Advertisement

ಪಶ್ಚಿಮ ವಲಯಕ್ಕೆ ದುಲೀಪ್‌ ಪಟ್ಟ; ದಕ್ಷಿಣ ವಲಯ ವಿರುದ್ಧ  294 ರನ್‌ ಗೆಲುವು

11:00 PM Sep 25, 2022 | Team Udayavani |

ಕೊಯಮತ್ತೂರು: ಇನ್ನಿಂಗ್ಸ್‌ ಮುನ್ನಡೆ ಹೊಂದಿದ್ದ ಆತಿಥೇಯ ದಕ್ಷಿಣ ವಲಯವನ್ನು 294 ರನ್ನುಗಳ ಭಾರೀ ಅಂತರದಿಂದ ಕೆಡವಿದ ಪಶ್ಚಿಮ ವಲಯ “ದುಲೀಪ್‌ ಟ್ರೋಫಿ’ ಪಟ್ಟ ಅಲಂಕರಿಸಿದೆ.

Advertisement

ಗೆಲುವಿಗೆ 529 ರನ್ನುಗಳ ಕಠಿನ ಗುರಿ ಪಡೆದಿದ್ದ ದಕ್ಷಿಣ ವಲಯ, ಪಂದ್ಯದ ಅಂತಿಮ ದಿನ ಭೋಜನ ವಿರಾಮದೊಳಗಾಗಿ 234ಕ್ಕೆ ಸರ್ವಪತನ ಕಂಡಿತು. 4ನೇ ದಿನದಾಟದ ಅಂತ್ಯಕ್ಕೆ 154 ರನ್ನಿಗೆ 6 ವಿಕೆಟ್‌ ಕಳೆದುಕೊಂಡಾಗಲೇ ದಕ್ಷಿಣ ವಲಯದ ಸೋಲು ಖಾತ್ರಿಯಾಗಿತ್ತು. ಸ್ಟಾರ್‌ ಆಟಗಾರರೆಲ್ಲ ಪಶ್ಚಿಮದ ಬೌಲಿಂಗ್‌ ದಾಳಿಗೆ ಸಿಲುಕಿ ಪೆವಿಲಿಯನ್‌ ಸೇರಿ ಕೊಂಡಿದ್ದರು. ನಾಟೌಟ್‌ ಬ್ಯಾಟರ್‌ಗಳಾದ ಟಿ. ರವಿತೇಜ ಮತ್ತು ಆರ್‌. ಸಾಯಿ ಕಿಶೋರ್‌ ಎರಡು ಗಂಟೆಗಳ ಕಾಲ ಹೋರಾಟ ಸಂಘಟಿಸಿ ಕ್ರೀಸ್‌ ಆಕ್ರಮಿಸಿಕೊಳ್ಳುವ ಸೂಚನೆ ನೀಡಿದರು. ಈ ಜೋಡಿಯಿಂದ 157 ಎಸೆತಗಳಿಂದ 57 ರನ್‌ ಒಟ್ಟುಗೂಡಿತು. ಸ್ಕೋರ್‌ 203ಕ್ಕೆ ಏರಿದಾಗ ಮಧ್ಯಮ ವೇಗಿ ಚಿಂತನ್‌ ಗಜ ಈ ಜೋಡಿಯನ್ನು ಬೇರ್ಪಡಿಸುವಲ್ಲಿ ಯಶಸ್ವಿಯಾದರು.

