Advertisement

ಎನಗೆ ನಗೆಯು ಬರುತೀದೆ …

09:00 PM Oct 18, 2017 | |

ಚಿತ್ರರಂಗಕ್ಕೆ ಬಂದು ಸುಮಾರು 17 ವರ್ಷವಾದರೂ ಸದಾ ಸುದ್ದಿಯಲ್ಲಿರುವ ನಟಿ ಎಂದರೆ ರಾಧಿಕಾ ಕುಮಾರಸ್ವಾಮಿ. 2002ರಲ್ಲಿ “ನಿನಗಾಗಿ’ ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ರಾಧಿಕಾ ಅಂದಿನಿಂದ ಇಂದಿನವರೆಗೂ ನಾನಾ ಕಾರಣಗಳಿಗಾಗಿ ಸುದ್ದಿಯಾಗುತ್ತಲೇ ಇದ್ದಾರೆ. ಇತ್ತೀಚೆಗೆ ಚಿತ್ರರಂಗದಿಂದ ದೊಡ್ಡ ಗ್ಯಾಪ್‌ ತಗೊಂಡಿದ್ದ ರಾಧಿಕಾ ಸುತ್ತ ಸಾಕಷ್ಟು ಗಾಸಿಪ್‌ಗ್ಳು ಕೇಳಿಬಂದುವು. ಈ ಗಾಸಿಪ್‌ಗ್ಳ ನಡುವೆಯೇ ರಾಧಿಕಾ ಮತ್ತೆ ಬಂದಿದ್ದಾರೆ. ಬರುವುದರ ಜೊತೆಗೆ ಹಲವು ಪ್ರಶ್ನೆಗಳಿಗೆ, ಕುತೂಹಲಗಳಿಗೆ ಉತ್ತರವಾಗಿದ್ದಾರೆ …

Advertisement

ಒಮ್ಮೆ ಚಿತ್ರರಂಗದಲ್ಲಿ ಫ‌ುಲ್‌ ಆ್ಯಕ್ಟೀವ್‌, ಇನ್ನೊಮ್ಮೆ ಚಿತ್ರರಂಗದಿಂದ ಮಾಯ. ಎಲ್ಲಿ ಹೋದರು ಎಂದು ಟಾರ್ಚ್‌ ಹಾಕಿ ಹುಡುಕುವ ಹೊತ್ತಿಗೆ “ನಾನಿಲ್ಲಿದ್ದೀನಿ’ ಎಂದು ಪ್ರತ್ಯಕ್ಷವಾಗುತ್ತಾರೆ ರಾಧಿಕಾ. ಯಾವ ರಾಧಿಕಾ ಎಂದು ನೀವು ಕೇಳಿದರೆ ರಾಧಿಕಾ ಕುಮಾರಸ್ವಾಮಿ ಎಂದು ಹೇಳಬೇಕು. ಇಷ್ಟು ಹೇಳಿದ ಮೇಲೆ ನೀವು ಫ್ಲ್ಯಾಶ್‌ಬ್ಯಾಕ್‌ಗೆ ಜಾರುತ್ತೀರಿ. ಅವರ ಬಗ್ಗೆ ಬಂದ ಸುದ್ದಿಗಳೆಲ್ಲವೂ ನಿಮ್ಮ ಕಣ್ಣ ಮುಂದೆ ಬಂದು ಹೋಗುತ್ತವೆ, ಗಾಸಿಪ್‌ಗ್ಳು ಕಿವಿಯಲ್ಲಿ ಗುಂಯ್‌ಗಾಡುತ್ತವೆ. ಜೊತೆಗೆ ಈಗೇನು ಸುದ್ದಿ ಎಂಬ ಕುತೂಹಲ ಕೂಡಾ ನಿಮ್ಮಲ್ಲಿ ಹುಟ್ಟುತ್ತದೆ.

