Advertisement

ಬಾವಿಯ ಪಾಚಿ, ಲಂಕೇಶರ ಮಾತು…

01:45 AM Jul 23, 2017 | |

ಹಿಂದೆ ಊರು, ಅಲ್ಲೊಂದು ಕೆರೆ, ಅದರ ಪಕ್ಕದಲ್ಲಿ ಪುಟ್ಟ ಕಾಲು ಹಾದಿ ಇರುತ್ತಿತ್ತು. ನೀರನ್ನು ನೋಡಿಕೊಂಡೇ ಜನ ಬದುಕುತ್ತಿದ್ದದ್ದು. ಕೆರೆ, ಕಾಲುವೆ, ಕುಂಟೆ, ಬಾವಿ, ತೊರೆಯ ನೀರನ್ನು ನೋಡಿಕೊಂಡೇ ಕೃಷಿ ಮಾಡುತ್ತಿದ್ದದ್ದು. ಕೆರೆ, ಕುಂಟೆಗಳ ಹೂಳೆತ್ತುವುದು ಸರ್ಕಾರದ ಕೆಲಸವಾಗಿರಲಿಲ್ಲ. ಅದನ್ನು ಬಳಸುತ್ತಿದ್ದ ಹಳ್ಳಿಯವರೇ ಆ ಕೆಲಸ ಮಾಡುತ್ತಿದ್ದರು.  ಆಗಲೂ ಬರ, ಬಡತನ, ಮಳೆ ಕೊರತೆ ಎಲ್ಲವೂ ಇತ್ತು. ಅಂದ ಮಾತ್ರಕ್ಕೆ ಯಾರೂ ಉಪವಾಸ ಇರುತ್ತಿರಲಿಲ್ಲ…

Advertisement

ಲಂಕೇಶ್‌ ಅವರ ಆಫೀಸಲ್ಲಿ ನಾನು ಮತ್ತು ಪ್ರಕಾಶ್‌ ಬೆಳವಾಡಿ ಹರಟೆ ಹೊಡೆಯುತ್ತಾ ಕುಳಿತಿದ್ದೆವು. ಎದುರಿಗೆ ಲಂಕೇಶ್‌ ಯಾರೋ ಒಬ್ಬರು ಕವಿಯ ಪುಸ್ತಕಕ್ಕೆ ಮುನ್ನುಡಿ ಬರೆಯುತ್ತಿದ್ದರು. ತದೇಕ ಚಿತ್ತದಿಂದ ಬರೆಯುತ್ತಿದ್ದ ಮೇಷ್ಟ್ರನ್ನು ನೋಡಿ ಏನು ಬರೆದಿರಬಹುದು ಅನ್ನೋ ಕೌತುಕ ನಮಗೆ. 

ಕೊನೆಗೆ ಅವರು ಬರೆದದ್ದನ್ನು ಕೊಟ್ಟರು. ಎಲ್ಲಾ ಓದಿದ ಮೇಲೆ “ಕವಿಯ ಊರಿಗೆ ಹೋದಾಗ ಅಲ್ಲಿರುವ ಬಾವಿಗಳಲ್ಲಿ ಪಾಚಿ ಕಟ್ಟಿತ್ತು  ’ ಎಂಬ ವಾಕ್ಯ ನನ್ನ ಮನಸ್ಸಲ್ಲಿ ಹೆಪ್ಪುಗಟ್ಟಿಬಿಟ್ಟಿತು. ಮೇಷ್ಟ್ರ ಹತ್ತಿರ “ಹೀಗೇಕೆ ಬರೆದಿದ್ದೀರಾ?’ ಅಂತ ಕೇಳಿದೆವು . ಮೇಷ್ಟ್ರು ಮುಗುಳುನಕ್ಕರು. 

ಆ ವಾಕ್ಯ ಇವತ್ತು ಅರ್ಥವಾಗುತ್ತಿದೆ. ಒಂದು ಹಳ್ಳಿಯ ಬಾವಿಯಲ್ಲಿ ಪಾಚಿಗಟ್ಟಿದೆ ಎಂದರೆ ಅಲ್ಲಿನ ಯುವಕರಿಗೆ ಏನೋ ಆಗಿದೆ ಎಂದರ್ಥ. ಯುವಕರು ಬಾವಿಯಲ್ಲಿ ಈಜುವ ಹುಮ್ಮಸ್ಸು ಕಳೆದುಕೊಂಡಿದ್ದಾರೆ. ಬಾವಿ ನೀರು ಕೆಡುತ್ತಿದೆ. ಒಟ್ಟಾರೆ ಯುವಕರಿಲ್ಲದೆ ಹಳ್ಳಿ ವೃದ್ಧಾಶ್ರಮವಾಗುತ್ತಿದೆ. ಯುವಕರೆಲ್ಲಾ ವಲಸೆ ಹೋಗುತ್ತಿದ್ದಾರೆ ಅನ್ನೋದು ವಾಕ್ಯದ ಹಿಂದಿನ ಮರ್ಮ. ಲಂಕೇಶರು ಎಷ್ಟು ಪರಿಣಾಮಕಾರಿಯಾಗಿ ಚಿಂತಿಸಿದ್ದರು ಅಲ್ವೇ! ಒಂದು ಹಳ್ಳಿಯ ನಾಡಿಮಿಡಿತವನ್ನು ಬಾವಿಯ ನೀರಲ್ಲಿ ನೋಡಿದ್ದರು! ಅಂದರೆ ಬಾವಿಯ ಪಾಚಿಯಿಂದ ಇಡೀ ಹಳ್ಳಿಯ ವ್ಯವಸ್ಥೆಯನ್ನು ಅಳೆದು ಬಿಟ್ಟಿದ್ದರು. 

“ಥ್ಯಾಂಕ್ಯು ಮೇಷ್ಟ್ರೇ!’
ಹೀಗಂತ ಹೇಳ್ಳೋಕೆ ಲಂಕೇಶರು ಇಲ್ಲ. ಅವರ ಯೋಚನೆ ಧಾಟಿ ನಮ್ಮನ್ನು ಬೆರಗುಗೊಳಿಸುವಂತೆ ಮಾಡಿದೆ. ಅಂದು ಅವರು ಪುಸ್ತಕಕ್ಕೆ ಬರೆದ ಮುನ್ನುಡಿ ಇಂದು ನಮ್ಮ ಬದುಕಿಗೆ ಕನ್ನಡಿ ಹಿಡಿಯುತ್ತಿದೆ. 

Advertisement

ಹಿಂದೆ ಊರು, ಅಲ್ಲೊಂದು ಕೆರೆ, ಅದರ ಪಕ್ಕದಲ್ಲಿ ಪುಟ್ಟ ಕಾಲು ಹಾದಿ ಇರುತ್ತಿತ್ತು. ನೀರನ್ನು ನೋಡಿಕೊಂಡೇ ಜನ ಬದುಕುತ್ತಿದ್ದದ್ದು. ಕೆರೆ, ಕಾಲುವೆ, ಕುಂಟೆ, ಬಾವಿ, ತೊರೆಯ ನೀರನ್ನು ನೋಡಿಕೊಂಡೇ ಕೃಷಿ ಮಾಡುತ್ತಿದ್ದದ್ದು. ಕೆರೆ, ಕುಂಟೆಗಳ ಹೂಳೆತ್ತುವುದು ಸರ್ಕಾರದ ಕೆಲಸವಾಗಿರಲಿಲ್ಲ. ಅದನ್ನು ಬಳಸುತ್ತಿದ್ದ ಹಳ್ಳಿಯವರೇ ಆ ಕೆಲಸ ಮಾಡುತ್ತಿದ್ದರು. ಆಗಲೂ ಬರ, ಬಡತನ, ಮಳೆ ಕೊರತೆ ಎಲ್ಲವೂ ಇತ್ತು. ಅಂದ ಮಾತ್ರಕ್ಕೆ ಯಾರೂ ಉಪವಾಸ ಇರುತ್ತಿರಲಿಲ್ಲ; ಹಸಿವನ್ನು ಕೆಡಸಿಕೊಳ್ಳುತ್ತಿರಲಿಲ್ಲ. ಯಾವಾಗ ಬೋರ್‌ವೆಲ್‌ ಕ್ರಾಂತಿ ಶುರುವಾಯೊ¤à ನೋಡಿ. ಮನಸ್ಸುಗಳೆಲ್ಲ ಪಾಚಿ ಕಟ್ಟ ತೊಡಗಿತು. ನೀರು ನೋಡಿಕೊಂಡು ಬದುಕುತ್ತಿದ್ದವರು ಕೂಡ ಜೀವನ ಪೂರ್ತಿ ಕೆರೆ, ಕುಂಟೆ ಕಡೆ ತಲೆ ಹಾಕುವುದನ್ನೇ ಬಿಟ್ಟುಬಿಟ್ಟರು. ಹೂಳು ಎತ್ತುವುದು ಸರ್ಕಾರದ ಕೆಲಸವಾಯಿತು. ಒಂದು ರೀತಿ ಬೋರ್‌ವೆಲ್‌ಗ‌ಳು ಹಳ್ಳಿಗಳನ್ನು ಬರಡು ಮಾಡುತ್ತಾ ಹೋದವು. ಭೂಮಿ ಮನುಷ್ಯನ ಜೊತೆಗಿನ ಸಂಬಂಧವೇ ಕಡಿತಗೊಂಡು ಕೊನೆಗೆ ಪಾತಳ ಬಗೆದು, ನೀರು ತೆಗೆಯುವ ದುರಾಲೋಚನೆ ಮಾಡುವಂತಾಯಿತು. 

