ಬೆಂಗಳೂರು: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿಯನ್ನು ಹತ್ಯೆಗೈದು, ಅಪರಿಚಿತರ ಕೃತ್ಯ ಎಂದು ಕಥೆ ಸೃಷ್ಟಿಸಿದ ಪತ್ನಿ ಹಾಗೂ ಆಕೆಯ ಪ್ರಿಯಕರ ಸೇರಿ ಐವರು ಆರೋಪಿಗಳನ್ನು ಬೆಳ್ಳಂದೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.
ಭೋಗನಹಳ್ಳಿ ನಿವಾಸಿ ನಾಗರತ್ನ (27), ಆಕೆಯ ಪ್ರಿಯಕರ ರಾಮ್(34), ಸಹಚರರಾದ ಶಶಿಕುಮಾರ್ (30), ಸುರೇಶ್ (29) ಹಾಗೂ ಚಿನ್ನ(29) ಬಂಧಿತರು.
ಆರೋಪಿಗಳು ಅ.14ರಂದು ತಿಪ್ಪೇಶ್ (30) ಎಂಬಾತನನ್ನು ಕೊಲೆಗೈದಿದ್ದರು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ತನಿಖೆ ಕೈಗೊಂಡು ಆರೋಪಿಗಳನ್ನು ಬಂಧಿಸಲಾಗಿದೆ.
ಬಳ್ಳಾರಿ ಜಿಲ್ಲೆಯ ಸಿರಗುಪ್ಪ ತಾಲೂಕಿನ ಕರೂರು ನಿವಾಸಿಗಳಾದ ತಿಪ್ಪೇಶ್ ಮತ್ತು ನಾಗರತ್ನ ದಂಪತಿಗೆ ಇಬ್ಬರು ಮಕ್ಕಳಿದ್ದು, ಬೆಳ್ಳಂದೂರಿನ ಭೋಗನಹಳ್ಳಿಯ ಕಾರ್ಮಿಕರ ಶೆಡ್‌ನಲ್ಲಿ ವಾಸವಾಗಿದ್ದರು. ತಿಪ್ಪೇಶ್ ಗಾರೆ ಕೆಲಸ ಮಾಡಿಕೊಂಡಿದ್ದು, ನಾಗರತ್ನ ನರ್ಸರಿಯಲ್ಲಿ ಗಾರ್ಡನರ್ ಕೆಲಸ ಮಾಡಿಕೊಂಡಿದ್ದಳು. ಈ ನಡುವೆ ನಾಗರತ್ನ, ತನ್ನ ಸಹೋದರಿಯ ಪತಿ ರಾಮ್ ಜತೆ ಅನೈತಿಕ ಸಂಬಂಧ ಹೊಂದಿದ್ದಳು ಎನ್ನಲಾಗಿದೆ. ಮದ್ಯವ್ಯಸನಿಯಾಗಿದ್ದ ತಿಪ್ಪೇಶ್‌ಗೆ ಈ ವಿಷಯ ತಿಳಿದು ಪತ್ನಿಯೊಂದಿಗೆ ಜಗಳವಾಡಿದ್ದ. ಅದರಿಂದ ಕೋಪಗೊಂಡ ನಾಗರತ್ನ ತನ್ನ ಪತಿಯನ್ನು ಹತ್ಯೆಗೈಯಲು ಪ್ರಿಯಕರ ರಾಮ್ ಜತೆ ಸಂಚು ರೂಪಿಸಿದ್ದಳು. ನಂತರ ರಾಮ್ ತಮಿಳುನಾಡಿನ ಧರ್ಮಪುರಿಯ ತನ್ನ ಸ್ನೇಹಿತರಾದ ಶಶಿಕುಮಾರ್, ಸುರೇಶ್ ಮತ್ತು ಚಿನ್ನಗೆ ವಿಷಯ ತಿಳಿಸಿ ಬೆಂಗಳೂರಿಗೆ ಕರೆಸಿಕೊಂಡಿದ್ದಾನೆ.
