Advertisement

ಬಹಿರಂಗ ಪ್ರಚಾರಕ್ಕೆ ಅದ್ದೂರಿ ತೆರೆ

01:24 AM Mar 26, 2021 | Team Udayavani |

ಕೋಲ್ಕತಾ/ಗುವಾಹಾಟಿ: ಹೈವೋಲ್ಡೇಜ್‌ ರ್ಯಾಲಿ, ಟೀಕಾ ಪ್ರಹಾರ… ಮೊದಲ ಹಂತದ ಮತದಾನದ ಬಹಿರಂಗ ಪ್ರಚಾರಕ್ಕೆ ಗುರುವಾರ ತೆರೆ ಬಿದ್ದಿದೆ. ಪಶ್ಚಿಮ ಬಂಗಾಲದಲ್ಲಿ ಪ್ರಚಾರ ಮತ್ತಷ್ಟು ಬಿರುಸಾಗಿತ್ತು. ದೀದಿ ವಿರುದ್ಧ ಕಟ್ಟಕಡೆಯ ಅಸ್ತ್ರಗಳೆಂಬಂತೆ ಬಿಜೆಪಿ ಬಂಗಾಲದ ಉದ್ದಗಲ ಘಟಾನುಘಟಿಗಳ ರ್ಯಾಲಿ ಆಯೋಜಿಸಿ, ಸಂಘಟಿತ ವಾಗ್ಧಾಳಿ ನಡೆಸಿತ್ತು.

Advertisement

ಮಾ.27ರಂದು ಅಭ್ಯರ್ಥಿಗಳ ಹಣೆಬರಹ ನಿರ್ಧರಿಸಲು ಪ. ಬಂಗಾಲದ 30 ಕ್ಷೇತ್ರಗಳು ಮತದಾನಕ್ಕೆ ಸಜ್ಜಾಗಿವೆ. ಏತನ್ಮಧ್ಯೆ ಬಿಜೆಪಿ ಕೇಂದ್ರ ಸಚಿವರಾದ ರಾಜನಾಥ್‌ ಸಿಂಗ್‌, ಅಮಿತ್‌ ಶಾ, ಅಲ್ಲದೆ ಉ.ಪ್ರ. ಸಿಎಂ ಯೋಗಿ ಆದಿತ್ಯನಾಥ್‌ರನ್ನೂ ಗುರುವಾರ ಪ್ರಚಾರಕ್ಕಿಳಿಸಿತ್ತು.

ಅಮಿತ್‌ ಶಾ, ಕೇಂದ್ರ ಗೃಹ ಸಚಿವ

ಸ್ಥಳ: ಟುಮಲಕ್‌ ಮತ್ತು ಜರ್‌ಗ್ರಾಮ್‌

ಬಂಗಾಲದಲ್ಲಿ ಮೊದಲಿಗೆ ಎಡ ಪಕ್ಷ  ಕೈಗಾರಿಕೆಗಳನ್ನು ಸ್ಥಾಪಿಸಲು ಬಿಟ್ಟಿರಲಿಲ್ಲ. ದೀದಿಯಂತೂ ಕೈಗಾರಿಕೆಗಳನ್ನು ದೂರವೇ ಓಡಿಸಿಬಿಟ್ಟರು. ಇಬ್ಬರಿಂದಲೂ ಇಲ್ಲಿ ಉದ್ಯೋಗ ಸೃಷ್ಟಿಸಲು ಸಾಧ್ಯವಾಗಲಿಲ್ಲ. ನಿಮಗೆ ಉದ್ಯೋಗ ಬೇಕಿದ್ದರೆ, ಎನ್‌ಡಿಎಯನ್ನು ಬೆಂಬಲಿಸಿ.

Advertisement

ಆಟೋಮೊಬೈಲ್‌ ಕಂಪೆನಿಗಳನ್ನು ದೀದಿ ಚೇಸ್‌ ಮಾಡಿ, ಓಡಿಸಿದ್ದರ ಫ‌ಲವಾಗಿ ಇಂದು ಬಂಗಾಲ ನಿರುದ್ಯೋಗದಿಂದ ಬಳಲುವಂತಾಗಿದೆ. ಸ್ವಜನಪಕ್ಷಪಾತದ ಪೊರೆಯಿಂದಾಗಿ ಜನಸಾಮಾನ್ಯರ ಸಂಕಷ್ಟ ದೀದಿಯ ಕಣ್ಣಿಗೆ ಬೀಳುತ್ತಿಲ್ಲ.

ಬಿಜೆಪಿ ಅಧಿಕಾರಕ್ಕೆ ಬಂದರೆ, ಬಂಗಾಲದ ಪ್ರತೀ ಕುಟುಂಬದ ಒಬ್ಬ ಸದಸ್ಯನಿಗೆ ಉದ್ಯೋಗ ಸಿಗಲಿದೆ. ಆಯ್ಕೆ ನಿಮ್ಮದು… ನಿಮಗೆ ಮೋದಿ ಅವರ ಸ್ಕೀಮ್‌ ಬೇಕೋ? ಮಮತಾ ಅವರ ಸ್ಕ್ಯಾಮ್‌ ಬೇಕೋ?

ರಾಜನಾಥ್‌ ಸಿಂಗ್‌, ರಕ್ಷಣ ಸಚಿವ 

ಸ್ಥಳ: ಜಾಯ್ಪುರ, ಪಶ್ಚಿಮ ಬಂಗಾಲ

ಬಂಗಾಲದಲ್ಲಿ ರವೀಂದ್ರ ನಾಥ ಠಾಗೋರ್‌ರ ಸಂಗೀತದ ಬದಲಾಗಿ ಬಾಂಬ್‌ ಸ್ಫೋಟಗಳ ಅಬ್ಬರವೇ ಕೇಳಿಬರುತ್ತಿದೆ. ಸ್ವಾಮಿ ವಿವೇಕಾನಂದರು ಸಂದೇಶ ಸಾರಿದ ನಾಡಿ ನಲ್ಲಿ ಇಂದು ಹಲವು ಬಾಂಬ್‌ ಫ್ಯಾಕ್ಟರಿಗಳು ತಲೆಯೆತ್ತಿವೆ.

ಅಧಿಕಾರ ಹಿಡಿದಾಗ ಮಮತಾ ಅವರು “ಮಾ, ಮಾತಿ, ಮನುಷ್ಯ’ರಿಗೆ (ತಾಯಿ, ತಾಯ್ನಾಡು, ಜನರು) ಭದ್ರತೆ ನೀಡುವುದಾಗಿ ಹೇಳಿದ್ದರು. ಆದರೆ ಇಂದು ಯಾರೂ ಇಲ್ಲಿ ಸುರಕ್ಷಿತರಲ್ಲ.

ಬಿಜೆಪಿ ಸ್ಥಾಪಿಸಿದ ಶ್ಯಾಮ್‌ ಪ್ರಸಾದ್‌ ಮುಖರ್ಜಿ ಬಂಗಾಲದವರು. ಇಲ್ಲಿ ಯಾರೂ ಹೊರಗಿನವರಿಲ್ಲ; ಎಲ್ಲರೂ ತಾಯ್ನಾಡಿನಲ್ಲೇ ಹುಟ್ಟಿದವರು.

ಯೋಗಿ ಆದಿತ್ಯನಾಥ್‌,

ಸ್ಥಳ:  ಪಶ್ಚಿಮ ಮಿಡ್ನಾಪುರ

ಪಶ್ಚಿಮ ಬಂಗಾಲ ಒಂದು ಕಾಲದಲ್ಲಿ ಭಾರೀ ಮುಂದುವರಿದಿದ್ದ ರಾಜ್ಯ. ಆದರೆ ಕಾಂಗ್ರೆಸ್‌, ಎಡಪಕ್ಷಗಳು, ತೃಣ ಮೂಲ ಕಾಂಗ್ರೆಸ್‌- ಈ ಮೂವರೂ ಒಟ್ಟಾಗಿ ಅಭಿವೃದ್ಧಿಗೆ ಅಡ್ಡಗಾಲು ಹಾಕಿದರು.

