ಪೋರ್ಟ್ ಆಫ್ ಸ್ಪೇನ್: ವೆಸ್ಟ್ ಇಂಡೀಸ್ ಎದುರಿನ ಟೆಸ್ಟ್ ಸರಣಿಯನ್ನು ಕ್ಲೀನ್‌ಸ್ವೀಪ್ ಆಗಿ ವಶಪಡಿಸಿಕೊಳ್ಳಲು ಹೊರಟಿ ರುವ ಭಾರತಕ್ಕೆ ಮಳೆಯಿಂದ ಅಡ್ಡಿ ಯಾಗಿದೆ. ಸೋಮವಾರದ ಅಂತಿಮ ದಿನದ ಮೊದಲ ಅವಧಿಯ ಆಟ ಮಳೆ ಪಾಲಾಗಿದೆ.
ಗೆಲುವಿಗೆ 365 ರನ್ನುಗಳ ಕಠಿನ ಗುರಿ ಪಡೆದಿರುವ ವೆಸ್ಟ್ ಇಂಡೀಸ್, 4ನೇ ದಿನದಾಟದ ಮುಕ್ತಾಯಕ್ಕೆ 2 ವಿಕೆಟ್ ಕಳೆದುಕೊಂಡು 76 ರನ್ ಮಾಡಿತ್ತು. ನಾಯಕ ಕ್ರೆಗ್ ಬ್ರಾತ್‌ವೇಟ್ (28) ಮತ್ತು ಕರ್ಕ್ ಮೆಕೆಂಜಿ (0) ಈಗಾಗಲೇ ಪೆವಿಲಿಯನ್ ಸೇರಿದ್ದಾರೆ. ತೇಜ್‌ನಾರಾಯಣ್ ಚಂದರ್‌ಪಾಲ್ 24 ಮತ್ತು ಜರ್ಮೈನ್ ಬ್ಲ್ಯಾಕ್‌ವುಡ್ 20 ರನ್ ಮಾಡಿ ಬ್ಯಾಟಿಂಗ್ ಕಾಯ್ದು ಕೊಂಡಿದ್ದಾರೆ.
ಎರಡೂ ವಿಕೆಟ್‌ಗಳನ್ನು ಆರ್. ಅಶ್ವಿನ್ ಉರುಳಿಸಿದರು. ಹೀಗಾಗಿ ಸ್ಪಿನ್ ಭೀತಿಗೆ ಸಿಲುಕಿದ ವಿಂಡೀಸ್ ಅಂತಿಮ ದಿನದಾಟದಲ್ಲಿ ಕ್ಷಿಪ್ರ ಕುಸಿತ ಕಂಡೀತೆಂಬ ನಿರೀಕ್ಷೆ ಭಾರತದ್ದಾಗಿತ್ತು. ಹಾಗೆಯೇ ಇದು 3ನೇ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಸರಣಿ ಯಾದ್ದರಿಂದ ಟೀಮ್ ಇಂಡಿಯಾಕ್ಕೆ ಈ ಗೆಲುವು ಅನಿವಾರ್ಯವೂ ಆಗಿತ್ತು. ಕೊನೆಯ ಎರಡು ಅವಧಿಯ ಆಟಕ್ಕೆ ಮಳೆ ಸಹಕರಿಸೀತೇ ಎಂಬ ನಿರೀಕ್ಷೆ ಭಾರತದ್ದು.
183 ರನ್ನುಗಳ ಮುನ್ನಡೆಯ ಬಳಿಕ ಬಿರುಸಿನ ಬ್ಯಾಟಿಂಗ್‌ಗೆ ಮುಂದಾದ ಭಾರತ, ಕೇವಲ 24 ಓವರ್‌ಗಳಲ್ಲಿ 2 ವಿಕೆಟಿಗೆ 181 ರನ್ ಬಾರಿಸಿ ಡಿಕ್ಲೇರ್ ಮಾಡಿತು. ರೋಹಿತ್ ಶರ್ಮ ಮತ್ತು ಇಶಾನ್ ಕಿಶನ್ ಅರ್ಧ ಶತಕ ಬಾರಿಸಿ ಮಿಂಚಿದರು. ರೋಹಿತ್ 44 ಎಸೆತಗಳಿಂದ 57 ರನ್ ಹೊಡೆದರೆ (5 ಬೌಂಡರಿ, 3 ಸಿಕ್ಸರ್), ಇಶಾನ್ ಕಿಶನ್ 34 ಎಸೆತಗಳಿಂದ ಅಜೇಯ 52 ರನ್ ಬಾರಿಸಿದರು (4 ಬೌಂಡರಿ, 2 ಸಿಕ್ಸರ್). ಯಶ್ವಿ ಜೈಸ್ವಾಲ್ 38, ಶುಭಮನ್ ಗಿಲ್ ಔಟಾಗದೆ 29 ರನ್ ಮಾಡಿದರು. ರೋಹಿತ್-ಜೈಸ್ವಾಲ್ ಜೋಡಿಯಿಂದ ಬರೀ 11.5 ಓವರ್‌ಗಳಲ್ಲಿ 98 ರನ್ ಒಟ್ಟುಗೂಡಿತು. ಡೊಮಿನಿಕಾದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ಇನ್ನಿಂಗ್ಸ್ ಹಾಗೂ 141 ರನ್ ಅಂತರದ ಜಯಭೇರಿ ಮೊಳಗಿಸಿತ್ತು.
ಸಂಕ್ಷಿಪ್ತ ಸ್ಕೋರ್
ಭಾರತ-438 ಮತ್ತು 2 ವಿಕೆಟಿಗೆ 181 ಡಿಕ್ಲೇರ್ (ರೋಹಿತ್ ಶರ್ಮ 57, ಇಶಾನ್ ಕಿಶನ್ ಔಟಾಗದೆ 52, ಯಶಸ್ವಿ ಜೈಸ್ವಾಲ್ 38, ಶುಭಮನ್ ಗಿಲ್ ಔಟಾಗದೆ 29, ಶಾನನ್ ಗ್ಯಾಬ್ರಿಯಲ್ 33ಕ್ಕೆ 1, ವ್ಯಾರಿಕ್ಯಾನ್ 36ಕ್ಕೆ 1).
ವೆಸ್ಟ್ ಇಂಡೀಸ್-255 ಮತ್ತು 2 ವಿಕೆಟಿಗೆ76 (ಬ್ರಾತ್‌ವೇಟ್ 28, ತೇಜ್‌ನಾರಾಯಣ್ ಬ್ಯಾಟಿಂಗ್ 24, ಬ್ಲ್ಯಾಕ್‌ವುಡ್ ಬ್ಯಾಟಿಂಗ್ 20, ಅಶ್ವಿನ್ 33ಕ್ಕೆ 2).