ಬ್ರಿಸ್ಬೇನ್: ಆಸ್ಟ್ರೇಲಿಯಾದ ಕೋಟೆ ಎಂದೇ ಖ್ಯಾತಿ ಪಡೆದ ಗಾಬ್ಬಾದಲ್ಲಿ ವೆಸ್ಟ್ ಇಂಡೀಸ್ ಇತಿಹಾಸ ಬರೆದಿದೆ. ಪಿಂಕ್ ಬಾಲ್ ಟೆಸ್ಟ್ ಪಂದ್ಯದಲ್ಲಿ ಆಸೀಸ್ ತಂಡವನ್ನು ಆಸೀಸ್ ನೆಲದಲ್ಲಿಯೇ ಬಗ್ಗು ಬಡಿದಿದೆ. ಈ ಮೂಲಕ ವೆಸ್ಟ್ ಇಂಡೀಸ್ 27 ವರ್ಷಗಳ ನಂತರ ಆಸ್ಟ್ರೇಲಿಯದಲ್ಲಿ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು ಸೋಲಿಸಿದ್ದಾರೆ!
ಗೆಲುವಿಗೆ 216 ರನ್ ಗುರಿ ಪಡೆದಿದ್ದ ಆಸ್ಟ್ರೇಲಿಯಾ ನಾಲ್ಕನೇ ದಿನದಾಟದ ಅಂತ್ಯಕ್ಕೆ ಎರಡು ವಿಕೆಟ್ ಕಳೆದುಕೊಂಡು 60 ರನ್ ಗಳಿಸಿತ್ತು. ಆದರೆ ಐದನೇ ದಿನದಾಟದಲ್ಲಿ ಶಮಾರ್ ಜೋಸೆಫ್ ದಾಳಿಗೆ ನಲುಗಿದ ಕಾಂಗರೂ ಪಡೆ 207 ರನ್ ಗಳಿಗೆ ಆಲೌಟಾಯಿತು. ಈ ಮೂಲಕ ವೆಸ್ಟ್ ಇಂಡಿಸ್ ಎಂಟು ರನ್ ಅಂತರದಿಂದ ಐತಿಹಾಸಿಕ ಗೆಲುವು ಸಾಧಿಸಿತು.
ಮಾರಕ ದಾಳಿ ಸಂಘಟಿಸಿದ ಶಮಾರ್ ಜೋಸೆಫ್ 11.5 ಓವರ್ ಎಸೆದು ಏಳು ವಿಕೆಟ್ ಕಿತ್ತರು. ಆರಂಭಿಕರಾಗಿ ಕ್ರೀಸ್ ಗೆ ಬಂದಿದ್ದ ಸ್ಟೀವ್ ಸ್ಮಿತ್ ತಂಡವನ್ನು ದಡ ಸೇರಿಸಲು ಪ್ರಯತ್ನ ಪಟ್ಟರಾದರೂ ಸಾಧ್ಯವಾಗಲಿಲ್ಲ. ಅವರು 91 ರನ್ ಗಳಿಸಿ ಅಜೇಯರಾಗಿ ಉಳಿದರು.
ಮೊದಲ ಇನ್ನಿಂಗ್ಸ್ ನಲ್ಲಿ ವೆಸ್ಟ್ ಇಂಡೀಸ್ 311 ರನ್ ಮಾಡಿದರೆ, ಆಸೀಸ್ 289 ರನ್ ಗಳಿಸಿತ್ತು. ಎರಡನೇ ಇನ್ನಿಂಗ್ಸ್ ನಲ್ಲಿ ವಿಂಡೀಸ್ 193 ರನ್ ಗಳಿಸಿದ್ದರೆ, ಆಸೀಸ್ 207 ರನ್ ಮಾತ್ರ ಗಳಿಸಿತು.
ವೆಸ್ಟ್ ಇಂಡೀಸ್ ಹಗಲು- ರಾತ್ರಿ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು ಸೋಲಿಸಿದ ಮೊದಲ ತಂಡವಾಗಿದೆ