Advertisement

ಪಶ್ಚಿಮಘಟ್ಟದ ತಪ್ಪಲಲ್ಲಿ ರಸ್ತೆಗೆ ಸಹಸ್ರಾರು ಮರ ಬಲಿ?

11:59 AM Jan 30, 2017 | |

ಬೆಂಗಳೂರು: ಎತ್ತಿನ ಹೊಳೆ ನೀರಾವರಿ ಯೋಜನೆ ಬೆನ್ನಲ್ಲೇ ಇದೀಗ ರಾಷ್ಟ್ರೀಯ ಹೆದ್ದಾರಿ ನಿರ್ಮಾಣದ ಹೆಸರಿನಲ್ಲಿ ಪಶ್ಚಿಮ ಘಟ್ಟದ ತಪ್ಪಲಿಗೆ ಹೊಂದಿಕೊಂಡಿರುವ 20 ಸಾವಿರಕ್ಕೂ ಹೆಚ್ಚು ಮರಗಳ ಮಾರಣಹೋಮಕ್ಕೆ ಪ್ರಕ್ರಿಯೆ ಶುರುವಾಗಿದೆ. ಆ ಮೂಲಕ, ದಕ್ಷಿಣ ಕನ್ನಡದ ಜೀವನದಿ ‘ನೇತ್ರಾವತಿ’ಯ ಅಸ್ವಿತ್ವಕ್ಕೆ ಮತ್ತೂಮ್ಮೆ ಕೊಡಲಿಯೇಟು ಬೀಳುವ ಆತಂಕ ಶುರುವಾಗಿದೆ.

Advertisement

ರಾಷ್ಟ್ರೀಯ ಹೆದ್ದಾರಿ-48ರಲ್ಲಿ ಗುಂಡ್ಯ-ಶಿರಾಡಿಯಿಂದ ಬಿ.ಸಿ.ರೋಡ್‌ ವರೆಗಿನ ಸುಮಾರು 63 ಕಿಮೀ. ದೂರದಹೆದ್ದಾರಿಯನ್ನು ಮೇಲ್ದರ್ಜೆಗೇರಿಸುವ ಮೂಲಕ ಚತುಷ್ಪಥ ರಸ್ತೆಯನ್ನಾಗಿ ಪರಿವರ್ತಿಸುವ ಯೋಜನೆಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕೈಗೆತ್ತಿ ಕೊಂಡಿದೆ. ಸುಮಾರು 1,260 ಕೋಟಿ ರೂ. ವೆಚ್ಚದ ಈ ಹೆದ್ದಾರಿ ವಿಸ್ತರಣಾ ಯೋಜನೆ ಗುತ್ತಿಗೆಯನ್ನು ಪ್ರತಿಷ್ಠಿತ ಎಲ್‌ ಅಂಡ್‌ ಟಿ ಕಂಪನಿಗೆ ವಹಿಸಲಾಗಿದೆ.

ಎರಡೂವರೆ ವರ್ಷಗಳಲ್ಲಿ ಪೂರ್ಣಗೊಳಿಸಲು ಉದ್ದೇಶಿಸಿರುವ ಈ ಅಡ್ಡಹೊಳೆ -ಬಿ.ಸಿ.ರೋಡ್‌ ಚತುಷ್ಪಥ ಹೆದ್ದಾರಿ ನಿರ್ಮಾಣ ಯೋಜನೆಗೆ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿದ್ದು, ಇನ್ನೇನು ಕಾಮಗಾರಿಗೆ ಚಾಲನೆ ದೊರೆಯಬೇಕಿದೆ. ಆದರೆ, ಆತಂಕದ ಅಂಶವೆಂದರೆ ಅಡ್ಡಹೊಳೆ -ಬಿ.ಸಿ.ರೋಡ್‌ ಚತುಷ್ಪಥಹೆದ್ದಾರಿ ನಿರ್ಮಾಣಕ್ಕೆ ಪಶ್ಚಿಮ ಘಟ್ಟದ ತಪ್ಪಲಿನ ನಿತ್ಯ ಹರಿದ್ವರ್ಣವಾದ ದಟ್ಟಕಾಡಿನ 20 ಸಾವಿರಕ್ಕೂ ಹೆಚ್ಚು ಬೃಹತ್‌ ಮರಗಳನ್ನು ಕಡಿದುರುಳಿಸಲಾಗುವುದು. ಅದಕ್ಕಾಗಿ ರಾಷ್ಟ್ರೀಯ ಹೆದ್ದಾರಿ-48ರಲ್ಲಿ ಗುಂಡ್ಯದಿಂದ ಬಿ.ಸಿ.ರೋಡ್‌ ವರೆಗಿನ ಹೆದ್ದಾರಿಯ ಎರಡು ಬದಿಯ ಮರಗಳನ್ನು ಗುರುತಿಸುವ ಕಾರ್ಯವನ್ನು ಅರಣ್ಯ ಇಲಾಖೆ ಸಿಬ್ಬಂದಿ ಪ್ರಾರಂಭಿಸಿದ್ದಾರೆ. 

