Advertisement

ಎರಡು ವರ್ಷಗಳಲ್ಲಿ ಯಾವುದೇ ದಂಗೆಗಳಾಗಿಲ್ಲ ಎಂದ ಯೋಗಿಗೆ ಮಾಯಾ ಪ್ರಶ್ನೆ

10:48 AM Mar 21, 2019 | Team Udayavani |

ಲಕ್ನೋ: ಉತ್ತರಪ್ರದೇಶದಲ್ಲಿ ಯೋಗಿ ಆದಿತ್ಯನಾಥ್‌ ಅವರ ನೇತೃತ್ವದ ಭಾರತೀಯ ಜನತಾ ಪಕ್ಷವು ಅಧಿಕಾರಕ್ಕೆ ಬಂದು ಎರಡು ವರ್ಷಗಳಾದ ಸಂದರ್ಭದಲ್ಲಿ ಮುಖ್ಯಮಂತ್ರಿ ಯೋಗಿ ಅವರು ತಮ್ಮ ಸರಕಾರದ ಸಾಧನಾ ಪಟ್ಟಿಯನ್ನು ಬಿಡುಗಡೆ ಮಾಡಿದ್ದರು. ಅದರಲ್ಲಿ ಅವರು ಕಳೆದ ಎರಡು ವರ್ಷಗಳಲ್ಲಿ ಉತ್ತರ ಪ್ರದೇಶದಲ್ಲಿ ಯಾವುದೇ ದಂಗೆಗಳಾಗಿಲ್ಲ ಎಂದು ಹೇಳಿಕೊಂಡಿದ್ದರು.

Advertisement

ಯೋಗಿ ಅವರ ಈ ಹೇಳಿಕೆಗೆ ಉತ್ತರ ಪ್ರದೇಶದ ಮಾಜೀ ಮುಖ್ಯಮಂತ್ರಿ ಮತ್ತು ಬಿ.ಎಸ್‌.ಪಿ. ನಾಯಕಿ ಮಾಯಾವತಿ ಅವರು ಸೂಕ್ತ ತಿರುಗೇಟು ನೀಡಿದ್ದಾರೆ. ‘ನಿಮ್ಮ ಅಧಿಕಾರಾವಧಿಯಲ್ಲಿ ದಂಗೆಗಳಾಗಿಲ್ಲವೆಂದಾದರೆ, ದೇಶಕ್ಕೇ ಕೆಟ್ಟ ಹೆಸರನ್ನು ತಂದ ಗುಂಪು ಥಳಿತಗಳ ಕುರಿತಾಗಿ ಯೋಗಿ ಅವರು ಏನು ಹೇಳುತ್ತಾರೆ?’ ಎಂದು ಮಾಯಾವತಿ ಅವರು ಪ್ರಶ್ನಿಸಿದ್ದಾರೆ.

ಯೋಗಿ ಅವರ ಈ ಹೇಳಿಕೆಗೆ ಟ್ವೀಟ್‌ ಮೂಲಕ ಸೂಕ್ತ ತಿರುಗೇಟು ನೀಡಿರುವ ಮಾಯಾವತಿ ಅವರು, ‘ಈ ಎರಡು ವರ್ಷಗಳ ಅವಧಿಯಲ್ಲಿ ಬಿ.ಜೆ.ಪಿ. ನಾಯಕರು ತಮ್ಮ ಮೇಲಿದ್ದ ಪ್ರಕರಣಗಳನ್ನು ಹಿಂದೆ ತೆಗೆಸಿಕೊಳ್ಳುವುದರಲ್ಲೇ ನಿರತರಾಗಿದ್ದರು. ಹಾಗಿದ್ದರೂ ರಾಜ್ಯದ ವಿವಿಧ ಕಡೆ ಸಂಭವಿಸಿದ ಗುಂಪು ಥಳಿತ ಪ್ರಕರಣಗಳ ಕುರಿತಾಗಿ ಯೋಗಿ ಏನು ಹೇಳುತ್ತಾರೆ, ಇಂತಹ ಪ್ರಕರಗಳು ರಾಷ್ಟ್ರಮಟ್ಟದಲ್ಲೇ ಗಮನ ಸೆಳೆದಿದ್ದವು ಮಾತ್ರವಲ್ಲದೇ ದೇಶದ ಉಚ್ಛನ್ಯಾಯಾಲಯವೇ ಈ ವಿಚಾರದಲ್ಲಿ ಮಧ್ಯಪ್ರವೇಶಿಸಬೇಕಾಯಿತು’ ಎಂದು ಅವರು ಯೋಗಿ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಯೋಗಿ ಆದಿತ್ಯನಾಥ್‌ ಅವರು ರಾಜ್ಯದಲ್ಲಿ ಅಪರಾಧ ಪ್ರಕರಣಗಳನ್ನು ನಿಯಂತ್ರಿಸುವಲ್ಲಿ ವಿಫ‌ಲರಾಗಿದ್ದಾರೆ ಎಂದು ಮಯಾ ಗಂಭೀರ ಆರೋಪವನ್ನು ಮಾಡಿದ್ದಾರೆ. ಗೋರಕ್ಷಕರನ್ನು ಬಿಜೆಪಿಯು ರಕ್ಷಿಸುತ್ತಿದೆ ಎಂದು ಈ ಹಿಂದೆ ಮಾಯಾ ಅವರು ಆರೋಪ ಮಾಡಿದ್ದರು ಮಾತ್ರವಲ್ಲದೇ ಗುಂಪು ಥಳಿತಗಾರರಿಗೆ ಕೇಸರಿ ಪಕ್ಷವು ಬೆಂಬಲವನ್ನು ನೀಡುತ್ತಿದೆ ಎಂಬ ಆರೋಪವನ್ನೂ ಮಾಯಾ ಅವರು ಈ ಹಿಂದೆ ಮಾಡಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next