ರಾಧಿಕಾ ದೂರದಿಂದಲೇ ಇಂತಹ ಗಾಸಿಪ್‌ಗ್ಳನ್ನು ಕೇಳುತ್ತಲೇ ಈಗ ಮತ್ತೆ ಬಂದಿದ್ದಾರೆ. ಈಗಾಗಲೇ “ಕಾಂಟ್ರ್ಯಾಕ್ಟ್’, “ರಾಜೇಂದ್ರ ಪೊನ್ನಪ್ಪ’ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.  “ಹಲೋ ಮೇಡಂ ಇಷ್ಟ್ ದಿನ ಎಲ್ಲೋಗಿದ್ರಿ’ ಎಂದರೆ, “ಎಲ್ಲೂ ಹೋಗಿಲ್ಲ ಸ್ವಾಮಿ, ಬೆಂಗಳೂರಿನಲ್ಲೇ ಇದ್ದೆ’ ಎಂಬ ಉತ್ತರ ರಾಧಿಕಾ ಅವರಿಂದ ಬರುತ್ತದೆ. ಹೌದು, ರಾಧಿಕಾ ಕುಮಾರಸ್ವಾಮಿ ಹೇಳುವಂತೆ ರಾಧಿಕಾ ಅವರು ಬೆಂಗಳೂರು ಬಿಟ್ಟು, ಎಲ್ಲೂ ಹೋಗಿಲ್ಲ. ಹೋಗೋದು ಇಲ್ಲ. ಇವತ್ತಿಗೂ ನಾನು ಬೆಂಗಳೂರಿನ ಡಾಲರ್ ಕಾಲೋನಿಯ ಮನೆಯಲ್ಲೇ ಇದ್ದೇನೆ.

ನನ್ನ ಕುಟುಂಬದ ಜೊತೆಗೆ ಕಾಲ ಕಳೆಯಬೇಕೆಂಬ ಕಾರಣ ಹಾಗೂ ನನ್ನ ವೈಯಕ್ತಿಕ ಕೆಲಸಗಳಿಗಾಗಿ ಚಿತ್ರರಂಗದಿಂದ ಬ್ರೇಕ್‌ ತಗೊಂಡಿದ್ದೆ. ನನಗೆ ಸಿನಿಮಾವೊಂದೇ ಲೈಫ್ ಅಲ್ಲ, ನನ್ನದೇ ಆದ ಕುಟುಂಬವಿದೆ, ಮಗಳಿದ್ದಾಳೆ, ಬಿಝಿನೆಸ್‌ ಇದೆ. ಅವೆಲ್ಲವನ್ನು ನೋಡಿಕೊಳ್ಳಬೇಕು. ಅಷ್ಟಕ್ಕೇ ಆ ತರಹ ಗಾಸಿಪ್‌ ಹಬ್ಬಿಸಿದ್ದರು. ಇದರಿಂದ ಸಿನಿಮಾದ ಅವಕಾಶಗಳು ಕೂಡಾ ನನಗೆ ಬರಲಿಲ್ಲ. ಅದಕ್ಕಿಂತ ಹೆಚ್ಚಾಗಿ ನಾನು ಬೆಂಗಳೂರಿನಲ್ಲಿ ಇಲ್ಲ ಎಂದು ಅನೇಕರು ಸುದ್ದಿ ಹಬ್ಬಿಸಿದರು. ಹಾಗಾಗಿ, ನನಗೆ ಯಾವುದೇ ಸಿನಿಮಾಗಳ ಆಫ‌ರ್‌ ಬರಲಿಲ್ಲ.

ಆ ನಂತರ ಸಿಕ್ಕವರು, “ಮೇಡಂ ನೀವು ಲಂಡನ್‌ನಲ್ಲಿದ್ರಂತೆ, ಮಂಗಳೂರಿನಲ್ಲಿದ್ರಂತೆ’ ಎನ್ನುತ್ತಿದ್ದರು. ಹೆಸರು ಬರ್ತಾ ಇದ್ದಂತೆ ಗಾಸಿಪ್‌ ಕೂಡಾ ಹೆಚ್ಚುತ್ತದೆ. ನಾನದರ ಬಗ್ಗೆ ತಲೆಕೆಡಿಸಿಕೊಳ್ಳೋದಿಲ್ಲ’ ಎನ್ನುವುದು ರಾಧಿಕಾ ಮಾತು.   ಚಿತ್ರರಂಗಕ್ಕೆ ಬಂದ ದಿನದಿಂದಲೂ ಗಾಸಿಪ್‌ ಕೇಳಿ ಕೇಳಿ ರಾಧಿಕಾ ಸುಸ್ತಾಗಿದ್ದಾರೆ. ಅದು ಎಷ್ಟರ ಮಟ್ಟಿಗೆಂದರೆ ಯಾರು ಏನೇ ಬಂದು ಹೇಳಿದರೂ ಕ್ಯಾರೇ ಅನ್ನದ ಪರಿಸ್ಥಿತಿಗೆ ಅವರು ಬಂದಿದ್ದಾರೆ.

