ದೇಶದಲ್ಲಿರುವ ಇತರ ಉದ್ಯಮಗಳು ಮತ್ತು ಕ್ಷೇತ್ರಗಳು ಸಂಘಟಿತರಾಗಿರುವಂತೆ, ಚಿತ್ರರಂಗ ಕೂಡ ಸಂಘಟಿತವಾಗಿರಬೇಕು. ಅದರಲ್ಲೂ ಚಿತ್ರರಂಗದಲ್ಲಿ ಕಲಾವಿದರಾದವರಿಗೆ ಜೀವನ ಭದ್ರತೆ ಇರುವುದಿಲ್ಲ. ಹಾಗಾಗಿ, ಕಲಾವಿದರು ಮೊದಲು ಸಂಘಟಿತರಾಗಬೇಕು ಎಂಬ ಯೋಚನೆಯನ್ನು ಹೊಂದಿದ್ದವರು ವರನಟ ಡಾ. ರಾಜಕುಮಾರ್. ಅಂದಹಾಗೆ, ಡಾ. ರಾಜಕುಮಾರ್ ಅವರಿಗೆ ಇಂಥದ್ದೊಂದು ಯೋಚನೆ ಬರಲು ಕಾರಣವಾಗಿದ್ದು “ಬಸವೇಶ್ವರ’ ಚಿತ್ರ.
“ಬಸವೇಶ್ವರ’ ಚಿತ್ರ ಕೆಲ ತೊಂದರೆಯಿಂದಾಗಿ ತಾತ್ಕಾಲಿಕವಾಗಿ ಸ್ಥಗಿತವಾಯಿತು. ಈ ವೇಳೆ ಅದರಲ್ಲಿ ಅಭಿನಯಿಸಬೇಕಾದ ಕಲಾವಿದರು, ತಂತ್ರಜ್ಞರು ಸಂಕಷ್ಟಕ್ಕೆ ಒಳಗಾದರು. ಸಹ ಕಲಾವಿದರು ಮತ್ತು ತಂತ್ರಜ್ಞರ ಈ ಸ್ಥಿತಿಯನ್ನು ಹತ್ತಿರದಿಂದ ಕಂಡ ಡಾ. ರಾಜ್, ಕಲಾವಿದರು ಮತ್ತು ತಂತ್ರಜ್ಞರ ನೆರವಿಗಾಗಿ ಸಂಘಟನೆಯೊಂದರ ಅಗತ್ಯತೆಯನ್ನು ಮನಗೊಂಡರು. ಆಗ ಪ್ರಾರಂಭವಾಗಿದ್ದೇ, “ಕರ್ನಾಟಕ ಚಲನಚಿತ್ರ ಕಲಾವಿದರ ಸಂಘ’.
ಇದನ್ನೂ ಓದಿ:ನಮ್ಮ ಅಂಜನಾದ್ರಿಯೇ ಆಂಜನೇಯನ ಜನ್ಮಸ್ಥಳ : ಸಚಿವ ಕೋಟ ಶ್ರೀನಿವಾಸ ಪೂಜಾರಿ
ಡಾ. ರಾಜಕುಮಾರ್, ಅಯ್ಯರ್, ಬಾಲಕೃಷ್ಣ, ನರಸಿಂಹರಾಜು ಈ ನಾಲ್ವರು ಗಳಿಸಿ, ಉಳಿಸಿದ ಒಂದಷ್ಟು ಭಾಗವೇ ಆರಂಭದಲ್ಲಿ ಈ ಸಂಘಕ್ಕೆ ಬಂಡವಾಳವಾಯಿತು. ಸಾಕಷ್ಟು ನಾಟಕಗಳಲ್ಲಿ ನಟಿಸಿದ ಅನುಭವವಿದ್ದ ಹಿರಿಯ ನಿರ್ದೇಶಕ ಭಗವಾನ್ ಆ ಸಂಸ್ಥೆಯ ಮೊದಲ ವ್ಯವಸ್ಥಾಪಕರಾದರು. ಆ ನಂತರ “ಕರ್ನಾಟಕ ಚಲನಚಿತ್ರ ಕಲಾವಿದರ ಸಂಘ’ಕ್ಕೆ ಬೆನ್ನೆಲುಬಾಗಿ ನಿಂತು ಹೊಸ ಆಯಾಮ ಕೊಟ್ಟವರು ನಟ ರೆಬಲ್‌ಸ್ಟಾರ್ ಅಂಬರೀಶ್.
ಅಂದು ಚಿಕ್ಕದಾಗಿ ಪ್ರಾರಂಭವಾದ “ಕರ್ನಾಟಕ ಚಲನಚಿತ್ರ ಕಲಾವಿದರ ಸಂಘ’ ಇಂದು ತನ್ನದೇಯಾದ ಭವ್ಯವಾದ ಸ್ವಂತ ಕಟ್ಟಡ, ಆಡಿಟೋರಿಯಂ ಹೀಗೆ ಹತ್ತಾರು ಸೌಕರ್ಯಗಳನ್ನು ಹೊಂದಿದೆ. ಕಳೆದ ವರ್ಷ ಕೋವಿಡ್‌ನಂತಹ ಸಂದರ್ಭದಲ್ಲೂ ಕಲಾವಿದರ ಸಂಘ ಸಾವಿರಾರು ಕಲಾವಿದರಿಗೆ ನೆರವಾಯಿತು.
ಅಂದಹಾಗೆ, ಇಡೀ ಭಾರತದಲ್ಲಿಯೇ “ಕರ್ನಾಟಕ ಚಲನಚಿತ್ರ ಕಲಾವಿದರ ಸಂಘ’ವನ್ನು ಹೊರತುಪಡಿಸಿದರೆ, ಇಂತಹ ಸುಸಜ್ಜಿತವಾದ ಕಟ್ಟಡ ವ್ಯವಸ್ಥೆಯನ್ನು ಹೊಂದಿರುವ ಮತ್ತೂಂದು ಕಲಾವಿದರ ಸಂಘ ಬೇರೆ ಯಾವ ರಾಜ್ಯದಲ್ಲೂ ಇಲ್ಲ ಅನ್ನೋದು ಇದರ ಹೆಗ್ಗಳಿಕೆ.