Advertisement
ಜನನೀ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರೀಯಸಿ ಅರ್ಥಾತ್ ತಾಯಿ ಮತ್ತು ತಾಯಿನಾಡು ಸ್ವರ್ಗಕ್ಕಿಂತಲೂ ಮಿಗಿಲಾದದ್ದು ಎನ್ನುವ ಉದಾತ್ತ ಧ್ಯೇಯವನ್ನು ಆದರ್ಶವಾಗಿಟ್ಟುಕೊಂಡು ಯಾವ ಶಿವಾಜಿ ಮಹಾರಾಜರು, ಮಹಾರಾಣಾ ಪ್ರತಾಪ್, ಪ್ರಥ್ವಿರಾಜ್ ಚೌಹಾಣ್, ಸುಭಾಶ್ ಚಂದ್ರ ಬೋಸ್, ಹುತಾತ್ಮ ಭಗತ್ ಸಿಂಗ್‌ರಂತಹ ಧೀಮಂತರು ತೋರಿದ ಉಚ್ಚ ಪರಂಪರೆ ನಮಗೆ ಇಂದಿಗೂ ಸ್ಫೂರ್ತಿ ನೀಡುತ್ತಿದೆಯೋ ಆ ನಾಡಿನಲ್ಲಿ ಇಂದು ಜನನಿಯನ್ನು ಜನಜಂಗುಳಿಯಲ್ಲಿ ಅನಾಥೆಯನ್ನಾಗಿಸಿ ತ್ಯಜಿಸಿ ಹೋಗುವ ಸ್ವಾರ್ಥಿಗಳು, ತಾಯ್ನಾಡನ್ನು ಅನವರತ ಒಳ ಹೊರಗಿನ ಶತ್ರುಗಳಿಂದ ರಕ್ಷಿಸುತ್ತಿರುವ ವೀರ ಸೈನಿಕರನ್ನು ಸಾರಾಸಗಟಾಗಿ ಬಲಾತ್ಕಾರಿಗಳೆಂದು ಕರೆಯುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿರುವುದು ನಿಜಕ್ಕೂ ಕಳವಳಕಾರಿ ಸಂಗತಿ.
Related Articles
Advertisement
ಬೇಜವಾಬ್ದಾರಿ ನಿಂದಕರುಶಂಕರಾಚಾರ್ಯರ ಪಾದಸ್ಪರ್ಶದಿಂದ ಪುನೀತವಾದ, ಕಾಶ್ಮೀರಿ ಪುರವಾಸಿನಿ ತಾಯಿ ಶಾರದೆಯ ನಾಡಿನಲ್ಲಿ ನಿತ್ಯ ಪೂಜೆ ನಡೆಯುತ್ತಿದ್ದ ಸಹಸ್ರಾರು ದೇವಾಲಯಗಳನ್ನು ನಾಶ ಮಾಡಿ, ತಲೆ ತಲಾಂತರಗಳಿಂದ ನೆಮ್ಮದಿಯ ಜೀವನ ಮಾಡಿಕೊಂಡಿದ್ದ ಪಂಡಿತ ಸಮುದಾಯ ಕಾಶ್ಮೀರ ಕಣಿವೆಯಿಂದ ಪಲಾಯನ ಮಾಡುವಂತಹ ವಾತಾವರಣ ಸೃಷ್ಟಿಸಿ ಇನ್ನೇನು ಭಾರತದಿಂದ ಪ್ರತ್ಯೇಕವಾಗುವಂತಹ ವಿಷಮ ಸ್ಥಿತಿಯಲ್ಲಿ 90ರ ದಶಕದಲ್ಲಿ ಕಾಶ್ಮೀರವನ್ನು ಉಗ್ರವಾದಿಗಳಿಂದ ಮುಕ್ತಗೊಳಿಸುವಲ್ಲಿ ಹಾಗೂ ಅಲ್ಲಿ ಅರಾಜಕತೆಯನ್ನು ಹತ್ತಿಕ್ಕಿ ಶಾಂತಿ ಸ್ಥಾಪಿಸುವಲ್ಲಿ ಭಾರತೀಯ ಸೇನೆ ವಹಿಸಿದ್ದ ಮಹತ್ವಪೂರ್ಣ ಪಾತ್ರವನ್ನು ಮರೆಯುವುದು ಸಾಧ್ಯವೇ? ಜಮ್ಮು – ಕಾಶ್ಮೀರದಲ್ಲಿ ಈ ಮೂರು ದಶಕಗಳಲ್ಲಿ ಉಗ್ರವಾದಿಗಳು ಮತ್ತು ಪಾಕಿಸ್ತಾನಿ ದುರುಳರೊಂದಿಗೆ ಸೆಣಸುತ್ತಾ ಭಾರತೀಯ ಸೈನಿಕರು ಯಾವುದೇ ಯುದ್ಧದಲ್ಲಿ ವೀರಗತಿಯನ್ನು ಹೊಂದಿರುವುದಕ್ಕಿಂತಲೂ ದೊಡ್ಡ ಸಂಖ್ಯೆಯಲ್ಲಿ ಹುತಾತ್ಮರಾಗಿದ್ದಾರೆ, ವಿಕಲಾಂಗರಾಗಿದ್ದಾರೆ ಎನ್ನುವುದನ್ನು ನಮ್ಮ ಬುದ್ಧಿಜೀವಿ ವರ್ಗ ಗಣನೆಗೆ ತೆಗೆದುಕೊಳ್ಳದಿರುವುದು ವಿಷಾದಕರ. ದೊಡ್ಡ ಸಂಖ್ಯೆಯಲ್ಲಿ ನಿಯೋಜನೆಗೊಂಡಿರುವ ಸೈನಿಕರಲ್ಲಿ ಓರ್ವ ಅಶಿಸ್ತಿನ ಸೈನಿಕ ಮಾಡಿದ ತಪ್ಪನ್ನು ಎತ್ತಿ ತೋರಿಸಿ ಎಲ್ಲಾ ಸೈನಿಕರನ್ನು ಅತ್ಯಾಚಾರಿಗಳಾಗಿ ಚಿತ್ರಿಸುವುದು ನಿಷ್ಟಾವಂತ ದೇಶಪ್ರೇಮಿ ಸೈನಿಕರಿಗೆ ಮಾಡುತ್ತಿರುವ ಅಪಮಾನವೇ ಸರಿ. ಮಂದಗತಿಯ ನಾಗರಿಕ ತನಿಖಾ ವ್ಯವಸ್ಥೆಗೆ ವ್ಯತಿರಿಕ್ತವಾಗಿ ಸೇನೆಯಲ್ಲಿ ಕ್ಷಿಪ್ರ ಗತಿಯಲ್ಲಿ ವಿಚಾರಣೆ ನಡೆಸಿ (court of enquiry)ತಪ್ಪಿತಸ್ಥರಿಗೆ ಆರ್ಮಿ ಆ್ಯಕ್ಟ್ ಪ್ರಕಾರ ಕಠೊರವಾದ ಶಿಕ್ಷೆ ವಿಧಿಸುವ ತನ್ನದೇ ಆದ ನ್ಯಾಯವ್ಯವಸ್ಥೆ (Judicial system) ಇದೆ ಎನ್ನುವುದು ಅನೇಕರಿಗೆ ಗೊತ್ತಿಲ್ಲದಿರಬಹುದು. ಬಾಲ್ಯದಿಂದಲೂ ಸೇನೆಯನ್ನು ಹತ್ತಿರದಿಂದ ಕಾಣುತ್ತಿರುವ ಮತ್ತು ಸೇನೆಯ ಆಂತರಿಕ ಶಿಷ್ಟಾಚಾರದ ಕುರಿತು ಚೆನ್ನಾಗಿ ಗೊತ್ತಿರುವ ಕಾಶ್ಮೀರಿ ನಾಗರಿಕರಿಗೆ ತಮಗೆ ಅನ್ಯಾಯವಾದಾಗ ತಕ್ಷಣ ಯಾರನ್ನು