ಮಮತಾ ಟಿಎಂಸಿ ಗೂಂಡಾಗಳನ್ನು ಸಾಕಿಕೊಂಡು, ತಮ್ಮ ಪಕ್ಷದ ಸಮೃದ್ಧಿಯನ್ನಷ್ಟೇ ನೋಡಿಕೊಂಡಿದ್ದಾರೆ. 35 ದಿನಗಳ ಅನಂತರ ಇಲ್ಲಿ ಹೊಸ ಸರಕಾರ ಅರಳಲಿದ್ದು, ಕೇಂದ್ರದ ಯೋಜನೆ ತಡೆಹಿಡಿದ ಅವರೆಲ್ಲರೂ ತಕ್ಕ ಪಾಠ ಕಲಿಯಲಿದ್ದಾರೆ.

ಕೇಂದ್ರದಲ್ಲೂ ಒಂದೇ ಪಕ್ಷ, ಬಂಗಾಲದಲ್ಲೂ ಒಂದೇ ಪಕ್ಷವಿದ್ದರೆ ಬಂಗಾಲ ಮತ್ತೆ ಅಭಿವೃದ್ಧಿ ಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ.

ಕರಗಿದ ಮಮತಾ ಸಂಪತ್ತು! : ಭ್ರಷ್ಟಾಚಾರದ ಆರೋಪಗಳನ್ನು ನಿರಂತರವಾಗಿ ಎದುರಿಸಿದ ಸಿಎಂ ಮಮತಾ ಬ್ಯಾನರ್ಜಿ ಅವರ ಒಟ್ಟು ಸಂಪತ್ತು ಶೇ.45.08ರಷ್ಟು ಕುಸಿದಿದೆ. ನಂದಿಗ್ರಾಮದಲ್ಲಿ ಸಲ್ಲಿಸಿದ ನಾಮಪತ್ರದಲ್ಲಿ ಅವರು, ತಮ್ಮ ಒಟ್ಟು ಸಂಪತ್ತಿನ ಮೌಲ್ಯ 16,72,352 ರೂ. ಎಂದು ತೋರಿಸಿದ್ದಾರೆ. 2016ರಲ್ಲಿ 30,45,013 ರೂ. ತೋರಿಸಿದ್ದರು.

 “ಮುಸ್ಲಿಮರು ಒಟ್ಟಾದರೆ ನಾಲ್ಕು ಪಾಕ್‌ ಸೃಷ್ಟಿ’ :

ಭಾರತದಲ್ಲಿರುವ ಶೇ. 30ರಷ್ಟು ಮುಸ್ಲಿಮರು ಒಗ್ಗೂಡಿದರೆ ನಾಲ್ಕು ಪಾಕಿಸ್ಥಾನಗಳು ಸೃಷ್ಟಿ­ ಯಾ­­ಗುತ್ತವೆ ಎಂದು ಹೇಳಿ ಟಿಎಂಸಿ ನಾಯಕ ಶೇಖ್‌ ಅಲಾಮ್‌, ವಿವಾದಕ್ಕೀಡಾಗಿದ್ದಾರೆ. ಅದನ್ನು  ಖಂಡಿಸಿರುವ ಬಿಜೆಪಿ ಮುಖಂಡ ಅಮಿತ್‌ ಮಾಳವೀಯ, “ಬಂಗಾಲದಲ್ಲಿ ಹಿಂದೂಗಳನ್ನು ಮಮತಾ ಅವರು 2ನೇ ದರ್ಜೆಯ ನಾಗರಿಕ­ರಂತೆ ನಡೆಸಿಕೊಂಡಿದ್ದಾರೆ.  ಅವರ ನಿಷ್ಠ ಶೇಖ್‌ರಿಂದ ಇಂಥ ಹೇಳಿಕೆಗಳು ಬರುತ್ತವೆ” ಎಂದಿದ್ದಾರೆ. ವಿವಾದ ಜೋರಾಗುತ್ತಲೇ ಸ್ಪಷ್ಟನೆ ನೀಡಿರುವ ಶೇಖ್‌, “”ಮುಸ್ಲಿಮರ ಮೇಲೆ ದಬ್ಟಾಳಿಕೆ ಹೆಚ್ಚಾದರೆ ಎಲ್ಲರೂ ಒಗ್ಗೂಡುತ್ತಾರೆ ಎಂದಷ್ಟೇ ನಾನು ಪ್ರಸ್ತಾವಿಸಿದ್ದೆ ” ಎಂದಿದ್ದಾರೆ.

