Advertisement

ಈಗಲೇ ರೈಲು ಯಾನ ಬೇಡ ; ಸೋಂಕು ವ್ಯಾಪಿಸುವ ಆತಂಕ ಮುಂದಿಟ್ಟ ನಾಲ್ವರು ಸಿಎಂಗಳು

04:07 AM May 12, 2020 | Hari Prasad |

ಹೊಸದಿಲ್ಲಿ: ಮಂಗಳವಾರದಿಂದ ದೇಶದ ಆಯ್ದ 15 ಮಾರ್ಗಗಳಲ್ಲಿ ಪ್ರಯಾಣಿಕ ರೈಲುಗಳ ಸಂಚಾರಕ್ಕೆ ಅವಕಾಶ ಕಲ್ಪಿಸಿರುವ ಕೇಂದ್ರ ಸರಕಾರದ ನಿರ್ಧಾರಕ್ಕೆ ನಾಲ್ಕು ರಾಜ್ಯಗಳು ಆಕ್ಷೇಪ ವ್ಯಕ್ತಪಡಿಸಿವೆ.

Advertisement

ಇಂಥ ಪರಿಸ್ಥಿತಿಯಲ್ಲಿ ರೈಲುಗಳ ಸಂಚಾರಕ್ಕೆ ಅವಕಾಶ ಕಲ್ಪಿಸುವುದರಿಂದ ಭಾರೀ ಗೊಂದಲ ಸೃಷ್ಟಿಯಾಗಲಿದೆ.

ಇದರಿಂದಾಗಿ ಕೋವಿಡ್ ರೋಗಿಗಳನ್ನು ಪತ್ತೆಹಚ್ಚುವುದು, ಪ್ರತ್ಯೇಕಿಸುವುದು ಮತ್ತು ಪರೀಕ್ಷಿಸುವುದು ದೊಡ್ಡ ಸವಾಲಾಗಿ ಪರಿಣಮಿಸಲಿದೆ ಎಂದು ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು ಮತ್ತು ಛತ್ತೀಸ್‌ಗಢ ಮುಖ್ಯಮಂತ್ರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ಸೋಮವಾರ ರಾಜ್ಯಗಳ ಮುಖ್ಯಮಂತ್ರಿಗಳ ಜತೆ ಪ್ರಧಾನಿ ನರೇಂದ್ರ ಮೋದಿ ಅವರು ನಡೆಸಿದ ವಿಡಿಯೋ ಸಂವಾದದಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಿರುವ ಸಿಎಂಗಳು, ಕೂಡಲೇ ರೈಲು ಸೇವೆ ಪುನಾರಂಭಿಸುವ ನಿರ್ಧಾರವನ್ನು ಸರಕಾರ ವಾಪಸ್‌ ಪಡೆಯಬೇಕು ಎಂದು ಆಗ್ರಹಿಸಿದ್ದಾರೆ.

ನಗರಗಳಿಂದ ಗ್ರಾಮೀಣ ಪ್ರದೇಶಗಳಿಗೆ ದೊಡ್ಡ ಮಟ್ಟದಲ್ಲಿ ಕಾರ್ಮಿಕರ ವಲಸೆ, ತವರು ರಾಜ್ಯಗಳಿಗೆ ಕಾರ್ಮಿಕರು ಮರಳಿದ ಪರಿಣಾಮ ಆರ್ಥಿಕ ಚಟುವಟಿಕೆಗಳ ಮೇಲೆ ಬೀರುವ ಪರಿಣಾಮಗಳು, ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಕೆಲಸದ ಅವಧಿ 200 ದಿನಗಳಿಗೆ ವಿಸ್ತರಣೆ, ರಾಜ್ಯಗಳಿಗೆ ಬರಬೇಕಾದ ಜಿಎಸ್‌ಟಿ ಪರಿಹಾರ ಮೊತ್ತ ಸೇರಿದಂತೆ ವಿವಿಧ ವಿಚಾರಗಳ ಕುರಿತು ಸಭೆಯಲ್ಲಿ ಚರ್ಚೆ ನಡೆದಿದೆ.