ಸಂಪರ್ಕಿಸಬೇಕು, ಹೇಗೆ ಸೇನೆಯ ಕಠಿಣ ನಿಯಮದಡಿ ಅಪರಾಧಿ ಸೈನಿಕನನ್ನು ವಿಚಾರಣೆಗೆ ಒಳಪಡಿಸಲು ಸಾಧ್ಯ ಎನ್ನುವ ಅರಿವು ಭಾರತದ ಇತರ ಯಾವುದೇ ಅನ್ಯ ರಾಜ್ಯಗಳ ಜನರಿಗಿಂತ ಹೆಚ್ಚಿರುವುದರಿಂದ ತಪ್ಪಿತಸ್ಥ ಸೈನಿಕರು ತಪ್ಪಿಸಿಕೊಳ್ಳುವ ಸಾಧ್ಯತೆ ತೀರಾ ಕಡಿಮೆ ಎನ್ನಬಹುದು. ಸೈನಿಕ ನಿಂದಕರು ಈ ಎಲ್ಲಾ ಸೂಕ್ಷ್ಮಗಳನ್ನು ತಿಳಿದಿದ್ದಾರೆಯೇ? ನಿಶ್ಚಿತ ಘಟನೆಯೊಂದರ ಕುರಿತು ಮಾತನಾಡುವ ಬದಲಾಗಿ ಸುಮ್ಮನೆ ಸಾಮಾನ್ಯ ನಾಗರಿಕರನ್ನು ತಮ್ಮ ಅರೆಬರೆ ತಿಳುವಳಿಕೆಯ ಹೇಳಿಕೆಗಳಿಂದ ತಪ್ಪುದಾರಿಗೆಳೆಯುವವರ ಮೇಲೆ ಕ್ರಮ ಕೈಗೊಳ್ಳದಿದ್ದರೆ ಇಂತಹವರ ಸಂಖ್ಯೆ ಇನ್ನಷ್ಟು ವೃದ್ಧಿಸುವುದು ನಿಶ್ಚಿತ. ಈಗಂತೂ ಇಂತಹವರು ಶಾಸನ ಸಭೆ, ಸಂಸತ್ತನ್ನೂ ಪ್ರವೇಶಿಸುವ ತವಕದಲ್ಲಿದ್ದಾರೆ. ಸ್ಥಾನೀಯ ಸೈನಿಕರ ಉಪಸ್ಥಿತಿ
ಮೂರು ದಶಕಗಳ ಕೌಂಟರ್ ಇನ್ಸರ್ಜೆನ್ಸಿ ಅಪರೇಶನ್‌ನಲ್ಲಿ ಹುತಾತ್ಮರಾಗಿರುವವರಲ್ಲಿ ದೊಡ್ಡ ಸಂಖ್ಯೆಯಲ್ಲಿ ಜಮ್ಮು- ಕಾಶ್ಮೀರ ರಾಜ್ಯದವರೇ ಆದ ಜಮ್ಮು – ಕಾಶ್ಮೀರ ಲೈಟ್ ಇನ್ಫೆಂಟ್ರಿ (JAKLI) ಮತ್ತು ಜಮ್ಮು ಕಾಶ್ಮೀರ ರೈಫಲ್ಸ್ (JAK RIF) ಗೆ ಸೇರಿದ್ದವರಾಗಿದ್ದಾರೆ ಎನ್ನುವುದು ಉಲ್ಲೇಖನೀಯ. ಇತ್ತೀಚೆಗಷ್ಟೇ ಆರು ಉಗ್ರರೊಂದಿಗೆ ಸೆಣಸುತ್ತಾ ವೀರಗತಿ ಹೊಂದಿದ ಉಗ್ರವಾದ ತ್ಯಜಿಸಿ ಸೈನಿಕನಾದ ಲ್ಯಾನ್ಸ್ ನಾಯಕ್ ನಜೀರ್ ಅಹಮದ್ ವಾನಿಯಂತೆ ದೇಶಕ್ಕಾಗಿ ಸರ್ವೋಚ್ಚ ಬಲಿದಾನ ನೀಡಿದ ನೂರಾರು ಯೋಧರ ಶೌರ್ಯಗಾಥೆಯನ್ನೊಳಗೊಂಡ ಫಲಕಗಳೇ ಈ ಎರಡೂ ರೆಜಿಮೆಂಟಿಗೆ ಸೇರಿದ ಬಟಾಲಿಯನ್‌ಗಳ ಮಾಹಿತಿ ಕೊಠಡಿಗಳಲ್ಲಿ (Information Room)ಗೋಡೆಗಳಲ್ಲಿ ರಾರಾಜಿಸುತ್ತಿವೆ. ಬಟಾಲಿಯನ್ನಿಗೆ ಕಾಲಿರಿಸುವ ಹೊಸ ಪೀಳಿಗೆಯ ಸೈನಿಕರನ್ನು ಪ್ರಪ್ರಥಮವಾಗಿ ಹುತಾತ್ಮರ ಧೀರಗಾಥೆಯನ್ನು ಓದಿ ಸ್ಫೂರ್ತಿ ಪಡೆಯುವಂತೆ ಅಲ್ಲಿಗೆ ಕಳುಹಿಸಲಾಗುತ್ತದೆ. ಗಮನಾರ್ಹವೆಂದರೆ ಈ ಎರಡೂ ರೆಜಿಮೆಂಟಿನ ಬಟಾಲಿಯನ್‌ಗಳಲ್ಲಿ ಅಧಿಕಾಂಶವನ್ನು ಜಮ್ಮು ಕಾಶ್ಮೀರದಲ್ಲೇ ನಿಯೋಜಿಸಲಾಗುತ್ತದೆ. ನೇರವಾಗಿ ಹೇಳದಿದ್ದರೂ ಪರೋಕ್ಷವಾಗಿ ಭಾರತದ ಅನ್ಯ ಪ್ರಾಂತಗಳ ಸೈನಿಕರು ಸಾಮೂಹಿಕ ಅತ್ಯಾಚಾರ ಮಾಡುತ್ತಿದ್ದಾರೆ ಎನ್ನುವ ಕೀಳು ಮಟ್ಟದ ಟೀಕೆ ಮಾಡುವ ತಥಾಕಥಿತ ಬುದ್ಧಿಜೀವಿಗಳಿಗೆ ಈ ಎಲ್ಲಾ ಸ್ಥಾನೀಯ ಸೈನಿಕರಲ್ಲದೆ ಜಮ್ಮು ಕಾಶ್ಮೀರದ ಮಂಚೂಣಿ ಪ್ರದೇಶಗಳಲ್ಲಿ ನಿಯೋಜಿಸಲಾಗಿರುವ ರಾಷ್ಟ್ರೀಯ ರೈಫಲ್ಸ್ ಬಟಾಲಿಯನ್ (RR Battalion) ಗಳಲ್ಲೂ ಜಮ್ಮು – ಕಾಶ್ಮೀರಕ್ಕೆ ಸೇರಿದ ಸೈನಿಕರು ಸಾಕಷ್ಟು ಸಂಖ್ಯೆಯಲ್ಲಿ ಇರುತ್ತಾರೆ ಎನ್ನುವುದು ತಿಳಿದಿದೆಯೇ? ತಮ್ಮದೇ ಜನರ ಮೇಲೆ ಈ ಸೈನಿಕರು ಅತ್ಯಾಚಾರ ನಡೆಸುತ್ತಿದ್ದಾರೆಯೆ ಅಥವಾ ತಮ್ಮ ಸಹ ಸೈನಿಕರಿಂದ ಅತ್ಯಾಚಾರ ನಡೆಯುತ್ತಿದ್ದರೂ ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿರುವ ಸ್ಥಾನೀಯ ಸೈನಿಕರು ಮೂಕದರ್ಶಕರಾಗಿರುತ್ತಾರೆಯೇ? ಸೇನೆಯ ಕಡು ಕಷ್ಟದ ಬದುಕು
