Advertisement
ವರ್ಷದ ಹಿಂದೆ ಮನೆಯಿಂದ ಹೊರಹೋಗಿ ನಾಪತ್ತೆಯಾಗಿರುವ ತನ್ನ ಮಗನನ್ನು ಹುಡುಕಿಕೊಡುವಂತೆ ಪೊಲೀಸ್ ಇಲಾಖೆಗೆ ನಿರ್ದೇಶಿಸುವಂತೆ ಕೋರಿ ಕೆಂಪಾಪುರ ನಿವಾಸಿ ರಘುವೀರ್ ರಾಥೋಡ್ ಎಂಬುವರು ಸಲ್ಲಿಸಿರುವ ಹೇಬಿಯಸ್ ಕಾರ್ಪಸ್ ಅರ್ಜಿ ವಿಚಾರಣೆಯನ್ನು ಮಂಗಳವಾರ ನಡೆಸಿದ ನ್ಯಾ. ರಾಘವೇಂದ್ರ ಎಸ್ ಚೌಹಾಣ್ ಹಾಗೂ ನ್ಯಾ.ಎಚ್. ಟಿ ನರೇಂದ್ರಪ್ರಸಾದ್ ಅವರಿದ್ದ ವಿಭಾಗೀಯ ಪೀಠ, ಅಮೃತಹಳ್ಳಿ ಠಾಣೆ ಪೊಲೀಸರ ಕಾರ್ಯವೈಖರಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡಿತು.
ಪೊಲೀಸರು, ಬಡವರ ವಿಚಾರದಲ್ಲಿ ಯಾಕೆ ಮುತುವರ್ಜಿ ವಹಿಸುವುದಿಲ್ಲ, ನಿರ್ಲಕ್ಷ್ಯ ಧೋರಣೆ ಏಕೆ ಅನುಸರಿಸುತ್ತೀರಾ ಎಂದು ತೀವ್ರ ತರಾಟೆ
ತೆಗೆದುಕೊಂಡಿತು. ರಾಜ್ಯದಲ್ಲಿ ಮಕ್ಕಳ ಕಳ್ಳಸಾಗಣೆ ವಿಚಾರದ ಬಗ್ಗೆಯೂ ಪ್ರಸ್ತಾಪಿಸಿದ ನ್ಯಾಯಪೀಠ, 2015ರ ಜನವರಿಯಿಂದ ಇಲ್ಲಿಯವರೆಗೂ ಎಷ್ಟು ಹೆಣ್ಣು ಹಾಗೂ ಗಂಡು ಮಕ್ಕಳು ನಾಪತ್ತೆಯಾಗಿದ್ದಾರೆ. ಎಷ್ಟು ಮಂದಿಯನ್ನು ರಕ್ಷಿಸಲಾಗಿದೆ. ಮಕ್ಕಳ ಕಳ್ಳಸಾಗಣೆಯನ್ನು ತಡೆಗಟ್ಟಲು ರೂಪಿಸಿರುವ ಕ್ರಮಗಳೇನು ಎಂಬುದರ ಬಗ್ಗೆ ರಾಜ್ಯ ಪೊಲೀಸ್ ಮಹಾನಿರ್ದೇಶಕರ ಬಳಿ ಮಾಹಿತಿ ತರಿಸಿಕೊಂಡು ಮುಂದಿನ ವಿಚಾರಣೆ ವೇಳೆ ಸಮಗ್ರ ವರದಿ ಸಲ್ಲಿಸುವಂತೆ ರಾಜ್ಯಸರ್ಕಾರದ ಪರ ವಕೀಲರಿಗೆ ನಿರ್ದೇಶಿಸಿದ ನ್ಯಾಯಪೀಠ ವಿಚಾರಣೆಯನ್ನು ಆ.13ಕ್ಕೆ ಮುಂದೂಡಿತು.
Related Articles
ಮಧ್ಯಪ್ರದೇಶ ಮೂಲದ ರಘುವೀರ್ ರಾಥೋಡ್ ಕಳೆದ 10 ವರ್ಷಗಳಿಂದ ಹೆಬ್ಟಾಳದ ಕೆಂಪಾಪುರದಲ್ಲಿ ಕುಟುಂಬದ ಜತೆ ವಾಸವಿದ್ದಾರೆ. ಅವರ 17 ವರ್ಷದ ಮಗ ರಾಮ್ ಲಖನ್ 2017ರ ಜೂ.22ರಂದು ಮನೆಯಿಂದ ಹೊರಗಡೆ ಹೋಗಿ ವಾಪಸ್ ಬಂದಿರಲಿಲ್ಲ. ಈ ಬಗ್ಗೆ ರಘುವೀರ್, ಅಮೃತಹಳ್ಳಿ ಠಾಣೆಯಲ್ಲಿ ದೂರು ದಾಖಲಿಸಿದ್ದರು. ನಂತರ ವರ್ಷ ಕಳೆದರೂ ಮಗನ ಸುಳಿವಿನ ಬಗ್ಗೆ ಮಾಹಿತಿ ಇಲ್ಲ. ಹೀಗಾಗಿ ಪುತ್ರನನ್ನು ಪತ್ತೆ ಮಾಡಿಕೊಡುವಂತೆ ಕೋರಿ ಹೈಕೋರ್ಟ್ ಮೊರೆಹೋಗಿದ್ದರು. ಹೈಕೋರ್ಟ್ ಈ ಪ್ರಕರಣವನ್ನು ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡು ಅಮಿಕಸ್ ಕ್ಯೂರಿ (ಅರ್ಜಿದಾರರ ಪರ ವಾದಿಸಲು ಕೋರ್ಟ್ ನೇಮಕ ಮಾಡುವ ವಕೀಲರು) ನೇಮಿಸಿದೆ.
Advertisement