Advertisement

ಹಸಿ, ಒಣ ಕಸ ವಿಂಗಡಿಸದಿದ್ದರೆ ದಂಡ

09:27 PM Aug 07, 2019 | Lakshmi GovindaRaj |

ಕೆ.ಆರ್‌.ನಗರ: ಪಟ್ಟಣದ ವ್ಯಾಪ್ತಿಯಲ್ಲಿ ಘನತ್ಯಾಜ್ಯ ವಸ್ತುಗಳ ನಿಯಮ 2016ರ ಸಂಪೂರ್ಣ ಅನುಷ್ಠಾನಕ್ಕಾಗಿ ಹಸಿರು ಪೀಠದ ಆದೇಶದಂತೆ ಮನೆಗಳಲ್ಲಿ ಹಸಿಕಸ, ಒಣಕಸ ಹಾಗೂ ಸ್ಯಾನಿಟರಿ ತ್ಯಾಜ್ಯಗಳನ್ನು ಪ್ರತ್ಯೇಕಿಸಿ ಮತ್ತು ಅಪಾಯಕಾರಿ ಕಸಗಳಾಗಿ ಕಡ್ಡಾಯವಾಗಿ ಬೇರ್ಪಡಿಸಿ ಪುರಸಭೆ ವಾಹನಗಳಿಗೆ ನೀಡಬೇಕು. ತಪ್ಪಿದಲ್ಲಿ ದಂಡ ವಿಧಿಸಲಾಗುವುದು ಎಂದು ಪುರಸಭೆ ಮುಖ್ಯಾಧಿಕಾರಿ ಶಿವಣ್ಣ ಎಚ್ಚರಿಕೆ ನೀಡಿದರು.

Advertisement

ಪಟ್ಟಣದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಅಡುಗೆ ಮನೆಯ ತ್ಯಾಜ್ಯ, ತರಕಾರಿ, ಪೂಜಾ ಮನೆಯ ಒಣಗಿದ ಹೂವು ಇತರೆ ಕರಗುವ ಪದಾರ್ಥಗಳನ್ನು ಹಸಿ ಕಸವಾಗಿ, ರಟ್ಟು, ಟಿನ್‌, ಪ್ಲಾಸ್ಟಿಕ್‌, ಕಬ್ಬಿಣ, ತೆಂಗಿನ ಕರಟ, ನೀರಿನ ಬಾಟಲಿ, ಒಡೆದ ಆಟಿಕೆಗಳು ಇನ್ನಿತರ ಪ್ಯಾಕೇಜಿಂಗ್‌ ವಸ್ತುಗಳನ್ನು ಒಣ ಕಸವನ್ನಾಗಿ ಹಾಗೂ ಹೆಂಗಸರು ಬಳಸುವ ಸ್ಯಾನಿಟರಿ ಪ್ಯಾಡ್‌, ಮಕ್ಕಳ ಅಥವಾ ವಯಸ್ಕ ರೋಗಿಗಳ ಡೈಫ‌ರ್‌ಗಳನ್ನು ಸ್ಯಾನಿಟರಿ ತ್ಯಾಜ್ಯವಾಗಿ ಪ್ರತ್ಯೇಕಿಸಿ ಕಾಗದದಿಂದ ಸುತ್ತಿ ಪುರಸಭೆ ವಾಹನಗಳಿಗೆ ನೀಡಬೇಕು. ಹಾಗೂ ಬಳಸಿದ ಬ್ಯಾಟರಿ, ಒಡೆದ ಗಾಜು, ವಿದ್ಯುತ್‌ ಬಲ್ಬು, ಅವಧಿ ಮೀರಿದ ಔಷಧ ಇನ್ನಿತರ ಎಲೆಕ್ಟ್ರಾನಿಕ್‌ ಅಪಾಯಕಾರಿ ತ್ಯಾಜ್ಯಗಳಾಗಿದ್ದು, ಇವುಗಳನ್ನು ಪ್ರತ್ಯೇಕಿಸಿ ನೀಡಬೇಕು ಎಂದು ಮನವಿ ಮಾಡಿದರು.