ಮನುಷ್ಯ ಪ್ರಕೃತಿಗಿಂತ ದೊಡ್ಡೋನಾದರೆ ಹೀಗೇನೇ ಆಗೋದು. ಇವತ್ತು ನಾವು “ಪ್ರಕೃತಿ ಉಳಿಸುತ್ತಿದ್ದೇವೆ. ಪ್ರಕೃತಿ ಬೆಳೆಸುತ್ತಿದ್ದೇವೆ’ ಅಂತೆಲ್ಲಾ ಅಹಂಕಾರದಿಂದ ಮಾತನಾಡುತ್ತಿದ್ದೇವೆ. ಏಕೆ? ಇದರ ಹಿಂದೆ ಸ್ವಾರ್ಥವಿದೆ. ಮನುಷ್ಯನ ಬುಡಕ್ಕೆ ಬೆಂಕಿ ಬಿದ್ದಿರುವುದರಿಂದ ಈ ರೀತಿ ಬೊಂಬಡ ಬಜಾಯಿಸುತ್ತಿದ್ದಾನೆ ಹೊರತು ಪ್ರಕೃತಿ ಉಳಿಸುವ ಉದ್ದೇಶವೇನೂ ಇಲ್ಲ. ಸತ್ಯ ಏನೆಂದರೆ ಮನುಷ್ಯನಿಲ್ಲದೆ ಪ್ರಕೃತಿ ಇರುತ್ತದೆ. ಆದರೆ ಪ್ರಕೃತಿ ಇಲ್ಲದೇ ಮನುಷ್ಯ ಬದುಕಲಾರ.  ಮನುಷ್ಯ ಸಂಚಾರಿ. ಗಾಳಿ, ನೀರು ಬಳಸಿಕೊಂಡು ಸ್ವಲ್ಪ ದಿನ ಇರು ಅಂತ ಅವನನ್ನು ಭೂಮಿಗೆ ಕಳುಹಿಸಿರುವುದು. ಅವನು ಈ ಕೆಲಸ ಬಿಟ್ಟು ಬೇರೆಲ್ಲಾ ಮಾಡುತ್ತಿದ್ದಾನೆ.   
**
 ಬಂಡೀಪುರ, ನಾಗರಹೊಳೆಯಲ್ಲಿ ಸುಮಾರು 500 ವರ್ಷಗಳ ಹಿಂದಿನ ಮರಗಳಿವೆ. ನೋಡಿದರೇನೆ ಖುಷಿಯಾಗುತ್ತದೆ. ಇಂಥ ದೊಡ್ಡ ಮರಗಳಿಗೆ, ಇಷ್ಟೊಂದು ವಯಸ್ಸಾಗಿದೆಯಾ ಅಂತ ಡೌಟು ಬರುತ್ತದೆ. ಹತ್ತಿರಕ್ಕೆ ಹೋದರೆ ಅಗಾಧತೆಯಿಂದ ಭಯವಾದಂತೆ ಆಗುತ್ತದೆ. ಅದರ ಕೆಳಗೆ ನಿಂತರೆ ಒಂಥರ ನಿರಾಳ, ನೆಮ್ಮದಿ. 

