Advertisement

ಹೊಸ ಬಸ್‌ಗಳೇಕೆ ಬೇಕು?

11:18 AM Nov 05, 2017 | Team Udayavani |

ಬೆಂಗಳೂರು: ಹೊಸ ಬಸ್‌ಗಳನ್ನು ಖರೀದಿಸಿ, ಸುಮ್ನೆ ನಮಗೇ ಹೊರೆ ಮಾಡ್ಬೇಡಿ. ಇದ್ದ ಬಸ್‌ಗಳನ್ನೇ ಸದೃಢಗೊಳಿಸಿ ಸೇವೆ ಕಲ್ಪಿಸಿ ಸಾರ್‌… ಮೆಜೆಸ್ಟಿಕ್‌ ಕೆಂಪೇಗೌಡ ಬಸ್‌ ನಿಲ್ದಾಣದಲ್ಲಿ ಅಹವಾಲು ಆಲಿಸುತ್ತಿದ್ದ ಸಾರಿಗೆ ಸಚಿವ ಎಚ್‌.ಎಂ.ರೇವಣ್ಣ ಅವರಿಗೆ ಪ್ರಯಾಣಿಕರೊಬ್ಬರು ನೀಡಿದ ಸಲಹೆ ಇದು.

Advertisement

ಕೆಂಪೇಗೌಡ ಬಸ್‌ ನಿಲ್ದಾಣದಲ್ಲಿ ಶನಿವಾರ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, ಬಿ-ಪ್ಯಾಕ್‌ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಬಸ್‌ ದಿನಾಚರಣೆಯಲ್ಲಿ ಭಾಗವಹಿಸಿದ ನಂತರ ಸಚಿವ ರೇವಣ್ಣ, ನೇರವಾಗಿ ಪ್ಲಾಟ್‌ಫಾರಂಗೆ ತೆರಳಿ ಬಿಎಂಟಿಸಿ ಸೇವೆ ಬಗ್ಗೆ ಪ್ರಯಾಣಿಕರಿಂದ ಅಭಿಪ್ರಾಯ ಕೇಳಿದರು. ಈ ವೇಳೆ ಜಿ.ರಂಗಸ್ವಾಮಿ ಎಂಬ ಪ್ರಯಾಣಿಕರು, “ಈಗಿರುವ ಬಸ್‌ಗಳನ್ನೇ ಸದೃಢಗೊಳಿಸಿ ಸಾರ್‌, ವಿನಾಕಾರಣ ಹೊಸ ಬಸ್‌ಗಳನ್ನು ಖರೀದಿಸಿದರೆ ನಮಗೇ ಹೊರೆ,’ ಎಂದು ಸಲಹೆ ನೀಡಿದರು.

“ನಾನು ನಿತ್ಯ ಮಾರ್ಗ ಸಂಖ್ಯೆ-407ರಲ್ಲಿ ಸಂಚರಿಸುತ್ತೇನೆ. ಹಳೆಯ ಮತ್ತು ಹೊಸ ಬಸ್‌ಗಳೂ ಇವೆ. ಹಳೆಯ ಬಸ್‌ಗಳು ಸುಸ್ಥಿತಿಯಲ್ಲಿ ಇರುವುದೇ ಇಲ್ಲ. ಕಿಟಕಿಗಳು ಕೂಡ ಸರಿಯಾಗಿರುವುದಿಲ್ಲ. ಹಾಗಾಗಿ, ಇರುವ ಬಸ್‌ಗಳನ್ನು ಸಮರ್ಪಕವಾಗಿ ರಿಪೇರಿ ಮಾಡಿ, ಸೇವೆ ಕಲ್ಪಿಸಿ,’ ಎಂದರು. 

ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ರೇವಣ್ಣ, “ಹಳೆಯ ಬಸ್‌ಗಳನ್ನು ದುರಸ್ತಿಗೊಳಿಸಲಾಗುತ್ತಿದೆ. ಗುಜರಿ ಸೇರಿದ ಬಸ್‌ಗಳ ಬದಲಿಗೆ ಹೊಸ ಬಸ್‌ಗಳನ್ನು ಖರೀದಿಸುತ್ತಿದ್ದೇವೆ,’ ಎಂದು ತಿಳಿಸಿದರು. ನಂತರ ಪ್ಲಾಟ್‌ಫಾರಂ 13, 14 ಮತ್ತು 15ಕ್ಕೆ ತೆರಳಿದ ಸಚಿವರು, ಪ್ರಯಾಣಿಕರೊಂದಿಗೆ ಸಮಾಲೋಚಿಸಿದಾಗ ಶೌಚಾಲಯ ನಿರ್ವಹಣೆ ಬಗ್ಗೆ ದೂರು ಕೇಳಿಬಂತು. ಕೂಡಲೆ ಶೌಚಾಲಯ ಪರಿಶೀಲನೆ ನಡೆಸಿದರು.

