ಮೈಸೂರು: ಚಾಮುಂಡೇಶ್ವರಿ ಕ್ಷೇತ್ರದಿಂದಲೇ ರಾಜಕೀಯ ಆರಂಭಿಸಿದ್ದೇನೆ. ಈಗ ಮತ್ತೆ ಅಲ್ಲಿಂದಲೇ ನಿಂತು ಗೆದ್ದು ಬರುತ್ತೇನೆಂದು ಸ್ಪಷ್ಟಪಡಿಸಿದ ಸಿದ್ದರಾಮಯ್ಯ, ಚಾಮುಂಡೇಶ್ವರಿ ಕ್ಷೇತ್ರದ ಬಗ್ಗೆ ಎಚ್.ಡಿ.ಕುಮಾರಸ್ವಾಮಿಗೆ ಏನು ಗೊತ್ತು ಎಂದು ಕಿಡಿಕಾರಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿ, “ಕುಮಾರಸ್ವಾಮಿಯನ್ನು ಕೇಳಿಕೊಂಡು ನಾನು ರಾಜಕಾರಣ ಮಾಡಬೇಕಾ?, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಎಷ್ಟು ಬಾರಿ ಚುನಾವಣೆಗೆ ಸ್ಪರ್ಧಿಸಿದ್ದೇನೆ ಎಂಬುದಾದರೂ ಕುಮಾರಸ್ವಾಮಿಗೆ ಗೊತ್ತಾ? ಸಿದ್ದರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧಿಸುವುದೇ ಅನುಮಾನ ಎಂದು ಸುಮ್ಮನೆ ಹೇಳುತ್ತಾರೆ. 1983ರಿಂದ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಏಳು ಬಾರಿ ಚುನಾವಣೆಗೆ ನಿಂತಿದ್ದೇನೆ. ಐದು ಬಾರಿ ಗೆದ್ದು, ಎರಡು ಬಾರಿ ಸೋತಿದ್ದೇನೆ. ಈಗಲೂ ಚಾಮುಂಡೇಶ್ವರಿ ಕ್ಷೇತ್ರದಿಂದಲೇ ಸ್ಪರ್ಧಿಸುತ್ತೇನೆ ಎಂದು ಹೇಳಿದರು.
2 ಸಾವಿರ ರೂ.ನೋಟು ನೀಡಿದ ಸಿಎಂ: ರೋಡ್ ಶೋ ನಡೆಸಿದ ಮೊದಲ ದಿನವೇ ಸಿಎಂ ಸಿದ್ದರಾಮಯ್ಯ, ತಮ್ಮನ್ನು ಸ್ವಾಗತಿಸಿದ ಇಬ್ಬರು ಮಹಿಳೆಯರಿಗೆ ಹಣ ನೀಡುವ ಮೂಲಕ ನೀತಿಸಂಹಿತೆ ಉಲ್ಲಂ ಸಿದರು. ರಮ್ಮನಹಳ್ಳಿ ಗ್ರಾಮಕ್ಕೆ ಆಗಮಿಸುತ್ತಿದ್ದಂತೆ ಅವರ ಕಾರಿನ ಬಳಿ ಬಂದು ಸ್ವಾಗತಿಸಿದ ಇಬ್ಬರು ಮಹಿಳೆಯರಿಗೆ ಸಿದ್ದರಾಮಯ್ಯ ತಲಾ 2 ಸಾವಿರ ರೂ. ತೆಗೆದುಕೊಟ್ಟರು. ಸ್ವಲ್ಪ ದೂರದಲ್ಲಿ ಮತ್ತೂಂದು ಗುಂಪಿನವರು ವಾಹನ ನಿಲ್ಲಿಸಿ ಆರತಿ ಮಾಡಿದಾಗ ನೂರು ರೂಪಾಯಿ ನೋಟನ್ನಷ್ಟೇ ಹಾಕಿ ಮುನ್ನಡೆದರು.
ಚಾಮುಂಡೇಶ್ವರಿ ಕ್ಷೇತ್ರದ ಜನತೆಯ ನಾಡಿಮಿಡಿತ ಸಿದ್ದರಾಮಯ್ಯ ಅವರಿಗಿಂತ ನನಗೆ ಚೆನ್ನಾಗಿ ಗೊತ್ತಿದೆ. 2006ರ ಉಪ ಚುನಾವಣೆಯಲ್ಲಿ ಸಿದ್ದರಾಮಯ್ಯ ಕುತಂತ್ರದಿಂದ ಗೆದ್ದರು. ಅದು ಕಾಂಗ್ರೆಸ್ ಎದುರಿಸಿದ ಉಪ ಚುನಾವಣೆ, ಸಿದ್ದರಾಮಯ್ಯ ಎದುರಿಸಿದ್ದಲ್ಲ.
–
ಕುಮಾರಸ್ವಾಮಿ,
ಜೆಡಿಎಸ್ ರಾಜ್ಯಾಧ್ಯಕ್ಷ