ಅಂಗಡಿಯವರೇ ತ್ಯಾಜ್ಯ ಸಂಸ್ಕರಿಸಿ: ಕಲ್ಯಾಣ ಮಂಟಪ, ಮೀನು, ಕೋಳಿ, ಮಾಂಸ ಮಾರಾಟಗಾರರು ಕಡ್ಡಾಯವಾಗಿ ಪ್ರತ್ಯೇಕವಾಗಿ ತ್ಯಾಜ್ಯವನ್ನು ಅವರೇ ಸಂಸ್ಕರಿಸಿಕೊಳ್ಳಬೇಕು ಅಥವಾ ಪುರಸಭೆ ನಿಗದಿತ ವಾಹನಕ್ಕೆ ಪ್ರತ್ಯೇಕಿಸಿ ನೀಡಬೇಕು. ಯಾವುದೇ ಸಾರ್ವಜನಿಕ, ವೈಯುಕ್ತಿಕ, ರಾಜಕೀಯ, ಧಾರ್ಮಿಕ, ಸಮಾರಂಭಗಳನ್ನು ಪಟ್ಟಣದಲ್ಲಿ ಮನೆಗಳ ಬಳಿ ಆಯೋಜಿಸುವ ಮೊದಲು ಪುರಸಭೆಗೆ ಮಾಹಿತಿ ನೀಡಿ ಸ್ವಚ್ಚತಾ ಮುಂಗಡ ಪಾವತಿಸಿ ಅನುಮತಿ ಪಡೆಯಬೇಕು. ತಪ್ಪಿದಲ್ಲಿ ದಂಡ ವಿಧಿಸಲಾಗುವುದು ಎಂದು ಎಚ್ಚರಿಸಿದರು.

ಈಗಾಗಲೇ ಪಟ್ಟಣದ ಹಲವೆಡೆ ಕಾನೂನು ಉಲ್ಲಂ ಸುವವರಿಗೆ ದಂಡ ವಿಧಿಸುವ ಬಗ್ಗೆ ಮಾಹಿತಿ ನೀಡಲಾಗಿದ್ದು, ತೆರೆದ ಚರಂಡಿ, ಖಾಲಿ ನಿವೇಶನಗಳಲ್ಲಿ ತ್ಯಾಜ್ಯ ಬಿಸಾಡಿದರೆ ಕಟ್ಟಡದ ಭಗ್ನಾವಶೇಷಗಳನ್ನು ಎಲ್ಲೆಂದರಲ್ಲಿ ಸುರಿದರೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು. ಪ್ಲಾಸ್ಟಿಕ್‌ ಕ್ಯಾರಿ ಬ್ಯಾಗ್‌, ಇನ್ನಿತರ ಪ್ಲಾಸ್ಟಿಕ್‌ ಉತ್ಪನ್ನಗಳ ಬಳಕೆ ಕಡ್ಡಾಯವಾಗಿ ನಿಷೇಧಿಸಲಾಗಿದ್ದು ಮನೆಯಿಂದ ಮಾರುಕಟ್ಟೆಗೆ ಬಟ್ಟೆಯ ಬ್ಯಾಗ್‌ಗಳನ್ನು ತೆಗೆದುಕೊಂಡು ಹೋಗಿ ಕ್ಯಾನ್ಸರ್‌ ಕಾಯಿಲೆಗೆ ಕಾರಣವಾಗುವ ಪ್ಲಾಸ್ಟಿಕ್‌ ಬಳಕೆಯನ್ನು ನಿಲ್ಲಿಸಬೇಕು ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಪುರಸಭೆ ಪರಿಸರ ಎಂಜಿನಿಯರ್‌ ರವಿಕುಮಾರ್‌, ಕಂದಾಯ ಅಧಿಕಾರಿ ನೀಲಾ ಮತ್ತಿತರರು ಹಾಜರಿದ್ದರು.