Advertisement

“ಬಹುಶಃ ನಾನು ಯಾರ ಗೋಜಿಗೂ ಹೋಗದೇ ನನ್ನ ಕೆಲಸದಲ್ಲಿ ತೊಡಗಿರುತ್ತೇನೆ ನೋಡಿ, ಅದಕ್ಕೇ ಇರಬೇಕು, ನನ್ನ ಸುತ್ತವೇ ಗಾಸಿಪ್‌ ಬರೋದು. ಗಾಸಿಪ್‌ ಪ್ರಕಾರ, ನನಗೆ ಮೂರು ಮಕ್ಕಳಿರಬೇಕು. ಒಂದನ್ನು ನಾನು ಲಂಡನ್‌ನಲ್ಲಿ ಬಿಟ್ಟಿದ್ದೇನಂತೆ, ಇನ್ನೊಂದು ಮಗುವನ್ನು ಯಾರಿಗೋ ಕೊಟ್ಟಿದ್ದೇನಂತೆ, ಮತ್ತೂಂದು ಮಗು ನನ್ನ ಜೊತೆ ಇದೆ. ಈ ತರಹದ ಗಾಸಿಪ್‌ ಎಲ್ಲಾ ಬಂದಿತ್ತು. ಇವೆಲ್ಲವನ್ನು ನೆನಪಿಸಿಕೊಂಡರೆ ನಗು ಬರುತ್ತದೆ’ ಎನ್ನುತ್ತಾರೆ. 

ನಾವು ದೂರವಾಗಿಲ್ಲ; ಸತ್ಯ ನಮಗಷ್ಟೇ ಗೊತ್ತು
ರಾಧಿಕಾ ಕುರಿತು ಇತ್ತೀಚಿನ ತಿಂಗಳಲ್ಲಿ ಹರಿದಾಡಿದ ದೊಡ್ಡ ಸುದ್ದಿ ಎಂದರೆ ರಾಧಿಕಾ ಹಾಗೂ ಕುಮಾರಸ್ವಾಮಿ ಬೇರೆಯಾಗಿದ್ದಾರಂತೆ. ಈಗ ಯಾವುದೇ ಸಂಬಂಧವಿಲ್ಲವಂತೆ ಎಂಬುದು. ಆದರೆ, ಇಷ್ಟು ದಿನ ರಾಧಿಕಾ ಈ ಬಗ್ಗೆ ಏನೂ ಮಾತನಾಡಿರಲಿಲ್ಲ. ಆದರೆ, ಈಗ ಮಾತನಾಡಿದ್ದಾರೆ. “ಆ ತರಹದ ಗಾಸಿಪ್‌ ಬರುತ್ತಲೇ ಇರುತ್ತದೆ. ಅದಕ್ಕೆ ನಾನೇನು ಮಾಡಬೇಕು ಹೇಳಿ. ನಾನಾಗಿ ಮಾಧ್ಯಮಗಳ ಮುಂದೆ ಬಂದು ಮಾತನಾಡೋದು ಸರಿಯಲ್ಲ. ನೀವು ಕೇಳಿದರಷ್ಟೇ ನಾನು ಹೇಳಬಹುದು.

ನಾವು ತುಂಬಾ ಚೆನ್ನಾಗಿದ್ದೇವೆ. ಖುಷಿಯಾಗಿದ್ದೇವೆ. ಸತ್ಯ ಏನೆಂಬುದು ನಮಗೆ ಗೊತ್ತು. ಅದನ್ನು ಬೇರೆ ಯಾರಿಗೋ ಹೇಳುವ ಅಗತ್ಯ ನನಗಿಲ್ಲ. ನಾನು ಬರೀ ರಾಧಿಕಾ ಅಲ್ಲ, ರಾಧಿಕಾ ಕುಮಾರಸ್ವಾಮಿ. ಸಾಯೋವರೆಗೂ ಆ ಹೆಸರು ಬದಲಾಗಲ್ಲ. ಕೊನೆವರೆಗೂ ನನ್ನ ಆ ಹೆಸರು ಬದಲಾಗಲ್ಲ. ನಾನು ಯಾವತ್ತಿಗೂ ರಾಧಿಕಾ ಕುಮಾರಸ್ವಾಮಿಯಾಗಿಯೇ ಇರುತ್ತೇನೆ. ಆ ಹೆಸರು ಸದಾ ನನ್ನ ಜೊತೆಗೇ ಇರುತ್ತದೆ’ ಎನ್ನುವ ಮೂಲಕ ತನ್ನ ವೈಯಕ್ತಿಕ ಜೀವನದ ಕುರಿತಾದ ಗಾಸಿಪ್‌ಗ್ೂ ತೆರೆ ಎಳೆಯುತ್ತಾರೆ. 