Advertisement

31ರ ವರೆಗೆ ಬೇಡ‌: ತಮಿಳುನಾಡಿನಲ್ಲಿ ಪ್ರಕರಣಗಳ ಸಂಖ್ಯೆ ದಿನೇ ದಿನೆ ಹೆಚ್ಚಳವಾಗುತ್ತಿದ್ದು, ಈಗ ರೈಲು ಸೇವೆ ಆರಂಭವಾದರೆ ಪರಿಸ್ಥಿತಿಯನ್ನು ಹತೋಟಿಗೆ ತರಲು ಸಾಧ್ಯವಾಗದು. ಮೇ 31ರವರೆಗೂ ರೈಲು ಅಥವಾ ವಿಮಾನಗಳು ನಮ್ಮ ರಾಜ್ಯದಲ್ಲಿ ಸಂಚರಿಸದಂತೆ ಕ್ರಮ ಕೈಗೊಳ್ಳಿ ಎಂದು ಪ್ರಧಾನಿ ಮೋದಿಗೆ ತಮಿಳುನಾಡು ಸಿಎಂ ಪಳನಿಸ್ವಾಮಿ ಮನವಿ ಮಾಡಿದ್ದಾರೆ.

ನಗರ-ನಗರಗಳ ನಡುವೆ ಸಂಚಾರ ಆರಂಭವಾದರೆ ವೈರಸ್‌ ಬೇಗನೆ ವ್ಯಾಪಿಸುವ ಭೀತಿಯಿದೆ ಎಂದು ತೆಲಂಗಾಣ ಸಿಎಂ ಕೆ.ಚಂದ್ರಶೇಖರ್‌ ರಾವ್‌ ಆತಂಕ ವ್ಯಕ್ತಪಡಿಸಿದ್ದಾರೆ.

ಕಂಟೈನ್‌ಮೆಂಟ್‌ ವಲಯದಲ್ಲಿ ಬೇಡ: ದೆಹಲಿಯಲ್ಲಿ ಕಂಟೈನ್ಮೆಂಟ್‌ ವಲಯ ಹೊರತುಪಡಿಸಿ ಉಳಿದ ಎಲ್ಲ ಪ್ರದೇಶಗಳಲ್ಲೂ ಆರ್ಥಿಕ ಚಟುವಟಿಕೆಗಳನ್ನು ಪುನಾರಂಭಿಸಬೇಕು ಎಂದು ದಿಲ್ಲಿ ಸಿಎಂ ಕೇಜ್ರಿವಾಲ್‌ ಮನವಿ ಮಾಡಿದ್ದಾರೆ.

ಆದರೆ, ಲಾಕ್‌ಡೌನ್‌ ವಿಸ್ತರಣೆ ಬೇಡ ಎಂದು ಆಂಧ್ರಪ್ರದೇಶ, ಗುಜರಾತ್‌ ಸರಕಾರಗಳು ಕೇಳಿಕೊಂಡಿವೆ. ಕೆಂಪು ವಲಯದಲ್ಲಿ ನೆಲೆಸಿರುವ ಯಾವ ವ್ಯಕ್ತಿ ಕೂಡ ಹಸಿರು ವಲಯ ಪ್ರವೇಶಿಸದಂತೆ ನೋಡಿಕೊಳ್ಳಬೇಕು ಎಂದು ರಾಜಸ್ಥಾನ ಸಿಎಂ ಅಶೋಕ್‌ ಗೆಹ್ಲೊಟ್‌ ಶಿಫಾರಸು ಮಾಡಿದ್ದಾರೆ.

