Advertisement

Shame; ಕಾರ್ಮಿಕರ ಮಕ್ಕಳ ಹಣ ಅನ್ಯ ಉದ್ದೇಶಕ್ಕೆ: ಹೈಕೋರ್ಟ್‌ ಕಿಡಿ

01:06 AM Sep 29, 2024 | Team Udayavani |

ಬೆಂಗಳೂರು: ಬಡ ಕಟ್ಟಡ ಕಾರ್ಮಿಕರ ಮಕ್ಕಳ ಶಿಕ್ಷಣ ಹಾಗೂ ಇತರ ಆವಶ್ಯಕತೆಗಳಿಗೆಂದು ರಾಜ್ಯ ಕಟ್ಟಡ ಹಾಗೂ ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ನಿಧಿಯಲ್ಲಿ ಮೀಸಲಿಟ್ಟ ಹಣವನ್ನು ಅನ್ಯ ಉದ್ದೇಶಗಳಿಗೆ ಬಳಕೆ ಮಾಡುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ಹೈಕೋರ್ಟ್‌ ರಾಜ್ಯ ಸರಕಾರದ ವಿರುದ್ಧ ಕಿಡಿಕಾರಿದೆ.

Advertisement

ಕಟ್ಟಡ ಕಾರ್ಮಿಕರ ಮಕ್ಕಳಿಗೆ ಶೈಕ್ಷಣಿಕ ಧನಸಹಾಯ ಮಾಡಲು ನಿರ್ದೇಶಿಸಬೇಕು ಎಂದು ಕೋರಿ, ರಾಜ್ಯ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ಫೆಡರೇಶನ್‌ ಪ್ರಧಾನ ಕಾರ್ಯದರ್ಶಿ ಕೆ. ಮಹಾಂತೇಶ್‌ ಹಾಗೂ ಇತರ ಮೂವರು ಸಲ್ಲಿಸಿರುವ ರಿಟ್‌ ಅರ್ಜಿಯು ಏಕಸದಸ್ಯ ನ್ಯಾಯಪೀಠದ ಮುಂದೆ ಶುಕ್ರವಾರ ವಿಚಾರಣೆಗೆ ಬಂದಿತ್ತು.
ಈ ವೇಳೆ ಮಂಡಳಿಯ ಪರ ವಕೀಲರು, ಹಣದ ಉಪಯೋಗ ನಿಯಮಾನುಸಾರವೇ ಆಗಿದೆ. ಅರ್ಜಿದಾರರು ನ್ಯಾಯಾಲಯದ ಅನುಕಂಪ ಗಿಟ್ಟಿಸಿಕೊಳ್ಳಲು ಸತ್ಯವಲ್ಲದ ಮಾಹಿತಿಗಳನ್ನು ನೀಡುತ್ತಿದ್ದಾರೆ ಎಂದರು. ಅದರಿಂದ ಸಿಟ್ಟಿಗೆದ್ದ ನ್ಯಾಯಪೀಠ, ಇದರಲ್ಲಿ ಅನುಕಂಪ ಗಿಟ್ಟಿಸಿಕೊಳ್ಳುವುದು ಏನಿದೆ? ಕಾಯ್ದೆಗೆ ವಿರುದ್ಧವಾಗಿ, ಸಿಎಜಿ ಅಭಿಪ್ರಾಯಗಳಿಗೆ ವ್ಯತಿರಿಕ್ತವಾಗಿ ಮಂಡಳಿಯ ಹಣವನ್ನು ಬೇರೆ ಉದ್ದೇಶಗಳಿಗೆ ಬಳಿಸಿಕೊಂಡಿರುವುದ್ಯಾಕೆ, ಮಂಡಳಿಯ ಹಣ ನರೇಗಾ ಯೋಜನೆಗೆ, ಇಂದಿರಾ ಕ್ಯಾಂಟೀನ್‌ಗೆ ವೆಚ್ಚ ಮಾಡಿದ್ಯಾಕೆ, ಅಧಿಕಾರಿಗಳಿಗೆ ಕಾರುಗಳನ್ನು ಈ ಹಣದಲ್ಲಿ ಏಕೆ ಖರೀದಿ ಮಾಡಿದ್ದೀರಿ ಎಂದು ಪ್ರಶ್ನಿಸಿತು.

ಅಂತಿಮವಾಗಿ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿರುವ ನಿಧಿ ಬಳಕೆ ಬಗ್ಗೆ ವಿವರವಾದ ಮಾಹಿತಿ ಒದಗಿಸುವಂತೆ ನಿರ್ದೇಶನ ನೀಡಿದ ನ್ಯಾಯಪೀಠ ವಿಚಾರಣೆಯನ್ನು ಅ. 1ಕ್ಕೆ ಮುಂದೂಡಿತು.

Advertisement

Udayavani is now on Telegram. Click here to join our channel and stay updated with the latest news.

Next