ಎಡಪಕ್ಷ-ಟಿಎಂಸಿ ಘರ್ಷಣೆ: 2 ಸಾವು : ಸಿಪಿಐ (ಎಂ) ಮತ್ತು ತೃಣಮೂಲ ಕಾಂಗ್ರೆಸ್‌ ಪಕ್ಷದ ಕಾರ್ಯಕರ್ತರ ನಡುವೆ ದಕ್ಷಿಣ 24 ಪರಗಣ ಜಿಲ್ಲೆಯಲ್ಲಿ ಮಾರಾಮಾರಿ ನಡೆದಿದ್ದು, ಪರಿಣಾಮ ಇಬ್ಬರು ಟಿಎಂಸಿ ಕಾರ್ಯಕರ್ತರು ಸಾವನ್ನಪ್ಪಿದ್ದಾರೆ. ಬರೂಯಿಪುರ್‌ ಪುರ್ಬಾ ಕ್ಷೇತ್ರದ ಟಿಎಂಸಿ ಅಭ್ಯರ್ಥಿ ಬಿವಾಶ್‌ ಸರ್ದಾರ್‌ ಪರವಾಗಿ ಇವರು ಮಧ್ಯಬೆಲಗಾಚಿ ಎಂಬ ಹಳ್ಳಿಯಲ್ಲಿ ಕ್ಯಾನ್ವಾಸ್‌ ನಡೆಸುತ್ತಿದ್ದಾಗ, ಎಡಪಕ್ಷದ ಕಿಡಿಗೇಡಿಗಳು ಈ ದುಷ್ಕೃತ್ಯ ಎಸಗಿದ್ದಾರೆ. ಈ ಸಂಬಂಧ ಐವರು ಆರೋಪಿಗಳನ್ನು ಬಂಧಿಸಲಾಗಿದೆ.

ಬಾಂಬ್‌ ಸ್ಫೋಟ: ಇನ್ನೊಂದೆಡೆ, ಬಂಗಾಲದ ಪಶ್ಚಿಮ ಬರ್ಧಮಾನ್‌ ಜಿಲ್ಲೆಯಲ್ಲಿ ಕಚ್ಚಾ ಬಾಂಬ್‌ ಸ್ಫೋಟಗೊಂಡು, ಟಿಎಂಸಿ ಕಾರ್ಯಕರ್ತನೊಬ್ಬ ಅಸುನೀಗಿದ್ದಾನೆ.

ಅಸ್ಸಾಂನಲ್ಲೂ ಪ್ರಚಾರ ಮುಕ್ತಾಯ :

ಮಾ.27ರಂದು ಮೊದಲ ಹಂತದ ಮತದಾನಕ್ಕೆ ಅಸ್ಸಾಂ ಕೂಡ ಅಣಿಯಾಗಿದ್ದು, ಬಹಿರಂಗ ಪ್ರಚಾರಕ್ಕೆ ಗುರುವಾರ ತೆರೆಬಿದ್ದಿದೆ. 126 ವಿಧಾನಸಭಾ ಕ್ಷೇತ್ರಗಳ  ಪೈಕಿ 47 ಕ್ಷೇತ್ರಗಳಿಗೆ ಮೊದಲ ಹಂತದಲ್ಲಿ ಮತದಾನ ನಡೆಯಲಿದೆ.  ಬಿಜೆಪಿ ಪರವಾಗಿ ಮಧ್ಯಪ್ರದೇಶ ಸಿಎಂ ಶಿವರಾಜ್‌ ಸಿಂಗ್‌ ಚಹಾನ್‌ ಗುವಾಹಾಟಿ,  ಪಲಸ್ಬಾರಿಯ ರ್ಯಾಲಿಗಳಲ್ಲಿ ಪಾಲ್ಗೊಂಡಿದ್ದರು.

ಕಲರ್‌ಫಿಶ್‌ ಕೊಳದಲ್ಲಿ  ಗೆದ್ದವರೇ ತಿಮಿಂಗಿಲ! :

ಘಟಾನುಘಟಿಗಳು: ಎಂ.ಕೆ. ಸ್ಟಾಲಿನ್‌ (ಡಿಎಂಕೆ), ಆದಿರಾಜಾರಾಮ್‌ (ಎಐಎಡಿಎಂಕೆ),  ಜೆ. ಆರುಮುಗಂ (ಎಎಂಎಂಕೆ), ಜಗದೀಶ್‌ (ಎಂಎನ್‌ಎಂ).

“ಏಷ್ಯಾದ ಅಕ್ವೇರಿಯಂ ಬಣ್ಣದ ಮೀನುಗಳ ಹಬ್‌’ ಅಂತಲೇ ಖ್ಯಾತಿವೆತ್ತ ತಮಿಳುನಾಡಿನ ಕೊಳತ್ತೂರ್‌, ರಾಜಕೀಯವಾಗಿಯೂ ರಂಗೇರಿಸಿಕೊಂಡ ಕ್ಷೇತ್ರ. ಚೆನ್ನೈ ಉತ್ತರ ಲೋಕಸಭಾ ಕ್ಷೇತ್ರದ ಗರ್ಭದಲ್ಲಿದೆ. 2016ರಲ್ಲಿ ಅಖಾಡ ರಚನೆಗೊಂಡ ಬಳಿಕ 3ನೇ ವಿಧಾನಸಭಾ ಚುನಾವಣೆ ಕೊಳತ್ತೂರ್‌ನ ಎದುರು ನಿಂತಿದೆ.

ಎಐಎಡಿಎಂಕೆ ಸರಕಾರ ಕೆಡವಿ, ಅಧಿಕಾರ ಹಿಡಿ­ಯುವ ಜಿದ್ದಿಗೆ ಬಿದ್ದಿರುವ ಡಿಎಂಕೆ ನಾಯಕ ಸ್ಟಾಲಿನ್‌ ಇಲ್ಲಿಂದ ಮರು ಆಯ್ಕೆ ಬಯಸಿದ್ದಾರೆ. 3ನೇ ಬಾರಿಗೆ ಗೆಲ್ಲುವ ಉಮೇದಿನಲ್ಲಿರುವ ಡಿಎಂಕೆಯ ಸ್ಟ್ರೈಕ್‌ರೇಟ್‌ ಇಲ್ಲಿ ಶೇ.100. ಕರುಣಾನಿಧಿ ಅಲೆ ಇನ್ನೂ ಜೀವಂತವಿರುವ ಕ್ಷೇತ್ರದಲ್ಲಿ ಕ್ರಿಶ್ಚಿಯನ್ನರ ಮತಗಳೇ ಸ್ಟಾಲಿನ್‌ಗೆ ಆತ್ಮವಿಶ್ವಾಸ ಹೆಚ್ಚಿಸಿದೆ. 2016ರಲ್ಲಿ ಎಐಎಡಿಎಂಕೆ ಅಭ್ಯರ್ಥಿ ಜೆ.ಸಿ.ಡಿ. ಪ್ರಭಾಕರ್‌ ಶೇ.32ರಷ್ಟು ಮತ ಸಂಪಾದಿಸಿ ಸೋಲುಂಡಿದ್ದರು. ಅವರೀಗ ಈ ಕ್ಷೇತ್ರದತ್ತ ತಿರುಗಿಯೂ ನೋಡದೆ, ವಿಲ್ಲಿವಕ್ಕಂ ಅಖಾಡದಲ್ಲಿ ಭದ್ರ ನೆಲೆಕಂಡಿದ್ದಾರೆ. 2001ರಲ್ಲಿ ಥೌಸಂಡ್‌ ಲೈಟ್ಸ್‌ ಕ್ಷೇತ್ರದಲ್ಲಿ ಸ್ಟಾಲಿನ್‌ ವಿರುದ್ಧ ಪೈಪೋಟಿ ಹೋರಾಟ ನಡೆಸಿ

