Advertisement

ಸು”ವಾಸನೆ’: ತಿಮಿಂಗಿಲ ತ್ಯಾಜ್ಯದಿಂದ ಸುಗಂಧ ದ್ರವ್ಯ!

09:53 AM Oct 25, 2019 | mahesh |

ವಾಂತಿ ಎಂದರೆ ಗಲೀಜು ಎನ್ನುವ ನಮಗೆ ಈ ಸಂಗತಿ ಅಚ್ಚರಿಯಾಗಿ ತೋರುವುದರಲ್ಲಿ ಸಂಶಯವಿಲ್ಲ. ಕೆಲ ತಿಮಿಂಗಿಲಗಳು ಸ್ರವಿಸುವ ವಾಂತಿ ಮೇಣದಂತೆ ಸಮುದ್ರದ ಮೇಲೆ ತೇಲುತ್ತದೆ. ಅದಕ್ಕೆ ಅತ್ಯಧಿಕ ಬೆಲೆಯಿದೆ. ಏಕೆಂದರೆ ಅದರಿಂದ ಸುಗಂಧ ದ್ರವ್ಯವನ್ನು ತಯಾರಿಸುತ್ತಾರೆ. ಹೀಗಾಗಿ ಸಮುದ್ರದಿಂದ ತಿಮಿಂಗಿಲಗಳ ವಾಂತಿ ಮೇಣವನ್ನು ಸಂಗ್ರಹಿಸುವ ದೊಡ್ಡ ತಂಡಗಳೇ ಇವೆ.

Advertisement

ಒಂದು ಸಲ ಹೀಗಾಯ್ತು. ಒಮನ್‌ ದೇಶದಲ್ಲಿ ಮೂರು ಮೀನುಗಾರರು ಸಮುದ್ರಕ್ಕೆ ಹೊರಟ್ಟಿದ್ದರು. ಮಧ್ಯೆ ಬಿಳಿ ಬಣ್ಣದ ತೇಲುತ್ತಿರುವ ವಸ್ತುವೊಂದು ಕಂಡಿತು. ಇದ್ದಕ್ಕಿದ್ದಂತೆ ಮೀನುಗಾರರು ಖುಷಿ ಗೊಂಡರು. ಕೋಟಿ ಕೋಟಿ ಲಾಟರಿ ಹೊಡೆದಂತೆ ಸಂತಸ ಪಟ್ಟರು. ಅದರ ಹತ್ತಿರ ಹೋಗಿ ನೋಡಿದರೆ, 80. ಕೆಜಿ ಇದೆ ಬಿಳಿ ಬಣ್ಣದ ವಸ್ತು. ಅರೆ, ಇದೇನು? ಹೀಗೇಕೆ ಇವರು ಕುಣಿದು ಕುಪ್ಪಳಿಸುತ್ತಿದ್ದಾರಲ್ಲಾ? ನಿಧಿ ಏನಾದರೂ ದೊರೆಯಿತೇ? ನಿಧಿ ಸಿಕ್ಕಿತ್ತು. ಆದರೆ ಅದು ಚಿನ್ನ, ಬೆಳ್ಳಿ, ವಜ್ರ ವೈಢೂರ್ಯಗಳಲ್ಲ. ತಿಮಿಂಗಿಲ ಹೊರ ಬಿಟ್ಟ ತ್ಯಾಜ್ಯ. (ಇದನ್ನು ಮೀನಿನ ವಾಂತಿ ಅಂತ ಕೂಡ ಕರೆಯುತ್ತಾರೆ) ಇದರ ಬೆಲೆ ಕೋಟ್ಯಂತರ ರೂ. ಎಂದು ಅಂದಾಜಿಸುತ್ತಾರೆ. ಉಂಟು.

ಏನಿದು ತಿಮಿಂಗಿಲ ತ್ಯಾಜ್ಯ?
ಕೆಲ ತಿಮಿಂಗಿಲಗಳು ವಿಶಿಷ್ಟ ವಿಧಾನದಲ್ಲಿ ವಾಂತಿ ಮಾಡುತ್ತವೆ. ಇದು 2-3 ದಿನಗಳಲ್ಲಿ ಘನ ರೂಪವನ್ನು ಪಡೆದುಕೊಂಡು ಮೇಣದ ರೂಪಕ್ಕೆ ತಿರುಗುತ್ತದೆ. ಇದು ಘನರೂಪಕ್ಕೆ ಬಂದಾಗ ಹೆಚ್ಚಿನ ಪ್ರಮಾಣದ ಪರಿಮಳವನ್ನು ಬೀರುತ್ತದೆ. ಹಾಗಾಗಿ, ಸುಗಂಧ ದ್ರವ್ಯಗಳ ತಯಾರಿಕೆಯಲ್ಲಿ ಇದನ್ನು ಹೇರಳವಾಗಿ ಬಳಸಲಾಗುತ್ತದೆ. ಇದನ್ನು ಇಂಗ್ಲೀಷ್‌ನಲ್ಲಿ “ಅಂಬರ್‌ ಗ್ರಿಸ್‌’ ಎಂದು ಕರೆಯುತ್ತಾರೆ. ಈ “ಅಂಬರ್‌ ಗ್ರಿಸ್‌’ನ ವಿಶೇಷತೆ ಏನೆಂದರೆ, ಅದರಿಂದ ತಯಾರಾದ ಸುಗಂಧ ದ್ರವ್ಯ ಅತೀ ದೀರ್ಘ‌ ಕಾಲ ಸುವಾಸನೆಯನ್ನು ಬೀರುವುದು. ಕಾಳಸಂತೆಯಲ್ಲಿ ಇದನ್ನು ಮನಸ್ಸಿಗೆ ಬಂದಷ್ಟು ಬೆಲೆಗೆ ಮಾರಾಟ ಮಾಡಲಾಗುತ್ತದೆ.

