ಉಪ್ಪಿನಂಗಡಿ: ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ನೆಲ್ಯಾಡಿ ಸಮೀಪದ ಲಾವತ್ತಡ್ಕದಲ್ಲಿ ಖಾಸಗಿ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ಗುಂಡ್ಯ ಹೊಳೆಗೆ ಬಿದ್ದ ಘಟನೆ ಶುಕ್ರವಾರ ತಡರಾತ್ರಿ 11.30ರ ಸುಮಾರಿಗೆ ಸಂಭವಿಸಿದೆ.
ಬಸ್ಸಿನ ಚಾಲಕ ಬಸ್ನ ಚಕ್ರದಡಿಗೆ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಮೃತಪಟ್ಟವರನ್ನು ಮೈಸೂರು ಮೂಲದ ಭರತ್ (28) ಎಂದು ಗುರುತಿಸಲಾಗಿದೆ.
ಬೆಂಗಳೂರಿನಿಂದ ಪ್ರಯಾಣಿಕರನ್ನು ಗೋಕರ್ಣದಲ್ಲಿ ಇಳಿಸಿ, ಬಳಿಕ ಕುಕ್ಕೆ ಸುಬ್ರಹ್ಮಣ್ಯದಿಂದ ಬೆಂಗಳೂರಿಗೆ ಪ್ರಯಾಣಿಕರನ್ನು ಹತ್ತಿಸಲು ತೆರಳುತ್ತಿದ್ದಾಗ ಅಪಘಾತ ಸಂಭವಿಸಿದೆ.
ಬಸ್ಸಿನಲ್ಲಿ ಚಾಲಕ ಹಾಗೂ ಸಹ ಚಾಲಕರಿಬ್ಬರೂ ಮಾತ್ರ ಪ್ರಯಾಣಿಸುತ್ತಿದ್ದು, ಸಹ ಚಾಲಕ ಅವಿನಾಶ್ ಅವರು ಅಪಾಯದಿಂದ ಪಾರಾಗಿದ್ದಾರೆ. ಬೇರೆ ಪ್ರಯಾಣಿಕರು ಇಲ್ಲದ ಕಾರಣ ಹೆಚ್ಚಿನ ಸಾವು ನೋವು ಸಂಭವಿಸಲಿಲ್ಲ.
ಮೃತದೇಹವನ್ನು ಪುತ್ತೂರಿನ ಸರಕಾರಿ ಶವಗಾರದಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಿ ವಾರಸುದಾರರಿಗೆ ಹಸ್ತಾಂತರಿಸಲಾಗಿದೆ. ಸ್ಥಳಕ್ಕೆ ನೆಲ್ಯಾಡಿ ಹೊರಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಆ್ಯಂಬುಲೆನ್ಸ್ – ಈಚರ್ ಲಾರಿ ಢಿಕ್ಕಿ: ಓರ್ವನಿಗೆ ಗಾಯ:
ಉಪ್ಪಿನಂಗಡಿ: ಇಲ್ಲಿನ ಪೊಲೀಸ್ ಠಾಣೆ ವ್ಯಾಪ್ತಿಯ ಗುಂಡ್ಯದಲ್ಲಿ ಬೆಂಗಳೂರು-ಮಂಗಳೂರು ರಾ.ಹೆ. 75ರಲ್ಲಿ ಆ್ಯಂಬುಲೆನ್ಸ್ ಹಾಗೂ ಈಚರ್ ಲಾರಿ ನಡುವೆ ಸಂಭವಿಸಿದ ಢಿಕ್ಕಿಯಾಗಿ ಆ್ಯಂಬುಬುಲೆನ್ಸ್ ಚಾಲಕ ಮುಸ್ತಾಫ ಗಾಯಗೊಂಡ ಘಟನೆ ಶನಿವಾರ ಸಂಭವಿಸಿದೆ.
ಬೆಂಗಳೂರಿನಿಂದ ಪುತ್ತೂರಿಗೆ ಕಡೆಗೆ ಬರುತ್ತಿದ್ದ ಆ್ಯಂಬುಲೆನ್ಸ್ ಹಾಗೂ ಮಂಗಳೂರಿನಿಂದ ಹಾಸನಕ್ಕೆ ತೆರಳುತ್ತಿದ್ದ ಈಚರ್ ಅಪಘಾತಕ್ಕೀಡಾಗಿದೆ.