ಸೋತಿದ್ದ ಆದಿರಾಜಾರಾಮ್‌ಗೆ ಎಐಎಡಿಎಂಕೆ ಇಲ್ಲಿ ರಣವೀಳ್ಯ ನೀಡಿ ಕರೆತಂದಿದೆ. ಅವರೀಗ ಹೊಸ ಅಖಾಡಕ್ಕೆ ಹೊಂದಿಕೊಂಡು, ಅಗ್ನಿಪರೀಕ್ಷೆ ಎದುರಿಸಬೇಕಿದೆ.  ಮಿಕ್ಕ  ಅಭ್ಯರ್ಥಿಗಳು ಇಲ್ಲಿ ಆಟಕ್ಕುಂಟು ಲೆಕ್ಕಕ್ಕಿಲ್ಲ.

ಮತದಾರರಿಗೆ ಚಂದ್ರಯಾನ, ಮಿನಿ ಹೆಲಿಕಾಪ್ಟರ್‌! :

ಪ್ರತೀ ಕುಟುಂಬಕ್ಕೂ ಮಿನಿ ಹೆಲಿಕಾಪ್ಟರ್‌, ಪ್ರತೀ ಮನೆಗೆ ವಾರ್ಷಿಕ 1 ಕೋಟಿ ರೂ. ಠೇವಣಿ, ಮದುವೆಗೆ ಚಿನ್ನಾಭರಣ ಗಿಫ್ಟ್, 3 ಅಂತಸ್ತಿನ ಮನೆ… ಇಷ್ಟೇ ಅಲ್ಲ; ಮತದಾರರಿಗೆ ಚಂದ್ರಯಾನ ಭಾಗ್ಯ…- ಅಬ್ಬಬ್ಟಾ! ಇವು ತಮಿಳುನಾಡಿನ ಪಕ್ಷೇತರ ಅಭ್ಯರ್ಥಿ ತುಳಂ ಸರವಣನ್‌ ಬಿಡುಗಡೆ ಮಾಡಿದ ಲಕ್ಸುರಿ ಪ್ರಣಾಳಿಕೆ ಹೈಲೈಟ್ಸ್‌. ಮದುರೈ ದಕ್ಷಿಣ ಕ್ಷೇತ್ರದಿಂದ ಈತ ಸ್ಪರ್ಧಿಸುತ್ತಿದ್ದು, ಗೃಹಿಣಿಯರ ಕೆಲಸದೊತ್ತಡ ತಗ್ಗಿಸಲು ರೋಬೊಟ್‌, ಪ್ರತೀ ಕುಟುಂಬಕ್ಕೂ ಒಂದು ದೋಣಿ ಗಿಫಾrಗಿ ನೀಡುತ್ತೇನೆಂದು ಘೋಷಿಸಿದ್ದಾನೆ. ಅಂದಹಾಗೆ, ಸರವಣನ್‌ ವಾಸವಿರುವುದು ಬಡ ತಂದೆ-ತಾಯಿಗಳ ಜತೆಗೆ! ಇನ್ನೂ ಮದುವೆಯಾಗದ ಈತ ನಾಮಪತ್ರ ಸಲ್ಲಿಕೆ ವೇಳೆ ತಂದೆಯಿಂದ 20 ಸಾವಿರ ರೂ. ಸಾಲಪಡೆದು, ಠೇವಣಿ ಕಟ್ಟಿದ್ದಾನಂತೆ!