ನಾನು ಮೊದಲಿನ ತರಹ ಅಲ್ಲ
ರಾಧಿಕಾ ಈಗ ಹಿಂದಿನ ತರಹ ಸಿನಿಮಾ ಮೇಲೆ ಸಿನಿಮಾ ಒಪ್ಪಿಕೊಳ್ಳೋದಿಲ್ಲ. ನಿರ್ಮಾಪಕ, ನಿರ್ದೇಶಕರಿಗೆ ಅವರನ್ನು ಸಂಪರ್ಕಿಸೋದು ಕೂಡಾ ಕಷ್ಟದ ಕೆಲಸ. ಅವರದ್ದೇ ಆದ ಕೆಲಸಗಳಲ್ಲಿ ಬಿಝಿಯಾಗಿರುವ ರಾಧಿಕಾ ಯಾಕೆ ಹೆಚ್ಚು ಸಿನಿಮಾ ಒಪ್ಪಿಕೊಳ್ಳುತ್ತಿಲ್ಲ, ಸಿನಿಮಾದ ಆಸಕ್ತಿ ಕಡಿಮೆಯಾಯಿತಾ ಎಂದು ನೀವು ಕೇಳಬಹುದು. ಈ ಪ್ರಶ್ನೆಗೆ ರಾಧಿಕಾ ಉತ್ತರಿಸುತ್ತಾರೆ. “ನಾನು ಮೊದಲಿನ ತರಹ ಅಲ್ಲ’ ಎನ್ನುವ ಮೂಲಕ ಸಿನಿಮಾನೇ ಮುಖ್ಯವಲ್ಲ ಎಂಬುದನ್ನು ಸೂಚ್ಯವಾಗಿ ಹೇಳಿದ್ದಾರೆ.

“ನಾನು ಮೊದಲಿನ ತರಹ ಅಲ್ಲ. ನಾನು ಕೆಲಸಗಳನ್ನು ನೋಡಿಕೊಳ್ಳಬೇಕು, ಬೇರೆ ಬೇರೆ ವಿಷಯಗಳಿಗೆ ಸಮಯ ಮೀಸಲಿಡಬೇಕು. ನನ್ನ ಮಗಳು, ಫ್ಯಾಮಿಲಿ, ನನ್ನ ಬಿಝಿನೆಸ್‌ … ಹೀಗೆ ಎಲ್ಲದರ ಬಗ್ಗೆಯೂ ಗಮನಹರಿಸಬೇಕು. ನಾನು 14ನೇ ವರ್ಷಕ್ಕೆ ಚಿತ್ರರಂಗಕ್ಕೆ ಬಂದಾಗ ಸಿನಿಮಾನೇ ನನ್ನ ಲೈಫ್. ಸಿನಿಮಾ ಬಿಟ್ಟು ಬೇರೇನೂ ಯೋಚನೆ ಮಾಡುತ್ತಿರಲಿಲ್ಲ. ಈಗ ಸಿನಿಮಾ ಒಂದು ಭಾಗವಾಗಿದೆ ಅಷ್ಟೇ. ಪ್ಯಾಶನ್‌ಗಾಗಿ ಸಿನಿಮಾ ಮಾಡುತ್ತಿದ್ದೇನೆ.

ಈಗ ಮೊದಲಿನ ತರಹ ಸಿನಿಮಾ ಒಪ್ಪಿಕೊಳ್ಳೋದು ಕಷ್ಟ. ಕನ್ನಡವಷ್ಟೇ ಅಲ್ಲದೇ, ಮಲಯಾಳಂ, ತಮಿಳಿನಿಂದಲೂ ಆಫ‌ರ್‌ ಬರುತ್ತಿವೆ. ಆದರೆ, ಡೇಟ್ಸ್‌ ಹೊಂದಿಸಲು ಸಾಧ್ಯವಾಗುತ್ತಿಲ್ಲ’ ಎನ್ನುವುದು ರಾಧಿಕಾ ಮಾತು. ಸದ್ಯ ರಾಧಿಕಾಗೆ ವಿಭಿನ್ನ ಪಾತ್ರಗಳು ಹುಡುಕಿಕೊಂಡು ಬರುತ್ತಿವೆಯಂತೆ. ಅದರಲ್ಲೂ ನಾಯಕಿ ಪ್ರಧಾನ ಚಿತ್ರಗಳು ಹೆಚ್ಚಾಗಿ ಬರುತ್ತಿದ್ದು, ತುಂಬಾ ಇಷ್ಟವಾದ ಕಥೆಗಳನ್ನಷ್ಟೇ ಮಾಡಲು ರಾಧಿಕಾ ನಿರ್ಧರಿಸಿದ್ದಾರಂತೆ. 

