ಈ ಕಾಲದ ಮಕ್ಕಳು ಎಷ್ಟು ಅದೃಷ್ಟವಂತರು ಅಲ್ವಾ? ಹುಟ್ಟುವಾಗಲೇ ಕೈಯಲ್ಲಿ ಮೊಬೈಲ್ ಫೋನ್. ನಾವು ಚಿಕ್ಕವರಿರುವಾಗ ಇವುಗಳನ್ನ ಬಳಸೋದು ಹೋಗಲಿ, ಪಕ್ಕದ ಇವುಗಳನ್ನು ನೋಡೋದೆ ಒಂದು ದೊಡ್ಡ ಖುಷಿಯಾಗಿತ್ತು.
ನಾವು ಇಂತಹ ಆಟಿಕೆಗಳಾಗಲಿ, ಇನ್ನೊಂದಾಗಲಿ ಇರಲಿಲ್ಲ ನಿಜ. ಆದರೆ ನಮ್ಮೊಂದಿಗೆ ಆಟವಾಡೋಕೆ, ನಮ್ಮ ಅಜ್ಜಿ, ಅಜ್ಜ, ದೊಡ್ಡಪ್ಪ, ದೊಡ್ಡಮ್ಮ, ಚಿಕ್ಕಪ್ಪ, ಚಿಕ್ಕಮ್ಮ, ಅಣ್ಣ, ಅಕ್ಕ, ತಮ್ಮ, ತಂಗಿ, ಹೀಗೆ ಇವರೆಲ್ಲರೂ ಇರುತ್ತಿದ್ದರು. ಈಗ ಇಂತಹ ಸಂಬಂಧಗಳು ವಿರಳವಾಗಿದೆ. ಮನೇಲಿ ಜನ ಇದ್ರೆ ತಾನೇ ಮಕ್ಕಳಿಗೆ ಗೊತ್ತಾಗೋಕೆ ಸಾಧ್ಯ. ಮನೆಯಲ್ಲಿ ಅಪ್ಪ, ಅಮ್ಮ, ಹೆಚ್ಚು ಅಂದ್ರೆ, ಅಜ್ಜ ಅಜ್ಜಿ ಇರಬಹುದು ಅಷ್ಟೇ. ಅದೂ ಪೇಟೆಯಲ್ಲಿ ಮನೆಯಿದ್ದರೆ ಅದು ಕನಸೇ.
ನಮ್ಮ ಬಾಲ್ಯದಲ್ಲಿ ಅಜ್ಜ, ಅಜ್ಜಿಯ ಕಥೆಗಳನ್ನು ಕೇಳುತ್ತ, ಅಜ್ಜನ ಬುದ್ಧಿಮಾತಿನ ಬೈಗುಳವನ್ನು ತಿನ್ನುತ್ತಾ, ದೊಡ್ಡಪ್ಪ, ದೊಡ್ಡಮ್ಮನ ಪ್ರೀತಿಯ ಮುತ್ತುಗಳನ್ನು ಸ್ವೀಕರಿಸುತ್ತಾ, ಚಿಕ್ಕಪ್ಪನ ಹೆಗಲ ಮೇಲೆ ಕೂತು ಆಟವಾಡುತ್ತಾ, ಬೆಳೆದಿದ್ವಿ. ಈಗ ಇಂತಹ ಅವಿಭಕ್ತ ಕುಟುಂಬದಲ್ಲಿ ಹುಟ್ಟಬೇಕು ಅಂದ್ರೆ ಪುಣ್ಯಾನೆ ಮಾಡಿರಬೇಕು. ಈಗ ಇಂತಹ ಕುಟುಂಬಗಳು ಸಿಗೋದೇ ತುಂಬಾ ಅಪರೂಪ. ಆದ್ದರಿಂದ ಈಗಿನ ಮಕ್ಕಳಿಗೆ ತಮ್ಮ ಅಪ್ಪ, ಅಮ್ಮನ ಬಿಟ್ಟು ಬೇರೆ ಸಂಬಂಧಗಳೇ ಗೊತ್ತಿಲ್ಲದಂತಾಗಿದೆ. ಇನ್ನೂ ಸಂಬಂಧಿಕರು ಮನೆಗೆ ಬಂದಾಗ ಕೂಡ, ಈ ಮಕ್ಕಳು ಅವರೊಂದಿಗೆ ಮಾತನಾಡಲು ಹೋಗುವುದಿಲ್ಲ. ಏಕೆಂದರೆ ಈ ಮಕ್ಕಳು ಬೆಳೆದ ವಾತಾವರಣ ಅವರಿಗೆ, ಸಮಾಜದೊಂದಿಗೆ ಹೇಗೆ ವ್ಯವಹರಿಸಬೇಕು ಎಂದು ಕಲಿಸುವುದಿಲ್ಲ.
