Advertisement

ವೆಸ್ಟರ್ನ್ ಆ್ಯಂಡ್‌ ಸದರ್ನ್ ಓಪನ್‌ ಟೆನಿಸ್‌; ಸೆಮಿಫೈನಲ್‌ ತಲುಪಿದ ಜೊಕೋವಿಕ್‌

08:15 PM Aug 27, 2020 | mahesh |

ನ್ಯೂಯಾರ್ಕ್‌: ವಿಶ್ವದ ನಂ.1 ಟೆನಿಸಿಗ ನೊವಾಕ್‌ ಜೊಕೋವಿಕ್‌ “ವೆಸ್ಟರ್ನ್ ಆ್ಯಂಡ್‌ ಸದರ್ನ್ ಓಪನ್‌’ ಕೂಟದ ಸೆಮಿಫೈನಲ್‌ ತಲುಪಿದ್ದಾರೆ. ಬುಧವಾರ ರಾತ್ರಿ ನಡೆದ ಕ್ವಾರ್ಟರ್‌ ಫೈನಲ್‌ ಹಣಾಹಣಿಯಲ್ಲಿ ಅವರು ಜರ್ಮನಿಯ ಜಾನ್‌ ಲೆನಾರ್ಡ್‌ ಸ್ಟ್ರಫ್ ವಿರುದ್ಧ 6-3, 6-1 ಅಂತರದ ಗೆಲುವು ದಾಖಲಿಸಿದರು.

Advertisement

ಉಪಾಂತ್ಯದಲ್ಲಿ ಜೊಕೋವಿಕ್‌ ಸ್ಪೇನಿನ ರಾಬರ್ಟೊ ಬಟಿಸ್ಟ ಅಗುಟ್‌ ಸವಾಲನ್ನು ಎದುರಿಸಲಿದ್ದಾರೆ. ಹಾಲಿ ಚಾಂಪಿಯನ್‌ ಡ್ಯಾನಿಲ್‌ ಮೆಡ್ವೆಡೇವ್‌ ಅವರನ್ನು 1-6, 6-4, 6-3 ಅಂತರದಿಂದ ಹಿಮ್ಮೆಟ್ಟಿಸಿದ್ದು ಅಗುಟ್‌ ಸಾಹಸವಾಗಿದೆ. ಇದು 2016ರ ಬಳಿಕ ಅಗುಟ್‌ ಕಾಣುತ್ತಿರುವ ಮೊದಲ ಹಾಗೂ ಒಟ್ಟಾರೆಯಾಗಿ 3ನೇ ಮಾಸ್ಟರ್ ಸೆಮಿಫೈನಲ್‌ ಆಗಿದೆ.

ಕಳೆದ ವರ್ಷ ಓಹಿಯೋದ ಮಾಸನ್‌ನಲ್ಲಿ ನಡೆದ ಕೂಟದಲ್ಲಿ ಡ್ಯಾನಿಲ್‌ ಮೆಡ್ವೆಡೇವ್‌ “ರಾಕ್‌ವುಡ್‌ ಪಾಟೆರಿ ಕಪ್‌’ ಎತ್ತಿ ಮೆರೆದಿದ್ದರು. ಕೊರೊನಾ ಕಾರಣದಿಂದ ಈ ವರ್ಷದ ಕೂಟವನ್ನು ನ್ಯೂಯಾರ್ಕ್‌ನಲ್ಲಿ ಆಯೋಜಿಸಲಾಗಿದೆ.

ನವೋಮಿ ಒಸಾಕಾ ಪ್ರತಿಭಟನೆ
ವನಿತೆಯರ ಸಿಂಗಲ್ಸ್‌ ವೇಳೆ ಅಚ್ಚರಿಯ ವಿದ್ಯಮಾನವೊಂದು ಸಂಭವಿಸಿತು. ಗೆದ್ದು ಸೆಮಿಫೈನಲ್‌ ಪ್ರವೇಶಿಸಿದ ಜಪಾನಿನ ನವೋಮಿ ಒಸಾಕಾ, ಇತ್ತೀಚಿನ ಜನಾಂಗೀಯ ತಾರತಮ್ಯವನ್ನು ಪ್ರತಿಭಟಿಸಿ ಕೂಟದಿಂದ ಹಿಂದೆ ಸರಿದರು. “ಓರ್ವ ಕ್ರೀಡಾಪಟುವಿಗಿಂತ ಮೊದಲು ನಾನೋರ್ವ ಕರಿಯ ಮಹಿಳೆ’ ಎಂಬುದಾಗಿ 22 ವರ್ಷದ ನವೋಮಿ ಒಸಾಕಾ ಟ್ವೀಟ್‌ ಮಾಡಿದ್ದಾರೆ.

ಕ್ವಾರ್ಟರ್‌ ಫೈನಲ್‌ನಲ್ಲಿ ಒಸಾಕಾ ಎಸ್ತೋನಿಯಾದ ಅನೆಟ್‌ ಕೊಂಟಾವೀಟ್‌ ವಿರುದ್ಧ 4-6, 6-2, 7-5 ಅಂತರದ ಜಯ ಸಾಧಿಸಿದ್ದರು. ಈ ಗೆಲುವಿನ 2 ಗಂಟೆಗಳ ಬಳಿಕ ತಮ್ಮ ನಿರ್ಧಾರವನ್ನು ಪ್ರಕಟಿಸಿದರು. ಸೆಮಿಫೈನಲ್‌ನಲ್ಲಿ ಅವರು ಬೆಲ್ಜಿಯಂನ ಎಲಿಸ್‌ ಮಾರ್ಟೆನ್ಸ್‌ ವಿರುದ್ಧ ಸೆಣಸಬೇಕಿತ್ತು. ಮಾರ್ಟೆನ್ಸ್‌ ಅಮೆರಿಕದ ಅರ್ಹತಾ ಆಟಗಾರ್ತಿ ಜೆಸ್ಸಿಕಾ ಪೆಗುಲ ಅವರನ್ನು 6-1, 6-3ರಿಂದ ಮಣಿಸಿದರು.

Advertisement

ಇನ್ನೊಂದು ಕ್ವಾರ್ಟರ್‌ ಫೈನಲ್‌ನಲ್ಲಿ ಜೊಹಾನ್ನಾ ಕೊಂಟಾ ಗ್ರೀಸ್‌ನ ಮರಿಯಾ ಸಕ್ಕರಿ ಸವಾಲನ್ನು 6-4, 6-3ರಿಂದ ಹತ್ತಿಕ್ಕಿದರು. ಹಿಂದಿನ ಸುತ್ತಿನಲ್ಲಿ ಸೆರೆನಾ ವಿಲಿಯಮ್ಸ್‌ ಅವರನ್ನು ಕೆಡವಿದ ಹೆಗ್ಗಳಿಕೆ ಸಕ್ಕರಿ ಅವರದಾಗಿತ್ತು. ಕೊಂಟಾ ಅವರ ಎದುರಾಳಿ ಮಾಜಿ ನಂ.1 ಆಟಗಾರ್ತಿ ವಿಕ್ಟೋರಿಯಾ ಅಜರೆಂಕಾ. ಅವರು ಟ್ಯುನಿಶಿಯಾದ ಓನ್ಸ್‌ ಜಾಬರ್‌ ವಿರುದ್ಧ 7-6 (11-9), 6-2 ಅಂತರದ ಜಯ ಸಾಧಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next