ರಾಧಿಕಾಗಾಗಿ ಕಥೆ ಕೇಳ್ಳೋ ಟೀಂ
ರಾಧಿಕಾ ಬದಲಾಗಿದ್ದಾರೆ. ಹಿಂದೆಯಾದರೆ ಅವರೇ ಕಥೆ ಕೇಳಿ, ಇಷ್ಟವಾದರೆ ಸಿನಿಮಾ ಓಕೆ ಮಾಡುತ್ತಿದ್ದರು. ಈಗ ಅವರೇ ಹೇಳಿದಂತೆ, ಅವರು ಮೊದಲಿನ ತರಹ ಇಲ್ಲ. ಆ ಬದಲಾವಣೆ ಅವರ ಕಥೆ ಆಯ್ಕೆಯ ವಿಚಾರದಲ್ಲೂ ಆಗಿದೆ. ರಾಧಿಕಾಗೆ ಕಥೆ ಹೇಳುವ ಮೊದಲು ನೀವು ಅವರ ಟೀಂಗೆ ಹೇಳಬೇಕು. ಟೀಂನವರಿಗೆ ಇಷ್ಟವಾದರೆ ಅದು ರಾಧಿಕಾ ಅವರನ್ನು ತಲುಪುತ್ತದೆ. “ನನ್ನದೇ ಆದ ಒಂದು ಟೀಂ ಇದೆ. ಮೊದಲು ಅವರು ಕಥೆ ಕೇಳುತ್ತಾರೆ. ನಂತರ ನಾವೆಲ್ಲರೂ ಚರ್ಚೆ ಮಾಡುತ್ತೇವೆ. ಕಥೆ ಇಷ್ಟವಾದರೆ ಮುಂದುವರಿಯುತ್ತೇನೆ. ಮುಖ್ಯವಾಗಿ ನಿರ್ಮಾಪಕರು ಕೂಡಾ ಸ್ಟ್ರಾಂಗ್‌ ಆಗಿರಬೇಕು.

ನನ್ನ ಆಯ್ಕೆ ಮಾಡಬೇಕೆಂದರೆ ಅವರು ಸ್ಟ್ರಾಂಗ್‌ ಆಗಿರಲೇಬೇಕು. ಮೊದಲಿನ ರೀತಿ ಬೇರೆ ಈಗ ನನ್ನ ಸುತ್ತಮುತ್ತ ಬೇರೆ ರೀತಿ ಇದೆ. ಹಾಗಂತ ಬಜೆಟ್‌, ಸಂಭಾವನೆ ಓವರ್‌ ಅಂತಲ್ಲ, ಒಬ್ಬ ಬೇಡಿಕೆಯಲ್ಲಿರುವ ನಟಿ ಎಷ್ಟು ಸಂಭಾವನೆ ಪಡೆಯುತ್ತಾಳ್ಳೋ, ಅವಳ ಟ್ರೀಟ್‌ಮೆಂಟ್‌ ಹೇಗಿರುತ್ತದೋ ಅಷ್ಟನ್ನು ಪೂರೈಸಬೇಕಾಗುತ್ತದೆ. ಹಾಗಂತ ರಾಧಿಕಾ ಪೇಮೆಂಟ್‌ ವಿಷಯದಲ್ಲಿ ಕಾಂಪ್ರಮೈಸ್‌ ಆಗೋದೇ ಇಲ್ಲ ಎಂದೇನಿಲ್ಲ. ಸಣ್ಣ ಬಜೆಟ್‌ನ ಸಿನಿಮಾಗಳಲ್ಲಿ ಒಳ್ಳೆಯ ಕಥೆ, ಪಾತ್ರವಿರುತ್ತದೆ. ಆ ತರಹದ ಕಥೆ ಇವರನ್ನು ಮೆಚ್ಚಿಸಿದರೆ, ಸಂಭಾವನೆಯ ಮಾತು ಆಮೇಲೆ ಎಂಬ ತೀರ್ಮಾನ ಕೂಡಾ ಮಾಡಿದ್ದಾರೆ. 