ಪ್ಲಾಸ್ಟಿಕ್‌ ಬಳಸಿದರೆ ಲಕ್ಷ ರೂ.ವರೆಗೆ ದಂಡ: ಘನತ್ಯಾಜ್ಯ ವಸ್ತುಗಳ ನಿಯಮಗಳ ಪ್ರಕಾರ ಯಶಸ್ವಿ ಅನುಷ್ಠಾನಕ್ಕಾಗಿ ಉಪನಿಯಮಗಳನ್ನು ಅಳವಡಿಸಿಕೊಳ್ಳಲಾಗಿದ್ದು, ಉಲ್ಲಂಘನೆಗೆ ಆ.2019ರಿಂದ ಶಿಸ್ತು ಕ್ರಮ ಕೈಗೊಂಡು ದಂಡ ವಿಧಿಸಲಾಗುವುದು. ಘಟನೆಗಳು ಪುನರಾವರ್ತನೆಯಾದರೆ ಸ್ಥಳೀಯ ನ್ಯಾಯಾಲಯಗಳಲ್ಲಿ ಮೊಕದ್ದಮೆ ದಾಖಲಿಸಲಾಗುವುದು. ಪ್ರಕಟಣೆಯ ನಂತರವೂ ಯಾವುದೇ ವ್ಯಕ್ತಿ ಉದ್ದಿಮೆದಾರರು ಸಾರ್ವಜನಿಕ ನಿಷೇಧಿತ ಪ್ಲಾಸ್ಟಿಕ್‌ ವಸ್ತುಗಳ ಬಳಕೆ ಮಾಡುವುದು ಕಂಡು ಬಂದಲ್ಲಿ ನಿಯಮಗಳ ಅನುಸಾರ 500 ರೂ. ನಿಂದ ಒಂದು ಲಕ್ಷದವರೆಗೆ ದಂಡ ವಿಧಿಸಲಾಗುವುದು. ಅಲ್ಲದೇ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಲಾಗುವುದು ಎಂದು ಮುಖ್ಯಾಧಿಕಾರಿ ಶಿವಣ್ಣ ಎಚ್ಚರಿಕೆ ನೀಡಿದರು.

Advertisement

ಕಸದಿಂದ ಗೊಬ್ಬರ ಮಾಡಿ ಮಳೆ ನೀರು ಸಂಗ್ರಹಿಸಿ: ಹಸಿ ಕಸವನ್ನು ಮನೆಗಳಲ್ಲಿಯೇ ಪೈಪ್‌ ಕಾಂಪೋಸ್ಟಿಂಗ್‌ ಮಾದರಿ ಅಳವಡಿಸಿಕೊಂಡು ಗೊಬ್ಬರ ಮಾಡಬಹುದಾಗಿದೆ. ಹೆಚ್ಚಿನ ವಿವರಗಳಿಗೆ ಸ್ವಚ್ಚತಾ ಸಿಬ್ಬಂದಿಯಿಂದ ತಿಳಿದು ಮನೆಗಳಲ್ಲಿ ಮಳೆ ನೀರು ಕೊಯ್ಲು ಮಾಡಿ ಪರಿಸರ ಸ್ನೇಹಿಯಾಗಿ ಕೆಲಸ ಮಾಡಬೇಕು. ಜತೆಗೆ ಈ ಎಲ್ಲಾ ಕಾರ್ಯಗಳಲ್ಲಿ ಪುರಸಭೆ ಸಿಬ್ಬಂದಿ ಜೊತೆ ಕೈಜೋಡಿಸಿ ಸುಂದರ ನಗರವಾಗಿಸಲು ಸಹಕಾರ ನೀಡಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ಶಿವಣ್ಣ ಮನವಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next