್ಳೆಯ ಮಾತನಾಡು ಎಂಬ ಸಂದೇಶವನ್ನು ಸಾರಲು ಪ್ರಯತ್ನಿಸಿದ ನಮ್ಮ ಹಿರಿಯರು ನಿಜಕ್ಕೂ ಶ್ಲಾಘನೀಯರು. ನಾವು ಆಚರಿಸುವ ಪ್ರತಿಯೊಂದು ಸಂಪ್ರದಾಯಗಳಿಗೂ ಒಂದೊಂದು ಅರ್ಥವಿದೆ. ದೇವರ ಪೂಜೆ-ಪುನಸ್ಕಾರಗಳು ಮನಸ್ಸಿಗೆ ಶಾಂತಿ, ಶಕ್ತಿ, ಜೀವನಕ್ಕೆ ಒಂದು ಶಿಸ್ತನ್ನು ಕೊಟ್ಟರೆ ಆಹಾರದಲ್ಲಿನ ನಿಯಮಗಳು, ಉಪವಾಸಗಳಂತಹ ವ್ರತಗಳು ಆರೋಗ್ಯ ಕಾಪಾಡಿಕೊಳ್ಳಲು ಸಹಾಯಕ.
ಒಟ್ಟಿನಲ್ಲಿ ಆಯಾ ಕಾಲಕ್ಕೆ ತಕ್ಕಂತಹ, ದೇಹಕ್ಕೆ ಬೇಕಾಗುವ ಪೌಷ್ಟಿಕಾಂಶಗಳನ್ನೊಳಗೊಂಡ ಖಾದ್ಯಗಳನ್ನು ಸೇವಿಸಿ ಬಂಧು ಮಿತ್ರರೊಡಗೂಡಿ ಸಂಭ್ರಮಿಸುವುದೇ ನಿಜವಾದ ಹಬ್ಬ. ಇವುಗಳನ್ನು ಯಾವುದೇ ಅನಾವಶ್ಯಕ ಆಡಂಬರವಿಲ್ಲದೆ ನಮ್ಮ ಕೈಲಾದ ರೀತಿಯಲ್ಲಿ ಆಚರಿಸಿ ನಮ್ಮ ದೈನಂದಿನ ಬದುಕಿನ ಏಕತಾನತೆಯನ್ನು ಹೋಗಲಾಡಿಸಿಕೊಂಡು ಮತ್ತೆ ಹುಟ್ಟುವ ನಾಳೆಗೆ ಸಂತಸದಿಂದ ಮನಸ್ಸನ್ನು ಸಿದ್ಧಗೊಳಿಸುವುದೇ ನಿಜವಾದ ಹಬ್ಬದ ಆಚರಣೆ. ಆದ್ದರಿಂದ ಸಂಪ್ರದಾಯಗಳ ಆಚರಣೆಯನ್ನು ಗೊಡ್ಡೆಂದು ಭಾವಿಸದೆ, ಅಥವಾ ಅವುಗಳ ಅರ್ಥವನ್ನು ತಿಳಿಯದೇ, ಆಚರಿಸದಿದ್ದಲ್ಲಿ ಏನೋ ಕೇಡು ಸಂಭವಿಸಬಹುದೆನ್ನುವ ಭಯದಲ್ಲಿ ಆಚರಿಸದೆ ಅವುಗಳ ಅರ್ಥವನ್ನರಿತು ಆಚರಿಸೋಣ.
– ಇಂದಿರಾ ವಿವೇಕ್