Advertisement
ಪಶ್ಚಿಮ ಬಂಗಾಳದಲ್ಲಿ ಏಪ್ರಿಲ್ 1(ಗುರುವಾರ)ರಂದು ಎರಡನೇ ಹಂತದ ಚುನಾವಣೆ ನಡೆಯಲಿದ್ದು, ನಾಲ್ಕು ಜಿಲ್ಲೆಗಳ 171 ಅಭ್ಯರ್ಥಿಗಳು 30 ವಿಧಾನ ಸಭಾ ಕ್ಷೇತ್ರಗಳಿಂದ ಸ್ಪರ್ಧೆ ಮಾಡಲಿದ್ದಾರೆ.
Related Articles
Advertisement
ಏಪ್ರಿಲ್ 1 ರಂದು ಬಂಕುರಾ, ಪುರ್ಬಾ ಮೇದಿನಿ ಪುರ, ಪಶ್ಚಿಮ ಮೇದಿನಿ ಪುರ, ದಕ್ಷಿಣ 24 ಪರಗಣಾಸ್ ನಲ್ಲಿ ನಡೆಯಲಿಕ್ಕಿರುವ ಎರಡನೇ ಹಂತದ ಚುನಾವಣೆಗೆ ಸಂಬಂಧಿಸಿದಂತೆ , ಮುನ್ನೆಚ್ಚರಿಕಾ ಕ್ರಮವಾಗಿ 651 ಸಿಎಪಿಎಫ್ ತುಕಡಿಗಳನ್ನು ಆಯೋಗ ನಿಯೋಜಿಸಿದೆ.
ಪಶ್ಚಿಮ ಬಂಗಾಳದ ಹೈ ವೋಲ್ಟೇಜ್ ವಿಧಾನ ಸಭಾ ಕ್ಷೇತ್ರಗಳು ಎಂದು ಕರೆಸಿಕೊಳ್ಳುವ ಪುರ್ಬಾ ಮೇದಿನಿಪುರಕ್ಕೆ 199, ಪಶ್ಚಿಮ ಮೇದಿನಿ ಪುರ ವಿಧಾನ ಸಭಾ ಕ್ಷೇತ್ರಗಳಲ್ಲಿ 210, ದಕ್ಷಿಣ 24 ಪರಗಣಾಸ್ ನಲ್ಲಿ 170 ಹಾಗೂ ಬಂಕುರಾದಲ್ಲಿ 72 ಸಿಎಪಿಎಫ್ ತುಕಡಿಗಳನ್ನು ನಿಯೋಜಿಸಲಾಗಿದೆ ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ.
ಓದಿ : ಪ್ರಧಾನಿ ಬಾಂಗ್ಲಾದೇಶ ಭೇಟಿ ನೀತಿ ಸಂಹಿತೆಯ ಉಲ್ಲಂಘನೆ:ಮೋದಿ ವಿರುದ್ಧ ಆಯೋಗಕ್ಕೆ ಟಿಎಂಸಿ ದೂರು
ಇನ್ನು, ಎರಡನೇ ಹಂತದ ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಬಹಿರಂಗ ಪ್ರಚಾರ ಸಭೆಗಳಿಗೆ ಕೊನೆಯ ದಿನವಾದ ಇಂದು, ಮುಖ್ಯ ಮಂತ್ರಿ ಮಮತಾ ಬ್ಯಾನರ್ಜಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ತಮ್ಮ ಅಭ್ಯರ್ಥಿಗಳ ಪರ ಮತ ಪ್ರಚಾರ ಯಾತ್ರೆಗಳನ್ನು ಮಾಡಿದರು. ಇಂದು ನಡೆದ ಚುನಾವಣಾ ಮತ ಪ್ರಚಾರ ಸಭೆಗಳು ನಾಯಕರ ಆರೋಪ ಪ್ರತ್ಯಾರೋಪಗಳಿಗೆ ಸಾಕ್ಷಿಯಾಯಿತು.
ನಂದಿಗ್ರಾಮ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ತಮ್ಮ ಅಭ್ಯರ್ಥಿ ಸುವೇಂದು ಅಧಿಕಾರಿಯವರ ಪರ ನಟ ಮಿಥುನ್ ಚಕ್ರವರ್ತಿಯವರೊಂದಿಗೆ ರೋಡ್ ಶೋ ಗೆ ಇಳಿದ ಅಮಿತ್ ಶಾ, ಪಶ್ಚಿಮ ಬಂಗಾಳದಲ್ಲಿನ ರಾಜಕೀಯ ಹಿಂಸಾಚಾರದ ಬಗ್ಗೆ ಉಲ್ಲೇಖಿಸಿ ಮಮತಾ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಲ್ಲದೇ, ಸುವೇಂದು ಅಧಿಕಾರಿ ಬ್ಯಾನರ್ಜಿ ವಿರುದ್ಧ ಸುಲಭ ಜಯ ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತ ಪಡಿಸಿದರು. ಹಾಗೂ ಪಶ್ಚಿಮ ಬಂಗಾಳದ ಅಭಿವೃದ್ಧಿಗೆ ಬಿಜೆಪಿಯನ್ನು ಗೆಲ್ಲಿಸಿ, ಮಮತಾ ಬ್ಯಾನರ್ಜಿಯವರನ್ನು ಸೋಲಿಸಿ ಎಂದು ಮತದಾರರಲ್ಲಿ ಶಾ ಮನವಿ ಮಾಡಿಕೊಂಡರು.
ಇನ್ನು, ನಂದಿಗ್ರಾಮದ ಸುತ್ತಮುತ್ತ ಪ್ರಚಾರ ಸಭೆಯನ್ನು ಭಾಗವಹಿಸಿದ ಮುಖ್ಯಮಂತ್ರಿ , ತೃಣಮೂಲ ಕಾಂಗ್ರೆಸ್ ನ ನಾಯಕಿ ಮಮತಾ ಬ್ಯಾನರ್ಜಿ, ಮತದಾರರಲ್ಲಿ ಶಾಂತ ಮನಸ್ಥಿತಿಯಿಂದ ಮತ ಚಲಾಯಿಸಲು ಮನವಿ ಮಾಡಿಕೊಂಡರು. ರಾಜ್ಯದಲ್ಲಿ ಮೂರನೇ ಬಾರಿಗೆ ಅಧಿಕಾರವನ್ನು ಹಿಡಿಯುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಲ್ಲದೇ, ದ್ರೋಹ ಮಾಡುವವರಿಗೆ ಸೂಕ್ತ ಉತ್ತರ ನೀಡುತ್ತೆವೆ ಎಂದು ಮಮತಾ ಸುವೇಂದು ಅಧಿಕಾರಿ ವಿರುದ್ಧ ಕಿಡಿ ಕಾರಿದರು.
ಎಂಟು ಹಂತಗಳಲ್ಲಿ ನಡೆಯಲಿರುವ ಪಶ್ವಿಮ ಬಂಗಾಳದ ವಿಧಾನಸಭಾ ಚುನಾವಣೆಯ ಫಲಿತಾಂಶ ಮೇ. 2 ರಂದು ಹೊರಬರಲಿದೆ.
ಓದಿ : ತಮಿಳುನಾಡು; ಡಿಎಂಕೆ ಎ.ರಾಜಾ ನಿಷ್ಪ್ರಯೋಜಕ 2ಜಿ ಮಿಸೈಲ್…ಪ್ರಧಾನಿ ಮೋದಿ ವಾಗ್ದಾಳಿ