Advertisement

ವಲಸೆಗೆ ವಿಘ್ನ; ಕಾಂಗ್ರೆಸ್‌ಗೆ ಜಿಗಿಯಲು ಸಿದ್ಧತೆ ನಡೆಸಿದವರಲ್ಲಿ ಆತಂಕ

08:59 PM Mar 06, 2023 | Team Udayavani |

ಬೆಂಗಳೂರು: ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಪಕ್ಷಾಂತರಕ್ಕೆ ಹಾಲಿ ಶಾಸಕರು ಸಜ್ಜಾಗುತ್ತಿರುವ ಬೆನ್ನಲ್ಲೇ ಆಯಾ ಕ್ಷೇತ್ರಗಳ ಟಿಕೆಟ್‌ ಆಕಾಂಕ್ಷಿಗಳ ಆಕ್ರೋಶ ಭುಗಿಲೆದ್ದಿದೆ.

Advertisement

ವಲಸೆಗೆ ಪ್ರಾರಂಭದಲ್ಲೇ ವಿಘ್ನ ಎದುರಾಗಿರುವುದು ಪಕ್ಷಾಂತರಕ್ಕೆ ಸಿದ್ಧತೆ ನಡೆಸಿದ್ದವರಲ್ಲಿ ತಮ್ಮ ತಮ್ಮ ಕ್ಷೇತ್ರಗಳಲ್ಲೂ ಇದೇ ರೀತಿಯ ಸಮಸ್ಯೆ ಎದುರಾಗಬಹುದು ಎಂಬ ಆತಂಕ ಮೂಡಿಸಿದೆ.

ಕಳೆದ ಚುನಾವಣೆಯಲ್ಲಿ ಅವರ ವಿರುದ್ಧ ಹೋರಾಟ ಮಾಡಿ ಇದೀಗ ಅವರ ಪರ ಕೆಲಸ ಮಾಡುವುದು ಹೇಗೆ ಎಂಬುದು ಅಲ್ಲಿನ ಕಾರ್ಯಕರ್ತರು ಹಾಗೂ ಮುಖಂಡರ ವಾದವಾಗಿದೆ.

ಕೆ.ಆರ್‌.ಪೇಟೆ ಕ್ಷೇತ್ರದಲ್ಲಿ ಸಚಿವ ನಾರಾಯಣಗೌಡರ ಕಾಂಗ್ರೆಸ್‌ ಪ್ರವೇಶ ಪ್ರಯತ್ನದ ಬೆನ್ನಲ್ಲೇ ಅಲ್ಲಿನ ಟಿಕೆಟ್‌ ಆಕಾಂಕ್ಷಿಗಳು, ನಮ್ಮ ಪಕ್ಷದಲ್ಲಿ ಚುನಾವಣೆಗೆ ಸ್ಪರ್ಧೆ ಮಾಡುವ ಗಂಡಸರು ಇಲ್ಲವೇ? ಬೇರೆ ಪಕ್ಷದಿಂದ ಕರೆದುಕೊಂಡು ಬರಬೇಕೇ ಎಂದು ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷರಿಗೆ ಬಳೆ-ಸೀರೆ ಕೊಟ್ಟು ಪ್ರತಿಭಟಿಸುವುದರ ಜತೆಗೆ, ಅವರ ಕಾರಿಗೂ ಮೊಟ್ಟೆ ಎಸೆದು ಆಕ್ರೋಶ ಹೊರಹಾಕಿದ್ದಾರೆ. ಇದರೊಂದಿಗೆ ನಾರಾಯಣಗೌಡರು ಈಗ ಅಕ್ಷರಶಃ ಇಕ್ಕಟ್ಟಿಗೆ ಸಿಲುಕಿದ್ದಾರೆ.

