ಬೆಂಗಳೂರು: “ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನೇ ಕಳುಹಿಸದಿದ್ದರೆ, ಸರ್ಕಾರವಾದರೂ ಏನು ಮಾಡೀತು? ಮಕ್ಕಳೇ ಬಾರದಿದ್ದಾಗ, ಖಾಲಿ ಶಾಲೆಗಳನ್ನು ಇಟ್ಟುಕೊಂಡು ಏನು ಮಾಡುವುದು’ ಎಂದು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ.ಮನು ಬಳಿಗಾರ್ ಪ್ರಶ್ನಿಸಿದರು.
ನಗರದ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಹಮ್ಮಿಕೊಂಡಿದ್ದ ಅಮೆರಿಕದ ಕ್ಯಾಲಿಫೋರ್ನಿಯಾದ ನಾರಾಯಣಾನಂದ ಸ್ವಾಮೀಜಿ ರಚಿಸಿದ “ಸಾಧನಾಕೃತಿ’ ಲೋಕಾರ್ಪಣೆ ಮಾಡಿ ಮಾತನಾಡಿ, ಗ್ರಾಮದಿಂದ ರಾಜ್ಯಮಟ್ಟದವರೆಗೂ ಕನ್ನಡವು ಸಮಸ್ಯೆ ಎದುರಿಸುತ್ತಿದೆ. ಸರ್ಕಾರಿ ಶಾಲೆಗಳಿಗೆ ಮಕ್ಕಳೇ ಬರುತ್ತಿಲ್ಲ.
ಹೀಗಿರುವಾಗ ಸರ್ಕಾರವನ್ನು ದೂಷಿಸುವುದು ಸರಿಯಲ್ಲ. ನಾನು ಮುಖ್ಯಮಂತ್ರಿ ಕುಮಾರಸ್ವಾಮಿ ಪರ ಬ್ಯಾಟಿಂಗ್ ಮಾಡುತ್ತಿಲ್ಲ. ಆದರೆ, ಸರ್ಕಾರ ಖಾಲಿ ಶಾಲೆಗಳನ್ನು ಇಟ್ಟುಕೊಂಡು ಏನು ಮಾಡಬೇಕು ಎಂದರು. ಈ ಹಿನ್ನೆಲೆ ಒಂದನೇ ತರಗತಿಯಿಂದ ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಕಲಿಸಬೇಕು ಎಂದು ಮುಖ್ಯಮಂತ್ರಿಗಳಿಗೆ ಈ ಹಿಂದೆಯೇ ಮನವಿ ಸಲ್ಲಿಸಲಾಗಿತ್ತು.
ಈಗ ಮತ್ತೂಮ್ಮೆ ಈ ಸಂಬಂಧ ಮನವಿ ಸಲ್ಲಿಸಲಾಗಿದ್ದು, ಶಾಲೆಗಳ ಗುಣಮಟ್ಟ ಸುಧಾರಣೆಗೂ ಒತ್ತಾಯಿಸಲಾಗಿದೆ. ಇದಕ್ಕೆ ಪೂರಕ ಸ್ಪಂದನೆ ದೊರಕಿದೆ. 40-50 ವರ್ಷಗಳ ಹಿಂದಿನ ಸ್ಥಿತಿಗೂ ಈಗಿನ ಸ್ಥಿತಿಗೂ ಸಾಕಷ್ಟು ವ್ಯತ್ಯಾಸ ಇದೆ. ಇದೆಲ್ಲದರ ಬಗ್ಗೆಯೂ ಯೋಚನೆ ಮಾಡಬೇಕಾಗಿದೆ ಎಂದು ಸೂಚ್ಯವಾಗಿ ಹೇಳಿದರು.
ರಾಜ್ಯಸಭೆ ಸದಸ್ಯ ಎಲ್. ಹನುಮಂತಯ್ಯ, ತುಮಕೂರಿನ ಡಾ.ಹನುಮಂತನಾಥ ಸ್ವಾಮೀಜಿ, ಪರಿಷತ್ತಿನ ಗೌರವಾಧ್ಯಕ್ಷ ವ.ಚ. ಚನ್ನೇಗೌಡ, ಕುವೆಂಪು ಪ್ರಕಾಶ ಇದ್ದರು.