ನವದೆಹಲಿ:ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಜತೆ ಮುನಿಸಿಕೊಂಡು ಬಂಡಾಯ ಎದ್ದು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಟಿಎಂಸಿ ಹಿರಿಯ ಮುಖಂಡ ಸುವೇಂದು ಅಧಿಕಾರಿ ಅವರ ಎಲ್ಲಾ ಅಸಮಾಧಾನವನ್ನು ಪರಿಹರಿಸಲಾಗಿದೆ ಎಂದು ತೃಣಮೂಲ ಕಾಂಗ್ರೆಸ್ ತಿಳಿಸಿದೆ.
ಟಿಎಂಸಿ ಜತೆಗಿನ ಭಿನ್ನಾಭಿಪ್ರಾಯದಿಂದಾಗಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಸುವೇಂದು ಅಧಿಕಾರಿ ಜತೆ ಟಿಎಂಸಿ ಹಿರಿಯ ಮುಖಂಡ, ಲೋಕಸಭಾ ಸಂಸದ ಸುಗತ ರಾಯ್, ಸಂಸದರಾದ ಸುದೀಪ್ ಬಂಡೋಪಾಧ್ಯಾಯ ಮತ್ತು ಅವಿಷೇಕ್ ಬ್ಯಾನರ್ಜಿ ಹಾಗೂ ಚುನಾವಣಾ ಕಾರ್ಯತಂತ್ರಜ್ಞ ಪ್ರಶಾಂತ್ ಕಿಶೋರ್ ಮಾತುಕತೆ ನಡೆಸಿ ಮುನಿಸು ಶಮನಗೊಳಿಸಿರುವುದಾಗಿ ವರದಿ ವಿವರಿಸಿದೆ.
ಪಕ್ಷದ ಜತೆಗಿನ ಎಲ್ಲಾ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಲಾಗಿದೆ. ನಿರೀಕ್ಷೆಯಂತೆ ಬುಧವಾರ (ಡಿಸೆಂಬರ್ 2, 2020) ತಮ್ಮ ನಿಲುವಿನ ಬಗ್ಗೆ ಅಧಿಕಾರಿ ಸ್ಪಷ್ಟ ಹೇಳಿಕೆಯನ್ನು ನೀಡಲಿದ್ದಾರೆ ಎಂದು ರಾಯ್ ಸುದ್ದಿಗಾರರ ಜತೆ ಮಾತನಾಡುತ್ತ ತಿಳಿಸಿದ್ದಾರೆ.
ಇದನ್ನೂ ಓಧಿ:ಮಂಗಳೂರು ಬೋಟ್ ದುರಂತ: ಮತ್ತೋರ್ವ ಮೀನುಗಾರನ ಮೃತದೇಹ ಪತ್ತೆ
ಈ ಬೆಳವಣಿಗೆ ಬಗ್ಗೆ ಸುವೇಂದು ಅಧಿಕಾರಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಸುವೇಂದು ಅಧಿಕಾರಿ ಅವರ ತಂದೆ ಬಳಿ ಈ ಕುರಿತು ಪ್ರಶ್ನಿಸಿದಾಗ, ಒಂದು ವೇಳೆ ಇದು ನಿಜವಾದರೆ ನನಗೆ ತುಂಬಾ ಸಂತೋಷ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಟಿಎಂಸಿ ಹಿರಿಯ ಮುಖಂಡ ಸುವೇಂದು ಅಧಿಕಾರಿ ರಾಜೀನಾಮೆ ನೀಡಿದ ನಂತರ ಭಾರತೀಯ ಜನತಾ ಪಕ್ಷ ಸೇರ್ಪಡೆಯಾಗುವ ಸಾಧ್ಯತೆ ಇದ್ದಿರುವುದಾಗಿ ಪಶ್ಚಿಮಬಂಗಾಳದ ಬಿಜೆಪಿ ರಾಜ್ಯಾಧ್ಯಕ್ಷ ಘೋಷ್ ತಿಳಿಸಿದ್ದರು.