ಬಿಹಾರ : ಬಿಹಾರದ ಕಿಶನ್‌ಗಂಜ್ ಜಿಲ್ಲೆಯಲ್ಲಿ ನಡೆದ 7ನೇ ತರಗತಿ ಪರೀಕ್ಷೆಯ ಪ್ರಶ್ನೆ ಪತ್ರಿಕೆಯೊಂದು ಭಾರೀ ವಿವಾದಕ್ಕೆ ಕಾರಣವಾಗಿದೆ.
ಕಾಶ್ಮೀರವನ್ನು ಪ್ರತ್ಯೇಕ ದೇಶ ಎಂಬಂತೆ ಹೇಳುವ ಮೂಲಕ ಪ್ರಶ್ನೆಯನ್ನು ಕೇಳಲಾಗಿದೆ. ಸದ್ಯ ಈ ಪ್ರಶ್ನೆ ಪತ್ರಿಕೆ ಸಾಮಾಜಿಕ ಜಾಲತಾಣದಲ್ಲಿ ಸಿಕಾಪಟ್ಟೆ ವೈರಲ್ ಆಗುತ್ತಿದ್ದು, ಬಿಹಾರದ ಮುಖ್ಯಮಂತ್ರಿ ವಿರುದ್ಧ ಬಿಜೆಪಿ ಕಿಡಿಕಾರಿದೆ.
ಈ ಪ್ರಶ್ನೆ ಪತ್ರಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಆಕ್ರೋಶಗೊಂಡ ಬಿಜೆಪಿ ಬಿಹಾರ ಮುಖ್ಯಮಂತ್ರಿ ನಿತೇಶ್ ಕುಮಾರ್ ಅವರನ್ನು ತರಾಟೆಗೆ ತೆಗೆದುಕೊಂಡಿದೆ.
ಘಟನೆಯ ವಿವರ : ಬಿಹಾರದ ಕಿಶನ್‌ಗಂಜ್ ಜಿಲ್ಲೆಯಲ್ಲಿರುವ 7ನೇ ತರಗತಿಯ ವಿದ್ಯಾರ್ಥಿಗಳಿಗೆ ನೀಡಲಾದ ಪ್ರಶ್ನೆ ಪತ್ರಿಕೆಯಲ್ಲಿ ಈ ದೇಶಗಳ ಜನರನ್ನು ಏನೆಂದು ಕರೆಯುತ್ತಾರೆ? ಎಂಬ ಪ್ರಶ್ನೆಯನ್ನು ಕೇಳಲಾಗಿತ್ತು. ಇದರಲ್ಲಿ ಚೀನಾ, ನೇಪಾಳ, ಇಂಗ್ಲೆಂಡ್ ಮತ್ತು ಭಾರತದ ಜೊತೆಗೆ ಕಾಶ್ಮೀರದ ಹೆಸರನ್ನು ಸೇರಿಸಲಾಗಿತ್ತು.
ಈ ವಿಚಾರದ ಕುರಿತು ಪ್ರತಿಕ್ರಿಯಿಸಿದ ಬಿಜೆಪಿಯ ರಾಜ್ಯಾಧ್ಯಕ್ಷ ಸಂಜಯ್ ಜೈಸ್ವಾಲ್, ಬಿಹಾರ ಸರ್ಕಾರವು ಕಾಶ್ಮೀರವನ್ನು ಭಾರತದ ಅವಿಭಾಜ್ಯ ಭಾಗವೆಂದು ಪರಿಗಣಿಸುತ್ತಿಲ್ಲ ಅದಕ್ಕಾಗಿ ಶಾಲಾ ಮಕ್ಕಳ ಪ್ರಶ್ನೆ ಪತ್ರಿಕೆಯಲ್ಲಿ ಈ ರೀತಿಯಾಗಿ ಪ್ರಶ್ನೆಗಳನ್ನು ಕೇಳಿದ್ದಾರೆ ಎಂದು ಆರೋಪಿಸಿದ್ದಾರೆ.
ಅಚ್ಚರಿಯ ಸಂಗತಿ ಎಂದರೆ 2017ರಲ್ಲಿ ಸಹ ಇಂತದ್ದೇ ಪ್ರಸಂಗ ನಡೆದಿತ್ತು ಎಂದು ಹೇಳಲಾಗಿದ್ದು, ಇಷ್ಟು ವರ್ಷ ಕಳೆದರೂ ಇನ್ನೂ ತಿದ್ದಿಕೊಂಡಿಲ್ಲ ಎಂದು ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ. ಘಟನೆ ಕುರಿತಂತೆ ಪ್ರತಿಕ್ರಿಯಿಸಿರುವ ಶಾಲಾ ಮುಖ್ಯ ಶಿಕ್ಷಕ ಎಸ್.ಕೆ. ದಾಸ್, ಇದು ಮಾನವ ತಪ್ಪಿನಿಂದ ಆಗಿದೆ ಎಂದು ಸಮಜಾಯಿಷಿ ನೀಡಿದ್ದಾರೆ.
ಇದನ್ನೂ ಓದಿ : ಭಕ್ತರ ಗಮನಕ್ಕೆ; ಧರ್ಮಸ್ಥಳದಲ್ಲಿ ಅ.25 ರಂದು ದೇವರ ದರ್ಶನಕ್ಕೆ ಅವಕಾಶವಿಲ್ಲ