ಕಲಬುರಗಿ: ಚಂದ್ರಶೇಖರ ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ನಿರ್ಮಿಸಲಾಗಿರುವ ವೆಲ್‌ನೆಸ್ ಸೆಂಟರ್ ಮತ್ತು ಮಹಿಳಾ ಜಿಮ್ ಬಳಕೆಗೆ ಸಿದ್ಧಗೊಂಡಿದ್ದು, ಶೀಘ್ರವೆ ಜಿಲ್ಲಾ ಉಸ್ತುವಾರಿ ಸಚಿವರಿಂದ ಉದ್ಘಾಟನೆ ಮಾಡಿಸಿ ಕ್ರೀಡಾಳುಗಳ ಬಳಕೆಗೆ ಅವಕಾಶ ಮಾಡಿಕೊಡಬೇಕು ಎಂದು ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತ ಸುಬೋಧ ಯಾದವ ಕ್ರೀಡಾಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಪ್ರಾದೇಶಿಕ ಆಯುಕ್ತರ ಸಭಾಂಗಣದಲ್ಲಿ ಜಿಲ್ಲಾ ಕ್ರೀಡಾಂಗಣ ಕಾರ್ಯಕಾರಿ ಹಾಗೂ ಬಳಕೆದಾರರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪುರುಷ ಜಿಮ್ ಮತ್ತು ಟೇಬಲ್ ಟೆನಿಸ್ ಕಾಮಗಾರಿಯನ್ನು ಫೆಬ್ರವರಿ ಅಂತ್ಯದೊಳಗೆ ಹಾಗೂ ವಾಲಿಬಾಲ್ ಕೋರ್ಟ್ ಕಾಮಗಾರಿ ವಾರದೊಳಗೆ ಮುಗಿಸಬೇಕು ಎಂದು ಅನುಷ್ಠಾನ ಏಜೆನ್ಸಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬೇಸಿಗೆ ಕಾಲ ಬರುತ್ತಿರುವುದರಿಂದ ಕೂಡಲೆ ಈಜುಕೊಳ ದುರಸ್ತಿ ಕಾರ್ಯಕೈಗೊಳ್ಳಬೇಕು. ಈಜುಕೊಳದಲ್ಲಿ ಓಜೋನೈಜರ್ ಸರಿಯಾಗಿ ಕಾರ್ಯನಿರ್ವಹಣೆ ಮಾಡುತ್ತಿಲ್ಲ, ಇದನ್ನು ಸಹ ದುರಸ್ತಿಪಡಿಸಬೇಕು. ಕ್ರೀಡಾಂಗಣದಲ್ಲಿ ಒಟ್ಟಾರೆ ಕುಡಿಯುವ ನೀರು ಮತ್ತು ಶೌಚಾಲಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಕ್ರೀಡಾಂಗಣದಲ್ಲಿ ಎಚ್.ಕೆ.ಆರ್.ಡಿ.ಬಿ ಅನುದಾನದಡಿ ನಿರ್ಮಿಸಲು ಉದ್ದೇಶಿಸಲಾಗಿರುವ ಜುಡೋ ಹಾಲ್‌ಗೆ ಶೀಘ್ರವೆ ಟೆಂಡರ್ ಕರೆದು ಕಾಮಗಾರಿ ಆರಂಭಿಸಬೇಕು ಎಂದರು.