ಕರೆದೊಯ್ದು ಹತ್ಯೆ: ಅ.14ರಂದು ಸಂಜೆ ಪತಿ ತಿಪ್ಪೇಶ್‌ನನ್ನು ಮನೆ ಸಮೀಪದ ಸುಮಾರು 50 ಎಕರೆ ವ್ಯಾಪ್ತಿಯ ನೀಲಗಿರಿ ತೋಪಿಗೆ ಕರೆದೊಯ್ದ ನಾಗರತ್ನ, ಕೆಲ ಹೊತ್ತು ಸಮಯ ಕಳೆದಿದ್ದಾರೆ. ಅದೇ ವೇಳೆ ಪ್ರಿಯಕರ ರಾಮ್ ಹಾಗೂ ಇತರರು ಸ್ಥಳಕ್ಕೆ ಬಂದು ತಿಪ್ಪೇಶ್ ಮೇಲೆ ಹಲ್ಲೆ ನಡೆಸಿದ್ದಾರೆ. ನಂತರ ಕುತ್ತಿಗೆ ಮೇಲೆ ಕೋಲು ಇಟ್ಟು ಹಿಸುಕಿ, ಮರ್ಮಾಂಗಕ್ಕೆ ಒದ್ದು ಕೊಲೆ ಮಾಡಿ ನಾಗರತ್ನ ಸೇರಿ ಎಲ್ಲರೂ ಪರಾರಿಯಾಗಿದ್ದರು ಎಂದು ಪೊಲೀಸರು ಮಾಹಿತಿ ನೀಡಿದರು.
ಶವದ ಮುಂದೆ ಗೋಳಾಡಿದ್ದ ಪತ್ನಿ: ಕೆಲ ಹೊತ್ತಿನ ಬಳಿಕ ನೀಲಗಿರಿ ತೋಪಿನಲ್ಲಿ ತಿಪ್ಪೇಶ್ ಕೊಲೆಯಾಗಿದ್ದಾನೆಂದು ಸ್ಥಳೀಯರು ನಾಗರತ್ನಗೆ ತಿಳಿಸಿದ್ದರು. ಸ್ಥಳಕ್ಕೆ ಹೋದ ಪತ್ನಿ ನಾಗರತ್ನ, “ನನ್ನ ಪತಿ ನಿನ್ನೆ ಹೊರಗೆ ಹೋಗಿದ್ದು, ಮನೆಗೆ ಹಿಂದಿರುಗಲಿಲ್ಲ’ ಎಂದು ಗೋಳಾಡುತ್ತಾ ಶವದ ಮುಂದೆ ಕಣ್ಣೀರಿಟ್ಟು ನಾಟಕವಾಡಿದ್ದಾಳೆ. ನಂತರ ಪತಿಯನ್ನು ಯಾರೋ ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ ಎಂದು ಆರೋಪಿಸಿ ಪೊಲೀಸರಿಗೆ ದೂರು ನೀಡಿದ್ದಳು.
ಕೊಲೆ ಮಾಡಿಸಿರುವುದಾಗಿ ಪತ್ನಿ ತಪ್ಪೊಪ್ಪಿಗೆ:
ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಾಗ ಆರಂಭದಲ್ಲಿ ಕೊಲೆಯ ಬಗ್ಗೆ ಯಾವುದೇ ಸುಳಿವು ಸಿಕ್ಕಿರಲಿಲ್ಲ. ನಂತರ ಘಟನೆ ನಡೆದ ಸುತ್ತಮುತ್ತಲಿನ ಸಿಸಿ ಕ್ಯಾಮೆರಾ ಹಾಗೂ ನಾಗರತ್ನಳ ಮೊಬೈಲ್ ಕರೆ ವಿವರ ಪರಿಶೀಲಿಸಿದಾಗ ಕೆಲವೊಂದು ಅನುಮಾನಗಳು ಹುಟ್ಟಿಕೊಂಡಿವೆ. ಅಲ್ಲದೆ, ರಾಮ್ ಮತ್ತು ನಾಗರತ್ನಳ ಚಲನವಲನದ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ್ದರು. ಆದರಿಂದ ನಾಗರತ್ನಳನ್ನು ವಶಕ್ಕೆ ಪಡೆದು ತಮ್ಮ ಶೈಲಿಯಲ್ಲಿ ತೀವ್ರ ವಿಚಾರಣೆಗೊಳಪಡಿಸಿದಾಗ ಪತಿಯ ಕೊಲೆ ರಹಸ್ಯ ಬಾಯಿಬಿಟ್ಟಿದ್ದಾಳೆ ಎಂದು ಪೊಲೀಸರು ಮಾಹಿತಿ ನೀಡಿದರು. ಘಟನೆ ಸಂಬಂಧ ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.