Advertisement
ನಗರದ ವ್ಯಾಪ್ತಿಯಲ್ಲಿರುವ ರಸ್ತೆ ಗುಂಡಿಗಳನ್ನು ಮುಚ್ಚುವಂತೆ ಬಿಬಿಎಂಪಿಗೆ ನಿರ್ದೇಶನ ನೀಡಬೇಕು ಎಂದು ಕೋರಿ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯನ್ನು ನಡೆಸಿದ ಮುಖ್ಯ ನ್ಯಾ. ದಿನೇಶ್ ಮಹೇಶ್ವರಿ ಹಾಗೂ ನ್ಯಾ. ಎಸ್. ಸುಜಾತ ಅವರಿದ್ದ ವಿಭಾಗೀಯ ನ್ಯಾಯಪೀಠ, ಬಿಬಿಎಂಪಿಯ ವಿಳಂಬ ಧೋರಣೆ, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಿಡಿಮಿಡಿಗೊಂಡಿತು.
Related Articles
Advertisement
ಈ ವೇಳೆ ಮಹದೇವಪುರ ವಲಯದ ಮುಖ್ಯ ಇಂಜಿನಿಯರುಗಳಾದ ಪರಮೇಶ್ವರಯ್ಯ ಹಾಗೂ ಎಸ್. ಸೋಮಶೇಖರ್ ಆವರನ್ನು ನ್ಯಾಯಪೀಠದ ಎದುರು ಕರೆದ ಮುಖ್ಯ ನ್ಯಾಯಮೂರ್ತಿಗಳು, ಅವರ ಕೆಲಸದ ಬಗ್ಗೆ ವಿಚಾರಣೆ ನಡೆಸಿ ತರಾಟೆಗೆ ತೆಗೆದುಕೊಂಡರು. ಅಲ್ಲದೇ ಕಾಮಗಾರಿಗಳಿಗೆ ಸಂಬಂಧಿಸಿದಂತೆ ನೀವು ಪರಿಶೀಲಿಸಿದ ಕಡತಗಳನ್ನು ಮುಂದಿನ ವಿಚಾರಣೆ ವೇಳೆಗೆ ಹಾಜರುಪಡಿಸುವಂತೆ ಎಂದು ತಾಕೀತು ಮಾಡಿದರು.
ಡಿಸೆಂಬರ್ 17ರ ಗಡುವು: ವಿಚಾರಣೆ ವೇಳೆ ರಸ್ತೆ ಗುಂಡಿ ಮುಚ್ಚುವ ಕಾಮಗಾರಿಯ ಪ್ರಗತಿಯನ್ನು ಕೇಳಿದ ನ್ಯಾಯಪೀಠ, ಮಹದೇವಪುರ ವಲಯದಲ್ಲಿ ಅತಿ ಹೆಚ್ಚು ಸಮಸ್ಯೆ ಇದೆ ಎಂದು ಬಿಬಿಎಂಪಿ ಪರ ವಕೀಲರು ಹೇಳಿದ್ದಕ್ಕೆ ಡಿ.17ಕ್ಕೆ ಮಹದೇವಪುರ ವಲಯ ರಸ್ತೆ ಗುಂಡಿ ಶೂನ್ಯ ಆಗಿರಬೇಕು.
ಇದನ್ನು ನಿಮ್ಮ ಇಂಜಿನಿಯರುಗಳಿಗೆ ನಿಮ್ಮ ಭಾಷೆಯಲ್ಲಿ ತಿಳಿಸಿ, ಇಲ್ಲದಿದ್ದರೆ ಅವರಿಗೆ ಅರ್ಥವಾಗುವ ಬೇರೆ ಭಾಷೆ ನಮಗೆ ಗೊತ್ತಿದೆ. ನಿಗದಿತ ಗಡುವಿನೊಳಗೆ ಕೆಲಸ ಆಗದಿದ್ದರೆ ಅಧಿಕಾರಿಗಳು ತಕ್ಕ ಪರಿಣಾಮ ಎದುರಿಸಬೇಕಾಗುತ್ತದೆ. ಮಹದೇವಪುರ ವಲಯದ ಕೆಲಸದಲ್ಲಿ ಬೇರೆ ಕಡೆಗಳ ಕೆಲಸಗಳನ್ನು ಮರೆತು ಬಿಡಬೇಡಿ ಎಂದು ಎಚ್ಚರಿಸಿ ವಿಚಾರಣೆಯನ್ನು ಡಿ.17ಕ್ಕೆ ಮುಂದೂಡಿದರು.
ಬೆಂಗಳೂರು ಮುಚ್ಚಿಬಿಡಿ: ವಿಚಾರಣೆ ವೇಳೆ, ಬಿಬಿಎಂಪಿ ಆಯುಕ್ತರು ಕೋರ್ಟನ್ನು ಲಘುವಾಗಿ ಪರಿಗಣಿಸಿದ್ದಾರೆ. ಅವರು ಇಂದು ಯಾಕೆ ಬಂದಿಲ್ಲ ಎಂದು ಮುಖ್ಯ ನ್ಯಾಯಮೂರ್ತಿಗಳು ಕೇಳಿದರು. ವಿಧಾನಸಭೆ ಅಧಿವೇಶನ ನಡೆಯುತ್ತಿದೆ ಎಂದು ಬಿಬಿಎಂಪಿ ಪರ ವಕೀಲರು ಹೇಳಿದರು.
ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಮುಖ್ಯ ನ್ಯಾಯಮೂರ್ತಿಗಳು, ಅಧಿವೇಶನ ನಡೆದಾಗ ಕೆಲಸಗಳು ಆಗುವುದಿಲ್ಲ ಎಂದಾದರೆ ಅಧಿವೇಶನ ಮುಗಿಯುವವರೆಗೆ ಬೆಂಗಳೂರು ಅನ್ನು ಮುಚ್ಚಿಬಿಡಿ ಎಂದು ಕಟುವಾಗಿ ಹೇಳಿದರು.