ಕ್ರೀಡಾಂಗಣದಲ್ಲಿರುವ ಲೋಕೋಪಯೋಗಿ ಇಲಾಖೆಗೆ ಸೇರಿದ 8 ಎಕರೆ ಬಯಲು ಪ್ರದೇಶವನ್ನು ಸ್ವಚ್ಛಗೊಳಿಸಿ ಕ್ರೀಡಾಳುಗಳಿಗೆ ಅಲ್ಲಿ ಕ್ರಿಕೆಟ್ ಮತ್ತು ಫುಟ್ಬಾಲ್ ಆಟಕ್ಕೆ ಅವಕಾಶ ಮಾಡಿಕೊಡಬೇಕು. ಮಳೆ ಬಂದರೆ ಸಿಂಥೆಟಿಕ್ ಟ್ರ್ಯಾಕ್ ಮೇಲೆ ನೀರು ನಿಲ್ಲುತ್ತಿದ್ದು, ಕೂಡಲೆ ಕಾಮಗಾರಿ ನಿರ್ವಹಿಸಿದವರಿಗೆ ತಿಳಿಸಿ ದುರಸ್ತಿಗೊಳಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದ ಪ್ರಾದೇಶಿಕ ಆಯುಕ್ತರು ಬೇಸಿಗೆ ಕಾಲವಾದ ಮಾ.1 ರಿಂದ ಜೂನ್ ಅಂತ್ಯದ ವರೆಗೆ ಕ್ರೀಡಾಂಗಣದಲ್ಲಿ ವಿವಿಧ ಕ್ರೀಡೆಗಳಿಗೆ ಪ್ರತ್ಯೇಕವಾಗಿ ನಿಗದಿಪಡಿಸಲಾದ ಸಮಯಕ್ಕೆ ಅನುಮೋದನೆ ನೀಡಿದರು.
ಖೇಲೋ ಇಂಡಿಯಾದಲ್ಲಿ ಹಣ ಪಡೆಯಿರಿ: ಚಂಪಾ ಕ್ರೀಡಾಂಗಣದಲ್ಲಿ ಅತ್ಯಾಧುನಿಕ ಹಾಕಿ ಟರ್ಫ್ ನಿರ್ಮಾಣಕ್ಕೆ ಕೇಂದ್ರ ಸರ್ಕಾರದ ಖೇಲೋ ಇಂಡಿಯಾ ಯೋಜನೆಯಡಿ ನೀಡಲಾಗುವ ಅನುದಾನ ಪಡೆಯಬೇಕು. ಅಗತ್ಯ ಬಿದ್ದರೆ ಯೋಜನಾ ವೆಚ್ಚದ ಅನುಗುಣವಾಗಿ ಉಳಿದ ಅನುದಾನ ಎಚ್.ಕೆ.ಆರ್.ಡಿ.ಬಿ. ಮಂಡಳಿಯಿಂದ ನೀಡಲಾಗುವುದು ಎಂದು ತಿಳಿಸಿದರು.
ಕ್ರೀಡಾಳುಗಳ ಸಲಹೆ ಪಡೆಯಿರಿ: ಕ್ರೀಡಾಂಗಣದಲ್ಲಿ ಯಾವುದೇ ಕಾಮಗಾರಿ ಹೊಸದಾಗಿ ಆರಂಭಿಸುವ ಮುನ್ನ ಆಯಾ ಕ್ಷೇತ್ರದ ಕ್ರೀಡಾಳುಗಳಿಂದ ಅವರ ಅವಶ್ಯಕತೆಗಳ ಕುರಿತು ಅಭಿಪ್ರಾಯ ಪಡೆಯುವುದು ಸೂಕ್ತ. ಹೀಗೆ ಮಾಡಿದಲ್ಲಿ ಬಳಕೆದಾರರಿಂದ ಮುಂದೆ ಯಾವುದೇ ರೀತಿಯ ಕಾಮಗಾರಿಗೆ ಸಂಬಂಧಿಸಿದಂತೆ ನ್ಯೂನತೆ ಮತ್ತು ದೂರುಗಳಿಗೆ ಅಸ್ಪದ ಇರುವುದಿಲ್ಲ ಎಂದು ಕ್ರೀಡಾಧಿಕಾರಿಗಳಿಗೆ ಸಲಹೆ ನೀಡಿದರು.
ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ| ರಾಜಾ ಪಿ. ಪಾಲಿಕೆಯ ಆಯುಕ್ತ ಫೌಜಿಯಾ ತರನ್ನುಮ, ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತ ಅಮೀನ್ ಮುಖ್ತಾರ, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಭೀಮರಾವ್ ನಂದ್ರೆ, ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಭೀಮರಾವ ಬಿರಾದರ ಹಾಗೂ ಮತ್ತಿತರ ಕ್ರೀಡಾಳುಗಳು ಇದ್ದರು.