Advertisement

ಕನ್ನಡ ಸಾಹಿತ್ಯ ಸಮ್ಮೇಳನಗಳಿಂದ ಕನ್ನಡಿಗರ ನಿರೀಕ್ಷೆಗಳೇನು?

11:43 AM Nov 24, 2017 | |

ಸಾಹಿತ್ಯ ಮತ್ತು ಸಮಾವೇಶಗಳು ಜನಸಾಮಾನ್ಯರ ಬದುಕುಗಳನ್ನು ಎಷ್ಟರ ಮಟ್ಟಿಗೆ ಪ್ರತಿನಿಧಿಸಿವೆ ಮತ್ತು ಅವರ ನಿರೀಕ್ಷೆಗಳನ್ನು ಸ್ಪರ್ಶಿಸಿವೆ ಎಂಬುದು ಮೂಲಭೂತ ಪ್ರಶ್ನೆ. ಸಾಮಾನ್ಯ ಜನರ ದನಿಯಲ್ಲಿನ “ಅಯ್ಯೋ ನಮಗೂ ಈ ಸಂಭ್ರಮಕ್ಕೂ ಸಂಬಂಧವಿಲ್ಲ’ ಎಂಬ ಮಾತಿನಲ್ಲಿ ಹುಸಿಯಾದ ನಿರೀಕ್ಷೆಗಳ ನೋವಿನ ದನಿಯಿದೆ. ಕನ್ನಡಿಗರ ನಿರೀಕ್ಷೆ ಎಂಬುದು ಕೇವಲ ಸಾಹಿತಿಗಳ ನಿರೀಕ್ಷೆಯಲ್ಲ. ಬದಲಿಗೆ ಇಡೀ ಕನ್ನಡ ನಾಡಿನ ಪ್ರಾದೇಶಿಕವಾದ ಮನಸಿನ ನಿರೀಕ್ಷೆಯೇ ಆಗಿದೆ. 

Advertisement

ಸಾಹಿತ್ಯ ಅನ್ನುವುದು ಬದುಕಿನ ಅಭಿವ್ಯಕ್ತಿ ಆದುದರಿಂದ ಸಾಹಿತಿಯು ಇಂತಹ ಅಭಿವ್ಯಕ್ತಿಗೆ ದನಿ ಅಷ್ಟೆ. ಸಮ್ಮೇಳನಗಳು ಭಿನ್ನ ಬಗೆಯ ಬದುಕಿನ ಅನಾವರಣದ ದೊಡ್ಡ ವೇದಿಕೆ. ಹಾಗಾಗಿ ಇದು ಕೇವಲ ಪುಸ್ತಕರೂಪಿ ಮತ್ತು ಭಾಷಣರೂಪಿ ಒಣ ಸಭೆಯಲ್ಲ. ಬದಲಿಗೆ, ಬದುಕುಗಳನ್ನು ಪ್ರತಿನಿಧಿಸಲು ಬಂದ ಮಾನವ ಸಮಾಜದ ಮಾದರಿ. ಸಾಹಿತ್ಯ ಸಮ್ಮೇಳನಗಳಿಂದ ಜನಮಾನಸದ ನಿರೀಕ್ಷೆ ಕೇವಲ ವ್ಯಾವಹಾರಿಕ ಮನೋರಂಜನೆಯದಲ್ಲ, ಅದು ಪ್ರಾದೇಶಿಕ ನೆಲೆಗಟ್ಟಿನಲಿ ವಿವಿಧ ಸಾಂಸ್ಕೃತಿಕ ಚಹರೆಗಳ ಅವಶ್ಯಕತೆಗಳ ಕುರಿತ ಅರಿವಿನ ಹಂಬಲದ್ದು. ಸಾಹಿತ್ಯ ಅನ್ನು ವುದೇ ಸಂಸ್ಕೃತಿಯ ಅನಾವರಣವಾದುದರಿಂದ ಹತ್ತು ಹಲವು ಬಗೆಯ ಜೀವನಶೈಲಿಗಳ ನೂರಾರು ಸಂವೇದನೆಗಳು ಒಟ್ಟಿಗೆ ಮಿಳಿತಗೊಂಡ ಸಂದರ್ಭವಿದು. ಇದು ಕನ್ನಡ ಮತ್ತು ಕನ್ನಡಿಗರ ಅಪಾರ ನಿರೀಕ್ಷೆಯ ಕಣ್ಣುಗಳಿಗೆ ಸಮಾಧಾನ ನೀಡ ಬೇಕಾದುದು ತೀರಾ ಅಗತ್ಯ.