ಏಕೆ?
ಈ ಮರಗಳು ಸಾವಿರಾರು ಋತುಮಾನಗಳನ್ನು, ಬೆಳಗುಗಳನ್ನು, ರಾತ್ರಿಗಳನ್ನು, ಮಳೆಗಳನ್ನು, ಬೇಸಿಗೆಗಳನ್ನು ನೋಡಿ ಬೆಳೆದಿರುತ್ತವೆ. ಅದಕ್ಕೇ ಅದರ ಕೆಳಗೆ ನಿಂತರೆ ಒಂಥರ ನೆಮ್ಮದಿಯ ನಿಟ್ಟುಸಿರು ಬಿಟ್ಟಂತಾಗೋದು.
ಆದರೆ ನೋಡಿ, ಇವತ್ತು 50 ವರ್ಷ ಪೂರೈಸಿದ ವ್ಯಕ್ತಿಯ ಹತ್ತಿರ ಹೋದರೆ ಇಂಥ ಫೀಲೇ ಹುಟ್ಟೋಲ್ಲ. ಅವನ ಗ್ರಹಿಕೆಯಲ್ಲಿ, ಮಾತುಗಳಲ್ಲಿ ಬದುಕಿನ ಅನುಭವ ತುಳುಕುವುದೇ ಇಲ್ಲ. ಅವರನ್ನು ನೋಡಿದರೆ ಗೌರವ ಕೂಡ ಹುಟ್ಟೋಲ್ಲ. ಇವರ ಹತ್ತಿರ ಹೋದರೆ ಸಮಸ್ಯೆ ಪರಿಹಾರ ಆಗುತ್ತೆ, ನಮಗೆ ಮೋಸ ಮಾಡೋಲ್ಲ. ಭದ್ರತೆ ಸಿಗುತ್ತದೆ, ಇವರ ಜೊತೆಗೆ ನೆಮ್ಮದಿಯಾಗಿ ಬದುಕಬಹುದು – ಹೀಗೆಲ್ಲಾ ಅನಿಸೋದಿಲ್ಲ ಏಕೆ? ಎಲ್ಲೂ ಹೋಗದ, ನಿಂತಲ್ಲೇ ನಿಲ್ಲುವ ಮರಗಳಷ್ಟೇ ತಾನೆ ಈ ಮನುಷ್ಯನ ವಯಸ್ಸು?

ಕಾರಣ ಇಷ್ಟೇ,
ನಾವು ನಿಂತ ಭೂಮಿಯನ್ನೇ ಮರೆತಿದ್ದೇವೆ. ಕಪಟಗಳನ್ನು ಮೈಗೂಡಿಸಿಕೊಂಡು, ದುರಾಸೆಗಳಲ್ಲೇ ಉಸಿರಾಡುತ್ತಿದ್ದೇವೆ. ಕುವೆಂಪು, ಬೇಂದ್ರೆ, ಶಿವರಾಮ ಕಾರಂತ, ಲಂಕೇಶ್‌, ತೇಜಸ್ವಿ ಎಂಬ ಹೆಮ್ಮರಗಳು ನಮ್ಮಲ್ಲಿ ಇದ್ದವು. ಇವರು ಬಿತ್ತಿದ ಬೀಜಗಳು ಇವತ್ತು ಮೊಳಕೆಯೊಡೆದು ಮರಗಳಾಗುತ್ತಿವೆ. ಅಂದು ಇವರು ಹೇಳಿದ ಮಾತುಗಳು ಇವತ್ತು ಅರ್ಥವಾಗುತ್ತಿದೆ. ದುರಂತ ಎಂದರೆ ಇವತ್ತು ಇಂಥ ಮರಗಳು ನಮಲ್ಲಿ ಕಾಣುತ್ತಿಲ್ಲ.  

