ಸೈಂಟ್ ಲೂಸಿಯಾ: ವೆಸ್ಟ್ ಇಂಡೀಸ್ ಮತ್ತು ಆಸ್ಟ್ರೇಲಿಯಾ ನಡುವಿನ ಟಿ20 ಸರಣಿಯ ಮೊದಲ ಪಂದ್ಯವೇ ವಿಚಿತ್ರ ತಿರುವುಗಳಿಗೆ ಸಾಕ್ಷಿಯಾಯಿತು. ಅಂತ್ಯದಲ್ಲಿ ಬಿಗು ದಾಳಿ ಸಂಘಟಿಸಿದ ವೆಸ್ಟ್ ಇಂಡೀಸ್ ತಂಡ 18 ರನ್ ಗಳ ಜಯ ಸಾಧಿಸಿತು. ಸುಲಭ ಜಯದ ಕನಸು ಕಾಣುತ್ತಿದ್ದ ಫಿಂಚ್ ಬಳಗ ಸತತ ವಿಕೆಟ್ ಕಳೆದುಕೊಂಡು ಮುಗ್ಗರಿಸಿತು.
ಟಾಸ್ ಸೋತರು ಮೊದಲು ಬ್ಯಾಟಿಂಗ್ ನಡೆಸಿದ ವೆಸ್ಟ್ ಇಂಡೀಸ್ ತಂಡ 20 ಓವರ್ ನಲ್ಲಿ ಗಳಿಸಿದ್ದು 145 ರನ್ ಮಾತ್ರ. ಸಿಮನ್ಸ್ 27 ರನ್ ಗಳಿಸಿದರೆ, ಲೆವಿಸ್ ಶೂನ್ಯ ಮತ್ತು ಗೇಲ್ ನಾಲ್ಕು ರನ್ ಗಳಿಸಿದರು. 15 ಓವರ್ ಗೆ 101 ರನ್ ಗಳಿಸಿದ್ದ ವಿಂಡೀಸ್ ತಂಡವನ್ನು ಗೌರವಾನ್ವಿತ ಮೊತ್ತಕ್ಕೆ ಕೊಂಡೊಯ್ದಿದ್ದು ರಸ್ಸೆಲ್. ಅವರು ಕೇವಲ 28 ಎಸೆತದಲ್ಲಿ 51 ರನ್ ಚಚ್ಚಿದರು. ಆಸೀಸ್ ಪರ ಹ್ಯಾಜಲ್ ವುಡ್ ಮೂರು ವಿಕೆಟ್ ಮತ್ತು ಮಾರ್ಶ್ ಎರಡು ವಿಕೆಟ್ ಪಡೆದರು.
ಇದನ್ನೂ ಓದಿ:ಲಂಕಾ ತಂಡಕ್ಕೆ ಕೋವಿಡ್ ಕಾಟ: ಭಾರತ-ಶ್ರೀಲಂಕಾ ಸರಣಿ ಮುಂದೂಡಿಕೆ
ಸುಲಭ ಗುರಿ ಬೆನ್ನತ್ತಿದ್ದ ಕಾಂಗರೂಗಳಿಗೆ ಮ್ಯಾಥ್ಯೂ ವೇಡ್ ಭರ್ಜರಿ ಆರಂಭ ನೀಡಿದರು. ಕೇವಲ 14 ಎಸೆತದಲ್ಲಿ ವೇಡ್ 33 ರನ್ ಗಳಿಸಿದರು. ನಂತರ ಬಂದ ಮಿಚೆಲ್ ಮಾರ್ಶ್ ಕೂಡಾ 31 ಎಸೆತದಲ್ಲಿ 51 ರನ್ ಬಾರಿಸಿದರು. ಪವರ್ ಪ್ಲೇ ಮುಗಿದಾಗ ಟಾರ್ಗೆಟ್ ನ ಅರ್ಧ ಮೊತ್ತವನ್ನು ಆಸೀಸ್ ಗಳಿಸಿತ್ತು. ಆದರೆ ನಂತರ ವಿಂಡೀಸ್ ಬೌಲರ್ ಗಳ ವಿಕೆಟ್ ಬೇಟೆ ಆರಂಭವಾಯಿತು.
ಆಸೀಸ್ ಗೆ ಅಂತಿಮ 10 ಓವರ್ ನಲ್ಲಿ ಬೇಕಿದ್ದಿದ್ದು ಕೇವಲ 37 ರನ್ . ಆದರೆ ದೊಡ್ಡ ಹೊಡೆತಕ್ಕೆ ಕೈಹಾಕಿದ ಕಾಂಗರೂ ನಾಡಿನ ಆಟಗಾರರು ಸತತ ವಿಕೆಟ್ ಚೆಲ್ಲಿದರು. ಕೊನೆಯ ಆರು ವಿಕೆಟ್ ಗಳು ಕೇವಲ 19 ರನ್ ಅಂತರದಲ್ಲಿ ಬಿತ್ತು. ಆಸೀಸ್ ತಂಡ 16 ಓವರ್ ನಲ್ಲಿ 127 ರನ್ ಗೆ ಆಲ್ ಔಟ್ ಆಯಿತು.
ವಿಂಡೀಸ್ ಪರ ಮೆಕಾಯ್ ನಾಲ್ಕು ವಿಕೆಟ್ ಕಿತ್ತರೆ, ಹೇಯ್ಡನ್ ವಾಲ್ಶ್ ಮೂರು ವಿಕೆಟ್ ಕಿತ್ತರು.