ನವದೆಹಲಿ: ಪಶ್ಚಿಮ ಘಟ್ಟದಲ್ಲಿ ಪರಿಸರ ಸೂಕ್ಷ್ಮ ವಲಯಗಳ ಅಂತಿಮ ವರದಿಯನ್ನು ಸಲ್ಲಿಸುವಂತೆ ಪರಿಸರ ಮತ್ತು ಅರಣ್ಯ ಸಚಿವಾಲಯಕ್ಕೆ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ (ಎನ್‌ಜಿಟಿ) ಸೂಚಿಸಿದೆ. ಒಂದು ತಿಂಗಳೊಳಗೆ ವರದಿ ಮಾಡುವಂತೆ ಪರಿಸರ ಸಚಿವಾಲಯಕ್ಕೆ ಎನ್‌ಜಿಟಿ ಮುಖ್ಯಸ್ಥ ಆದರ್ಶ ಕುಮಾರ್ ನೇತೃತ್ವದ ನ್ಯಾಯಪೀಠ ಸೂಚಿಸಿದೆ.
2017 ಸೆಪ್ಟೆಂಬರ್ 8 ರಂದು ಹೊರಡಿಸಿದ್ದ ಆದೇಶದಲ್ಲಿ ಸಾಧ್ಯವಾದಷ್ಟು ಬೇಗ, ಅಂದರೆ ಒಂದು ವರ್ಷದೊಳಗೆ ವರದಿಯನ್ನು ಸಲ್ಲಿಸಲಾಗುತ್ತದೆ ಎಂದು ಪರಿಸರ ಸಚಿವಾಲಯ ಒಪ್ಪಿತ್ತು. ಈ ಹಿನ್ನೆಲೆಯಲ್ಲಿ, ತಿಂಗಳೊಳಗೆ ಸಚಿವಾಲಯವು ವರದಿಯನ್ನು ಸಲ್ಲಿಸಲಿ ಎಂದು ನ್ಯಾಯಪೀಠ ಸೂಚಿಸಿದೆ.
ಆರು ತಿಂಗಳೊಳಗೆ ವರದಿಯನ್ನು ಅಂತಿಮಗೊಳಿಸಬೇಕು ಎಂದು ನ್ಯಾಯಾಧಿಕರಣ ಆದೇಶ ಹೊರಡಿಸಿದ್ದರೂ, ಪರಿಸರ ಸಚಿವಾಲಯವು ಇನ್ನೂ ಪಶ್ಚಿಮ ಘಟ್ಟದಲ್ಲಿನ ಪರಿಸರ ಸೂಕ್ಷ್ಮ ವಲಯಗಳ ಅಧಿಸೂಚನೆಯನ್ನು ಅಂತಿಮಗೊಳಿಸಿಲ್ಲ ಎಂಬುದಾಗಿ ನ್ಯಾಯಮಂಡಳಿಗೆ ಮೊರೆ ಹೋಗಲಾಗಿತ್ತು.
ಪಶ್ಚಿಮಘಟ್ಟದ ಪರಿಸರವು ಗಂಭೀರ ಒತ್ತಡಕ್ಕೆ ಒಳಗಾಗಿರುವ ಹಿನ್ನೆಲೆಯಲ್ಲಿ, ಈ ಭಾಗದಲ್ಲಿ ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟು ಮಾಡುವ ಯಾವುದೇ ಚಟುವಟಿಕೆಗಳಿಗೆ ಪಶ್ಚಿಮ ಘಟ್ಟ ವ್ಯಾಪ್ತಿಗೆ ಒಳಪಡುವ ಆರು ರಾಜ್ಯಗಳು ಅನುಮತಿ ನೀಡಬಾರದು ಎಂದು ಎನ್‌ಜಿಟಿ ಆದೇಶಿಸಿತ್ತು.
ಈ ಮಧ್ಯೆ, ಪಶ್ಚಿಮ ಘಟ್ಟ ಪರಿಸರ ಸೂಕ್ಷ್ಮ ವಲಯಗಳನ್ನು ಗುರುತಿಸಿ ಹೊರಡಿಸಿದ್ದ ಆದೇಶ ಕಳೆದ ಆಗಸ್ಟ್ 26 ಕ್ಕೆ ಅವಧಿ ಮೀರಿದ್ದರಿಂದ, ಇದರ ಕರಡು ಪ್ರತಿಯನ್ನು ಮರು ಜಾರಿಗೊಳಿಸಲು ಅವಕಾಶ ನೀಡಿತ್ತು. 2017 ಫೆಬ್ರವರಿ 27 ರಂದು ಹೊರಡಿಸಿದ ಅಧಿಸೂಚನೆಯ ಪ್ರಕಾರ ಪರಿಸರ ಸೂಕ್ಷ್ಮ ವಲಯಗಳ ಪಟ್ಟಿಯಲ್ಲಿ ಬದಲಾವಣೆ ಮಾಡಲು ಆರು ತಿಂಗಳ ಕಾಲಾವಕಶವನ್ನು ಎನ್‌ಜಿಟಿ ನೀಡಿತ್ತು.
ಇದರಂತೆ ಪ್ರಕಟಿಸಲಾದ ಕರಡು ಅಧಿಸೂಚನೆಯಲ್ಲಿ ಗುಜರಾತ್, ಮಹಾರಾಷ್ಟ್ರ, ಗೋವಾ, ಕರ್ನಾಟಕ, ಕೇರಳ ಮತ್ತು ತಮಿಳುನಾಡಿನ 56,825 ಚದರ ಕಿ.ಮೀ ವ್ಯಾಪ್ತಿಯ ಪ್ರದೇಶವನ್ನು ಗುರುತಿಸಲಾಗಿತ್ತು.
ಆದರೆ ಇದಕ್ಕೆ ನಾಗರಿಕರು ಹಾಗೂ ರಾಜಕೀಯ ಪಕ್ಷಗಳಿಂದ ಭಾರಿ ವಿರೋಧ ವ್ಯಕ್ತವಾದ್ದರಿಂದ ವರದಿ ಮರುಪರಿಶೀಲನೆಗಾಗಿ ಕೆ.ಕಸ್ತೂರಿರಂಗನ್ ಸಮಿತಿ ನೇಮಿಸಲಾಗಿತ್ತು. ಕಸ್ತೂರಿರಂಗನ್ ವರದಿಯಲ್ಲಿ ಕೇವಲ ಶೇ. 37 ರಷ್ಟು ಪ್ರದೇಶವನ್ನು ಪರಿಸರ ಸೂಕ್ಷ್ಮ ವಲಯ ಎಂದು ಪರಿಗಣಿಸಲು ಶಿಫಾರಸು ಮಾಡಲಾಗಿತ್ತು.