ಬಳಿಕ ರವಿತೇಜ ಮತ್ತು ಕೃಷ್ಣಪ್ಪ ಗೌತಮ್‌ 8 ಓವರ್‌ಗಳ ತನಕ ಪಶ್ಚಿಮದ ದಾಳಿಯನ್ನು ತಡೆದು ನಿಂತರು. ಇವರು ದ್ವಿತೀಯ ಅವಧಿಗೆ ಪಂದ್ಯವನ್ನು ವಿಸ್ತರಿಸುವ ನಿರೀಕ್ಷೆ ಮೂಡಿಸಿದರು. ಆದರೆ ಇದರಲ್ಲಿ ಯಶಸ್ಸು ಕಾಣಲಿಲ್ಲ. ಸ್ಕೋರ್‌ 226ಕ್ಕೆ ಏರಿದಾಗ ಶಮ್ಸ್‌ ಮುಲಾನಿ ದೊಡ್ಡದೊಂದು ಬ್ರೇಕ್‌ ಒದಗಿಸಿದರು. ಕ್ರೀಸ್‌ ಆಕ್ರಮಿಸಿಕೊಂಡಿದ್ದ ರವಿತೇಜ ಅವರನ್ನು ಲೆಗ್‌ ಬಿಫೋರ್‌ ಬಲೆಗೆ ಬೀಳಿಸಿದರು. ರವಿತೇಜ 97 ಎಸೆತ ಎದುರಿಸಿ 53 ರನ್‌ ಹೊಡೆದರು (3 ಬೌಂಡರಿ, 1 ಸಿಕ್ಸರ್‌). ಬಾಸಿಲ್‌ ಥಂಪಿ ಖಾತೆ ತೆರೆಯದೆ ವಾಪಸಾದರು. ಕೆ. ಗೌತಮ್‌ ವಿಕೆಟ್‌ ಕಿತ್ತ ತನುಷ್‌ ಕೋಟ್ಯಾನ್‌ ಪಶ್ಚಿಮ ವಲಯದ ಜಯಭೇರಿ ಮೊಳಗಿಸಿದರು. ಗೌತಮ್‌ ಗಳಿಕೆ 28 ಎಸೆತಗಳಿಂದ 17 ರನ್‌ (3 ಬೌಂಡರಿ).

51ಕ್ಕೆ 4 ವಿಕೆಟ್‌ ಕಿತ್ತ ಶಮ್ಸ್‌ ಮುಲಾನಿ ಪಶ್ಚಿಮ ವಲಯದ ಅತ್ಯಂತ ಯಶಸ್ವಿ ಬೌಲರ್‌ ಎನಿಸಿದರು. 93 ರನ್‌ ಮಾಡಿದ ಕೇರಳದ ಓಪನರ್‌ ರೋಹನ್‌ ಕುನ್ನುಮ್ಮಾಳ್‌ ದಕ್ಷಿಣ ವಲಯದ ದ್ವಿತೀಯ ಸರದಿಯ ಟಾಪ್‌ ಸ್ಕೋರರ್‌. ಅಮೋಘ ದ್ವಿಶತಕ ಬಾರಿಸಿ ಪಶ್ಚಿಮ ವಲಯವನ್ನು ಹಳಿ ಏರಿಸಿದ ಯಶಸ್ವಿ ಜೈಸ್ವಾಲ್‌ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.

ದುಲೀಪ್‌ ಟ್ರೋಫಿ ಪಂದ್ಯಾವಳಿ ಪ್ರಸಕ್ತ ಋತುವಿನಿಂದ ವಲಯ ಮಾದರಿಗೆ ಮರಳಿತ್ತು. ಕಳೆದ ಕೆಲವು ವರ್ಷಗಳಿಂದ 3 ತಂಡಗಳ ನಡುವೆ ಈ ಪಂದ್ಯಾವಳಿ ನಡೆಯುತ್ತಿತ್ತು.

Advertisement

ಸಂಕ್ಷಿಪ್ತ ಸ್ಕೋರ್‌: ಪಶ್ಚಿಮ ವಲಯ-270 ಮತ್ತು 4 ವಿಕೆಟಿಗೆ 585 ಡಿಕ್ಲೇರ್‌. ದಕ್ಷಿಣ ವಲಯ-327 ಮತ್ತು 234 (ರೋಹನ್‌ ಕುನ್ನುಮ್ಮಾಳ್‌ 93, ಟಿ. ರವಿತೇಜ 53, ಕೆ. ಗೌತಮ್‌ 17, ಶಮ್ಸ್‌ ಮುಲಾನಿ 51ಕ್ಕೆ 4, ಜೈದೇವ್‌ ಉನಾದ್ಕತ್‌ 28ಕ್ಕೆ 2, ಅಜಿತ್‌ ಶೇs… 29ಕ್ಕೆ 2).
ಪಂದ್ಯಶ್ರೇಷ್ಠ: ಯಶಸ್ವಿ ಜೈಸ್ವಾಲ್‌.
ಸರಣಿಶ್ರೇಷ್ಠ: ಜೈದೇವ್‌ ಉನಾದ್ಕತ್‌.

Advertisement

Udayavani is now on Telegram. Click here to join our channel and stay updated with the latest news.

Next