 ಪ್ರಶ್ನೆಗಳು ಹುಟ್ಟುವುದೇ ಇಲ್ಲಿ. ಅದು ಸಾಹಿತ್ಯ ಸಮ್ಮೇಳನಗಳಿಂದ ಕನ್ನಡಿಗರ ನಿರೀಕ್ಷೆ ಏನು ಎನ್ನುವುದಕ್ಕಿಂತ ಕನ್ನಡ ಸಾಹಿತ್ಯದಿಂದ ಕನ್ನಡಿಗರ ನಿರೀಕ್ಷೆಗಳೇನು ಎಂಬುದು ಕೂಡ ಪಕ್ಕದಲ್ಲಿ ಬಂದು ಕೂಡುತ್ತದೆ. ಸಮ್ಮೇಳನ ಸಂಭ್ರಮದ ರೂಪ ಪಡೆದುಕೊಳ್ಳುವುದೇ ಸಾಹಿತ್ಯಕ ಮೌಲ್ಯಗಳಿಂದ. ಕನ್ನಡ ನಾಡಿನ ಒಟ್ಟು ಬದುಕಿನ ಕನ್ನಡಿಯ ಹಾಗೆ ಕಾಣಬೇಕಾದ ಇಂತಹ ಸಮ್ಮೇಳನಗಳ ಜವಾಬ್ದಾರಿ ನೇರವಾಗಿ ಕನ್ನಡಿಗರ ಬದುಕು ಬವಣೆಗಳಿಗೆ ಸಂಬಂಧಿಸಿದೆ. ನಾಡು ನುಡಿ ಕಲೆ ಇತಿಹಾಸ ಜನಪದ ಪರಂಪರೆಗಳನ್ನು ಒಳಗೊಂಡಂತೆ ವರ್ತಮಾನದ ಅನೇಕ ತುರ್ತುಗಳನ್ನು ಇಂತಹ ಸಮಾವೇಶವು ಎತ್ತಿಹಿಡಿಯಬೇಕಾ ಗುತ್ತದೆ. ಕನ್ನಡಿಗರ ನಿರೀಕ್ಷೆ ಕೂಡಾ ಇದೇ ಬಗೆಯದು. ಹೇಗೆ ಭಾಷಾ ಶಿಕ್ಷಕನೊಬ್ಬ ಪಠ್ಯದಲ್ಲಿ ಬರುವ ಯಾವುದೇ ವಿಷಯಗಳನ್ನು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಟ್ಟು ಸಮಾ ಧಾನವನ್ನು ಹೇಳುವನೋ ಹಾಗೆಯೇ ಸಾಹಿತಿ ಮತ್ತು ಸಾಹಿತ್ಯ, ಬದುಕಿನ ಎಲ್ಲ ಮಗ್ಗಲುಗಳನ್ನು ಎಡತಾಕಿ ಸಮಸ್ಯೆಗಳನ್ನು ಅನಾವರಣಗೊಳಿಸಿ ಅಗತ್ಯಬಿದ್ದಾಗ ಪರಿಹಾರವನ್ನೂ ಸೂಚಿಸ ಬೇಕಾಗುತ್ತದೆ. ಸಾಹಿತ್ಯ ಸಮ್ಮೇಳನಗಳಿಂದ ಕನ್ನಡಿಗರ ನಿರೀಕ್ಷೆ ಕೂಡ ಇಂತಹ ಭಿನ್ನ ವಲಯದ್ದೇ ಆಗಿದೆ.