ಬೆಳಿಗ್ಗೆ 9 ಗಂಟೆಗೆ ಶಾಲೆಗೆ ಹೋದರೆ, ಬರೋದು ಸಂಜೆ 5 ಗಂಟೆ. ಇನ್ನು ಟ್ಯೂಷನ್ ಮುಗಿಸಿ ಬರುವುದು ರಾತ್ರಿ8 ಗಂಟೆ. ಇನ್ನು ಊಟ, ಹೋಂವರ್ಕ್, ಅಂತಾನೆ ಮಲಗುವ ಸಮಯ ಆಗಿ ಹೋಗುತ್ತದೆ. ಹೀಗೆ ಆದ್ರೆ ಈ ಮಕ್ಕಳು ತಮ್ಮ ಬಾಲ್ಯವನ್ನು ಸಂತೋಷದಿಂದ ಹೇಗೆ ಕಳೆಯಲು ಸಾಧ್ಯ? ಹೀಗೆ ಮಕ್ಕಳು ಬರೀ ಪುಸ್ತಕದ ಹುಳುಗಳಾಗಿ ಹೋಗಿಬಿಟ್ಟಿದ್ದಾರೆ. ಈಗ ಮಕ್ಕಳಿಗೆ ಅದೆಷ್ಟೋ ಆಟಿಕೆಗಕು ಮಾರುಕಟ್ಟೆಯಲ್ಲಿ ದೊರೆಯುತ್ತವೆ. ಆದರೇ ನಮಗೆ ಮಣ್ಣೇ ದೊಡ್ಡ ಆಟಿಕೆಯಾಗಿತ್ತು. ಶಾಲೆಯಿಂದ ಮನೆಗೆ ಬಂದ ಕೂಡಲೇ, ಮಣ್ಣಲ್ಲೇ ಮನೆ ಮಾಡಿ, ದೇವಸ್ಥಾನ ಮಾಡಿ, ಅಡುಗೆ ಮಾಡಿ, ಹೀಗೆ ಎಲ್ಲವೂ ಮಣ್ಣಲ್ಲೇ ಆಗಿಬಿಡುತ್ತಿತ್ತು. ಈಗ ಅಂಗಳದಲ್ಲಿ ಮಣ್ಣು ಸಿಗುವುದೇ ಕಷ್ಟ. ಮಣ್ಣಲ್ಲಿ ಆಡಿದರೆ ತಮ್ಮ ಮಕ್ಕಳಿಗೆ ಏನಾಗುತ್ತೋ ಎಂಬ ಭಯ. ತಂದೆ ತಾಯಿ ಮಕ್ಕಳನ್ನು ಹೊರಗೆ ಬರಲು ಬಿಡುವುದೇ ಇಲ್ಲ. ಹೊರಗೆ ಬರಲಿಲ್ಲ ಎಂದ ಮೇಲೆ ಜನರ ಸಂಪರ್ಕ ಹೇಗೆ ತಾನೇ ಸಾಧ್ಯ? ಸಮಾಜದೊಂದಿಗೆ ಹೇಗೆ ವ್ಯವಹರಿಸಬೇಕೆಂದು ಅವರಿಗೆ ಹೇಗೆ ತಿಳಿಯುತ್ತದೆ? ಇನ್ನು ಭಾನುವಾರವಂತು, ಶಾಲೆಯ ಹೋಂವರ್ಕ್ ಮುಗಿಸುವಾಗ ಸಂಜೆಯಾಗುತ್ತದೆ. ಅಂದಮೇಲೆ ಮಕ್ಕಳು ಆಡುವುದಾದರು ಯಾವಾಗ? ಅಕ್ಕ ಪಕ್ಕದ ಮನೆಯ ಮಕ್ಕಳ ಜತೆ ತಮ್ಮ ಮಕ್ಕಳನ್ನು ಆಡಲು ಬಿಡಲು, ಪಾಪ ತಂದೆ ತಾಯಿಗೆ ಭಯ. ಎಲ್ಲಿ ಮಕ್ಕಳು ಅನಾಹುತ ಮಾಡಿಬಿಡುತ್ತಾರೋ ಎಂದು.