ಉಪಯೋಗಗಳು
ಕಸ್ತೂರಿಯಂತೆಯೇ, ಸುಗಂಧ ದ್ರವ್ಯ ತಯಾರಿಕೆಯಲ್ಲಿ ತಿಮಿಂಗಿಲಗಳ ಮೇಣವನ್ನು ಹೆಚ್ಚಾಗಿ ಬಳಸುತ್ತಾರೆ. ಆಹಾರ ಮತ್ತು ಪಾನೀಯದಲ್ಲಿ ಬಳಸಲಾಗುತ್ತದೆ. ಅಂಬರ್‌ ಗ್ರಿಸ್‌ನಿಂದ ತಯಾರಿಸಿದ ಖಾದ್ಯವೆಂದರೆ ಇಂಗ್ಲೆಂಡ್‌ನ‌ ರಾಜ ಕಿಂಗ್‌ ಚಾರ್ಲ್ಸ್‌ಗೆ ಅತ್ಯಂತ ಅಚ್ಚುಮೆಚ್ಚಾಗಿತ್ತು. ಯುರೋಪಿನಲ್ಲಿ ಪ್ಲೇಗ್‌ ಎಂಬ ಸಾಂಕ್ರಾಮಿಕ ರೋಗ ಹರಡಿದಾಗ ಜನರು ಅಂಬರ್‌ ಗ್ರಿಸ್‌ ಅನ್ನು ಹಚ್ಚಿಕೊಳ್ಳುವುದರಿಂದ ಪ್ಲೇಗ್‌ ಬರದಂತೆ ತಡೆಯಬಹುದೆಂದು ನಂಬಿದ್ದರು.

ವಾಂತಿಪತ್ತೆಗೆ ಶ್ವಾನಗಳ ಬಳಕೆ
ನಾಯಿಗಳು “ಅಂಬರ್‌ ಗ್ರಿಸ್‌’ನ ವಾಸನೆಯನ್ನು ಶೀಘ್ರವಾಗಿ ಗುರುತಿಸಬಲ್ಲುದು. ಹೀಗಾಗಿ, ಸಮುದ್ರದಲ್ಲಿರುವ ಅಂಬರ್‌ ಗ್ರಿಸ್‌ ಶೋಧನೆಗೆ ನಾಯಿಯನ್ನು ಬಳಸುವುದು ವಾಡಿಕೆ. ಅಂಬರ್‌ ಗ್ರಿಸ್‌ ಹೆಚ್ಚಾಗಿ ಅಟ್ಲಾಂಟಿಕ್‌ ಸಾಗರ, ಆಫ್ರಿಕಾ, ಬ್ರೆಜಿಲ್‌, ಮಡಗಾಸ್ಕರ್‌, ವೆಸ್ಟ್‌ಇಂಡೀಸ್‌, ಮಾಲ್ದಿವ್ಸ್‌, ಚೀನಾ, ಜಪಾನ್‌, ಭಾರತ, ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್‌ ಕಡಲು ಮತ್ತು ತೀರಗಳಲ್ಲಿ ಕಂಡುಬರುತ್ತದೆ. ಅಂಬರ್‌ ಗ್ರಿಸ್‌ ವಿವಿಧ ಆಕಾರ ಮತ್ತು ಗಾತ್ರಗಳ ಉಂಡೆಗಳಲ್ಲಿ ಕಂಡುಬರುತ್ತದೆ. ಇದು ಸಾಮಾನ್ಯವಾಗಿ 15 ಗ್ರಾಂನಿಂದ 50 ಕೆ.ಜಿವರೆಗೆ ತೂಕವಿರುತ್ತದೆ.

Advertisement

– ಸಂತೋಷ್‌ರಾವ್‌ ಪೆರ್ಮುಡ

Advertisement

Udayavani is now on Telegram. Click here to join our channel and stay updated with the latest news.

Next