ನವದೆಹಲಿ : ಜಂತರ್ ಮಂತರ್‌ನಲ್ಲಿ ಭಾರತದ ಕುಸ್ತಿ ಫೆಡರೇಶನ್ ವಿರುದ್ಧ ಪ್ರತಿಭಟನೆ 3 ನೇ ದಿನಕ್ಕೆ ಕಾಲಿಟ್ಟಿದ್ದು, ಆರೋಪಿತ ಡಬ್ಲ್ಯುಎಫ್‌ಐ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಸ್ಥಳಕ್ಕೆ ಬರುವಂತೆ ಪಟ್ಟು ಹಿಡಿಯಲಾಗಿದೆ.
”ಬ್ರಿಜ್‌ಭೂಷಣ್ ಶರಣ್ ಸಿಂಗ್ ಮುಂದೆ ಬರಲು ನಾವು ಕಾಯುತ್ತಿದ್ದೇವೆ. ನಮ್ಮ ವೃತ್ತಿಜೀವನವನ್ನು ಪಣಕ್ಕಿಟ್ಟು ನಾವು ಇಲ್ಲಿದ್ದೇವೆ. ಈ ಹೋರಾಟವು ನಮ್ಮ ಕುಸ್ತಿಯ ಭವಿಷ್ಯದ ಯುವ ಕುಸ್ತಿಪಟುಗಳಿಗಾಗಿ ಎಂದು ಒಲಿಂಪಿಯನ್ ಕುಸ್ತಿಪಟು ಬಜರಂಗ್ ಪುನಿಯಾ ಹೇಳಿದ್ದಾರೆ.
”ಅಥ್ಲೀಟ್‌ಗಳು ತಮ್ಮ ಅಭ್ಯಾಸವನ್ನು ಬಿಟ್ಟು ಇಲ್ಲಿ ಪ್ರತಿಭಟನೆಗೆ ಕುಳಿತುಕೊಳ್ಳಬೇಕಾಗಿರುವುದು ನಮಗೆ ಬೇಸರ ತಂದಿದೆ. ನಮ್ಮ ಹೋರಾಟ ಕುಸ್ತಿ ಫೆಡರೇಷನ್ ಆಫ್ ಇಂಡಿಯಾ ವಿರುದ್ಧ ಮಾತ್ರ. ನಮ್ಮ ಬೇಡಿಕೆಗಳನ್ನು ಕೇಳಲು ನಾವು ಪ್ರಧಾನಿ, ,ಗೃಹ ಸಚಿವ ಮತ್ತು ಕೇಂದ್ರ ಕ್ರೀಡಾ ಸಚಿವರನ್ನಿ ಮನವಿ ಮಾಡುತ್ತೇವೆ ಎಂದು ಪುನಿಯಾ ಹೇಳಿದ್ದಾರೆ.
”ನಾನು ಯಾರ ದಯೆಯಿಂದ ಇಲ್ಲಿ ಕುಳಿತಿಲ್ಲ, ಸಾರ್ವಜನಿಕರಿಂದ ಆಯ್ಕೆಯಾದ ನಂತರ ಇಲ್ಲಿದ್ದೇನೆ” ಎಂದು ಡಬ್ಲ್ಯುಎಫ್‌ಐ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ತಿರುಗೇಟು ನೀಡಿದ್ದಾರೆ.
ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರು ಬಲ್ಗೇರಿಯಾದಲ್ಲಿ ಅದೇ ಹೋಟೆಲ್‌ನಲ್ಲಿ ಉಳಿದುಕೊಂಡಿದ್ದಾರೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿ ”ಕುಸ್ತಿ ಪಟುಗಳ ತಂಗುವ ವ್ಯವಸ್ಥೆಯನ್ನು ಸಂಘಟಕರು ಮಾಡುತ್ತಾರೆ ಮತ್ತು ಪ್ರತಿ ದೇಶದ ತಂಡವನ್ನು ಪ್ರತ್ಯೇಕ ಸ್ಥಳದಲ್ಲಿ ಇರಿಸಲಾಗಿದೆ. ಬಾಗಿಲು ತೆರೆದಿದೆ ಎಂದು ಆರೋಪಿಸಿದ ಮಹಿಳಾ ಕುಸ್ತಿಪಟು ಆ ಪಂದ್ಯಾವಳಿಯಲ್ಲಿ ಇರಲಿಲ್ಲ ಎಂದಿದ್ದಾರೆ.
ಆ ಕುಸ್ತಿಪಟುಗಳಿಗೆ ನ್ಯಾಯ ಒದಗಿಸಬೇಕೆಂದು ನಾನು ಬಯಸುತ್ತೇನೆ, ಕುಸ್ತಿಪಟುಗಳು ಎತ್ತಿರುವ ಆರೋಪಗಳ ಬಗ್ಗೆ ಸಮಗ್ರ ತನಿಖೆಯಾಗಬೇಕು ಮತ್ತು ಇದರಲ್ಲಿ ಭಾಗಿಯಾಗಿರುವವರ ವಿರುದ್ಧ ಸಿಬಿಐ ತನಿಖೆಯಾಗಬೇಕು ಎಂದು ಒಲಿಂಪಿಯನ್ ಬಾಕ್ಸರ್ ಮತ್ತು ಕಾಂಗ್ರೆಸ್ ನಾಯಕ ವಿಜೇಂದರ್ ಸಿಂಗ್ ಒತ್ತಾಯಿಸಿದ್ದಾರೆ.