ಆದರೆ, ಈ ರಸ್ತೆಯನ್ನು ಚತುಷ್ಪಥ ಮಾಡಿದರೆ ಅಪಾರ ಪ್ರಮಾಣದ ಅರಣ್ಯ ಸಂಪತ್ತು ನಾಶವಾಗುವ ಜತೆಗೆ ಇಡೀ ಪಶ್ಚಿಮ ಘಟ್ಟದ ಜೀವ ವೈವಿಧ್ಯತೆ ಬುಡಮೇಲು ಆಗುವ ಆತಂಕವೂ ಎದುರಾಗಿದೆ. ಹೀಗಾಗಿ, ಎತ್ತಿನಹೊಳೆ ಯೋಜನೆಯಂತೆ ಇದೀಗ ಅಡ್ಡಹೊಳೆ-ಬಿ.ಸಿ.ರೋಡ್‌ ಹೆದ್ದಾರಿ ಯೋಜನೆಗೂ ಪರಿಸರವಾದಿಗಳಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.ಅಡ್ಡಹೊಳೆ-ಬಿಸಿ. ರೋಡ್‌ ರಸ್ತೆ ಮೇಲ್ದರ್ಜೆಗೇರಿಸಬೇಕಾದರೆ, ನೇತ್ರಾವತಿ ನದಿಗೆ ಉಪ್ಪಿನಂಗಡಿ ಮತ್ತು ಬಿ.ಸಿ.ರೋಡ್‌ನ‌ಲ್ಲಿ ಎರಡು ದೊಡ್ಡ ಮಟ್ಟದ ಸೇತುವೆ ನಿರ್ಮಿಸಬೇಕಾಗಿದೆ.

ಅಲ್ಲದೆ, ಈ ಹೆದ್ದಾರಿಗೆ ಹೊಂದಿಕೊಂಡು ಸುಮಾರು 14 ಕಡೆ ಸಣ್ಣ ಪ್ರಮಾಣದ ಸೇತುವೆ ಹಾಗೂ 9 ಅಂಡರ್‌ಪಾಸ್‌ ನಿರ್ಮಾಣವಾಗಲಿವೆ. ಜತೆಗೆ ಕಲ್ಲಡ್ಕ, ಉಪ್ಪಿನಂಗಡಿ ಸೇರಿದಂತೆ ಸುಮಾರು 14.5 ಕಿಮೀ. ದೂರಕ್ಕೆ ಪ್ರತ್ಯೇಕ ಸರ್ವೀಸ್‌ ರಸ್ತೆ ಹಾಗೂ ಎರಡು ಮೇಲು ಸೇತುವೆಗಳನ್ನು ನಿರ್ಮಿಸಲು ಕೂಡ ಯೋಜನೆ ರೂಪಿಸಲಾಗಿದೆ. ಅರಣ್ಯ ಇಲಾಖೆ ಪ್ರಕಾರ, ಈ ಚತುಷ್ಪಥ ರಸ್ತೆ ನಿರ್ಮಾಣಕ್ಕೆ ಗುಂಡ್ಯದಿಂದ ಬಿ.ಸಿ.ರೋಡ್‌ವರೆಗೆ ಈಗಿರುವ ಹೆದ್ದಾರಿಯ ಇಕ್ಕೆಲಗಳಲ್ಲಿ ಹೆಚ್ಚಿನ ಸಂಖ್ಯೆ ಮರಗಳನ್ನು ಕಡಿದುರುಳಿಸಬೇಕಾಗುತ್ತದೆ.