ಬೆಂಗಳೂರಿನಿಂದ ಫ‌ುಲ್‌ಟೈಮ್‌ ರಾಜಕೀಯಕ್ಕಿಳಿಯಲೆಂದೇ ಶಶಿಕಲಾ ಚಿಕ್ಕಮ್ಮ ಬಂದಿದ್ದರು. ಆದರೆ ಎಐಎಡಿಎಂಕೆಯ ಕೆಲವು ನಾಯಕರ ನಿರಂ ತರ ಹೇಳಿಕೆಗೆ ಬೇಸತ್ತು ಹಿಂದೆ ಸರಿದರು. –ಟಿಟಿವಿ ದಿನಕರನ್‌, ಎಎಂಎಂಕೆ ಮುಖಂಡ

  ಬಂಗಾಲದಲ್ಲಿ ಸೀರೆ ಧರಿಸುವುದು ಸಭ್ಯತೆಯ ಸಂಕೇತ. ಆದರೆ ದೀದಿ ಅರ್ಧ ಕಾಲು ಕಾಣುವ ಹಾಗೆ ಸೀರೆ ಉಟ್ಟು, ಬ್ಯಾಂಡೇಜ್‌ ತೋರಿಸುತ್ತಾ, ಬಂಗಾಲಿ ಸಂಸ್ಕೃತಿಯ ಬಗ್ಗೆ ಮಾತಾಡುತ್ತಿದ್ದಾರೆ!

ಅರವಾಕುರಿಚಿಯಲ್ಲಿ ಬಿಜೆಪಿ ಹಿಂದೂ- ಮುಸ್ಲಿಮರನ್ನು ವಿಭಜಿ ಸಿಲ್ಲ. ಆದರೆ ಡಿಎಂಕೆ ಆ ಕೆಲಸ ಮಾಡುತ್ತಿದೆ. 15 ವರ್ಷಗಳಿಂದ ಅಭಿವೃದ್ಧಿ ಮಾಡದೇ ಇದ್ದಿದ್ದಕ್ಕೆ ಡಿಎಂಕೆಗೆ ಇದು ಅನಿವಾರ್ಯ. -ಕೆ. ಅಣ್ಣಾಮಲೈ, ಅರವಾಕುರಿಚಿ ಬಿಜೆಪಿ ಅಭ್ಯರ್ಥಿ

ಎಲ್‌ಡಿಎಫ್ ಸರಕಾರ ಕೇರಳದಲ್ಲಿ ನಿರಂತರವಾಗಿ ಬಹುಸಂಖ್ಯಾತರ ವಿರೋಧಿ ನಿಲುವನ್ನೇ ತೆಗೆದುಕೊಂಡಿದೆ. ಶಬರಿಮಲೆ ವಿಚಾರದಲ್ಲಿ ಕೋಟ್ಯಂತರ ಮಲಯಾಳಿಗಳ ಭಾವನೆಗೆ ಧಕ್ಕೆ ತಂದಿದೆ. – ಡಾ| ಅಶ್ವತ್ಥ ನಾರಾಯಣ್‌, ಕೇರಳ ಬಿಜೆಪಿ ಉಸ್ತುವಾರಿ

Advertisement

Udayavani is now on Telegram. Click here to join our channel and stay updated with the latest news.

Next