ಲೈನ್ ಆಫ್ ಕಂಟ್ರೋಲ್‌ನ ಪ್ರಥಮ ಶ್ರೇಣಿಯ ಸುರಕ್ಷೆಯಲ್ಲಿ ನಿಯೋಜನೆಗೊಂಡ ಸೈನಿಕರು ಸದಾ ನಡೆಯುವ ಗುಂಡಿನ ದಾಳಿಯಲ್ಲೇ ಬದುಕುತ್ತಿದ್ದರೆ, ಉಗ್ರವಾದದ ಪ್ರಾಬಲ್ಯದ ಸೋಪೂರ್,ಬಾಂದಿಪುರಾ, ಶೋಪಿಯಾದಂತಹ ಪ್ರದೇಶಗಳಲ್ಲಿ ಸದಾ ಬೂಟು ತೊಟ್ಟು ಮಗ್ಗಲಲ್ಲಿ ಬಂದೂಕು, ಶಿರಸ್ತ್ರಾಣವಿಟ್ಟುಕೊಂಡೇ ಮಲಗುವ ಪರಿಸ್ಥಿತಿ ಇದೆ. ಶಾಂತಿ ಪ್ರದೇಶದಲ್ಲಿ ನಿಯೋಜನೆಗೊಂಡ ಸೈನಿಕರೂ ಕೂಡಾ ಒಂದಿಲ್ಲೊಂದು ತರಬೇತಿಯಲ್ಲಿ ವ್ಯಸ್ತರಾಗಿರಬೇಕಾಗುತ್ತದೆ. ನಾಗರಿಕ ಬದುಕಿನಲ್ಲಿರುವ ಸ್ವೇಚ್ಛೆಯಾಗಲೀ, ಪ್ರತಿಯೊಂದನ್ನು ಪ್ರಶ್ನಿಸುವ ಸ್ವಾತಂತ್ರ್ಯವಾಗಲೀ, ಬಯಸಿದಲ್ಲಿ ಹೋಗುವ ಸ್ವಾತಂತ್ರ್ಯವಾಗಲಿ, ಆದೇಶವನ್ನು ಧಿಕ್ಕರಿಸುವ ಸಾಹಸವಾಗಲಿ, ಹಕ್ಕುಗಳಿಗಾಗಿ ಹೋರಾಡುವ ಅಧಿಕಾರವಾಗಲಿ ಇಲ್ಲದ ತಮಗಾದ ಅವಮಾನವನ್ನು ತಮ್ಮೊಳಗೆ ಸಹಿಸಿಕೊಳ್ಳಬೆಕಾದ ಸೈನಿಕರ ಬದುಕು ದೀಪವೊಂದು ದೇದೀಪ್ಯಮಾನವಾಗಿ ಪ್ರಜ್ವಲಿಸಿ ಬೆಳಕು ತೋರಿ ತನ್ನ ಅಸ್ತಿತ್ವವನ್ನು ತಾನೇ ಕಳೆದುಕೊಳ್ಳುವಂತಹದ್ದಾಗಿದೆ ಎಂದರೆ ಅತಿಶಯೋಕ್ತಿಯಲ್ಲ. ತಮ್ಮ ನಿಂದನೆ ನಡೆಯುತ್ತಿದ್ದರೂ ಪ್ರತಿಭಟಿಸಲಾಗದ ಸೈನಿಕರ ಬದಲಾಗಿ ಇನ್ನಾವುದೋ ವೃತ್ತಿಪರರನ್ನು ಇಷ್ಟು ಕೆಟ್ಟದಾಗಿ ಸಾರಾಸಗಟಾಗಿ ಟೀಕಿಸಿದರೆ ಪ್ರಾಯಶಃ ಉಂಟಾಗುವ ಪರಿಣಾಮವೇ ಬೇರೆ ಇರುತ್ತಿತ್ತು. ಸೈನಿಕರನ್ನು ಸಮ್ಮಾನದಿಂದ ಕಾಣೋಣ
ಹಿಂದಿಯ ಸುಪ್ರಸಿದ್ಧ ಕವಿ ಮಾಖನ್‌ಲಾಲ್ ಚತುರ್ವೇದಿ ತನ್ನ ಪುಷ್ಪದ ಅಭಿಲಾಷೆ ಎನ್ನುವ ಕವಿತೆಯಲ್ಲಿ ಪುಷ್ಪವೊಂದು ರಾಜ ಮಹಾರಾಜರ, ದೇವತೆಗಳ ಹಾರವಾಗುವ ಬದಲಾಗಿ ದೇಶಕ್ಕಾಗಿ ತಮ್ಮ ಪ್ರಾಣವನ್ನೇ ಸಮರ್ಪಿಸಲು ಸಿದ್ಧರಾಗಿ ಹೊರಟಿರುವ ವೀರ ಸೈನಿಕರು ಹಾದುಹೋಗುವ ಪಥದಲ್ಲಿ ತನ್ನನ್ನು ಎಸೆಯುವಂತೆ ಪ್ರಾರ್ಥಿಸುವ ಆಶಯದ ಕವನದ ಮೂಲಕ ದೇಶವಾಸಿಗಳಲ್ಲಿ ಸೈನಿಕರ ಕುರಿತು ಗೌರವ ಇರಲಿ ಎಂದು ಆಶಿಸಿದ್ದರು. ಇತ್ತೀಚಿನ ವರ್ಷಗಳಲ್ಲಿ ಪ್ರಧಾನಮಂತ್ರಿ ಸ್ವತಹ ಸೈನಿಕರೊಂದಿಗೆ ದೀಪಾವಳಿ ಆಚರಿಸುವುದರ ಮೂಲಕ ಹಾಗೂ ರಾಷ್ಟ್ರೀಯ ಪರ್ವಗಳಲ್ಲಿ ಮಾಜಿ ಸೈನಿಕರಿಂದ ಶಾಲಾ ಕಾಲೇಜುಗಳಲ್ಲಿ ಧ್ವಜಾರೋಹಣೆ ಮಾಡುವಂತೆ ಸೂಚಿಸುವ ಮೂಲಕ ಸೈನಿಕರ ಘನತೆಯನ್ನು ಹೆಚ್ಚಿಸುವ ಕ್ರಮ ಕೈಗೊಂಡಿರುವುದು ಸ್ವಾಗತಾರ್ಹ. ಸೇನೆಗೆ ಸೇರುವವರಲ್ಲಿ ಅನೇಕರು ಉದ್ಯೋಗಕ್ಕಾಗಿ ಸೇನೆಯನ್ನು ಆಯ್ಕೆ ಮಾಡಿಕೊಂಡಿರಬಹುದು. ಹಾಗೆಂದು ಸೈನಿಕರ ಆತ್ಮಸಮ್ಮಾನವನ್ನು ಕೆಣಕುವುದು ಸರಿಯಲ್ಲ. ನಾಗರಿಕ ಬದುಕಿನ ಅನೇಕ ಸುಖ ಸೌಲಭ್ಯಗಳಿಗೆ ತಿಲಾಂಜಲಿ ನೀಡಬೇಕಾಗುತ್ತದೆ ಎನ್ನುವ ಭಯದಿಂದಾಗಿ ಸೇನೆ ಸೇರುವ ಯುವಕರ ಸಂಖ್ಯೆ ಕಡಿಮೆಯಾಗುತ್ತಿದೆ. ಸೇನೆಯ ಮೂರೂ ಅಂಗಗಳಲ್ಲಿ ಭರ್ತಿಯಾಗದ ಹುದ್ದೆಗಳಿಂದ ಚಿಂತಿತ ಸಂಸದೀಯ ಸ್ಥಾಯಿ ಸಮಿತಿ ನಾಗರಿಕ ಹುದ್ದೆಗಳಿಗೆ ಸೇರುವವರಿಗೆ ಕಡ್ಡಾಯವಾಗಿ ಸೀಮಿತ ಅವಧಿಗೆ ಸೇನೆಯಲ್ಲಿ ಸೇವೆ ಸಲ್ಲಿಸುವಂತೆ ಷರತ್ತು ವಿಧಿಸಲು ಸರಕಾರಕ್ಕೆ ಸಲಹೆ ನೀಡಿದೆ. ಸೇನೆಯ ತರಬೇತಿಯಲ್ಲಿ ಸದಾ ತಲೆ ಎತ್ತಿ ಆತ್ಮ ಸಮ್ಮಾನಕ್ಕೆ ಒಂದಿನಿತೂ ಚ್ಯುತಿಯಾಗದಂತೆ ಬದುಕು ನಡೆಸಲು ಕಲಿತ ಸೈನಿಕ ತನ್ನದೆ ನಾಗರಿಕ ಸಮಾಜದ ಅನಾದರದಿಂದ ಅನುಭವಿಸುವ ನೋವು ಎಂದೂ ಮಾಗದು. ನಾಗರಿಕರ ನೆಮ್ಮದಿಯ ಬದುಕಿಗಾಗಿ ತಮ್ಮ ವೈಯ್ಯಕ್ತಿಕ ಬದುಕನ್ನು ಕಳೆದುಕೊಳ್ಳುವ ಸೈನಿಕರನ್ನು ನಿಂದಿಸುವವರ ಮಾತುಗಳನ್ನು ಬಲವಾಗಿ ಖಂಡಿಸೋಣ. – ಬೈಂದೂರು ಚಂದ್ರಶೇಖರ ನಾವಡ