ಸಮ್ಮೇಳನಗಳು ನೇರವಾಗಿ ಸರಕಾರವನ್ನು ಅವಲಂಬಿಸಿರು ವುದರಿಂದ ಆದು ಜನಸಾಮಾನ್ಯರ ಸ್ಪಂದನವನ್ನು ಆಲಿಸಲೇ ಬೇಕಾಗುತ್ತದೆ ಕನ್ನಡಿಗರ ನಿರೀಕ್ಷೆ ಕೂಡ ಇದೇ ಬಗೆಯದ್ದು. ಕೋಟಿಗಟ್ಟಲೆ ಹಣವನ್ನು ಸುರಿದು ತೇರೆಳೆದು ಉಧೋ ಅಂತ ಹೊರಡುವ ಕೆಲಸವಲ್ಲ ಅದು. ಸಾಹಿತ್ಯ ಮತ್ತು ಸಾಹಿತಿಗಳ ನೆಪದಲ್ಲಿ ಕನ್ನಡ ನಾಡಿನ ಶಕ್ತಿ ಮತ್ತು ಮಿತಿಗಳನ್ನು ಕುರಿತ ಚರ್ಚೆಗೆ ಅವಕಾಶ ವಾಗಬೇಕು. ಯಾವೊಂದು ಸಾಹಿತ್ಯ ಕೃತಿಯೇ ಆಗಿರಲಿ, ಅದು ಸಾಮಾಜಿಕ  ಅಯಾಮವೊಂದನ್ನು ಅಥವಾ ಸಾಮಾಜಿಕ ಸಂಗ ತಿಯ ಪ್ರತಿನಿಧಿತ್ವದ ದನಿಯೇ ಆಗಿರುತ್ತದೆ. ಕನ್ನಡಿಗರು ಇಂತಹ ಸಾಮಾಜಿಕ ಕಾಳಜಿ ಮತ್ತು ಮೌಲ್ಯವಿರುವ ಕೃತಿ ಮತ್ತು ಆ ಕುರಿತ ಚರ್ಚೆಯಿಂದ ದೊರಕಬಹುದಾದ ಭಿನ್ನ ನೆಲೆಗಳಲ್ಲಿನ ಸಮಸ್ಯೆಗಳಿಗೆ ಒಂದು ಪರಿಹಾರಕ್ಕೆ ಹಂಬಲಿಸುತ್ತಾರೆ.

ಕಟು ಸತ್ಯವೊಂದನ್ನು ಕುರಿತು ಇಲ್ಲಿ ಹೇಳಲೇಬೇಕಾಗಿದೆ.  ಅದು ಸಾಹಿತ್ಯ ಸಮ್ಮೆಳನದಲ್ಲಿ ಭಾಗವಹಿಸುವ ಜನ ಮತ್ತು 
ಅವರ ಅಭಿರುಚಿಯ ಕುರಿತ ಮಾತು. ಸಮ್ಮೇಳನ ನಡೆಯುವ ಪ್ರದೇಶದ ಅನೇಕ ಜನಕ್ಕೆ ಸಾಹಿತ್ಯ ಮತ್ತು ಸಾಹಿತ್ಯ ಸಮ್ಮೇಳನ ಅಂದರೆ ಗೊತ್ತಿರುವುದಿಲ್ಲ. ಜನರು ಬಂದರು ಎಂಬ ಸಂಭ್ರಮ ವಷ್ಟೇ. ಆಟೋ ಚಾಲಕ, ಹೊಟೆಲ್‌ ಅಡುಗೆಯವ, ಸಪ್ಲಯರ್‌, ಹೂಮಾರುವ, ಹಣ್ಣು ಮಾರುವ, ಲಾಡ್ಜ್ ಹುಡುಗ, ಬೇರೆ ಬೇರೆ ವ್ಯಾಪಾರಸ್ಥರಿಗೆ ಈ ಕುರಿತ ಲವಲೇಶ ಮಾಹಿತಿಯೂ ಇರುವುದಿಲ್ಲ. ಆದರೂ ಇವರೆಲ್ಲ ಸಾಹಿತ್ಯ ಸಂಸ್ಕೃತಿಗಳ ಬಹುಮುಖ್ಯ ಮನಸುಗಳೆ ಆಗಿರುತ್ತವೆ. ಸಾಮಾಜಿಕ ಭಿನ್ನ ಸ್ತರದ ದನಿಗಳೇ ಆಗಿರುತ್ತವೆ. ಸಾಹಿತಿ ಮತ್ತು ಸಮಾವೇಶಗಳು ಇಂತಹ ಬದುಕುಗಳನ್ನು ಎಷ್ಟರ ಮಟ್ಟಿಗೆ ಪ್ರತಿನಿಧಿಸಿವೆ ಮತ್ತು ಅವರ ನಿರೀಕ್ಷೆಗಳನ್ನು ಸ್ಪರ್ಶಿಸಿವೆ ಎಂಬುದು ಮೂಲಭೂತ ಪ್ರಶ್ನೆ. ಸಾಮಾನ್ಯ ಜನರ ದನಿಯಲ್ಲಿನ “ಅಯ್ಯೋ ನಮಗೂ ಈ ಸಂಭ್ರಮಕ್ಕೂ ಸಂಬಂಧವಿಲ್ಲ’ ಎಂಬ ಮಾತಿನಲ್ಲಿ ಹುಸಿಯಾದ ನಿರೀಕ್ಷೆಗಳ ನೋವಿನ ದನಿಯಿದೆ. 