ನಾವೆಲ್ಲ ನಾಳೆಗಳಿಗೋಸ್ಕರ ಬದುಕುತ್ತಿದ್ದೇವೆ. ಇದಕ್ಕಾಗಿ ಇವತ್ತನ್ನು ಕೊಲ್ಲುತ್ತಿದ್ದೇವೆ. ಕೊಲ್ಲುವ ಪ್ರಕ್ರಿಯೆಯಲ್ಲಿ ತೊಡಗಿರುವುದರಿಂದ ನೆಮ್ಮದಿ ಇಲ್ಲದಂತಾಗಿ, ಅದನ್ನು ಹುಡುಕಲು ಎಲ್ಲೆಂದರಲ್ಲಿ ಅಲೆಯುತ್ತಿದ್ದೇವೆ. ನಿನ್ನೆಯ ಬಗ್ಗೆ ಗೊತ್ತಿಲ್ಲದವನಿಗೆ ಇವತ್ತು ಅರ್ಥವಾಗೋಲ್ಲ. ಇವತ್ತನ್ನು ಅರ್ಥವಾಗದವನು ಭವಿಷ್ಯವನ್ನು ಹೇಗೆ ಪೂರೈಸುತ್ತಾನೆ?  
ಒಂದು ಮರ ಇದ್ದರೆ ಒಂದೇ ಜಾತಿಯ ಕೀಟಗಳು ಬರ್ತವೆ. ಅದನ್ನು ಹುಡುಕಿಕೊಂಡು ಒಂದು ಜಾತಿ ಪಕ್ಷಿ ಬರಬಹುದು. ಅದೇ ನೀವು ನೂರು ಮರ ಹಾಕಿ, ನೂರು ಕೀಟಗಳನ್ನು ಹುಡುಕಿ ನೂರಾರು ಪಕ್ಷಿಗಳು ಬರುತ್ತವೆ. ಸಾವಿರಾರು ಮರಗಳ ಹುಟ್ಟಿಗೆ ಕಾರಣವಾಗ್ತವೆ.  ಸಹ ಜೀವನ ಎಂದರೆ ಇದೇ ಅಲ್ಲವೇ? ನಮ್ಮ ಕಣ್ಣ ಮುಂದಿರುವ ಅರಣ್ಯವನ್ನೇ ನೋಡಿ. ಬೃಹದಾಕಾರದ ವೃಕ್ಷ, ಅದರ ಕೆಳಗೆ ಮರ, ಮತ್ತದರ ಕೆಳಗೆ ಮತ್ತೂ ಚಿಕ್ಕ ಗಿಡ, ಬಳ್ಳಿಗಳು, ಭೂಮಿ ಒಳಗೆ ಒಂದಷ್ಟು ಬೇರುಗಳು. ಅಬ್ಬಬ್ಟಾ! ಒಂದನ್ನು ಇನ್ನೊಂದು ನೋಡುತ್ತಾ ಬೆಳೆಯುತ್ತಿರುತ್ತವೆ. ಇದರ ಕುಟುಂಬ ರಚನೆಯೇ ಭಿನ್ನ. ಪ್ರತಿಯೊಬ್ಬರಿಗೂ ಒಂಥರ ಸೆಕ್ಯುರಿಟಿ;  ನೆಮ್ಮದಿ. 
 
ನಮ್ಮ ಬದುಕೇಕೆ ಹೀಗಿಲ್ಲ? 
ಒಬ್ಬರನ್ನು ನೋಡಿ ಇನ್ನೊಬ್ಬರು ಬೆಳೆಯೋಲ್ಲ. ಒಬ್ಬರ ಏಳಿಗೆ ಇನ್ನೊಬ್ಬರ ಹೊಟ್ಟೆಯಲ್ಲಿ ಹುಳಿ ಹೆಪ್ಪಾಕುತ್ತದೆ. ಒಬ್ಬರ ಜೊತೆ ಇನ್ನೊಬ್ಬರು ಬದುಕೊಲ್ಲ. ಬದುಕೇ ಕುಂಡ ಕೃಷಿಯಾಗಿಬಿಟ್ಟಿದೆ.  ತುತ್ತಿನ ಸವಿ ಕಳೆದುಕೊಂಡು ಬರೀ ಕ್ಯಾಲರಿಗಳಲ್ಲಿ ಊಟ ಮಾಡುವ ಪರಿಸ್ಥಿತಿಗೆ ಬಂದಿದ್ದೀವಿ. ಇದ್ಯಾವ ಕರ್ಮ? ನಾವು ಮಾಡುತ್ತಿರುವ ತಪ್ಪುಗಳ ಫ‌ಲಿತಾಂಶವೇ ಇವು. 

