Advertisement

Politics: ಲೋಕ ಸಮರ; ನಾಯಕರ ನಿದ್ದೆಗೆಡಿಸಿದ ಪಕ್ಷಾಂತರ ಪರ್ವ!

05:36 PM Apr 12, 2024 | Team Udayavani |

ಚಿಕ್ಕಬಳ್ಳಾಪುರ: ತೀವ್ರ ಜಿದ್ದಾಜಿದ್ದಿಗೆ ಕಾರಣವಾಗಿರುವ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಚುನಾವಣೆ ಯಲ್ಲಿ ಇದೀಗ ಪಕ್ಷಾಂತರ ಪರ್ವ ರಾಜಕೀಯ ಪಕ್ಷಗಳಿಗೆ ನಿದ್ದೆಗೆಡಿಸಿದ್ದು, ಪಕ್ಷಗಳಲ್ಲಿರುವ ಮುಖಂಡರು, ಕಾರ್ಯಕರ್ತರನ್ನು ಹಿಡಿದಿಟ್ಟುಕೊಳ್ಳುವ ಸವಾಲು ಎದುರಾಗಿದೆ.

Advertisement

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ರಾಜಕೀಯ ಇತಿಹಾಸದಲ್ಲಿ ಮೊದಲ ಬಾರಿಗೆ ಕಾಂಗ್ರೆಸ್‌ ಹಾಗೂ ಬಿಜೆಪಿ, ಜೆಡಿಎಸ್‌ ಮೈತ್ರಿ ಅಭ್ಯರ್ಥಿಗಳ ನಡುವೆ ತೀವ್ರ ಪೈಪೋಟಿಗೆ ಚುನಾವಣಾ ಅಖಾಡ ಸಾಕ್ಷಿಯಾಗಿದ್ದು ಇದರ ಪರಿಣಾಮ ಪಕ್ಷಾಂತರ ಕೂಡ ರಾಜಕೀಯ ಪಕ್ಷಗಳಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಲೋಕಸಭಾ ಚುನಾವಣೆಯ ಮತದಾನಕ್ಕೆ ಕೇವಲ 16 ದಿನ ಮಾತ್ರ ಬಾಕಿ ಇದ್ದು ಬಹಿರಂತ ಪ್ರಚಾರಕ್ಕೆ ಕೇವಲ 13 ದಿನ ಮಾತ್ರ ಇದೆ. ಏ.24ಕ್ಕೆ ಬಹಿರಂತ ಪ್ರಚಾರ ತೆರೆ ಕಾಣಲಿದೆ. ಇದರ ನಡುವೆ ಕ್ಷೇತ್ರದಲ್ಲಿ ಮತದಾರರ ಮನವೊಸಲು ಪೈಪೋಟಿಗೆ ಇಳಿದಿರುವ ಪಕ್ಷಗಳು ಗ್ರಾಮ, ಹೋಬಳಿ, ತಾಲೂಕು, ಜಿಲ್ಲಾ ಮಟ್ಟದಲ್ಲಿ ಮತ ತಂದುಕೊಡಬಲ್ಲ ರಾಜಕೀಯ ಪಕ್ಷಗಳ ಮುಖಂಡರಿಗೆ, ನಾಯಕರಿಗೆ ಪಕ್ಷಗಳು ಗಾಳ ಹಾಕಿ ವಿವಿಧ ಆಸೆ, ಅಮಿಷಗಳನ್ನು ನೀಡಿ ತಮ್ಮ ಪಕ್ಷಗಳ ಕಡೆಗೆ ಸೆಳೆದುಕೊಳ್ಳುವ ಮೂಲಕ ಲೋಕಸಭಾ ಕ್ಷೇತ್ರದಲ್ಲಿ ಪಕ್ಷಾಂತರ ಪರ್ವ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ.

ಬಿಜೆಪಿ-ಜೆಡಿಎಸ್‌ ಮೈತ್ರಿ ಹಾಗೂ ಕಾಂಗ್ರೆಸ್‌ ಪಕ್ಷಗಳು ಪಕ್ಷಾಂತರಕ್ಕೆ ಒತ್ತು ಕೊಟ್ಟಿದ್ದು, ಮತಗಟ್ಟೆಗಳಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗೆ ಹೆಚ್ಚು ಮತ ತಂದುಕೊಡಬಲ್ಲ ನಾಯಕರನ್ನು ಆಪರೇಷನ್‌ ಮೂಲಕ ಪಕ್ಷಗಳಿಗೆ ಕರೆ ತರುವ ಕೆಲಸ ಮಾಡಲಾಗುತ್ತಿದ್ದು. ಇದಕ್ಕಾಗಿ ರಾಜಕೀಯ ಪಕ್ಷಗಳಲ್ಲಿ ಕೆಲವೊಂದು ತಂಡಗಳು ಸಕ್ರಿಯವಾಗಿ ಪಕ್ಷಾಂತರ ಮಾಡಿಸುವ ಕಾಯಕದಲ್ಲಿ ಸದ್ದಿಲ್ಲದೇ ತೊಡಗಿಸಿಕೊಂಡಿವೆ.

