ಮುಂಬಯಿ: ನಗರದ ಫೋರ್ಟ್ ಪ್ರದೇಶದ ಮೋದಿ ಸ್ಟ್ರೀಟ್‌ನಲ್ಲಿ ಕಳೆದ ಸುಮಾರು ಏಳುವರೆ ದಶಕಗಳಿಂದ ಸೇವಾ ನಿರತವಾಗಿರುವ ಸ್ವರ್ಗೀಯ ಕೃಷ್ಣಪ್ಪ ಕೆ. ಕೋಟ್ಯಾನ್ ಮತ್ತು ನಾರಾಯಣ ಬಿ. ಸಾಲ್ಯಾನ್ ಅವರ ಮಾರ್ಗದರ್ಶನದಲ್ಲಿ ರೂಪುಗೊಂಡ ವೆಸ್ಟರ್ನ್ ಇಂಡಿಯಾ ಶ್ರೀ ಶನಿಮಹಾತ್ಮ ಸೇವಾ ಸಮಿತಿಯ 74 ನೇ ವಾರ್ಷಿಕ ಶನಿ ಮಹಾಪೂಜೆಯನ್ನು ಧಾರ್ಮಿಕ ಕೈಂಕರ್ಯಗಳೊಂದಿಗೆ ವಿಧಿವತ್ತಾಗಿ ನೆರವೇರಿಸಿ ಸೇವಾ ಸಮಿತಿಯ ಅಮೃತ ಮಹೋತ್ಸವಕ್ಕೆ ಚಾಲನೆ ನೀಡಲಾಯಿತು.
ಶನಿವಾರ ಫೋರ್ಟ್‌ದ ಮಿಂಟ್ ರಸ್ತೆಯ ಖಾಂಜಿ ಕೇತ್ಸಿà ಸಭಾಗೃಹದಲ್ಲಿ ಬೆಳಗ್ಗೆ ಹರೀಶ್ ಶಾಂತಿ ಹೆಜ್ಮಾಡಿ ಅವರ ಪೌರೋಹಿತ್ಯದಲ್ಲಿ ಗಣಹೋಮ, ಸತ್ಯನಾರಾಯಣ ಪೂಜೆ ನೆರವೇರಿಸಿ ಶ್ರೀ ಶನಿದೇವರ ಕಲಶ ಪ್ರತಿಷ್ಠಾಪನೆಗೈದು ತೀರ್ಥ ಪ್ರಸಾದ ವಿತರಿಸಿ ಅನುಗ್ರಹಿಸಿದರು. ಸೇವಾ ಸಮಿತಿಯ ಗೌರವ ಪ್ರಧಾನ ಕಾರ್ಯದರ್ಶಿ ವಿಶ್ವನಾಥ್ ಭಂಡಾರಿ ಮತ್ತು ರಕ್ಷಿತಾ ವಿಶ್ವನಾಥ್ ಹಾಗೂ ಕೋಶಾಧಿಕಾರಿ ಶರತ್ ಜಿ. ಪೂಜಾರಿ ಮತ್ತು ವಿನಿತಾ ಎಸ್. ಪೂಜಾರಿ ದಂಪತಿಗಳು ಪೂಜಾಧಿಗಳ ಯಜಮಾನತ್ವ ವಹಿಸಿದ್ದರು.
ಶ್ರೀ ವೆಸ್ಟರ್ನ್ ಇಂಡಿಯಾ ಶ್ರೀ ಶನಿಮಹಾತ್ಮ ಸೇವಾ ಸಮಿತಿ ಮತ್ತು ವಿದ್ಯಾದಾಯಿನಿ ಭಜನಾ ಮಂಡಳಿ ಫೋರ್ಟ್ ಇವರಿಂದ ಭಜನಾ ಕಾರ್ಯಕ್ರಮ ನಡೆಯಿತು. ಮಧ್ಯಾಹ್ನ ಯಕ್ಷಗಾನ ತಾಳಮದ್ದಳೆ ರೂಪದಲ್ಲಿ ಶನಿಗ್ರಂಥ ಪಾರಾಯಣ ಹಾಗೂ ಅನ್ನಸಂತರ್ಪಣೆ, ರಾತ್ರಿ ಶ್ರೀ ಶನಿದೇವರಿಗೆ ಮಹಾ ಮಂಗಳಾರತಿ, ತೀರ್ಥಪ್ರಸಾದ ಮತ್ತು ಅನ್ನಸಂತರ್ಪಣೆ ನೆರವೇರಿತು. ನೂರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಶ್ರೀ ಶನಿ ಮಹಾತ್ಮಾ ಸೇವಾ ಸಮಿತಿಯ ಅಧ್ಯಕ್ಷ ಜೆ. ಜೆ. ಕೋಟ್ಯಾನ್, ಉಪಾಧ್ಯಕ್ಷರುಗಳಾದ ರವಿ ಎಲ್.ಬಂಗೇರ ಮತ್ತು ಜನಾರ್ಧನ ಶೆಟ್ಟಿ, ಜೊತೆ ಕಾರ್ಯದರ್ಶಿ ರಾಜೇಶ್ ಸುವರ್ಣ, ಜೊತೆ ಕೋಶಾಧಿಕಾರಿಗಳಾದ ಪ್ರಶಾಂತ ಕರ್ಕೇರ ಮತ್ತು ಅಕ್ಷಯ್ ಸುವರ್ಣ, ಹಿರಿಯ ಸದಸ್ಯರು, ಸಲಹೆಗಾರರಾದ ಬಿ. ಬಿ. ಕೋಟ್ಯಾನ್, ಸದಾನಂದ ಸುವರ್ಣ, ಮೋಹನ್ ಡಿ. ಪೂಜಾರಿ ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರು, ಮಂದಿರದ ಆರ್ಚಕರು, ಭುವಾಜಿಗಳು ಸೇರಿದಂತೆ ವಿಶೇಷ ಆಮಂತ್ರಿತ ಸದಸ್ಯರು, ದಾನಿಗಳು, ಭಕ್ತರು ಪಾಲ್ಗೊಂಡು ಶ್ರೀ ಶನಿದೇವರ ಕೃಪೆಗೆ ಪಾತ್ರರಾದರು.
ಚಿತ್ರ-ವರದಿ: ರೋನ್ಸ್ ಬಂಟ್ವಾಳ್