Advertisement

ಇನ್ನು ತಾತ್ವಿಕವಾಗಿ ಅಲೋಚಿಸುವುದಾದರೆ ಹೊತ್ತಿನ  ಮನುಷ್ಯ ಮನುಷ್ಯರ ನಡುವಿನ ಅಪನಂಬಿಕೆಗಳ ಮುಳ್ಳು ಬೇಲಿಯನ್ನು ನಾವು ಕಿತ್ತೂಗೆಯುವ ಸಹೃದಯ ಮಾತುಗಳು ಮತ್ತು ಕಲಿಕೆ. ಅರಾಜಕತೆಯನ್ನು ಹುಟ್ಟುಹಾಕುವ ಜಾತಿ ಮತ ಕುಲ ಧರ್ಮ ವರ್ಗ ವರ್ಣ ಮತ್ತು ಲಿಂಗತಾರತಮ್ಯದ ಕುಟಿಲ ನಡುವಳಿಕೆಯನ್ನು ಇಂತಹ ಸಾಹಿತ್ಯ ಸಮ್ಮೇಳನಗಳು ಮೆಟ್ಟಿ ನಿಲ್ಲಬೇಕು. ಅಕ್ಷರ ಸಂಸ್ಕೃತಿಯನ್ನು ವಿಪುಲವಾಗಿ ಬೆಳೆಸುವ ಕಮ್ಮಟವಾಗಿ ಸಮ್ಮೇಳನ ಪಡಿಮೂಡಬೇಕಾದುದು ಇಂದಿನ ಬಹು ನಿರೀಕ್ಷಿತ ಸಂಗತಿ. ಒಂದಾಗಿ ಬಾಳನ್ನು ಕಟ್ಟುವ ಮತ್ತು ನೈತಿಕ ಅಧಃಪತನದಿಂದ ದೂರ ನಿಲ್ಲುವ ಸಂಕಲ್ಪ ಕ್ರಿಯೆಯಾಗಿ ಇದು ನಿಲ್ಲಬೇಕಾಗಿದೆ. ಆದರೆ ಈ ಹೊತ್ತು ಸಾಹಿತ್ಯ ಮತ್ತು ಸಾಹಿತ್ಯದ ಇಂತಹ ಚಟುವಟಿಕೆಗಳು ಕೂಡ ಸೀಮಿತ ವಲಯದ ಮತ್ತು ಪೂರ್ವಗ್ರಹದ ಜಾಡ್ಯಕ್ಕೆ ಅಂಟಿಕೊಂಡಿರುವುದನ್ನು ಕಂಡಾಗ ಯಾವ ನಿರೀಕ್ಷೆಗಳನ್ನು ಈ ಸಮ್ಮೇಳನವು ಈಡೇರಿಸ ಬಲ್ಲುದು ಎಂಬ ನೋವು, ನಿರಾಶೆ ಕಾಡುತ್ತದೆ. ಸಾಹಿತ್ಯ ಸಮ್ಮೇಳನ ಗಳಿಂದ ಕನ್ನಡಿಗರು ಕಲಿಯಬಯಸುವುದು ಒಗ್ಗೂಡುವ ಬದುಕು ಮತ್ತು ಪ್ರಾದೇಶಿಕವಾದ ಶಕ್ತಿ ಸಂಪನ್ಮೂಲಗಳನ್ನು (ಬೌದ್ಧಿಕ, ದೈಹಿಕ ಮತ್ತು ನೈಸರ್ಗಿಕ) ಬಳಸಿಕೊಂಡೆ ಜೀವನವನ್ನು ಕಟ್ಟಿಕೊಳ್ಳಬ ಹುದಾದ ಸಾಧ್ಯತೆಗಳ ಕುರಿತ ಅಲೋಚನೆ. ಇದು ಅಭಿಮಾನದ ಪ್ರತೀಕವೇ ಹೊರತು ಪರರಾಜ್ಯದ ಕುರಿತ ಅಸಹಿಷ್ಣು ಮನೋ ಭಾವನೆಯ ಕುರುಹಲ್ಲ.