ಪಕ್ಷಾಂತರಗೊಂಡ ಪ್ರಮುಖ ನಾಯಕರು, ಮುಖಂಡರು : ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನಲ್ಲಿ ಗುರುತಿಸಿಕೊಂಡಿದ್ದ ಚಿಕ್ಕಬಳ್ಳಾಪುರದ ಮಾಜಿ ಶಾಸಕ ಎಂ.ಶಿವಾನಂದ್‌ ರಕ್ಷಾ ರಾಮಯ್ಯಗೆ ಟಿಕೆಟ್‌ ಘೋಷಣೆಯಾಗುತ್ತಿದ್ದಂತೆ ಬಿಜೆಪಿ ಪಕ್ಷ ಸೇರ್ಪಡೆಗೊಂಡು ಅಚ್ಚರಿ ಮೂಡಿಸಿದರೆ, ಡಾ.ಕೆ.ಸುಧಾಕರ್‌, ಬಿಜೆಪಿ-ಜೆಡಿಎಸ್‌ ಮೈತ್ರಿ ಆಗಿರುವುದನ್ನು ವಿರೋಧಿಸಿ ಚಿಕ್ಕಬಳ್ಳಾಪುರದ ಜೆಡಿಎಸ್‌ನ ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡ ಜೆಡಿಎಸ್‌ ತೊರೆದು ಕಾಂಗ್ರೆಸ್‌ ಸೇರಿದ್ದಾರೆ.

ಕಳೆದ ಬಾರಿ ಕಾಂಗ್ರೆಸ್‌ ವಿರುದ್ಧ ಬಂಡಾಯದ ಬಾವುಟ ಹಾರಿಸಿದ್ದ ಶಿಡ್ಲಘಟ್ಟ ಕ್ಷೇತ್ರದ ಸಮಾಜ ಸೇವಕ ಪುಟ್ಟು ಆಂಜಿನಪ್ಪ, ಜೆಡಿಎಸ್‌ ಜಿಲ್ಲಾಧ್ಯಕ್ಷ ಕೆ.ಎಂ. ಮುನೇಗೌಡ ಕಾಂಗ್ರೆಸ್‌ ಗೂಡು ಸೇರಿದ್ದಾರೆ.

Advertisement

ಕಳೆದ ಬಾರಿ ಗೌರಿಬಿದನೂರಲ್ಲಿ ಪಕ್ಷೇತರ ಅಭ್ಯರ್ಥಿ ಕೆ.ಎಚ್‌.ಪುಟ್ಟಸ್ವಾಮಿಗೌಡ ಪರ ಬ್ಯಾಟಿಂಗ್‌ ಬೀಸಿದ್ದ ಜಿಪಂ ಮಾಜಿ ಅಧ್ಯಕ್ಷ ಹೆಚ್‌.ವಿ.ಮಂಜುನಾಥ ಸೇರಿ ಹಲವು ಮಂದಿ ಕೆಎಚ್‌ಪಿ ಬಣ ತೊರೆದು ಮತ್ತೆ ಕಾಂಗ್ರೆಸ್‌ ಸೇರಿದ್ದಾರೆ.

ಅಲ್ಲದೇ ಕ್ಷೇತ್ರದ ವ್ಯಾಪ್ತಿಯಲ್ಲಿ ರಾಜಕೀಯ ಪಕ್ಷಗಳ ಮುಖಂಡರು, ಕಾರ್ಯಕರ್ತರು, ನಗರಸಭಾ ಸದಸ್ಯರು ಕೂಡ ಪಕ್ಷಾಂತರ ಪರ್ವಕ್ಕೆ ಮುಂದಾಗುವ ಮೂಲಕ ತಮ್ಮ ಪಕ್ಷಗಳಿಗೆ ಬಿಸಿ ಮುಟ್ಟಿಸಿದ್ದಾರೆ.

ಕಾಗತಿ ನಾಗರಾಜಪ್ಪ

Advertisement

Udayavani is now on Telegram. Click here to join our channel and stay updated with the latest news.

Next