ಎಚ್ಚರಿಕೆ ಅಗತ್ಯ ಎಂದ ಉದ್ಧವ್‌: ಜೂನ್‌- ಜುಲೈ ಅವಧಿಯಲ್ಲಿ ಕೋವಿಡ್ ಪ್ರಕರಣಗಳು ಬಹಳಷ್ಟು ಹೆಚ್ಚಳವಾಗುವ ಸಾಧ್ಯತೆಯಿದೆ ಎಂದು ಈಗಾಗಲೇ ತಜ್ಞರು ಎಚ್ಚರಿಸಿದ್ದಾರೆ. ಹೀಗಾಗಿ, ಲಾಕ್‌ ಡೌನ್‌ ವಿಚಾರದಲ್ಲಿ ನಾವು ಜಾಗರೂಕತೆಯಿಂದ ನಿರ್ಧಾರ ಕೈಗೊಳ್ಳಬೇಕಾಗುತ್ತದೆ.

ಹಸಿರು ವಲಯಗಳಲ್ಲಿ ಕೈಗಾರಿಕೆಗಳು ಕಾರ್ಯಾರಂಭಗೊಳ್ಳಲು ಅವಕಾಶ ಕಲ್ಪಿಸಬಹುದು, ಅಗತ್ಯ ಸೇವೆಗಳಲ್ಲಿ ಕೆಲಸ ಮಾಡುವಂಥ ನೌಕರರ ಅನುಕೂಲಕ್ಕಾಗಿ ಸ್ಥಳೀಯ ರೈಲುಗಳ ಸಂಚಾರ ಪುನಾರಂಭಿಸಬೇಕು. ರೈತರಿಗೆ ಬೆಳೆ ವಿಮೆ ಸೌಲಭ್ಯ ಕಲ್ಪಿಸಬೇಕು, ಮಹಾರಾಷ್ಟ್ರಕ್ಕೆ ಆದಷ್ಟು ಬೇಗ ಜಿಎಸ್‌ಟಿ ರಿಟರ್ನ್ಸ್ ಮೊತ್ತವನ್ನು ನೀಡಬೇಕು ಎಂದು ಸಿಎಂ ಉದ್ಧವ್‌ ಠಾಕ್ರೆ ಕೋರಿದ್ದಾರೆ.

ಅಧಿಕಾರ ವಿಕೇಂದ್ರೀಕರಣ: ಬೇರೆ ಬೇರೆ ರಾಜ್ಯಗಳು ಬೇರೆ ಬೇರೆ ರೀತಿಯ ಸವಾಲುಗಳನ್ನು ಎದುರಿಸುತ್ತಿವೆ. ಹೀಗಾಗಿ ಲಾಕ್‌ ಡೌನ್‌ ಮಾರ್ಗಸೂಚಿಯ ವಿಚಾರದಲ್ಲಿ ತಮಗೆ ಅನುಕೂಲವಾಗುವಂತೆ ನಿಯಮಗಳನ್ನು ಬದಲಾಯಿಸಲು ರಾಜ್ಯಗಳಿಗೆ ಸ್ವಾತಂತ್ರ್ಯ ನೀಡಬೇಕು ಎಂದು ಕೇರಳ ಸಿಎಂ ಪಿಣರಾಯಿ ವಿಜಯನ್‌ ಕೋರಿಕೊಂಡಿದ್ದಾರೆ.

ತಮ್ಮ ರಾಜ್ಯಗಳ ಪರಿಸ್ಥಿತಿಗೆ ಅನುಗುಣವಾಗಿ ಸಾರ್ವಜನಿಕ ಸಾರಿಗೆಗೆ ಷರತ್ತುಬದ್ಧ ಅನುಮತಿ ನೀಡಲು, ಕೆಂಪು ವಲಯ ಹೊರತು ಪಡಿಸಿ ಉಳಿದೆಡೆ ಮೆಟ್ರೋ ರೈಲು ಸಂಚಾರಕ್ಕೂ ಅವಕಾಶ ಕಲ್ಪಿಸಲು, ಪ್ರಯಾಣಿಕರ ಸಂಖ್ಯೆಗೆ ನಿರ್ಬಂಧ ಹೇರುವ ಮೂಲಕ ತ್ರಿಚಕ್ರ ವಾಹನಗಳ ಸಂಚಾರಕ್ಕೆ ಅನುಮತಿ ನೀಡಲು ಬಿಡಬೇಕು ಎಂದು ಅವರು ಹೇಳಿದ್ದಾರೆ.