ಕೆ.ಆರ್‌.ಪೇಟೆಯಲ್ಲಿ ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್‌, ಆರ್‌.ವಿಜಯ್‌, ಬಿ.ಪ್ರಕಾಶ್‌, ಸುರೇಶ್‌, ಎಂ.ಡಿ.ಮಂಜುನಾಥ್‌, ಬಿ.ನಾಗೇಂದ್ರ ಟಿಕೆಟ್‌ ಆಕಾಂಕ್ಷಿಗಳಾಗಿದ್ದು, ಎಲ್ಲರೂ ಪಕ್ಷದ ನಾಯಕರ ವಿರುದ್ಧ ಮುಗಿಬಿದ್ದಿದ್ದಾರೆ. ಮಾರ್ಚ್‌ 13ರಂದು ಕೆ.ಆರ್‌.ಪೇಟೆಗೆ ಪ್ರಜಾಧ್ವನಿ ಯಾತ್ರೆ ಆಗಮಿಸಲಿದ್ದು, ಪೂರ್ವಭಾವಿ ಸಿದ್ಧತೆ ಚರ್ಚೆಗೆ ಕರೆದಿದ್ದ ಸಭೆಯಲ್ಲಿ ಟಿಕೆಟ್‌ ವಿಚಾರದಲ್ಲೇ ಪ್ರಮುಖವಾಗಿ ಗಲಾಟೆ ನಡೆದಿದೆ.

Advertisement

ನಾರಾಯಣಗೌಡ ಅವರಿಗೆ ಯಾವುದೇ ಕಾರಣಕ್ಕೂ ಕಾಂಗ್ರೆಸ್‌ಗೆ ಪ್ರವೇಶ ಕೊಡಬಾರದು. ಒಂದೊಮ್ಮೆ ಅವರಿಗೆ ಟಿಕೆಟ್‌ ಕೊಟ್ಟರೆ ಸೋಲಿಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

ಅವರು ಹೋಗ್ತಾರೆ, ನಾವು ಹೋಗಲ್ಲ
ಇತ್ತ, ಹಾವೇರಿಯಲ್ಲಿ ಮಾತನಾಡಿರುವ ಕೃಷಿ ಸಚಿವ ಬಿ.ಸಿ.ಪಾಟೀಲ್‌ ಅವರು ನಾರಾಯಣಗೌಡ ಹೊರತುಪಡಿಸಿ ನಾವ್ಯಾರೂ ಬೇರೆ ಪಕ್ಷಕ್ಕೆ ಹೋಗುವುದಿಲ್ಲ ಎಂದು ಹೇಳುವ ಮೂಲಕ ನಾರಾಯಣಗೌಡರ ನಡೆಯನ್ನು ಖಚಿತಪಡಿಸಿದ್ದಾರೆ. ಇತ್ತೀಚೆಗಷ್ಟೇ ನಾರಾಯಣಗೌಡರು ಸಹ ಕಾಂಗ್ರೆಸ್‌ನಿಂದ ನನಗೆ ಆಹ್ವಾನ ಇರುವುದು ನಿಜ ಎಂದು ಹೇಳಿದ್ದರು. ಇದು ನಾರಾಯಣಗೌಡರು ಕಾಂಗ್ರೆಸ್‌ ಸೇರುವ ಲಕ್ಷಣಗಳು.

ಚರ್ಚೆ ನಡೆದಿಲ್ಲ
ಈ ಮಧ್ಯೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಮಾತನಾಡಿ, ಸಚಿವ ನಾರಾಯಣಗೌಡರ ಕಾಂಗ್ರೆಸ್‌ ಸೇರ್ಪಡೆ ವಿಚಾರವಾಗಿ ಕೆ.ಆರ್‌ ಪೇಟೆಯಲ್ಲಿ ಗಲಾಟೆ ವಿಚಾರವಾಗಿ ಪ್ರತಿಕ್ರಿಯಿಸಿ, ನಾರಾಯಣ ಗೌಡರು ಕಾಂಗ್ರೆಸ್‌ ಸೇರ್ಪಡೆ ವಿಚಾರವಾಗಿ ನಮ್ಮ ಜತೆ ಮಾತನಾಡಿಲ್ಲ. ಯಾರು ಯಾರ ಏಜೆಂಟರಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಗೊತ್ತಿದೆ. ನಮ್ಮ ಪಕ್ಷದಲ್ಲಿನ ಗೊಂದಲ ನಾವು ಸರಿಪಡಿಸಿಕೊಳ್ಳುತ್ತೇವೆ ಎಂದು ತಿಳಿಸಿದರು.