Advertisement

ಹೆದ್ದಾರಿ ವಿಸ್ತರಣೆ ಜತೆಗೆ ಸರ್ವೀಸ್‌ ರಸ್ತೆ ಹಾಗೂ ಹೆಚ್ಚಿನ ಸಂಖ್ಯೆಯ ಸೇತುವೆಗಳನ್ನು ಕೂಡ ನಿರ್ಮಿಸಬೇಕಾಗಿರುವುದರಿಂದ ನಿರೀಕ್ಷೆಗೂ ಮೀರಿದ ಪ್ರಮಾಣದಲ್ಲಿ ಅರಣ್ಯ ಸಂಪತ್ತು ನಾಶವಾಗುವುದರಲ್ಲಿ ಅನುಮಾನವಿಲ್ಲ. ಈ ಹಿನ್ನೆಲೆಯಲ್ಲಿ ರಸ್ತೆ ನಿರ್ಮಾಣಕ್ಕೆ ಕಡಿಯಬೇಕಾಗಿರುವ ಮರಗಳ ಗಣತಿ ಕಾರ್ಯಕ್ಕೆ ಕಳೆದ ವಾರ ಚಾಲನೆ ನೀಡಲಾಗಿದೆ. ಈ ಗಣತಿ ಕಾರ್ಯ ಮುಗಿದ ಬಳಿಕ, ವರದಿ ಸಿದ್ಧಪಡಿಸಿ ಮರಗಳನ್ನು ಕಡಿಯುವ ಕೆಲಸ ಪ್ರಾರಂಭವಾಗಲಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಯೊಬ್ಬರು “ಉದಯವಾಣಿ’ಗೆ ತಿಳಿಸಿದ್ದಾರೆ.

ಆದರೆ, ಈ ಚತುಷ್ಪಥ ರಸ್ತೆ ನಿರ್ಮಾಣ ಯೋಜನೆಗೆ ಪರಿಸರವಾದಿಗಳಿಂದ ತೀವ್ರ ವಿರೋಧ ವ್ಯಕ್ತವಾಗತೊಡಗಿದೆ. “ಅಡ್ಡಹೊಳೆ-ಬಿ.ಸಿ. ರೋಡ್‌ವರೆಗಿನ ಹೆದ್ದಾರಿಯನ್ನು ಮೇಲ್ದರ್ಜೆಗೇರಿಸಿದರೆ, ನೇತ್ರಾವತಿ ನದಿ ಭವಿಷ್ಯದಲ್ಲಿ ಕಣ್ಮರೆಯಾಗುವ ಆತಂಕವಿದೆ. ಏಕೆಂದರೆ, ಪಶ್ಚಿಮ ಘಟ್ಟದಲ್ಲಿ ಹುಟ್ಟಿ ಹರಿಯುವ ಕೆಂಪುಹೊಳೆ, ಕಾಡುಮನೆ ಹೊಳೆ, ಎತ್ತಿನ ಹೊಳೆ, ಅಡ್ಡಹೊಳೆ ಸೇರಿದಂತೆ ನೇತ್ರಾವತಿಯನ್ನು ಸಂಪರ್ಕಿಸುವ ಏಳು ಉಪ ನದಿಗಳಿಗೆ ಈ ಹೆದ್ದಾರಿ ನಿರ್ಮಾಣದಿಂದ ಅಪಾಯವಿದೆ.