ಲಾಕ್‌ ಡೌನ್‌ ಬೇಕೋ, ಬೇಡವೋ?

3ನೇ ಹಂತದ ಲಾಕ್‌ ಡೌನ್‌ ಅವಧಿ ಪೂರ್ಣಗೊಳ್ಳುವ ದಿನ ಸಮೀಪಿಸುತ್ತಿರುವಂತೆಯೇ ನಿರ್ಬಂಧ ವಿಸ್ತರಿಸಬೇಕೋ, ಬೇಡವೋ ಎಂಬ ಬಗ್ಗೆಯೂ ಭಿನ್ನ ಭಿನ್ನ ಅಭಿಪ್ರಾಯಗಳು ಕೇಳಿಬಂದಿವೆ. ಮಹಾರಾಷ್ಟ್ರ, ಪಂಜಾಬ್‌, ತೆಲಂಗಾಣ, ಅಸ್ಸಾಂ, ಬಿಹಾರ, ಪಶ್ಚಿಮ ಬಂಗಾಲ ಸರಕಾರಗಳು ಲಾಕ್‌ ಡೌನ್‌ ವಿಸ್ತರಣೆಗೆ ಒಲವು ವ್ಯಕ್ತಪಡಿಸಿದರೆ, ಗುಜರಾತ್‌, ಆಂಧ್ರ ಸೇರಿದಂತೆ ಕೆಲ ರಾಜ್ಯಗಳು ವಿಸ್ತರಣೆ ಬೇಡ ಎಂದು ಹೇಳಿವೆ.

ಲಾಕ್‌ ಡೌನ್‌ ಹೊರತಾಗಿ ಕೋವಿಡ್ ವಿರುದ್ಧ ಹೋರಾಡಲು ಸಾಧ್ಯವಿಲ್ಲ ಎಂದು ಮಹಾರಾಷ್ಟ್ರ ಸಿಎಂ ಉದ್ಧವ್‌ ಠಾಕ್ರೆ ಅಭಿಪ್ರಾಯಪಟ್ಟರೆ, ಎಲ್ಲರೂ ಒಗ್ಗಟ್ಟಾಗಿ ಹೋರಾಡಬೇಕೆಂದರೆ ನಿರ್ಬಂಧ ವಿಸ್ತರಣೆ ಅಗತ್ಯ ಎಂದು ಪ.ಬಂಗಾಲ ಸಿಎಂ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಲಾಕ್‌ ಡೌನ್‌ ಅನ್ನೂ ಇನ್ನೂ 2 ವಾರಗಳ ಕಾಲ ವಿಸ್ತರಣೆ ಮಾಡಬೇಕು ಎಂದು ಅಸ್ಸಾಂ ಸಿಎಂ ಸರ್ವಾನಂದ ಸೊನೊವಾಲ್‌ ಸಲಹೆ ನೀಡಿದ್ದಾರೆ. ಬಿಹಾರ ಸಿಎಂ ನಿತೀಶ್‌ ಕುಮಾರ್‌ ಕೂಡ ಇದೇ ಧ್ವನಿಯಲ್ಲಿ ಮಾತನಾಡಿದ್ದು, ನಿರ್ಬಂಧ ತೆರವುಗೊಳಿಸಿದರೆ ಭಾರೀ ಸಂಖ್ಯೆಯ ಜನರು ರಾಜ್ಯಕ್ಕೆ ಬರಲಾರಂಭಿಸುತ್ತಾರೆ. ಆಗ ಕೋವಿಡ್ ವ್ಯಾಪಿಸುವ ಅಪಾಯ ಹೆಚ್ಚಾಗುತ್ತದೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next