ಕನ್ನಡಿಗರ ನಿರೀಕ್ಷೆ ಎಂಬುದು ಕೇವಲ ಸಾಹಿತಿಗಳ ನಿರೀಕ್ಷೆಯಲ್ಲ. ಬದಲಿಗೆ ಇಡೀ ಕನ್ನಡ ಪ್ರಾದೇಶಿಕವಾದ ಮನಸಿನ ನಿರೀಕ್ಷೆಯೇ ಆಗಿದೆ. ಅದು ಸಾಮಾಜಿಕ ಬದುಕಿನ ಹಂಬಲಗಳಾದ ಶಿಕ್ಷಣ, ಮಾತೃಭಾಷೆ, ವಿಜ್ಞಾನ, ತಂತ್ರಜ್ಞಾನ, ಕೃಷಿ, ಕಾಡು-ಬಯಲು-ಬೆಟ್ಟ, ಮಕ್ಕಳು, ಮಹಿಳೆ, ಅಲ್ಪಸಂಖ್ಯಾತರು ಎಲ್ಲದರ ಕುರಿತ ಕಾಳಜಿ ಮತ್ತು ವಿಕಾಸದ ಮುಖವಾಣಿಯಾಗುವಿಕೆ. 

ಸಾಹಿತ್ಯ ಮತ್ತು ಸಾಹಿತಿಗಳ ನೆಪದಲ್ಲಿ ಸೇರುವ ಅಸಂಖ್ಯಾತ ಕನ್ನಡ ಮನಸುಗಳನ್ನು ಪ್ರತಿನಿಧಿಸುವ ಈ ಸಮ್ಮೇಳನಗಳ ಎದುರು ನಿಲ್ಲುವ ನಿರೀಕ್ಷೆಗಳು ಅಸಂಖ್ಯ. ನಾಡನ್ನು ಕಟ್ಟುವ ಮತ್ತು ನಾಡನ್ನು ಪ್ರತಿ ಕೋನದಲ್ಲೂ ಆರೊಗ್ಯಕಾರಿಯಾಗಿ ಕಾಪಿಡಬೇಕೆಂಬ ನಿರೀಕ್ಷೆ ಕನ್ನಡಿಗರದ್ದು. ಅದಕ್ಕೆ ಭಾಷಣ ಮತ್ತು ಪ್ರದರ್ಶನಕ್ಕಿಂತ ಆನಂತರದ ಫಲಶ್ರುತಿಯಾಗಬಲ್ಲ ಕಾರ್ಯತತ್ಪರತೆ ಮುಖ್ಯ. ಸಮ್ಮೆಳನದ ಕಾಗದಗಳಲ್ಲಿ ಮಂಡನೆಯಾಗುವ ಸುಧಾರಣೆಯ ಅಂಶೆಗಳೇ ಕನ್ನಡಿಗರ ನಿರೀಕ್ಷೆಯ ವ್ಯಾಪಕತೆಯನ್ನು ಹೇಳುತ್ತವೆ. ಇದರಾಚೆ ಸಂಕಲ್ಪವಾಗೇ ಉಳಿಯುವ ಮಾತುಗಳು ಮುಂದಿನ ಸಮ್ಮೇಳನದ ಹೊಸ ಹಾಳೆಯಲ್ಲಷ್ಟೆ ಮತ್ತೆ ಕಾಣಿಸಬಾರದು.

ವಾಸುದೇವ ನಾಡಿಗ

Advertisement

Udayavani is now on Telegram. Click here to join our channel and stay updated with the latest news.

Next