ಸೋಮಣ್ಣ ಮುನಿಸು
ವಸತಿ ಸಚಿವ ವಿ.ಸೋಮಣ್ಣ ಅವರ ಮುನಿಸು ಮುಂದುವರಿದಿದ್ದು ಸೋಮವಾರ ತಮ್ಮ ಕ್ಷೇತ್ರದಲ್ಲಿ ಸಾಗಿದ ವಿಜಯಸಂಕಲ್ಪ ರಥಯಾತ್ರೆಯನ್ನು ಮಾರ್ಗ ಮಧ್ಯೆಯೇ ಮೊಟಕುಗೊಳಿಸಿ ನಿರ್ಗಮಿಸಿದ್ದು ನಾನಾ ವ್ಯಾಖ್ಯಾನಗಳಿಗೆ ಕಾರಣವಾಗಿದೆ. ಆರ್‌.ಅಶೋಕ್‌ ನೇತೃತ್ವದ ವಿಜಯಸಂಕಲ್ಪ ಯಾತ್ರೆ ಗೋವಿಂದರಾಜನಗರ ವಿಧಾನಸಭೆ ಕ್ಷೇತ್ರದಲ್ಲಿ ಸಂಚರಿಸಿತು. ಸಂಸದ ತೇಜಸ್ವಿ ಸೂರ್ಯ ಸಹ ರಥಯಾತ್ರೆಯಲ್ಲಿದ್ದರು.

ಪೂರ್ವನಿಗದಿಯಂತೆ ಮಾಗಡಿ ರಸ್ತೆ ಟೋಲ್‌ಗೇಟ್‌ನಿಂದ ನಾಯಂಡಹಳ್ಳಿವರೆಗೆ ರಥಯಾತ್ರೆ ಸಾಗಿತು. ಆದರೆ, ವಿ.ಸೋಮಣ್ಣ ಅವರು ಟೋಲ್‌ಗೇಟ್‌ನಿಂದ ನಾಗರಭಾವಿ ವೃತ್ತದವರೆಗೂ ಬಂದು ಅಲ್ಲಿಂದ ನಿರ್ಗಮಿಸಿದರು. ವಿ.ಸೋಮಣ್ಣ ಅವರ ಮಾರ್ಗಮಧ್ಯೆ ನಿರ್ಗಮನ ಬಿಜೆಪಿ ವಲಯದಲ್ಲಿ ನಾನಾ ಊಹಾಪೋಹಗಳಿಗೆ ಕಾರಣವಾಗಿದೆ.

ಚಾಮರಾಜನಗರದಿಂದ ಆರಂಭಗೊಂಡ ವಿಜಯಸಂಕಲ್ಪ ರಥಯಾತ್ರೆಗೂ ಉಸ್ತುವಾರಿ ಸಚಿವರೂ ಆಗಿದ್ದ ವಿ.ಸೋಮಣ್ಣ ಅವರು ಗೈರು ಹಾಜರಾಗಿದ್ದರು. ಇದೀಗ ತಮ್ಮ ಕ್ಷೇತ್ರದಲ್ಲಿ ನಡೆದ ಯಾತ್ರೆಯಲ್ಲಿ ಮಾರ್ಗಮಧ್ಯೆಯೇ ನಿರ್ಗಮಿಸಿದ್ದಾರೆ. ತಮ್ಮನ್ನು ಪಕ್ಷದಲ್ಲಿ ಕಡೆಗಣಿಸಲಾಗುತ್ತಿದೆ ಎಂಬ ಸೋಮಣ್ಣ ಅವರ ಮುನಿಸು ಇನ್ನೂ ದೂರವಾಗಿಲ್ಲ ಎಂಬುದಕ್ಕೆ ಇದು ಸಾಕ್ಷಿಯಾಗಿದೆ.