ಹೀಗೆ ಮಕ್ಕಳ ಮೇಲಿನ ಅತಿಯಾದ ಕಾಳಜಿ, ಅವರ ಸ್ವಾತಂತ್ರ್ಯವನ್ನು ಕಸಿದುಕೊಳ್ಳುವಂತಾಗಿದೆ. ಹೀಗೇ ಆದರೆ, ಮುಂದೊಂದು ದಿನ ಅವರು ತಮ್ಮ ಬಾಲ್ಯವನ್ನು ನೆನೆದಾಗ ಸಿಗುವುದು, ಪುಸ್ತಕ, ಮೊಬೈಲ್, ಕಂಪ್ಯೂಟರ್, ಟಿವಿ, ಅಪ್ಪ, ಅಮ್ಮ, ಅಷ್ಟೇ. ಆಗ ನಮಗೆ ರಜೆ ಬಂತೆಂದರೆ, ಬೆಟ್ಟ ಗುಡ್ಡಗಳಲ್ಲಿ ಸುತ್ತಿ, ಎಷ್ಟೋ ಹಣ್ಣುಗಳನ್ನು ತಿನ್ನುತ್ತಿದ್ದೆವು. ಹಾಗೇ ಆಟವಾಡುತ್ತಿದ್ದ ಆಟಗಳು ಒಂದೇ, ಎರಡೇ. ಕಣ್ಣಾಮುಚ್ಚಾಲೆ, ಮರಕೋತಿ, ಗೋಲಿ, ಬುಗುರಿ, ಪಗಡೆ, ಚೆನ್ನೆಮಣೆ, ಕಬಡ್ಡಿ, ಹೀಗೆ ಪಟ್ಟಿ ಬೆಳೆಯುತ್ತ ಹೋಗುತ್ತದೆ. ಈಗಿನ ಮಕ್ಕಳಿಗೆ ಇವೆಲ್ಲ ಏನು ಎಂಬುದೇ ಗೊತ್ತಿಲ್ಲ. ಈಗ ಏನಿದ್ದರೂ ಕ್ರಿಕೆಟ್ ಅಷ್ಟೇ. ನಾವು ಕೂಡ ಕ್ರಿಕೆಟ್ ಆಡುತ್ತಿದ್ದೆವು. ಅದೇ ಯಾವುದೊ ರಸ್ತೆಯಲ್ಲೋ, ಗದ್ದೆ ಬಯಲಿನಲ್ಲೋ, ಯಾವುದೊ ಗಳ್ಳಿಯಲ್ಲೋ. ಆದರೆ ಈಗ ಮಕ್ಕಳಿಗೆ ಸುಸಜ್ಜಿತ ಕ್ರೀಡಾಂಗಣವೇ ಬೇಕು.
ಈಗ ಬಹುತೇಕ ಮಕ್ಕಳು ಇಂಗ್ಲೀಷ್ ಮಾಧ್ಯಮದಲ್ಲಿ ಕಲಿಯುವವರಾಗಿದ್ದಾರೆ. ಕನ್ನಡ ಮಾಧ್ಯಮ ಶಾಲೆಗಳನ್ನು ಮುಚ್ಚುವ ಪರಿಸ್ಥಿತಿ ಬಂದಿದೆ. ನನಗೆ ಅನಿಸಿದ ಮಟ್ಟಿಗೆ, ಈ ಇಂಗ್ಲಿಷ್ ಮತ್ತು ಕನ್ನಡ ಮಾಧ್ಯಮ ಶಾಲೆಗಳ ನಡುವೆ ಇರುವ ವ್ಯತ್ಯಾಸ ಏನೆಂದರೆ, ಇಂಗ್ಲಿಷ್ ಮಾಧ್ಯಮ ಶಾಲೆಗಳು, ನಾಲ್ಕು ಗೋಡೆಗಳ ನಡುವೆ ಬದುಕುವುದನ್ನು ಕಲಿಸುತ್ತದೆ. ಆದರೆ ಕನ್ನಡ ಮಾಧ್ಯಮ ಶಾಲೆಗಳು, ನಾಲ್ಕು ಜನರ ಮಧ್ಯೆ, ಈ ಸಮಾಜದ ಮಧ್ಯೆ ಬದುಕುವುದನ್ನು ಕಲಿಸುತ್ತವೆ.
