ಬೆಂಗಳೂರು : ದಿನದಿಂದ ದಿನಕ್ಕೆ ಜನರನ್ನು ಚಿತ್ರ ಮಂದಿರದತ್ತ ಪ್ರೇಕ್ಷರನ್ನು ಸೆಳೆದು ಮುನ್ನುಗ್ಗುತ್ತಿರುವ ಕರಾವಳಿಯ ಭೂತಾರಾಧನೆಯ ಹಿನ್ನೆಲೆ ಇರುವ ರಿಷಬ್ ಶೆಟ್ಟಿ ನಿರ್ದೇಶಿಸಿ, ಅದ್ಭುತ ನಟನೆಯ ‘ಕಾಂತಾರ’ ಚಿತ್ರವನ್ನು ಬಿಜೆಪಿಯ ಪ್ರಮುಖ ನಾಯಕರು ವೀಕ್ಷಿಸಿ ಭಾರಿ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಮಾಜಿ ಮುಖ್ಯಮಂತ್ರಿ, ಸಂಸದ ಡಿ.ವಿ.ಸದಾನಂದ ಗೌಡ, ಸಚಿವ ಆರ್. ಅಶೋಕ್, ಸಚಿವ ಡಾ. ಅಶ್ವತ್ಥ್ ನಾರಾಯಣ್ ಅವರು ಸಿನಿಮಾ ವೀಕ್ಷಿಸಿ ಸಂಭ್ರಮಿಸಿದರು.
ನಳಿನ್ ಕುಮಾರ್ ಕಟೀಲ್ ಅವರು ಚಿತ್ರ ವೀಕ್ಷಿಸಿ ಪ್ರಶಂಸೆಯ ಮಾತುಗಳನ್ನಾಡಿ, ‘ಸಾಮಾನ್ಯವಾಗಿ ಹಿಂದೂ ದೇವರನ್ನು ಅವಮಾನ ಮಾಡುವ ಕೆಲಸಗಳಾಗುತ್ತದೆ. ಇಲ್ಲಿ ಯಾವುದೇ ದೈವ, ಧಾರ್ಮಿಕ ವಿಚಾರಗಳಿಗೆ, ಸಂಸ್ಕೃತಿಗೆ ಚ್ಯುತಿ ಬರದ ಹಾಗೆ ಚಿತ್ರವನ್ನು ಮಾಡಲಾಗಿದೆ. ದೈವಾರಾಧನೆಯನ್ನು ಅದ್ಭುತವಾಗಿ , ದೈವದ ಶಕ್ತಿ ಏನು ಎನ್ನುವುದನ್ನುಕಡಿಮೆ ಖರ್ಚಿನಲ್ಲಿ ಜಗತ್ತೇ ಆಕರ್ಷಣೆ ಮಾಡುವಂತೆ ಸಿನಿಮಾ ಮಾಡಿದೆ ಎಂದರೆ ಅದು ದೈವದ ಕಾರ್ಣಿಕ’ ಎಂದರು.
ಸಚಿವ ಡಾ ಅಶ್ವತ್ಥ್ ನಾರಾಯಣ್ ಅವರು ಚಿತ್ರ ವೀಕ್ಷಿಸಿ ‘ನಿಜಕ್ಕೂ ಹೆಮ್ಮೆ, ಕನ್ನಡದ ಚಿತ್ರ ಇಷ್ಟೊಂದು ಎತ್ತರಕ್ಕೆ ಏರಿರುವುದು ಅಭಿಮಾನದ ಪ್ರಶ್ನೆ , ಇಡೀ ತಂಡಕ್ಕೆ ಅಭಿನಂದನೆ ಸಲ್ಲಿಸುತ್ತೇನೆ’ ಎಂದರು.
ಡಿ.ವಿ.ಸದಾನಂದ ಗೌಡ ಅವರು ಮಾತನಾಡಿ ”ದೇಶದ ಪ್ರತಿಯೊಂದು ಕಣದಲ್ಲೂ ವಿಭಿನ್ನ ಸಂಸ್ಕೃತಿ ಇದೆ. ಕರಾವಳಿಯಲ್ಲಿ ಭೂತಾರಾಧನೆ ವಿಶಿಷ್ಟ ಸಂಪ್ರದಾಯ. ನಂಬಿಕೆಯಲ್ಲೇ ಬದುಕುವವರಿದ್ದಾರೆ. ವಾಸ್ತವಿಕ ವಿಚಾರವನ್ನು ಕಂಡರೇ ಒಂದು ಹಂತದಲ್ಲಿ ಅಧಿಕಾರಿಗಳಿಗೂ ಕೂಡ ದೈವಗಳು ಆದೇಶ ಮಾಡುತ್ತವೆ. ಈ ದಟ್ಟ ಅರಣ್ಯದಲ್ಲಿ ಕೂಡ ಭವ್ಯವಾದ ಶಕ್ತಿ ಇದೆ . ಶಕ್ತಿ ಎಲ್ಲರನ್ನು ರಕ್ಷಣೆ ಮಾಡುವ ಕೆಲಸ ಮಾಡಿದೆ. ಎಲ್ಲರನ್ನೂ ಒಟ್ಟು ಮಾಡುವ ಕೆಲಸ ನಡೆದಿದೆ. ಧಾರ್ಮಿಕ ಆಚರಣೆಯಲ್ಲಿರುವ ವಿಶಿಷ್ಟವಾದ ಸಂಪ್ರದಾಯ ಚಿತ್ರದಲ್ಲಿ ತೋರಿಸಲಾಗಿದೆ” ಎಂದು ಸಂಭ್ರಮ ವ್ಯಕ್ತ ಪಡಿಸಿದರು.
ಆರ್ ಅಶೋಕ್ ಅವರು ಮಾತನಾಡಿ, ‘ನಿಜ ಜೀವನದ ಚರಿತ್ರೆಯನ್ನು ಬಿಚ್ಚಿಡಲಾಗಿದೆ. ಇಡೀ ಪ್ರಪಂಚಕ್ಕೆ ಗೊತ್ತಾಗುವ ಹಾಗೆ ಮಾಡಲಾಗಿದೆ. ದ್ವಿತೀಯಾರ್ಧ ಬಹಳ ಚೆನ್ನಾಗಿ ಮೂಡಿ ಬಂದಿದೆ. ನಿಜವಾಗಿಯೂ ದೇವರು ಮೈಮೇಲೆ ಬಂದರೆ ಹೇಗೆ ಆಗುತ್ತದೆ, ಅದ್ಕಕಿಂತಲೂ ಚೆನ್ನಾಗಿ ರಿಷಬ್ ನಟಿಸಿದ್ದಾರೆ ಎಂದರು. ಇನ್ನೊಂದು ಸ್ವಲ್ಪ ಹೊತ್ತು ಸಿನಿಮಾ ಇರಬೇಕು ಅನ್ನಿಸಿತು. ನಮಗೆ ಒಂದು ರೀತಿ ಭಯ ಆಯಿತು’ ಎಂದರು.