ಹುಬ್ಬಳ್ಳಿ: ವೈಯಕ್ತಿಕ ಕೆಲಸಗಳಿಗಾಗಿ ನಾನು ದೆಹಲಿಗೆ ಹೋಗಿದ್ದೆ. ಪಕ್ಷದ ಯಾವುದೇ ಹೈಕಮಾಂಡ್ ನಾಯಕರನ್ನು ಭೇಟಿ ಆಗಿಲ್ಲ ಎಂದು ಮಾಜಿ ಸಿಎಂ ಜಗದೀಶ ಶೆಟ್ಟರ ಹೇಳಿದರು.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗಿಂತ ಒಂದು ದಿನ ಮುಂಚೆ ಸಿಎಂ ಸಿದ್ದರಾಮಯ್ಯ ದೆಹಲಿಗೆ ಹೋಗಿದ್ದರು. ಅದಾದ ನಂತರ ನಾನು ಹೋಗಿದ್ದೇನೆ. ಸಿಎಂ ಪ್ರಧಾನಿ ಭೇಟಿಯಾಗಲು ಹೋಗಿದ್ದರು. ನಾನು ವೈಯಕ್ತಿಕ ಕೆಲಸಕ್ಕಾಗಿ ದೆಹಲಿಗೆ ಹೋಗಿದ್ದೆ. ಈ ವೇಳೆ ಪಕ್ಷದ ಯಾವುದೇ ನಾಯಕರನ್ನು ಭೇಟಿಯಾಗಿಲ್ಲ ಎಂದರು.
ಧಾರವಾಡ ಲೋಕಸಭಾ ಕ್ಷೇತ್ರದ ಆಕಾಂಕ್ಷಿ ನಾನಲ್ಲ ಎಂದರಲ್ಲದೆ, ನಿಮ್ಮ ಹೆಸರು ಶಿಫಾರಸ್ಸು ಆಗಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಸಿದ ಅವರು, ನನ್ನ ಹೆಸರಿರುವ ಪಟ್ಟಿ ನಿಮಗೆ ಕೊಟ್ಟವರು ಯಾರು, ನಿಮ್ಮ ಬಳಿ ಪಟ್ಟಿ ಇದೆಯೇ ಎಂದು ಪ್ರಶ್ನಿಸಿದರು.
ಧಾರವಾಡ ಲೋಕಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ವೀಕ್ಷಕರ ಸಭೆಯಾಗಿದೆ. ಇನ್ನು ಯಾರ ಹೆಸರು ಶಿಫಾರಸ್ಸು ಆಗಿಲ್ಲ. ಸಿಎಂ ಸಮ್ಮುಖದಲ್ಲಿಯೇ ನಾನು ಲೋಕಸಭಾ ಚುನಾವಣೆಗೆ ಆಕಾಂಕ್ಷಿ ಅಲ್ಲ ಎಂದು ಸ್ಪಷ್ಟಪಡಿಸಿದ್ದೇನೆ ಎಂದರು.
ಐಎನ್ ಡಿಐಎ ಒಕ್ಕೂಟದ ಪಿಎಂ ಅಭ್ಯರ್ಥಿಯಾಗಿ ಮಲ್ಲಿಕಾರ್ಜುನ ಖರ್ಗೆ ಹೆಸರಿಗೆ ಕೆಲವರ ಅಪಸ್ವರ ವಿಚಾರವಾಗಿ ಪ್ರತಿಕ್ರಿಯಿಸಿ, ಪ್ರಧಾನಿ ಮೋದಿ ಒಂದು ಕಡೆ, ಮತ್ತೊಂದೆಡೆ ಎಲ್ಲಾ ವಿಪಕ್ಷಗಳು ಒಗ್ಗಟ್ಟಿನಿಂದ ಕೆಲಸ ಮಾಡುತ್ತಿವೆ. ಪ್ರಧಾನಿ ಅಭ್ಯರ್ಥಿ ಯಾರೆಂಬುದು ಎಲ್ಲರಲ್ಲೂ ಒಮ್ಮತದ ತೀರ್ಮಾನ ಬೇಕಾಗುತ್ತದೆ. ಕೆಲ ಪಕ್ಷದವರು ಮಲ್ಲಿಕಾರ್ಜುನ ಖರ್ಗೆ ಅವರ ಹೆಸರು ಸಲಹೆ ಮಾಡಿದ್ದಾರೆ. ಅನುಭವ ಹಾಗೂ ಮುತ್ಸದಿ ರಾಜಕಾರಣಿ ಎಂಬುದೇ ಕಾರಣ ಇರಬೇಕು. ಆ ಸ್ಥಾನಕ್ಕೆ ಅವರು ಅರ್ಹರು ಎಂದರು.
ಸೋನಿಯಾ ಗಾಂಧಿ ತೆಲಂಗಾಣದಿಂದ ಸ್ಪರ್ಧೆಸಬೇಕೆಂಬ ಬೇಡಿಕೆ ಬಗ್ಗೆ ನನಗೆ ಹೆಚ್ಚಿನ ಮಾಹಿತಿ ಇಲ್ಲ ಎಂದರು.
ಬಿಜೆಪಿಯನ್ನು ವಾಚಮಗೋಚರವಾಗಿ ಬಯ್ಯುತ್ತಿದ್ದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಈಗ ಅದೇ ಪಕ್ಷ ಅಪ್ಪಿಕೊಂಡಿದ್ದಾರೆ ಎಂದು ಮಾಜಿ ಪಿಎಂ ದೇವೇಗೌಡ ಮತ್ತು ಪ್ರಧಾನಿ ಮೋದಿ ಭೇಟಿ ಬಗ್ಗೆ ವ್ಯಂಗ್ಯವಾಡಿದರು.
ಸಂಸತ್ ಕಲಾಪದಿಂದ ನೂರಕ್ಕೂ ಹೆಚ್ಚು ಸಂಸದರ ಅಮಾನತು ಮಾಡಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕ. ದೇಶದಲ್ಲಿ ಪ್ರಜಾಪ್ರಭುತ್ವದ ವ್ಯವಸ್ಥೆ ಕುಸಿದು ಹೋಗುತ್ತಿದೆ ಎಂಬುದಕ್ಕೆ ಇದು ಸಾಕ್ಷಿ. ಮುಂದಿನ ದಿನಗಳಲ್ಲಿ ಜನರು ಇದಕ್ಕೆ ಉತ್ತರ ಕೊಡಲಿದ್ದಾರೆ ಎಂದರು.