ಹರಾರೆ: ಮಾರ್ಲಾನ್ ಸಾಮ್ಯುಯೆಲ್ಸ್ ಮತ್ತು ಶೈ ಹೋಪ್ ಅವರ ಉಪಯುಕ್ತ ಆಟದಿಂದಾಗಿ ವೆಸ್ಟ್‌ಇಂಡೀಸ್ ತಂಡವು ಐಸಿಸಿ ವಿಶ್ವಕಪ್ ಅರ್ಹತಾ ಕೂಟದ ಸೂಪರ್ ಸಿಕ್ಸಸ್ ಪಂದ್ಯದಲ್ಲಿ ಜಿಂಬಾಬ್ವೆ ತಂಡವನ್ನು 4 ವಿಕೆಟ್‌ಗಳಿಂದ ಸೋಲಿಸಿದೆ. ಈ ಗೆಲುವಿನಿಂದ ವೆಸ್ಟ್‌ಇಂಡೀಸ್ ಸೂಪರ್ ಸಿಕ್ಸಸ್ ಹಂತದಲ್ಲಿ ಆಡಿದ ನಾಲ್ಕು ಪಂದ್ಯಗಳಲ್ಲಿ ಮೂರರಲ್ಲಿ ಜಯ ಸಾಧಿಸಿ ಆರಂಕ ಪಡೆದು ಅಗ್ರಸ್ಥಾನದಲ್ಲಿದೆ. ಜಿಂಬಾಬ್ವೆ ಮತ್ತು ಸ್ಕಾಟ್ಲೆಂಡ್ ತಲಾ ಐದಂಕ ಹೊಂದಿದೆ. ಸೂಪರ್ ಸಿಕ್ಸಸ್ ಹಂತದ ಅಂತಿಮ ಲೀಗ್ ಪಂದ್ಯದಲ್ಲಿ ವೆಸ್ಟ್‌ಇಂಡೀಸ್ ತಂಡವು ಸ್ಕಾಟ್ಲೆಂಡ್ ತಂಡವನ್ನು ಎದುರಿಸಲಿದ್ದರೆ ಜಿಂಬಾಬ್ವೆ ತಂಡವು ಯುಎಇ ವಿರುದ್ಧ ಆಡಲಿದೆ. ಯುಎಇ ವಿರುದ್ಧ ಗೆದ್ದರೆ ಮಾತ್ರ ಜಿಂಬಾಬ್ವೆಗೆ ವಿಶ್ವಕಪ್‌ಗೆ ಅರ್ಹತೆ ಗಳಿಸುವ ಅವಕಾಶವಿದೆ.
ಮೊದಲು ಬ್ಯಾಟಿಂಗ್ ಮಾಡಿದ ಜಿಂಬಾಬ್ವೆ ತಂಡವು ಬ್ರೆಂಡನ್ ಟಯ್ಲರ್ ಅವರ ಭರ್ಜರಿ ಶತಕದಿಂದಾಗಿ ಸರಿಯಾಗಿ 50 ಓವರ್‌ಗಳಲ್ಲಿ 289 ರನ್ನಿಗೆ ಆಲೌಟಾಯಿತು. 124 ಎಸೆತ ಎದುರಿಸಿದ ಟಯ್ಲರ್ 138 ರನ್ ಗಳಿಸಿ ತಂಡದ ಉತ್ತಮ ಮೊತ್ತಕ್ಕೆ ಕಾರಣರಾದರು. 20 ಬೌಂಡರಿ ಬಾರಿಸಿದ ಅವರು 2 ಸಿಕ್ಸರ್ ಸಿಡಿಸಿದ್ದರು. ಆರಂಭಿಕ ಸೊಲೋಮನ್ ಮಿರ್ (45) ಮತ್ತು ಸೀನ್ ವಿಲಿಯಮ್ಸ್ 34 ರನ್ ಗಳಿಸಿದರು. ಬಿಗು ದಾಳಿ ಸಂಘಟಿಸಿದ ಜಾಸನ್ ಹೋಲ್ಡರ್ 35 ರನ್ನಿಗೆ 4 ವಿಕೆಟ್ ಕಿತ್ತರೆ ಕೆಮರ್ ರೋಚ್ 55 ರನ್ನಿಗೆ 3 ವಿಕೆಟ್ ಪಡೆದರು.
ಗೆಲ್ಲಲು 290 ರನ್ ಗಳಿಸುವ ಸವಾಲು ಪಡೆದ ವೆಸ್ಟ್‌ಇಂಡೀಸ್ ತಂಡವು ಕ್ರಿಸ್ ಗೇಲ್ ಅವರನ್ನು ಬೇಗನೇ ಕಳೆದುಕೊಂಡಿತು. ಆದರೆ ಇನ್ನೋರ್ವ ಆರಂಭಿಕ ಎವಿನ್ ಲೂಯಿಸ್ ಸಹಿತ ಶೈ ಹೋಪ್ ಮತ್ತು ಮಾರ್ಲಾನ್ ಸಾಮ್ಯುಯೆಲ್ಸ್ ಅವರ ಉಪಯುಕ್ತ ಆಟದಿಂದಾಗಿ 49 ಓವರ್‌ಗಳಲ್ಲಿ 6 ವಿಕೆಟಿಗೆ 290 ರನ್ ಪೇರಿಸಿ ಜಯಭೇರಿ ಬಾರಿಸಿತು. ಇದು ಏಕದಿನ ಇತಿಹಾಸದಲ್ಲಿ ವೆಸ್ಟ್‌ಇಂಡೀಸ್ ತಂಡ ಚೇಸ್ ಮೂಲಕ ಗೆದ್ದ ಗರಿಷ್ಠ ಮೊತ್ತದ ಐದನೇ ಗೆಲುವು ಆಗಿದೆ. ಲೂಯಿಸ್ 64, ಹೋಪ್ 76 ಮತ್ತು ಸಾಮ್ಯುಯೆಲ್ಸ್ 86 ರನ್ ಗಳಿಸಿದರು.
ಸಂಕ್ಷಿಪ್ತ ಸ್ಕೋರು: ಜಿಂಬಾಬ್ವೆ 50 ಓವರ್‌ಗಳಲ್ಲಿ 289 (ಬ್ರೆಂಡನ್ ಟಯ್ಲರ್ 138, ಸೊಲೋಮನ್ ಮಿರ್ 45, ಸೀನ್ ವಿಲಿಯಮ್ಸ್ 34, ಹೋಲ್ಡರ್ 35ಕ್ಕೆ 4, ರೋಶ್ 55ಕ್ಕೆ 3);
ವೆಸ್ಟ್‌ಇಂಡೀಸ್ 49 ಓವರ್‌ಗಳಲ್ಲಿ 6 ವಿಕೆಟಿಗೆ 290 (ಲೂಯಿಸ್ 64, ಹೋಪ್ 76, ಸಾಮ್ಯುಯೆಲ್ಸ್ 86, ಮುಝರಬಾನಿ 36ಕ್ಕೆ 2).