ನಾವು ಭೂಮಿ ಜೊತೆಗಿನ ಸಂಬಂಧಗಳನ್ನು ಸಂಪೂರ್ಣವಾಗಿ ಕಡಿದುಕೊಂಡಿದ್ದೇವೆ. ನೋಡಿ, ಎದುರುಬದುರು ಮನೆಯಲ್ಲಿ ವಾಸ ಮಾಡುತ್ತಿದ್ದರೂ, ಒಂದು ದಿನ ನೀರು ಕಮ್ಮಿಬಂದರೂ ದಾಯಾದಿಗಳಂತೆ ಬೀದಿಯಲ್ಲಿ ನಿಂತು ಗುಂಡಿ ಜಗಳ ಮಾಡುವ ಪರಿಸ್ಥಿತಿಗೆ ಬಂದುಬಿಟ್ಟಿದ್ದೇವೆ. ಕಾರಣ ಪ್ರೀತಿ ಕೊರತೆ.  ಕಾಲಕೆಳಗಿನ ಭೂಮಿಯನ್ನು ಮರೆತಿರುವುದು.  ನೀರು, ಭೂಮಿ, ಗಾಳಿಯನ್ನು ಪ್ರೀತಿಸದೇ ಇರುವವರು ಹೆಂಡತಿ ಮಕ್ಕಳನ್ನೂ ಪ್ರೀತಿಸಲಾರರು. ಅಷ್ಟೇಕೆ ನಿಮ್ಮನ್ನು ನೀವು ಅರ್ಥಮಾಡಿಕೊಳ್ಳುವುದು, ನಿಮ್ಮ ಜೊತೆ ನೀವು ಬದುಕೋದೂ ಕಷ್ಟವಾಗಿಬಿಡುತ್ತದೆ.

ಇವತ್ತು ಸಾವಿಗೆ ಗೌರವ ಇಲ್ಲದೇ ಇರುವುದರಿಂದ ಹುಟ್ಟು ಅರ್ಥ ಕಳೆದುಕೊಂಡಿದೆ. ಮೊದಲೆಲ್ಲ ಸಾವು ಎಂದರೆ ಅದು ದೊಡ್ಡ ಬೀಳ್ಕೊಡುಗೆ. ತುಂಬು ಜೀವನದ ಅನುಭವಗಳನ್ನು ಕೊಂಡಾಡಿ, ಗೌರವ ಕೊಟ್ಟು ಹೊಲದಲ್ಲಿ ಹೂಳ್ಳೋರು. ಈಗ ಸಂಬಂಧಗಳೇ ಸರಿ ಇಲ್ಲದ ಮೇಲೆ ಗೌರವ ಎಲ್ಲಿ ಸಿಗುತ್ತದೆ? ಭೂಮಿ ಜೋಡಿ ಸಂಬಂಧ ಕಡಿದುಕೊಂಡಾಗಲೇ ಸಾವಿನ ಅರ್ಥವೂ ಸತ್ತು ಹೋಯಿತು. 

ಆವತ್ತು ಲಂಕೇಶರು ನೋಡಿದ ಪಾಚಿ ಕೇವಲ ಬಾವಿಯಲ್ಲಿ ಮಾತ್ರ. ಇವತ್ತು ಬೀದಿ, ಕುಟುಂಬ, ಹಳ್ಳಿ, ಪಟ್ಟಣ, ನಗರಗಳಲ್ಲೆಲ್ಲಾ ಹರಡಿಬಿಟ್ಟಿದೆ.

– ಪ್ರಕಾಶ್‌ ರೈ

Advertisement

Udayavani is now on Telegram. Click here to join our channel and stay updated with the latest news.

Next