Advertisement
ನಮ್ಮಲ್ಲಿನ ಸೃಜನಶೀಲತೆಯ ಅರಿವೇ ನಮಗಿಲ್ಲದ ಕಾರಣ ಎಲ್ಲದರಲ್ಲೂ ಅಪೂರ್ಣತೆಯ ಭಾವ, ಪ್ರತಿಯೊಂದಕ್ಕೂ ಕಿರುಚಾಟ, ಅರೆಬರೆ ಕೆಲಸ ಇವೆಲ್ಲವೂ ನೋಡುಗರಿಗೆ ನಿಮ್ಮ ಸೃಜನಾತ್ಮಕತೆ ಎಷ್ಟಿದೆ ಎಂಬ ಪ್ರಶ್ನೆ ಹುಟ್ಟಲು ಕಾರಣವಾಗುತ್ತದೆ. ನಾನು ಒಂಟಿಯಲ್ಲ. ಜಗತ್ತೇ ನನ್ನ ಜತೆ ಇದೆ ಎಂಬ ಭಾವ ನಮ್ಮಲ್ಲಿರಬೇಕು. ಭಗವಂತ ನೀಡಿದ ಸೃಜನಾತ್ಮಕತೆಯ ಸದ್ವಿನಿಯೋಗ ಆಗಬೇಕು. ಅದಾದಾಗ ಮಾತ್ರ ನಾವು ಮತ್ತು ನಮ್ಮ ಕೆಲಸಗಳೆರಡೂ ಪರಿಪೂರ್ಣವಾಗಲು ಸಾಧ್ಯ. ಮನಸ್ಸು ಗೃಹಿಸುವಷ್ಟು ಪರಿಪೂರ್ಣತೆಯನ್ನು ನಾವು ಸಾಧಿಸುವುದು ಸುಲಭವಾಗಿಲ್ಲ. ಪತ್ರಿಕೆ ಓದಿದ ಬಳಿಕ ಅಥವಾ ಸಿನೆಮಾ ನೋಡಿದ ಬಳಿಕ ನಿಮಗೆ ಇನ್ನೂ ಏನೋ ಇಲ್ಲಿ ಬೇಕಿತ್ತು ಎಂದು ಎನಿಸಿಯೇ ಎನಿಸುತ್ತದೆ. ಇದರಂತೆಯೇ ನಿಮ್ಮ ಕೆಲಸಗಳೂ ಕೂಡ. ನೆನಪಿಡಿ ಜಗತ್ತಿನಲ್ಲಿ ಯಾರೂ ಪರಿಪೂರ್ಣರಲ್ಲ.
ಸೋತ ಮಾತ್ರಕ್ಕೆ ಜೀವನ ಮುಗಿಯಲಿಲ್ಲ. ಪ್ರತೀ ಅಂತ್ಯವೂ ಹೊಸ ಆರಂಭಕ್ಕೆ ಬುನಾದಿ. ಸೋಲು ನಿಮ್ಮ ಮುಂದಿನ ಗೆಲುವಿಗೆ ಪಾಠವಾಗಬೇಕೇ ಹೊರತು ಅಡ್ಡಿಯಾಗಬಾರದು. ಹೀಗಾಗಿಯೇ ಸೋಲನ್ನು ಸಂಭ್ರಮಿಸಲು ಕಲಿಯಿರಿ. ಭಗವಂತನ ಅನುಗ್ರಹವಿಲ್ಲ ಹುಲ್ಲು ಕಡ್ಡಿಯೂ ಹಂದಾಡದು ಎಂಬ ಮಾತಿದೆ. ಹೀಗಾಗಿ ಶಕ್ತಿ ಮೀರಿ ಪ್ರತಿಯೊಂದನ್ನೂ ಪ್ರಯತ್ನಿಸಿ. ಫಲಾಫಲವನ್ನು ಭಗವಂತನ ಅನುಗ್ರಹಕ್ಕೆ ಬಿಟ್ಟುಬಿಡಿ. ಒಂದೊಮ್ಮೆ ನೀವು ಸೋತರೆ ಭಗವಂತನ ಅನುಗ್ರಹ ನಿಮ್ಮ ಮೇಲಿಲ್ಲ ಎಂದಲ್ಲ. ಬದಲಾಗಿ ಇದಕ್ಕಿಂತ ದೊಡ್ಡ ಅವಕಾಶವನ್ನು ಭಗವಂತ ನಿಮಗಾಗಿ ನೀಡಲಿದ್ದಾನೆ ಎಂದತರ್ಥ. ತಪ್ಪುಗಳಾದಾಗ ಅಥವಾ ನಿಮ್ಮ ಪ್ರಯತ್ನದಲ್ಲಿ ಸೋಲುಂಡಾಗ ನಿಮ್ಮನ್ನು ನೀವೇ ಕ್ಷಮಿಸುವ ಅಭ್ಯಾಸ ಮಾಡಕೊಳ್ಳಿ. ಒಮ್ಮೆ ಜೋರಾಗಿ ನಕ್ಕು ನಿಮ್ಮ ನೋವು ಮರೆತುಬಿಡಿ. ಸೋಲುಗಳು ಸಾಧನೆಯ ಹಾದಿಯಲ್ಲಿ ಸಿಗುವ ಹಂತಗಳಷ್ಟೆ. ಇವೇ ನಮ್ಮ ಮುಂದಿನ ಗೆಲುವಿಗಾಗಿ ನಡೆದಿರುವ ತಾಲೀಮುಗಳು ಎಂದು ಭಾವಿಸಿ. ಉತ್ತಮವಾಗಿ ಕೆಲಸ ಮಾಡಲಾಗದಿದ್ದರೆ ಬಿಡಿ, ಮುಂದೆ ಅತ್ಯುತ್ತಮವಾಗಿ ಕೆಲಸ ಮಾಡುವ ಸಂಕಲ್ಪ ತೊಡೋಣ.
Related Articles
Advertisement