Advertisement

ಪಶ್ಚಿಮ ಘಟ್ಟ ಪರಿಸರ ಸೂಕ್ಷ್ಮ ಪ್ರದೇಶದಿಂದ ಒಕ್ಕಲೆಬ್ಬಿಸುವುದಿಲ್ಲ

06:00 AM Dec 22, 2018 | Team Udayavani |

ನವದೆಹಲಿ: ಪಶ್ಚಿಮ ಘಟ್ಟಕ್ಕೆ ನೀಡಲಾಗಿರುವ ಪರಿಸರಾತ್ಮಕವಾಗಿ ಅತ್ಯಂತ ಸೂಕ್ಷ್ಮ ವಲಯ (ಇಎಸ್‌ಎ) ಎಂಬ ಘೋಷಣೆ ಹಿಂಪಡೆಯುವುದಿಲ್ಲ. ಅಂಥ ಪ್ರಸ್ತಾಪವೇ ಸರ್ಕಾರದ ಮುಂದೆ ಇಲ್ಲ ಎಂದು ಕೇಂದ್ರ ಪರಿಸರ ಖಾತೆ ಸಹಾಯಕ ಸಚಿವ ಮಹೇಶ್‌ ಶರ್ಮಾ ತಿಳಿಸಿದ್ದಾರೆ. ಶುಕ್ರವಾರ ಲೋಕಸಭೆಗೆ ಲಿಖೀತ ಉತ್ತರದಲ್ಲಿ ಈ ಮಾಹಿತಿ ನೀಡಿರುವ ಅವರು, ಸೂಕ್ಷ್ಮ ಪ್ರದೇಶ ಎಂದು ಘೋಷಿಸಲಾಗಿರುವ ಸ್ಥಳದಲ್ಲಿ ಸ್ಥಳೀಯರು ಕೃಷಿ ಮತ್ತು ತೋಟಗಾರಿಕಾ ಬೆಳೆಗಳನ್ನು ಬೆಳೆದಿರುವ ಹಿನ್ನೆಲೆಯಲ್ಲಿ ಅವರನ್ನು ಒಕ್ಕಲೆಬ್ಬಿಸುವ ಕ್ರಮವೂ ಇಲ್ಲವೆಂದು ಹೇಳಿದ್ದಾರೆ. ಕೇಂದ್ರ ಸಚಿವರ ಈ ಉತ್ತರದಿಂದಾಗಿ ಕರ್ನಾಟಕದ ಪಶ್ಚಿಮ ಘಟ್ಟ ವ್ಯಾಪ್ತಿ ಪ್ರದೇಶದ ಅರಣ್ಯ ಪ್ರದೇಶದ ಅಂಚಿನಲ್ಲಿ ಕೃಷಿ, ತೋಟಗಾರಿಕೆ ಬೆಳೆ ಮಾಡಿಕೊಂಡವರಿಗೆ ಸದ್ಯಕ್ಕೆ ನೆಮ್ಮದಿ ಸಿಕ್ಕಿದಂತಾಗಿದೆ.

Advertisement

ಒಟ್ಟು 56,825 ಚ.ಕಿ.ಮೀ. ವ್ಯಾಪ್ತಿ ಪೈಕಿ 6 ಸಾವಿರ ಚ.ಕಿ.ಮೀ ಪ್ರದೇಶವನ್ನು ಪರಿಸರಾತ್ಮಕ ಸೂಕ್ಷ್ಮ ವಲಯದಿಂದ ಹೊರಗಿಡಲಾಗುತ್ತದೆ ಎಂಬ ಶಂಕೆಯ ಹಿನ್ನೆಲೆಯಲ್ಲಿ ಅವರು ಈ ಪ್ರತಿಕ್ರಿಯೆ ನೀಡಿದ್ದಾರೆ.  ಪರಿಸರ ಸಚಿವಾಲಯ ಇತ್ತೀಚೆಗಷ್ಟೇ ನಾಲ್ಕನೇ ಬಾರಿಗೆ ಈ ಬಗ್ಗೆ ಪ್ರಕಟಣೆ ಹೊರಡಿಸಿದೆ.  ಆ.24ರಂದು ಎನ್‌ಜಿಟಿ ಹೊರಡಿಸಿದ ಆದೇಶದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದಿದ್ದಾರೆ.

ಪರಿಸರ ಸೂಕ್ಷ್ಮ ವಲಯ ಎಂಬ ಘೋಷಣೆ ಹಿಂಪಡೆದರೆ ಕರ್ನಾಟಕ, ಕೇರಳ, ಮಹಾರಾಷ್ಟ್ರ, ಗೋವಾ, ಗುಜರಾತ್‌, ತಮಿಳುನಾಡುಗಳಲ್ಲಿರುವ ಜನರಿಗೆ ಸಮಸ್ಯೆ ಉಂಟಾದೀತು.  ಈ ರಾಜ್ಯಗಳಲ್ಲಿರುವ 56,825 ಚ.ಕಿ.ಮೀ ವ್ಯಾಪ್ತಿಯ ಅರಣ್ಯ ಪ್ರದೇಶವನ್ನು ಪರಿಸರಾತ್ಮಕ ಸೂಕ್ಷ್ಮ ಪ್ರದೇಶ (ಇಎಸ್‌ಎ) ಎಂದು ಗುರುತಿಸಲಾಗಿದೆ. ಅದರ ಪ್ರಮಾಣ ತಗ್ಗಿಸಿದರೆ ಜೀವ ವೈವಿಧ್ಯಕ್ಕೆ ತೊಂದರೆಯಾದೀತು ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.