Advertisement

ಚಾಮುಂಡೇಶ್ವರಿ ಕ್ಷೇತ್ರದ ಬಗ್ಗೆ ಕುಮಾರಸ್ವಾಮಿಗೆ ಏನು ಗೊತ್ತು

12:20 PM Mar 30, 2018 | |

ಮೈಸೂರು: ಚಾಮುಂಡೇಶ್ವರಿ ಕ್ಷೇತ್ರದಿಂದಲೇ ರಾಜಕೀಯ ಆರಂಭಿಸಿದ್ದೇನೆ, ಈಗ ಮತ್ತೆ ಅಲ್ಲಿಂದಲೇ ನಿಂತು ಗೆದ್ದು ಬರುತ್ತೇನೆ ಎಂದು ಸ್ಪಷ್ಟಪಡಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಚಾಮುಂಡೇಶ್ವರಿ ಕ್ಷೇತ್ರದ ಬಗ್ಗೆ ಎಚ್‌.ಡಿ.ಕುಮಾರಸ್ವಾಮಿಗೆ ಏನು ಗೊತ್ತು ಎಂದು ಕಿಡಿಕಾರಿದರು.

Advertisement

ನಾಲ್ಕು ದಿನಗಳ ಮೈಸೂರು ಪ್ರವಾಸದ ಹಿನ್ನೆಲೆಯಲ್ಲಿ ಗುರುವಾರ ಮೈಸೂರಿಗೆ ಆಗಮಿಸಿದ ಅವರು, ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಕುಮಾರಸ್ವಾಮಿ ಕೇಳಿಕೊಂಡು ನಾನು ರಾಜಕಾರಣ ಮಾಡಬೇಕಾ?,

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಎಷ್ಟು ಬಾರಿ ಚುನಾವಣೆಗೆ ಸ್ಪರ್ಧಿಸಿದ್ದೇನೆ ಎಂಬುದಾದರೂ ಕುಮಾರಸ್ವಾಮಿಗೆ ಗೊತ್ತಾ? ಸಿದ್ದರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧಿಸುವುದೇ ಅನುಮಾನ ಎಂದು ಸುಮ್ಮನೆ ಹೇಳುತ್ತಾರೆ ಎಂದು ಗರಂ ಆದರು.

ಅನುಮಾನ ಬೇಡ: 1983ರಿಂದ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಏಳು ಬಾರಿ ಚುನಾವಣೆಗೆ ನಿಂತಿದ್ದೇನೆ, ಐದು ಬಾರಿ ಗೆದ್ದು, ಎರಡು ಬಾರಿ ಸೋತಿದ್ದೇನೆ. ಈಗಲೂ ಚಾಮುಂಡೇಶ್ವರಿ ಕ್ಷೇತ್ರದಿಂದಲೇ ಸ್ಪರ್ಧಿಸುತ್ತೇನೆ. ಈ ಬಗ್ಗೆ ಯಾವುದೇ ಅನುಮಾನ ಬೇಡ. ಚಾಮುಂಡೇಶ್ವರಿ ಕ್ಷೇತ್ರದ ಜನರ ಮೇಲೆ ನನಗೆ ಸಂಪೂರ್ಣ ನಂಬಿಕೆ, ವಿಶ್ವಾಸವಿದೆ. ಹೀಗಾಗಿ ಈ ಬಾರಿ ಗೆದ್ದು ಬರುತ್ತೇನೆ ಎಂದು ಹೇಳಿದರು.

ಜೈಲಿಗೆ ಹೋದವರೆಲ್ಲಾ ಪಾಠ ಹೇಳ್ತಾರೆ: ನಂಜನಗೂಡು- ಗುಂಡ್ಲುಪೇಟೆ ಉಪ ಚುನಾವಣೆಯಲ್ಲಿ ಯಡಿಯೂರಪ್ಪ ಸೇರಿದಂತೆ ಬಿಜೆಪಿ ಮುಖಂಡರೆಲ್ಲಾ ತಿಂಗಳುಗಟ್ಟಲೇ ಇಲ್ಲೇ ಠಿಕಾಣಿ ಹೂಡಿದ್ದರು. ಆದರೆ, ಫ‌ಲಿತಾಂಶ ಏನಾಯಿತು ಎಂಬುದು ರಾಜ್ಯದ ಜನತೆಗೆ ಗೊತ್ತಿದೆ ಎಂದರು. ಬಿ.ಎಸ್‌.ಯಡಿಯೂರಪ್ಪ ತಮ್ಮನ್ನು ಪದೇ ಪದೆ ಭ್ರಷ್ಟ ಎಂದು ಕರೆಯುತ್ತಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸಿದ್ದರಾಮಯ್ಯ, ಭ್ರಷ್ಟಾಚಾರ ಮಾಡಿ ಜೈಲಿಗೆ ಹೋಗಿ ಬಂದವರೆಲ್ಲಾ ನನಗೆ ಪಾಠ ಹೇಳಲು ಬರುತ್ತಾರೆ ಎಂದು ಕಿಡಿಕಾರಿದರು.