ಕಾಂಗ್ರೆಸ್‌ ಸೇರ್ಪಡೆ ಬಗ್ಗೆ ವಿ.ಸೋಮಣ್ಣ ಎಲ್ಲೂ ಮಾತನಾಡಿಲ್ಲ. ಆದರೆ, ಅವರ ಮೌನ ಬಿಜೆಪಿ ನಾಯಕರನ್ನು ಕಂಗೆಡಿಸಿದೆ. ಈ ನಡುವೆ ಖುದ್ದು ಆರ್‌ಎಸ್‌ಎಸ್‌ ನಾಯಕರು ಸೋಮಣ್ಣ ಮನವೊಲಿಕೆಗೆ ಮುಂದಾಗಿದ್ದಾರೆ. ದೂರವಾಣಿ ಮೂಲಕ ಮಾತನಾಡಿ, ಯಾವುದೇ ಆತುರದ ನಿರ್ಧಾರ ಬೇಡ. ಎಲ್ಲವೂ ಸರಿಪಡಿಸೋಣ ಎಂದು ಹೇಳಿದ್ದಾರೆ. ಅವರಿಗೂ ಸೋಮಣ್ಣ , ನಾನು ಪಕ್ಷ ಬಿಡುವುದಿಲ್ಲ, ಕ್ಷೇತ್ರಕ್ಕೆ ಸೀಮಿತವಾಗಿರಿ ಎನ್ನುವುದಾದರೆ ಹಾಗೇ ಇರುತ್ತೇನೆ ಬಿಡಿ ಎಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.

ವದಂತಿಗೆ ಉತ್ತರಿಸಲ್ಲ
ವದಂತಿಗಳಿಗೆ ನಾನು ಉತ್ತರಿಸುವುದಿಲ್ಲ. ನಾನೆಲ್ಲೂ ಕಾಂಗ್ರೆಸ್‌ಗೆ ಹೋಗುತ್ತೇನೆ ಎಂದು ಹೇಳಿಲ್ಲ. ಹೀಗಿರುವಾಗ ವದಂತಿಗಳಿಗೆ ಯಾಕೆ ಉತ್ತರ ಕೊಡಲಿ?
– ವಿ.ಸೋಮಣ್ಣ, ವಸತಿ ಸಚಿವ

ಸೋಮಣ್ಣ ಚರ್ಚಿಸಿಲ್ಲ
ಕಾಂಗ್ರೆಸ್‌ ಸೇರ್ಪಡೆ ಬಗ್ಗೆ ಸೋಮಣ್ಣ ಅವರು ನಮ್ಮ ಮಾತನಾಡಿಲ್ಲ. ಕನಕಪುರದಲ್ಲಿ ವಸತಿ ಇಲಾಖೆಯ ಕಾರ್ಯಕ್ರಮ ಉದ್ಘಾಟನೆಗೆ ಆಹ್ವಾನ ನೀಡಿ ಪತ್ರ ಬರೆದಿದ್ದಾರೆ. ಸಮಯ ನೋಡಿಕೊಂಡು ಕಾರ್ಯಕ್ರಮದಲ್ಲಿ ಭಾಗವಹಿಸಲು ಪ್ರಯತ್ನಿಸುತ್ತೇನೆ.
-ಡಿ.ಕೆ.ಶಿವಕುಮಾರ್‌, ಕೆಪಿಸಿಸಿ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next