ಹೀಗಾಗಿ, ಸಾವಿರಾರು ಸಂಖ್ಯೆ ಮರಗಳನ್ನು ನಾಶಪಡಿಸುವ ಜತೆಗೆ ಪಶ್ಚಿಮ ಘಟ್ಟದ ತಪ್ಪಲಿನ ಜೀವ-ಜಲಕ್ಕೆ ಧಕ್ಕೆಯುಂಟು ಮಾಡುವ ಈ ಯೋಜನೆ ಕೈಬಿಡಬೇಕು’ ಎನ್ನುವುದು “ಸಹ್ಯಾದ್ರಿ ಸಂಚಯ’ ಪರಿಸರ ಸಂಘಟನೆ ದಿನೇಶ್‌ ಹೊಳ್ಳ ಅವರ ಒತ್ತಾಯ. ಯೋಜನೆ ಶುರುವಾದರೆ, ನೇತ್ರಾ­ವತಿ ನದಿಗೆ ಪ್ರಮುಖ ಉಪ­ನದಿ­ಯಾ­ಗಿರುವ ಕೆಂಪುಹೊಳೆ ,ಅಡ್ಡಹೊಳೆ ನದಿಯ ಅಸ್ತಿತ್ವ ಕಳೆದುಕೊಳ್ಳುತ್ತದೆ. ಅಷ್ಟೇಅಲ್ಲ, ಯೋಜನೆಯಿಂದ ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಮಳೆಯೂ ಕಡಿ­ಮೆಯಾಗುತ್ತದೆ ಎನ್ನುತ್ತಾರೆ ದಿನೇಶ್‌.

ರಸ್ತೆ ವಿಸ್ತರಣೆಯಾಗಬೇಕಾದರೆ ಕಾಡು ಕಡಿಯಲೇಬೇಕು. ಜನರಿಗೆ ಅನುಕೂಲ ಮಾಡಲು ಹೊರಟಾಗ, ಪರಿಸರಕ್ಕೆ ತೊಂದರೆಯಾಗುವುದು ಸಹಜ. ಈ ಯೋಜನೆಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕೈಗೆತ್ತಿಕೊಂಡಿದ್ದು, ಆ ಪ್ರಕಾರ ರಾಜ್ಯ ಸರ್ಕಾರ ಸೂಕ್ತ ಅನುಕೂಲ ಕಲ್ಪಿಸುತ್ತಿದೆ. ಅಡ್ಡಹೊಳೆ-ಬಿ.ಸಿ.ರೋಡ್‌ ಹೆದ್ದಾರಿಯನ್ನು ಮೇಲ್ದರ್ಜೆಗೆ ಏರಿಸುವುದರಿಂದ ಅಪಾರ ಪ್ರಮಾಣದ ಅರಣ್ಯ ಸಂಪತ್ತು ನಾಶವಾಗುತ್ತದೆ. ಇದು ಪಶ್ಚಿಮಘಟ್ಟ ಮಾತ್ರವಲ್ಲ, ಎಲ್ಲೆಲ್ಲಿ ರಾಷ್ಟ್ರೀಯ ಹೆದ್ದಾರಿಯು ಅರಣ್ಯದೊಳಗೆ ಹಾದುಹೋಗಿದೆಯೋ ಅಲ್ಲೆಲ್ಲ ಈ ಸಮಸ್ಯೆ ಎದುರಾಗಿದೆ. ಹೀಗಿರುವಾಗ, ರಸ್ತೆನ್ನು ಅಭಿವೃದ್ಧಿಪಡಿಸಬೇಕಾದರೆ, ಆ ಬಗ್ಗೆ ವೈಜ್ಞಾನಿಕವಾಗಿ ಅಧ್ಯಯನ ಮಾಡಿ ಕಡಿಮೆ ಪ್ರಮಾಣದಲ್ಲಿ ಪರಿಸರಕ್ಕೆ ಹಾನಿಯಾಗುವಂತೆ ಕ್ರಮ ತೆಗೆದುಕೊಳ್ಳಲಾಗುವುದು.
-ರಮಾನಾಥ ರೈ, ಅರಣ್ಯ ಮತ್ತು ಪರಿಸರ ಸಚಿವ  

* ಸುರೇಶ್‌ ಪುದುವೆಟ್ಟು

Advertisement

Udayavani is now on Telegram. Click here to join our channel and stay updated with the latest news.

Next