ಹಿಂದೆಲ್ಲ ಶಾಲೆಗೆ ಹೋಗುವಾಗ ಮೂರೂ ನಾಲ್ಕು ಕಿ. ಮೀ. ನಡೆದು ಹೋಗಬೇಕಿತ್ತು. ಹಾಗೆ ಹೋಗುವಾಗ ನಮ್ಮದೇ ಆದ ಮಕ್ಕಳ ಸೈನ್ಯ. ದಾರಿಯುದ್ದಕ್ಕೂ ತಿನ್ನುತ್ತಿದ್ದ ಹಣ್ಣು ಹಂಪಲುಗಳು, ಏನೇನೋ ಮಾತು ಕಥೆಗಳು. ಅದೆಲ್ಲ ಈಗ ಎಲ್ಲಿ ಕಾಣಲು ಸಾಧ್ಯ? ಹೀಗೆ ಹೋಗಿ ಬರುವಾಗ ಅದೆಷ್ಟೋ ಜನರ ಪರಿಚಯವಾಗುತ್ತಿತ್ತು. ಈಗಿನ ಮಕ್ಕಳೆಲ್ಲಿ ನಡೆದು ಹೋಗುತ್ತಾರೆ? ಪೋಷಕರೆಲ್ಲಿ ಬಿಡುತ್ತಾರೆ?. ಹೀಗೆ ಮಕ್ಕಳನ್ನು ಅತಿಯಾಗಿ ಪ್ರೀತಿಸುವ ತಂದೆ ತಾಯಿಯರು, ಮಕ್ಕಳ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳುತ್ತಾ, ಮಕ್ಕಳಿಗೆ ಅವರ ಬಾಲ್ಯದ ಕ್ಷಣಗಳನ್ನು ಸಂತೋಷದಿಂದ ಕಳೆಯಲು ಅವಕಾಶ ನೀಡುತ್ತಿಲ್ಲ.
ಮಕ್ಕಳಿಗೆ ಅವರ ಬಾಲ್ಯದ ದಿನಗಳನ್ನು ಸಂತೋಷದಿಂದ ಕಳೆಯಲು ಬಿಡಿ. ಮನೆಯ ಹೊರಗಡೆ ಆಡಲು ಬಿಡಿ. ಸಂಬಂಧಿಕರೊಡನೆ, ನೆರೆಹೊರೆಯವರೊಡನೆ ಬೆರೆಯಲು ಬಿಡಿ. ಸಮಾಜದೊಂದಿಗೆ ಬೆರೆತು, ಪ್ರಪಂಚವನ್ನು ನೋಡಲು ಬಿಡಿ. ಮನೆಯವರೊಡನೆ ಆಟವಾಡಲು, ಗಲಾಟೆ ಮಾಡಲು, ಕಿತ್ತಾಡಲು ಬಿಡಿ. ಅವರ ತುಂಟಾಟಕ್ಕೆ ಅವಕಾಶ ನೀಡಿ. ಅವರು ದೊಡ್ಡವರಾದ ಮೇಲೆ ಇವನ್ನೆÇÉಾ ಮಾಡಲು ಸಾಧ್ಯವಿಲ್ಲ ತಾನೇ? ಮಕ್ಕಳನ್ನು ಮಕ್ಕಳಾಗೆ ಇರಲು ಬಿಡಿ.
ವಿನಯ್ ಜೈನ್
ಕಸಗುಪ್ಪೆ