Advertisement

ವಿಧಾನಪರಿಷತ್‌ ಸದಸ್ಯ ಆರ್‌. ಧರ್ಮಸೇನ, ಕೆಪಿಸಿಸಿ ವಕ್ತಾರ ಎಚ್‌.ಎ.ವೆಂಕಟೇಶ್‌, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್‌, ನಗರ ಅಧ್ಯಕ್ಷ ಆರ್‌.ಮೂರ್ತಿ ಮೊದಲಾದವರು ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಸಿದ್ದರಾಮಯ್ಯ ಅವರನ್ನು ಸ್ವಾಗತಿಸಿದರು.

ಅಮಿತ್‌ ಶಾ ಗೆ ಭಯ: ನನ್ನನ್ನು ಕಂಡರೆ ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಗೆ ಭಯ. ಹೀಗಾಗಿ ನಾನು ಹೋದಲ್ಲೆಲ್ಲಾ ನನ್ನನ್ನು ಹಿಂಬಾಲಿತ್ತಿದ್ದಾರೆ. ಅವರು ಎಲ್ಲಿಗೆ ಬೇಕಾದರೂ ಹೋಗಲಿ, ಅದು ಅವರ ವೈಯಕ್ತಿಕ ವಿಚಾರ, ಆ ಬಗ್ಗೆ ನಾನು ಪ್ರತಿಕ್ರಿಯೆ ನೀಡಲು ಹೋಗುವುದಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು. ಅಮಿತ್‌ ಶಾ ನನ್ನನ್ನು ಅಹಿಂದು ಎಂದು ಕರೆದಿದ್ದಾರೆ. ಅವರು ಹಿಂದುವಾ ಅಥವಾ ಜೈನರಾ ಎಂಬುದನ್ನು ಮೊದಲು ಸ್ಪ$ಷ್ಟಪಡಿಸಲಿ ಎಂದು ಸವಾಲು ಹಾಕಿದರು.

ಸರ್ವಪಕ್ಷ ಸಭೆಗೆ ಬರಲಿಲ್ಲ: ಕಾವೇರಿ ನದಿ ನೀರು ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಕರೆದಿದ್ದ ಸರ್ವಪಕ್ಷ ಸಭೆಗೆ ಯಡಿಯೂರಪ್ಪ, ಈಶ್ವರಪ್ಪ, ಎಚ್‌.ಡಿ.ದೇವೇಗೌಡ, ಕುಮಾರಸ್ವಾಮಿ ಅವರ್ಯಾರೂ ಬರಲಿಲ್ಲ. ಕೇಂದ್ರ ಸಚಿವರಾದ ಅನಂತಕುಮಾರ್‌, ಸದಾನಂದ ಗೌಡ ಮಾತ್ರ ಬಂದಿದ್ದರು, ಸುಪ್ರೀಂಕೋರ್ಟ್‌ ಕಾವೇರಿ ನೀರು ನಿರ್ವಹಣಾ ಮಂಡಳಿ ರಚಿಸಲು ಹೇಳಿಲ್ಲ.

ಸ್ಕೀಂ ಮಾಡಲು ಮಾತ್ರ ಹೇಳಿದೆ. ಕೇಂದ್ರದಲ್ಲಿ ನಿಮ್ಮದೇ ಸರ್ಕಾರ ಇರುವುದರಿಂದ ಸ್ವಲ್ಪ ಹೆಚ್ಚು ಕಡಿಮೆಯಾದರೂ ನೀವೇ ಹೊಣೆ ಹೊರಬೇಕಾಗುತ್ತದೆ. ಹೀಗಾಗಿ ಸುಪ್ರೀಂಕೋರ್ಟ್‌ ಹೇಳಿರುವುದನ್ನಷ್ಟೇ ಮಾಡಿ ಎಂದು ಇಬ್ಬರೂ ಕೇಂದ್ರ ಸಚಿವರಿಗೆ ಸ್ಪಷ್ಟವಾಗಿ ತಿಳಿಸಿದ್ದೇನೆ ಎಂದು ಸಿದ್ದರಾಮಯ್ಯ ಹೇಳಿದರು.

ನಾನು ಚುನಾವಣಾ ಪ್ರಚಾರಕ್ಕೆ ಬಂದಿಲ್ಲ. ನಾಲ್ಕು ದಿನ ಮೈಸೂರು ಭಾಗದಲ್ಲಿ ಪ್ರವಾಸ ಮಾಡಿ ಹಳ್ಳಿಗಳಿಗೆ ಭೇಟಿ ನೀಡಲು ಬಂದಿದ್ದೇನೆ. ಶುಕ್ರವಾರ ಒಂದು ದಿನ ಬಂಡೀಪುರದ ಹತ್ತಿರ ರೆಸಾರ್ಟ್‌ನಲ್ಲಿ ವಿಶ್ರಾಂತಿ ಪಡೆಯುತ್ತೇನೆ. ರೆಸಾರ್ಟ್‌ನಲ್ಲಿ ಒಬ್ಬನೇ ಇರಲು ಆಗುತ್ತಾ? ಹರಟೆ ಹೊಡೆಯೋಕಾದ್ರು ಜನ ಬೇಕಲ್ಲ. ಹಾಗಾಗಿ ನನ್ನ ಸ್ನೇಹಿತರೂ ಜತೆಗೆ ಬರುತ್ತಾರೆ.
-ಸಿದ್ದರಾಮಯ್ಯ, ಮುಖ್ಯಮಂತ್ರಿ.

Advertisement

Udayavani is now on Telegram. Click here to join our channel and stay updated with the latest news.

Next