Advertisement
ಕಪ್ಪು ಕೊಕ್ಕರೆ, ಸಮುದ್ರ ಕೊಕ್ಕರೆ, ಸಮುದ್ರಬಿಳಿ, ಬೂದು ಕೊಕ್ಕರೆ- ಹೀಗೆ ಅನೇಕ ಹೆಸರುಗಳಿವೆ ಈ ಹಕ್ಕಿಗೆ. ಚಿಕ್ಕ, ದೊಡ್ಡ ಕೊಕ್ಕಿನ ಹಕ್ಕಿಯ ಆಕಾರ ಮತ್ತು ಬಣ್ಣದಲ್ಲಿ ತುಂಬಾ ಹೋಲಿಕೆ ಇರುವ ನೀರಹಕ್ಕಿ. ಇದು ಊರ ಕೋಳಿಯಷ್ಟು ದೊಡ್ಡದು. ಸುಮಾರು 63 ಸೆಂ.ಮೀ. ಉದ್ದ ಇರುತ್ತದೆ. ದಕ್ಷಿಣ ಯುರೋಪ್, ಏಷಿಯಾ, ಆಫ್ರಿಕಾಗಳಲ್ಲೂ ಇದು ಕಾಣಸಿಗುತ್ತದೆ.
Related Articles
Advertisement
ಪ್ರಾಯಕ್ಕನುಗುಣವಾಗಿ ಈ ಹಕ್ಕಿ ಬೇರೆ ಬೇರೆ ಬಣ್ಣಗಳಿಗೆ ಈ ಹಕ್ಕಿ ಬದಲಾಗುತ್ತದೆ. ಈ ಪ್ರಬೇಧದ ಬಿಳಿ ಛಾಯೆಯ ಹಕ್ಕಿಯ ಚುಂಚಿನ ಬುಡದಲ್ಲಿ ಬೂದು, ಮಧ್ಯದಲ್ಲಿ ಕೇಸರಿ, ತುದಿಯಲ್ಲಿ ತಿಳಿ ಹಳದಿ ಬಣ್ಣದಿಂದ ಕೂಡಿರುತ್ತದೆ. ಮೈಎಲ್ಲಾ ಬಿಳಿಬಣ್ಣ, ಕಣ್ಣು ಹಳದಿ ಕಾಲಿನ ಬುಡದಲ್ಲಿ ತಿಳಿ ಹಳದಿ ಬಣ್ಣ ಇದ್ದು, ತುದಿ ಬೆರಳು ತಿಳಿ ಲಿಂಬುವಿನ ಹಳದಿ ಬಣ್ಣದ್ದಾಗಿರುತ್ತದೆ. ಮರಿಮಾಡುವ ಸಮಯದಲ್ಲಿ ಈ ಹಕ್ಕಿಯ ತಲೆಯಲ್ಲಿರುವ ರೋಮದಂತಿರುವ ಜುಟ್ಟು ಮತ್ತು ಬಾಲದಲ್ಲಿ ಮೂಡುವ ಗರಿಯ ಗುಚ್ಚ ಸ್ನೇಕ್ ಬರ್ಡ್ ಅನ್ನು ನೆನಪಿಸುತ್ತದೆ.
ಪಶ್ಚಿಮ ಕರಾವಳಿಯ ಕಾಂಡ್ಲಾ ಕಾಡು ಇದಕ್ಕೆ ಪ್ರಿಯವಾದ ಸ್ಥಳ. ಇತರ ಕೊಕ್ಕರೆಗಳಂತೆ ಮರದ ತುಂಡನ್ನು ಸೇರಿಸಿ ಗೂಡು ಕಟ್ಟುವುದು ಇದರ ವಿಶೇಷತೆ. ಸಾಮಾನ್ಯವಾಗಿ ಇದು 5-10ಮೀ. ಎತ್ತರದಲ್ಲಿ ಗೂಡನ್ನು ನಿರ್ಮಿಸುತ್ತದೆ. ಅತಿ ಕಡಿಮೆ ಎಂದರೆ 0.6 ಮೀ. ಎತ್ತರದಲ್ಲಿ ಗೂಡು ಮಾಡಿದ ಉದಾಹರಣೆಯೂ ಇದೆ. 3-4 ತಿಳಿ ಸಮುದ್ರ ನೀಲಿ ಬಣ್ಣದ ಮೊಟ್ಟೆ ಇಡುವುದು. ಸಾಮಾನ್ಯವಾಗಿ ಕಾಂಡ್ಲಾ ಗಿಡದ ಕೋಲನ್ನು ಗೂಡಿನ ಅಟ್ಟಣಿಗೆ ನಿರ್ಮಿಸಲು ಉಪಯೋಗಿಸುತ್ತದೆ. ಮೊದಲಿನ ಮೊಟ್ಟೆ ಇಟ್ಟ ಕೂಡಲೇ ಮೊಟ್ಟೆಗೆ ಕಾವು ಕೊಡುವುದು ಗಂಡು ಹೆಣ್ಣು ಎರಡೂ ಕಾವುಕೊಡುವ ಕಾರ್ಯ ನಿರ್ವಹಿಸುತ್ತದೆ.
ಎತ್ತರದ ಜಾಗದಲ್ಲಿ ಗೂಡು ಕಟ್ಟುವುದರಿಂದ ಕೆಲವೊಂದು ಸಂದರ್ಭಗಳಲ್ಲಿ ಆ ಅಟ್ಟಣಿಗೆಯಿಂದ ಕೆಳಗೆ ಬಿದ್ದು ಚಿಕ್ಕಮರಿ ಸಾಯುತ್ತದೆ. ಒಂದು ತಿಂಗಳವರೆಗೆ ತಂದೆ ತಾಯಿಯ ರಕ್ಷಣೆಯಲ್ಲಿ ಮರಿ ಬೆಳೆಯುವುದು. ಸಮುದ್ರ ತೀರದಲ್ಲಿರುವ ಸುಣ್ಣದ ಕಲ್ಲಿನಲ್ಲಿರುವ ಹುಳು, ಕಪ್ಪೆ ಚಿಪ್ಪು, ಕಲ್ಲು ಮಾಂಸ, ಮೃದ್ವಂಗಿ ಹಾಗೂ ಸಮುದ್ರತೀರದಲ್ಲಿರುವ ಚಿಕ್ಕ ಜಲಚರ, ಮೀನು ಏಡಿ ಇದರ ಮುಖ್ಯ ಆಹಾರ. ಸಮುದ್ರ ತೀರದ ಮಾಲಿನ್ಯ ತಡೆದರೆ ಈ ಹಕ್ಕಿಗಳು ಉಳಿದಾವು.