ಹೋಂಬ್ಯಾನರ್‌ನಲ್ಲಿ ಸಿನಿಮಾ
ರಾಧಿಕಾ ಕುಮಾರಸ್ವಾಮಿಯವರ ಹೋಂಬ್ಯಾನರ್‌ನಲ್ಲಿ “ಲಕ್ಕಿ’ ಹಾಗೂ “ಸ್ವೀಟಿ’ ಎಂಬ ಎರಡು ಸಿನಿಮಾಗಳು ಬಂದಿರೋದು ನಿಮಗೆ ಗೊತ್ತೇ ಇದೆ. ಆ ನಂತರ ಯಾವುದೇ ಸಿನಿಮಾಗಳನ್ನು ಅವರು ನಿರ್ಮಾಣ ಮಾಡಲಿಲ್ಲ. ಈಗ ಮತ್ತೆ ಹೋಂಬ್ಯಾನರ್‌ನಲ್ಲಿ ಸಿನಿಮಾ ಮಾಡುವ ಆಲೋಚನೆ ಅವರಲ್ಲಿದೆ. “ಹೋಂಬ್ಯಾನರ್‌ನಲ್ಲಿ ಸಿನಿಮಾ ಮಾಡಲು ನೀನು ಡೇಟ್ಸ್‌ ಕೊಡುತ್ತಿಲ್ಲ ಎಂದು ನನ್ನ ಅಣ್ಣ ಗಲಾಟೆ ಮಾಡ್ತಿದ್ದಾನೆ.

ಒಂಚೂರು ಸಮಯ ಸಿಕ್ಕಾಗ ಬೇರೆ ಸಿನಿಮಾ ಒಪ್ಕೋತ್ತೀಯಾ ಎನ್ನುತ್ತಾನೆ. ಹಾಗಾಗಿ, ಈಗ ಹೋಂಬ್ಯಾನರ್‌ನಲ್ಲಿ ಸಿನಿಮಾ ಮಾಡುವ ಬಗ್ಗೆಯೂ ಯೋಚಿಸುತ್ತಿದ್ದೇವೆ. ಈಗಾಗಲೇ ಎರಡು ಕಥೆ ಕೇಳಿದ್ದು ಸದ್ಯದಲ್ಲೇ ಒಂದು ಫೈನಲ್‌ ಆಗಲಿದೆ’ ಎನ್ನುತ್ತಾರೆ ರಾಧಿಕಾ. ಸದ್ಯ ರಾಧಿಕಾ “ಕಾಂಟ್ರ್ಯಾಕ್ಟ್’ ಹಾಗೂ “ರಾಜೇಂದ್ರ ಪೊನ್ನಪ್ಪ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. “ಕಾಂಟ್ರ್ಯಾಕ್ಟ್’ನಲ್ಲಿ ರಾಧಿಕಾ ಅವರಿಗೆ ಡ್ಯಾನ್ಸ್‌ಗೆ ಅವಕಾಶವಿರುವ ಜೊತೆಗೆ ಮಾಡರ್ನ್ ಹಾಗೂ ಹೋಮ್ಲಿ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರಂತೆ. 

* ಗಾಸಿಪ್‌ ಪ್ರಕಾರ, ನನಗೆ ಮೂರು ಮಕ್ಕಳಿರಬೇಕು
* ಎಲ್ಲೂ ಹೋಗಿಲ್ಲ, ಹೋಗೋದು ಇಲ್ಲ
* ನನಗೆ ಸಿನಿಮಾವೊಂದೇ ಲೈಫ್ ಅಲ್ಲ
* ಸಾಯೋವರೆಗೂ ನನ್ನ ಹೆಸರು ಬದಲಾಗಲ್ಲ
* ಪ್ಯಾಶನ್‌ಗಾಗಿ ಸಿನಿಮಾ ಮಾಡುತ್ತಿದ್ದೇನೆ

ಬರಹ: ರವಿಪ್ರಕಾಶ್‌ ರೈ
ಚಿತ್ರಗಳು: ಮನು ಮತ್ತು ಸಂಗ್ರಹ 

Advertisement

Udayavani is now on Telegram. Click here to join our channel and stay updated with the latest news.

Next