ಇಂದಿರಾ ಸಾರಿಗೆ ಶೀಘ್ರ: ಪ್ರಯಾಣಿಕರ ಸಂಪರ್ಕಕ್ಕೂ ಮುನ್ನ ಬಸ್‌ ದಿನಾಚರಣೆ ಸಮಾಂಭದಲ್ಲಿ ಮಾತನಾಡಿದ ಸಚಿವ ರೇವಣ್ಣ, ಮಹಿಳೆಯರಿಗಾಗಿ ಶೀಘ್ರದಲ್ಲೇ “ಇಂದಿರಾ ಸಾರಿಗೆ’ ಸೇವೆ ಆರಂಭಿಸಲಾಗುವುದು. ಪ್ರಸ್ತುತ ಬಸ್‌ಗಳಲ್ಲಿ ಮಹಿಳೆಯರಿಗಾಗಿ ಪ್ರತ್ಯೇಕ ಆಸನಗಳ ವ್ಯವಸ್ಥೆ ಇದೆ.

Advertisement

ಆದರೆ, “ಇಂದಿರಾ ಸಾರಿಗೆ’ಯಡಿ ಮಹಿಳೆಯರಿಗಾಗಿಯೇ ಪ್ರತ್ಯೇಕ ಬಸ್‌ಗಳು ಸಂಚರಿಸಲಿದ್ದು, ಪ್ರಯಾಣ ದರದಲ್ಲಿ ರಿಯಾಯ್ತಿ ಕೂಡ ಇರಲಿದೆ. ಈ ಸಂಬಂಧ ಮಾರ್ಗಗಳ ಸಮೀಕ್ಷೆ ಹಾಗೂ ಅಭಿಪ್ರಾಯ ಸಂಗ್ರಹಿಸಿ, ಸಾಧಕ-ಬಾಧಕಗಳ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಕೆಲವೇ ದಿನಗಳಲ್ಲಿ “ಇಂದಿರಾ ಸಾರಿಗೆ’ ಸೇವೆ ಆರಂಭಗೊಳ್ಳಲಿದೆ ಎಂದರು.

ಸ್ತ್ರೀಯರಿಗೆ ಚಾಲನೆ ತರಬೇತಿ: ಮಹಿಳೆಯರು ಇಂದು ವೈಮಾನಿಕ, ವೈಮಾಂತರಿಕ್ಷ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ಲಗ್ಗೆ ಇಟ್ಟಿದ್ದಾರೆ. ಆದರೆ, ಬಸ್‌ ಚಾಲನೆ ವಿಭಾಗದಲ್ಲಿ ಮಾತ್ರ ಹಿಂದೆಬಿದ್ದಿದ್ದಾರೆ. ಚೀನಾ, ಯೂರೋಪ್‌ಗ್ಳಲ್ಲಿ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿ ಬಸ್‌ ಚಾಲನೆ ಮಾಡುತ್ತಾರೆ. ಈ ಹಿನ್ನೆಲೆಯಲ್ಲಿ ರಾಜ್ಯ ಸಾರಿಗೆ ಸಂಸ್ಥೆಗಳಲ್ಲೂ ಮಹಿಳೆಯರಿಗೆ ಪ್ರೋತ್ಸಾಹ ನೀಡಲು ಚಾಲನೆ ತರಬೇತಿ ಮತ್ತಿತರ ಪೂರಕ ಯೋಜನೆಗಳನ್ನು ರೂಪಿಸಲಾಗುತ್ತಿದೆ.

ಈಗಾಗಲೇ “ನಿರ್ಭಯಾ ನಿಧಿ’ ಅಡಿ ಬಿಎಂಟಿಸಿಯಲ್ಲಿ ಸಾವಿರ ಮಹಿಳೆಯರಿಗೆ ಚಾಲನೆ ತರಬೇತಿ ನೀಡಲು ಉದ್ದೇಶಿಸಲಾಗಿದೆ. ಈ ಸಂಬಂಧ ಕೇಂದ್ರದ ಅನುಮೋದನೆಯೂ ಸಿಕ್ಕಿದೆ ಎಂದು ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಬಿಎಂಟಿಸಿ ಅಧ್ಯಕ್ಷ ಎಂ. ನಾಗರಾಜ (ಯಾದವ), ವ್ಯವಸ್ಥಾಪಕ ನಿರ್ದೇಶಕ ವಿ. ಪೊನ್ನುರಾಜ್‌, ನಟ ಅನೂಪ್‌ ರೇವಣ್ಣ, ಕಾರುಣ್ಯಾರಾಮ್‌ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next